CONNECT WITH US  

ಹೊಸಾಡು ಕಾಂಡ್ಲಾ ಕಾಡು ಈಗ ಮರಳುಗಾಡು !

ಹೆಮ್ಮಾಡಿ:  ನದಿಯಂಚಿನಲ್ಲಿ ಸೊಂಪಾಗಿ ಬೆಳೆದು ಕಾನನವನ್ನು ಸೃಷ್ಟಿಸಿದ್ದ ನೈಸರ್ಗಿಕ ಕಾಂಡ್ಲಾ ಕಾಡು ಬರಿದಾಗಿದೆ. ಮರಳುಗಾರಿಕೆಯ ಅಟ್ಟಹಾಸದಿಂದ ಕೇವಲ ಮೂರು ವರ್ಷಗಳಲ್ಲಿ ಹೊಸಾಡು-ಸೇನಾಪುರ ಗ್ರಾಮದ ಸೌಪರ್ಣಿಕಾ ನದಿತೀರದಲ್ಲಿ ಕಾಂಡ್ಲಾ ಕಾಡು ಮಾಯವಾಗಿ  ಮರಳುಗಾಡು ನಿರ್ಮಾಣಗೊಂಡಿದೆ.

ತ್ರಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊಸಾಡು ಮತ್ತು ನಾಡಾ ಪಂಚಾಯತ್‌ ವ್ಯಾಪ್ತಿಯ ಸೇನಾಪುರ ಗ್ರಾಮಗಳ ಗಡಿಭಾಗದ ಬಂಟ್ವಾಡಿ ವೆಂಟೆಡ್‌ ಡ್ಯಾಂ ಬಳಿ ಹತ್ತಾರು ವರ್ಷಗಳ ಹಿಂದೆ ಮರಳುಗಾರಿಕೆ ಸಾಂಪ್ರದಾಯಿಕವಾಗಿ ನಡೆಯುತ್ತಿತ್ತು. ಆದರೆ ಅದರಿಂದ ಸುತ್ತಲಿನ ಪ್ರಾಕೃತಿಕ ಜೀವವೈವಿಧ್ಯಕ್ಕೆ ಯಾವುದೇ ತೊಂದರೆ ಯಾಗಿರಲಿಲ್ಲ. ಯಾವಾಗ ಹೊಯಿಗೆಗೆ ಚಿನ್ನದ ಬೆಲೆ ಲಭಿಸಲಾರಂಭಿಸಿತೋ ಆಗಿನಿಂದ ಅಂದರೆ ಒಂದು ವರ್ಷದ ಹಿಂದೆ ದಂಧೆಯ ರೂಪ ತಾಳಿದ ಮರಳುಗಾರಿಕೆ ಪ್ರಕೃತಿಯ ನಿಯಮಗಳಿಗೆ ವಿರುದ್ಧ ನೆಲೆಯಲ್ಲಿ ಸಾಗಿದೆ. ಇಲಾಖಾ ಪರವಾನಗಿಯಿಲ್ಲದೇ ನದಿಯಂಚಿನಲ್ಲಿ ಎಲ್ಲೆಂ ದರಲ್ಲಿ ಅಕ್ರಮವಾಗಿ ದೋಣಿಕಡುಗಳು ನಿರ್ಮಾಣ ಗೊಂಡಿವೆ. 

ಹೊಳೆಯಿಂದ ಮರಳು ತೆಗೆಯುವುದು, ಮರಳು ಶೇಖರಣೆಗಾಗಿ ಸರಕಾರಿ ಸ್ಥಳವನ್ನು ಅತಿಕ್ರಮಣ ಮಾಡುವುದು, ನದಿತೀರದಲ್ಲಿ ಸೊಂಪಾಗಿ ಬೆಳೆದಿರುವ ಕಾಂಡ್ಲಾ ವೃಕ್ಷಗಳ ನಾಶ, ಅಕ್ರಮವಾಗಿ ಮರಳು ಸಾಗಾಟ ಸೇರಿದಂತೆ ಹತ್ತು-ಹಲವು ಅಕ್ರಮಗಳ ಮೂಲಕ ಇಲ್ಲಿನ ಮರಳುಗಾರಿಕೆ ಸುದ್ದಿಯಾಗಿದೆ.

ನದಿಯಿಂದ ಹೊಯಿಗೆ ಸಾಗಾಟಕ್ಕೆ ಟಿಪ್ಪರ್‌ಗಳ ಪರೇಡ್‌ ಶುರುವಾಯಿತು. ನದಿತೀರದುದ್ದಕ್ಕೂ ಮೂರಕ್ಕೂ ಹೆಚ್ಚು ಹೊಯಿಗೆಕಡುಗಳು ಇವೆ. ಹೊಯಿಗೆಯನ್ನು ಸಾಗಿಸಲು ಲೋಕೋಪಯೋಗಿ ರಸ್ತೆಯಿಂದ ಚಟಿÉಕೆರೆ ತನಕ ನದಿತೀರದ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ನದಿಯಂಚಿನ ಅಷ್ಟೂ ಕಾಂಡ್ಲಾ ವೃಕ್ಷಗಳನ್ನು ಕಡಿಯಲಾಗಿದೆ. ಸೌಪರ್ಣಿಕಾ ನದಿಯ ಇನ್ನೊಂದು ದಡ ಬಂಟ್ವಾಡಿಯಲ್ಲಿ ನಿಂತು ನೋಡಿದರೆ ಈಗ ಅಲ್ಲಿ ಕಾಣುವುದು ಕಾಂಡ್ಲಾವನವಲ್ಲ, "ಮರಳು'ಗಾಡು !ಹೆಚ್ಚಿದ  ನದಿ ಸವಕಳಿ ಹೊಸಾಡು, ಸೇನಾಪುರ-ಬಂಟ್ವಾಡಿ ತೀರದಲ್ಲಿ ನಿರಂತರವಾಗಿ ಮರಳುಗಾರಿಕೆ ನಡೆಯುತ್ತಿರುವುದರಿಂದ ನದಿಯ ಆಳ ಹೆಚ್ಚಿದ್ದಲ್ಲದೇ ನದಿತೀರ ಕುಸಿಯುತ್ತಿದೆ. ತೀರದಲ್ಲಿ ಇಳಿಜಾರು ಸೃಷ್ಟಿಯಾಗಿದ್ದು, ತೀರದಲ್ಲಿರುವ ಮನೆಗಳಿಗೆ ಅಪಾಯ ಎದುರಾಗಿದೆ. 

ಮೀನುಗಾರರ ಸಂಕಷ್ಟ !

ಸೇನಾಪುರದ ಬಂಟ್ವಾಡಿಯಲ್ಲಿ ವೆಂಟೆಡ್‌ ಡ್ಯಾಂ ನಿರ್ಮಾಣಗೊಳ್ಳುವುದಕ್ಕೆ ಮೊದಲು ಸ್ಥಳೀಯ ಸಾಂಪ್ರ ದಾಯಿಕ ವೃತ್ತಿಯ ಮೀನುಗಾರರು ತಮ್ಮ ಪಾತಿ ದೋಣಿ ಗಳನ್ನು ನಿಲುಗಡೆ ಮಾಡಲು ಅಧಿಕೃತವಾಗಿ ನಿರ್ಮಿಸಿ ಕೊಟ್ಟಿದ್ದ ದೋಣಿಕಡುವನ್ನು ಕ್ರಮೇಣ ಮರಳುಗಾರಿಕೆ  ಅತಿಕ್ರಮಿಸಲಾಗಿದೆ. ಈ ಸಮಸ್ಯೆ ಕುರಿತು ಇಲ್ಲಿನ ಮೀನು ಗಾರರು ಜನಪ್ರತಿನಿಧಿಗಳು ಹಾಗೂ ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳನ್ನು ಎಡತಾಕಿದ್ದರು. ಪ್ರತ್ಯೇಕ ಸ್ಥಳದಲ್ಲಿ ದೋಣಿಕಡುವನ್ನು ಕಟ್ಟಿಕೊಡುವುದಾಗಿ ಭರವಸೆಯನ್ನು ನೀಡಿ ಮೀನುಗಾರರನ್ನು ತೆಪ್ಪಗಾಗಿಸಿದ ಅಧಿಕಾರಿಗಳು ಬಳಿಕ  ಸಮಸ್ಯೆಗೆ ಸ್ಪಂದಿಸಿಲ್ಲ.

ಜನರ ಅರಣ್ಯರೋದನ

ಹೊಸಾಡು ನದಿತೀರದಲ್ಲಿ ಮರಳು ಗಾರಿಕೆಗೆ ಶಾಶ್ವತವಾಗಿ ಕಡಿವಾಣ ಹಾಕುವಂತೆ ಸ್ಥಳೀಯ ನೂರಾರು ಮೀನುಗಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದರೂ ಅಧಿಕಾರಿಗಳು ಮಾತ್ರ ಮೌನ ತಳೆದಿದ್ದಾರೆ. ಬಂಟ್ವಾಡಿ ಸೇತುವೆ, ವೆಂಟೆಡ್‌ ಡ್ಯಾಂ ಬಳಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ಸ್ಥಳೀಯರು ಹಲವು ಬಾರಿ  ಅಧಿಕಾರಿಗಳ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಅಕ್ರಮ ಮರಳುಗಾರಿಕೆ ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ  ಬುತ್ತಿ.

ಹೊಯಿಗೆಯನ್ನು ಸಾಗಿಸಲು ಲೋಕೋಪಯೋಗಿ ರಸ್ತೆಯಿಂದ ಚಟಿÉಕೆರೆ ತನಕ ನದಿತೀರದ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ನದಿಯಂಚಿನ ಅಷ್ಟೂ ಕಾಂಡ್ಲಾ ವೃಕ್ಷಗಳನ್ನು ಕಡಿಯಲಾಗಿದೆ. ಸೌಪರ್ಣಿಕಾ ನದಿಯ ಇನ್ನೊಂದು ದಡದಲ್ಲಿ ಅಂದರೆ ಬಂಟ್ವಾಡಿಯಲ್ಲಿ  ನಿಂತು ನೋಡಿದರೆ ಈಗ ಅಲ್ಲಿ ಕಾಣುವುದು ಕಾಂಡ್ಲಾವನವಲ್ಲ, "ಮರಳು' ಗಾಡು ! 

ಚಂದ್ರ ಕೆ. ಹೆಮ್ಮಾಡಿ

Trending videos

Back to Top