CONNECT WITH US  

ರೈಲ್ವೆ ಕೋಚ್‌ ಕಾರ್ಖಾನೆ ಭೂ ಸ್ವಾಧೀನಕ್ಕೆ ನಿರ್ಧಾರ

ಕೋಲಾರ: ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ಮಾರಿಕುಪ್ಪಂ-ಕುಪ್ಪಂ ರೈಲು ಮಾರ್ಗ ಹಾಗೂ ರೈಲ್ವೆ ಕೋಚ್‌ ಕಾರ್ಖಾನೆಯ ಭೂ ಸ್ವಾ ಧೀನಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ನಗರದ ತಮ್ಮನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಪ್ಪಂ-ಮಾರಿಕುಪ್ಪಂ ರೈಲ್ವೆ ಮಾರ್ಗ ಹಾದು ಹೋಗುವ ಬಿಜಿಎಂಎಲ್‌ ಪ್ರದೇಶದಲ್ಲಿ ಕಾಮಗಾರಿ ನಡೆಸದಂತೆ ಹೈಕೋರ್ಟ್‌ ತಡೆ ಇರುವುದರಿಂದ ಸಮಸ್ಯೆಯಾಗಿತ್ತು ಎಂದರು.

ಸಮಸ್ಯೆ ನಿವಾರಣೆ: ಇದೀಗ ಇದು ಪರಿಹಾರವಾಗಿದ್ದು, ಈ ಭೂಮಿಗಾಗಿ ಹೈಕೋರ್ಟ್‌ನಲ್ಲೇ 2.68 ಕೋಟಿ ರೂ. ಠೇವಣಿ ಇಡಲು ಸೂಚಿಸಿದ್ದು, ಅದರಲ್ಲಿ ಈಗಾಗಲೇ 1.60 ಕೋಟಿ ರೂ.ಠೇವಣಿ ಇಡಲಾಗಿದೆ. ಭೂ ಸ್ವಾ ಧೀನದ ಸಮಸ್ಯೆ ಪರಿಹಾರ ಕಂಡಿದೆಯಲ್ಲದೇ, 279 ಕೋಟಿ ರೂ. ಅನ್ನು ತಾವು ಅ ಧಿಕಾರದಲ್ಲಿದ್ದಾಗಲೇ ಮಂಜೂರು ಮಾಡಿರುವುದಾಗಿ ತಿಳಿಸಿದರು.

ಕೋಚ್‌ ಕಾರ್ಖಾನೆಗೆ 500 ಎಕರೆ ಜಾಗ: ಶ್ರೀನಿವಾಸಪುರ ಬಳಿ ರೈಲ್ವೆ ಕೋಚ್‌ ಕಾರ್ಖಾನೆಗೆ ಸಂಬಂ ಧಿಸಿದಂತೆ 500 ಎಕರೆ ಭೂ ಸ್ವಾ ಧೀನ ಪ್ರಕ್ರಿಯೆ ಮುಗಿಸಲು ಸಿಎಂ ಅಧಿ ಕಾರಿಗಳಿಗೆ ಸೂಚಿಸಿದ್ದಾರೆ. ಸರ್ಕಾರಿ ಜಮೀನನ್ನು ಮೊದಲು ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಮೂಲಕ ಕಾಮಗಾರಿ ಶೀಘ್ರ ಆರಂಭಗೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ 5 ಕಡೆ ರೈಲ್ವೆ ಮೇಲ್ಸೇತುವೆ: ಜಿಲ್ಲೆಯ ಟೇಕಲ್‌, ಮಾಲೂರು, ಉರಿಗಾಂ, ಕೋಲಾರ ನಗರದ ಆಗ್ರೋ ಕಚೇರಿ ಮುಂಭಾಗ, ಹುಣಸನಹಳ್ಳಿಗಳಲ್ಲಿ ರೈಲ್ವೆ ಅಂಡರ್‌ಪಾಸ್‌ ನಿರ್ಮಿಸಲು ರಾಜ್ಯ ಸರ್ಕಾರದ ಪಾಲಿನ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಸಭೆಯಲ್ಲಿ ಸಮ್ಮತಿ ನೀಡಿದ್ದಾರೆ. ಕೋಲಾರ, ಬಂಗಾರಪೇಟೆ ರಸ್ತೆಯ ಹುದುಕುಳದಲ್ಲಿ ರೈಲ್ವೆ ನಿಲ್ದಾಣಕ್ಕಾಗಿ ಸಂಸದರ ನಿಧಿ ಯಿಂದ 50 ಲಕ್ಷ ರೂ.ಹಾಗೂ ಶಾಸಕರ ನಿ ಧಿಯಿಂದ 20 ಲಕ್ಷ ರೂ.ನೀಡಿದ್ದು, ಕಾಮಗಾರಿ ಮುಗಿದಿದೆ ಎಂದರು.

10 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಯಾರ್ಡ್‌: ಯಲಹಂಕ-ಬಂಗಾರಪೇಟೆ ಜಂಕ್ಷನ್‌ನಲ್ಲಿ 22 ಬೋಗಿಗಳ ರೈಲು ನಿಲುಗಡೆಗಾಗಿ ಯಾರ್ಡ್‌ ಅಭಿವೃದ್ಧಿಪಡಿಸಲು 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದು ಪೂರ್ಣಗೊಂಡರೆ ಬಂಗಾರಪೇಟೆ ಹಾಗೂ ಯಲಹಂಕದಿಂದ ಚೆನ್ನೈ, ಗೌಹಾತಿ, ದೆಹಲಿ ಸೇರಿದಂತೆ ಇಡೀ ದೇಶಕ್ಕೆ ಸಂಪರ್ಕ ಸಿಗಲಿದೆ.

ಕೋಲಾರ-ಮುಳಬಾಗಿಲು-ಚಿತ್ತೂರು, ಕಡಪದಿಂದ ಬಂಗಾರಪೇಟೆಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಕಾಮಗಾರಿ ನಡೆಯುತ್ತಿದ್ದು, ಆಂಧ್ರ ವ್ಯಾಪ್ತಿಯಲ್ಲಿ ಈಗಾಗಲೇ 70 ಕಿ.ಮೀ. ಕೆಲಸ ಮುಗಿದಿದೆ. ಕೋಲಾರ-ಮುಳಬಾಗಿಲು ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ಹೇಳಿದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ: ಜಿಲ್ಲೆಯಲ್ಲಿ ಆರಂಭಗೊಂಡಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಎಂಬುದರ ಕುರಿತು ಹೊಸ ಡೀಸಿ ಬಂದ ನಂತರ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವುದಾಗಿ ಸಂಸದರು ತಿಳಿಸಿದರು. ಹೊಸ ಡೀಸಿ ಮಂಜುನಾಥ್‌ ಬರುತ್ತಿರುವ ಕುರಿತು ಕೇಳಿದಾಗ, ನನ್ನ ಗಮನಕ್ಕೆ ಬಂದಿಲ್ಲ. ಒಳ್ಳೆಯ ಡೀಸಿ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಕೇಳಿದ್ದೆ ಎಂದರು. 

ರೈತರ ಸಾಲ ಮನ್ನಾಗೆ ವಿರೋಧವಿಲ್ಲ: ರೈತರ ಸಾಲ ಮನ್ನಾಗೆ ನಮ್ಮ ವಿರೋಧವಿಲ್ಲ, ಸಿದ್ದರಾಮಯ್ಯ ಹಿಂದೆ 8 ಸಾವಿರ ಕೋಟಿ ಮನ್ನಾ ಮಾಡಿದ್ದರು, ಮನಮೋಹನ್‌ ಸಿಂಗ್‌ 72 ಸಾವಿರ ಕೋಟಿ ಮನ್ನಾ ಮಾಡಿರಲಿಲ್ಲವೇ ಎಂದರು. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಸಮನ್ವಯ ಸಮಿತಿ ನಿರ್ಧಾರದಂತೆಯೇ ನಡೆಯುತ್ತದೆ. ಕರ್ನಾಟಕದ ವಿಭಜನೆಗೆ ವಿರೋಧ ವ್ಯಕ್ತಪಡಿಸಿ, ಏಕೀಕರಣ ಹೋರಾಟ ನೆನೆಪು ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ನಾರಾಯಣರೆಡ್ಡಿ, ಕೆಜಿಎಫ್‌ ನಗರಸಭೆ ಮಾಜಿ ಅಧ್ಯಕ್ಷ ದಾಸ್‌ಚಿನ್ನಸವರಿ, ಮುಖಂಡ ರಾಧಾಕೃಷ್ಣರೆಡ್ಡಿ, ಚಲಪತಿ, ಕೆ.ಜಯದೇವ್‌, ಕುಮಾರ್‌ ಮತ್ತಿತರರಿದ್ದರು. 

Trending videos

Back to Top