CONNECT WITH US  

ಎಚ್‌ಐವಿ ಸೋಂಕಿತರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಿ

ಕೋಲಾರ: ಲೈಂಗಿಕ ಕಾರ್ಯಕರ್ತೆಯರು ಎಚ್‌ಐವಿ ಹರಡುವಿಕೆ ಕುರಿತು ಎಚ್ಚರವಹಿಸುವುದರ ಜೊತೆಗೆ ಸೋಂಕಿತರಿಗೆ ಇರುವ ಸೌಲಭ್ಯಗಳನ್ನು ಸರಕಾರದ ಏಕಗವಾಕ್ಷಿ ಯೋಜನೆ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ನಾರಾಯಣಸ್ವಾಮಿ ಹೇಳಿದರು.

ನಗರದ ಸೌಖ್ಯ ಸಮೃದ್ಧಿ ಕೇಂದ್ರದಲ್ಲಿ ಶುಕ್ರವಾರ ಲೈಂಗಿಕ ಕಾರ್ಯಕರ್ತೆಯರಿಗೆ ಎಚ್‌ಐವಿ ಹರಡದಂತೆ ಎಚ್ಚರವಹಿಸುವ ವಿಧಾನಗಳ ಕುರಿತು ಮಾಹಿತಿ ಮತ್ತು ಸೋಂಕಿತ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಸೋಂಕಿತರು ಅರ್ಜಿಗಳನ್ನು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿಗಳ ಮೂಲಕ ಜಿಪಂ ಸಿಇಒಗೆ ನೀಡಿದರೆ ಅರ್ಹ ಫ‌ಲಾನುಭವಿಗಳಿಗೆ ಸವಲತ್ತುಗಳನ್ನು ನೀಡಲಾಗುವುದು ಎಂದರು.

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಸ್ವಂತ ಸೂರಿಲ್ಲದ ಸೋಂಕಿತರಿಗೆ ಆದ್ಯತೆ ಮೇರೆಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು, ವಿವಿಧ ಇಲಾಖೆಗಳ ಮೂಲಕ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ಆರೋಗ್ಯ ವಿಮಾ ಯೋಜನೆ, ವಿಧವಾ ಪಿಂಚಣಿ ಮತ್ತು ಹಿರಿಯ ನಾಗರಿಕರಿಗೆ ಮಾಸಾಶನವನ್ನು ನೀಡಲಾಗುತ್ತಿದೆ. ಸೋಂಕಿತರು ಕಳಂಕ ತಾರತಮ್ಯದ ಭೀತಿಯಿಂದ ಹೊರ ಬಂದು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಆರೋಗ್ಯ ಇಲಾಖೆಯ ಮೂಲಕ ಎಆರ್‌ಟಿ ಕೇಂದ್ರಗಳಲ್ಲಿ ಸೋಂಕಿತರಿಗೆ ಉಚಿತ ರಕ್ತ ಪರೀಕ್ಷೆ ಹಾಗೂ ಆರೈಕೆ ಮಾಡಲಾಗುವುದು, ಎಆರ್‌ಟಿ ಕೇಂದ್ರಕ್ಕಾಗಿ ಚಿಕಿತ್ಸೆಗೆ ಬರುವ ಸೋಂಕಿತರಿಗೆ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಂತ್ಯೋದಯ ಅನ್ನ ಯೋಜನೆ ಮೂಲಕ ಅಕ್ಕಿ, ಗೋಧಿ, ಸಕ್ಕರೆ, ಬಟ್ಟೆ ಸೋಪ್‌ಗ್ಳನ್ನು ನೀಡಲಾಗುವುದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾಬಾ ಯೋಜನೆಯಡಿ ಸೋಂಕಿತರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಪೋಷಕರ ಬ್ಯಾಂಕ್‌ ಖಾತೆಗೆ 750 ರಿಂದ 850 ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುವುದು ಎಂದು ತಿಳಿಸಿದರು.

ಕೆನರಾ ಬ್ಯಾಂಕ್‌ ಮತ್ತು ಸರಕಾರೇತರ ಸಂಸ್ಥೆಗಳು ಸ್ವ ಉದ್ಯೋಗ ತರಬೇತಿ ಮತ್ತು ಸಾಲ ಯೋಜನೆ ಕೌಶಲ್ಯ ತರಬೇತಿ ಯೋಜನೆಗಳ ಮೂಲಕ ಉಚಿತ ತರಬೇತಿಗಳು ಮತ್ತು ಹೊಲಿಗೆ ಯಂತ್ರಗಳನ್ನು ವಿತರಿಸಿ ಕಂಪ್ಯೂಟರ್‌ ತರಬೇತಿ ನೀಡಲಾಗುತ್ತಿದೆ. ಎಆರ್‌ಟಿ ಚಿಕಿತ್ಸೆ ಪಡೆಯಲು ಬರುವವರಿಗೆ ರೈಲ್ವೆ ಇಲಾಖೆಯು ಉಚಿತವಾಗಿ ರೈಲು ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿದೆ, ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು, ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ನಿಲಯಗಳ ಸೌಲಭ್ಯ ಕಲ್ಪಿಸಲಾಗುವುದು, ಸೋಂಕಿತರು ತಮ್ಮ ಯಾವುದೇ ಸಮಸ್ಯೆಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಆರೈಕೆ ಕೇಂದ್ರಗಳು ಹಾಗೂ ಎಆರ್‌ಟಿ ಕೇಂದ್ರಗಳ ಮೂಲಕ ಅಥವಾ ನೇರವಾಗಿ ತಮಗೆ ತಿಳಿಸಿದರೆ ಅವುಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್‌ ಮೇಲ್ವಿಚಾರಕಿ ಹೇಮಲತಾ, ಲೆಕ್ಕ ಪರಿಶೋಧಕಿ ಸುಮ, ಸೌಖ್ಯ ಕೇಂದ್ರದ ರುದ್ರೇಶ್‌, ರೋಹನ್‌ ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸೋಂಕಿತರಿಗೆ ಸರಕಾರದ ವಿವಿಧ ಇಲಾಖೆಗಳ ಸವಲತ್ತುಗಳ ಕಿರು ಹೊತ್ತಿಗೆಯನ್ನು ವಿತರಿಸಲಾಯಿತು.

Trending videos

Back to Top