CONNECT WITH US  

ಬೆಂಗಳೂರಿನ ಮಾವನ ಮನೆಗೆಂದು ಹೋದಾತ ತಲುಪಿದ್ದು ತೆಲಂಗಾಣಕ್ಕೆ!

ತೆಕ್ಕಟ್ಟೆ: ಸ್ನೇಹಿತರ ಜತೆಗಿನ ವಾಗ್ವಾದ ಕಾರಣದಿಂದ ಆ.31 ರಂದು ಮನೆಯಿಂದ ನಾಪತ್ತೆಯಾಗಿದ್ದ ಮನೆ ಕುಂದಾಪುರ ತಾಲೂಕಿನ ಮಾರ್ಕೋಡಿನ ಯುವಕ ಒಂಬತ್ತು ದಿನಗಳ ಬಳಿಕ ಹೈದರಾಬಾದ್‌ನಲ್ಲಿಪತ್ತೆಯಾಗಿದ್ದಾರೆ.

ಪ್ರಕರಣದ ವಿವರ  
ಆಕಾಶ್‌ ಯಾನೆ ಮಂಜುನಾಥ (17) ಕೋಟೇಶ್ವರ ಮಾರ್ಕೋಡಿನ ತನ್ನ ನಿವಾಸದಿಂದ ಆ.31ರಂದು ನಾಪತ್ತೆಯಾಗಿದ್ಧ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮನೆಯಿಂದ  ಹೊರಡುವ ಸಂದರ್ಭದಲ್ಲಿ ಅವನಲ್ಲಿ ಮೊಬೈಲ್‌ ಇರುವ ಬಗ್ಗೆ ಮಾಹಿತಿ  ಪಡೆದ ಕುಂದಾಪುರ ಠಾಣಾಧಿಕಾರಿ ಹರೀಶ್‌ ಆರ್‌. ಅವರ ನಿರ್ದೇಶನದಂತೆ ಪೊಲೀಸ್‌ ಅಪರಾಧ ವಿಭಾಗದ ಸಿಬಂದಿ ವರ್ಗದ ಸಚಿನ್‌ ಶೆಟ್ಟಿ ಮಲ್ಯಾಡಿ ಹಾಗೂ ಹರೀಶ್‌ ಎಚ್‌. ಸಿ. ಅವರು ಮೊಬೈಲ್‌ ಸಂಖ್ಯೆಯ ಜಾಡು ಹಿಡಿದಾಗ ರೈಲಿನಲ್ಲಿ ಪ್ರಯಾಣಿಸುತ್ತಿರುವ  ಮಾಹಿತಿ ಸಿಕ್ಕಿ ತ್ತು. ಅನಂತರ ಮೊಬೈಲ್‌  ತೆಲಂಗಾಣದಲ್ಲಿರುವ ಬಗ್ಗೆ ಮಾಹಿತಿ ದೊರೆತಿತ್ತು.

ಜೇಬಲ್ಲಿದ್ದುದು  50 ರೂ.!
ಈ ನಡುವೆ ಬೆಂಗಳೂರಿನಲ್ಲಿರುವ  ಮಾವನ ಮನೆಗೆಂದು ಮೂಡ್ಲಕಟ್ಟೆ  ನಿಲ್ದಾಣದಿಂದ ರೈಲು ಏರಿದ್ದ  ಆಕಾಶ್‌ ನಿದ್ದೆಗೆ ಜಾರಿದ್ದ. ಬೆಳಗ್ಗೆದ್ದು ನೋಡುವಾಗ  ತೆಲಂಗಾಣ ರೈಲು ನಿಲ್ದಾಣವನ್ನು ತಲುಪಿದ್ದ. ತನ್ನಲ್ಲಿದ್ದ ರೂ.50 ಕೂಡ  ಖರ್ಚಾಗಿದ್ದು, ಏನು ಮಾಡಬೇಕೆಂದು ತೋಚದೆ ನಿಲ್ದಾಣದಲ್ಲಿಯೇ ಊಟ ತಿಂಡಿ ಇಲ್ಲದೆ ಮೂರು ದಿನಗಳನ್ನು ಕಳೆದಿದ್ದ. ಸಂಕಷ್ಟದಲ್ಲಿದ್ದ ಈತ ಕನ್ನಡದವ ಎಂದು ತಿಳಿದು  ಬಿಹಾರ ಮೂಲದ ವ್ಯಕ್ತಿಯೊಬ್ಬರು  ಹೈದರಾಬಾದ್‌ನಲ್ಲಿರುವ ಕುಂದಾಪುರ ಮೂಲದ  ನೇರಂಬಳ್ಳಿ ರಾಘವೇಂದ್ರ ರಾವ್‌ ಅವರ  ಹೋಟೆಲ್‌ ಬಳಿ ಕರೆದೊಯ್ದು ಬಿಟ್ಟಿದ್ದು, ಅಲ್ಲಿಂದ ಊರಿಗೆ ಕರೆ ತರಲಾಯಿತು. ಈತನ ಪತ್ತೆ ಕಾರ್ಯದಲ್ಲಿ ಪೊಲೀಸ್‌ ಅಪರಾಧ ದಳದ  ಸಚಿನ್‌ ಶೆಟ್ಟಿ ಮಲ್ಯಾಡಿ  ಹಾಗೂ ಹರೀಶ್‌ ಎಚ್‌. ಸಿ., ಸ್ಥಳೀಯರಾದ ಮಾರ್ಕೋಡು ಉದಯ ಕುಮಾರ್‌ ಶೆಟ್ಟಿ, ಸುರೇಶ್‌, ರಾಮಚಂದ್ರ ಮತ್ತಿತರರು ಶ್ರಮಿಸಿದ್ದರು. 

ಮಾನವೀಯತೆ ಮೆರೆದ ಉದ್ಯಮಿ
ರಾಘವೇಂದ್ರ ರಾವ್‌ ಅವರು ತನ್ನೂರಿನಿಂದ ದಿಕ್ಕು ತಪ್ಪಿ ಬಂದ ಆಕಾಶ್‌ಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದರು. ಬಳಿಕ ಕೋಟೇಶ್ವರದ ಮಾರ್ಕೋಡು ಮೂಲದವರನ್ನು ಸಂಪರ್ಕಿಸಿ  ತಿಳಿಸಿದ್ದಾರೆ.   ಅನಂತರ ಆತನನ್ನು ಊರಿಗೆ ಕರೆ ತರಲಾಯಿತು. 


Trending videos

Back to Top