CONNECT WITH US  

ಜೂ. ರಾಹುಲ್‌ ಮಂಗಳೂರಿನಿಂದ ಟೀಮ್‌ ಇಂಡಿಯಾಕ್ಕೆ

ಮಂಗಳೂರು: ಆಸ್ಟ್ರೇಲಿಯ ವಿರುದ್ದ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಗಾಗಿ ಭಾರತ ತಂಡಕ್ಕೆ ಮೊದಲ ಸಲ ಆಯ್ಕೆಯಾಗಿರುವ ಪ್ರತಿಭಾನ್ವಿತ ಬ್ಯಾಟ್ಸ್‌ಮ್ಯಾನ್‌, ಇನ್‌ಫಾರ್ಮ್ ಓಪನರ್‌ ಕಣ್ಣೂರು ಲೋಕೇಶ್‌ ರಾಹುಲ್‌ (ಕೆ.ಎಲ್‌.ರಾಹುಲ್‌) ಹುಟ್ಟಿದ್ದು, ಬೆಳೆದದ್ದು ಮಂಗಳೂರಿನಲ್ಲಿ..!

ಇತ್ತೀಚೆಗೆ ದುಲೀಪ್‌ ಟ್ರೋಫಿ ಫೈನಲ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ (185 ಮತ್ತು 130) 23ರ ಹರೆಯದ ಕೆ.ಎಲ್‌. ರಾಹುಲ್‌ ಭಾರತ ಕ್ರಿಕೆಟ್‌ ತಂಡವನ್ನು ಕೂಡಿಕೊಳ್ಳುವುದು ಖಚಿತವಿತ್ತು. ಕನ್ನಡಿಗರ ಈ ನಿರೀಕ್ಷೆ ಸೋಮವಾರ ಸಾಕಾರಗೊಂಡಿದೆ. ಕರಾವಳಿಯ ಹುಡುಗನೊಬ್ಬ ಟೀಮ್‌ ಇಂಡಿಯಾದಲ್ಲಿ ಕಾಣಿಸಿಕೊಂಡಂತಾಗಿದೆ!

ಮಂಗಳೂರಿನಲ್ಲಿ ವಿಧ್ಯಾಭ್ಯಾಸ

ಕೆ.ಎಲ್‌. ರಾಹುಲ್‌ 1992ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಫೌÅಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ ಎನ್‌ಐಟಿಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಬಳಿಕ ಕಾಲೇಜು ಪದವಿಪೂರ್ವ ವಿದ್ಯಾಭ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿನ ಜೈನ್‌ ಕಾಲೇಜಿಗೆ ಸೇರ್ಪಡೆಯಾದರು.

ಮಂಗಳೂರಿನ ಕಡಲ ತಡಿಯಲ್ಲಿ ತೆಂಗಿನ ಹಡೆಯನ್ನೇ ಬ್ಯಾಟನ್ನಾಗಿ ಮಾಡಿಕೊಂಡು ಆಡಿದ್ದನ್ನು ನೆನಪಿಸಿಕೊಳ್ಳುವ ರಾಹುಲ್‌, 2004ರಲ್ಲಿ ನಡೆದ ಅಂಡರ್‌-13 ವರ್ಷ ಮಂಗಳೂರು ವಿಭಾಗದ ಮೂರು ಕ್ರಿಕೆಟ್‌ ಪಂದ್ಯಾಟದ 4 ಇನ್ನಿಂಗ್ಸ್‌ನಲ್ಲಿ 650 ರನ್‌ ಬಾರಿಸಿ '''ಬೆಸ್ಟ್‌ ಬ್ಯಾಟ್ಸ್‌ಮ್ಯಾನ್‌' ಪ್ರಶಸ್ತಿ ಪಡೆದಿದ್ದರು. ಬಳಿಕ ಅಂಡರ್‌-13 ಕರ್ನಾಟಕ ತಂಡದಲ್ಲಿ ಆಯ್ಕೆಯಾದ ರಾಹುಲ್‌ 5 ಪಂದ್ಯದಲ್ಲಿ 450 ರನ್‌ ಬಾರಿಸಿದ್ದರು. ಇದರಲ್ಲಿ 3 ಶತಕ, ಒಂದು ಅರ್ಧ ಶತಕ ಸೇರಿತ್ತು.

ರಾಹುಲ್‌ನನ್ನು ಮೆಚ್ಚಿದ್ದ ದ್ರಾವಿಡ್‌..!

ಈ ಶತಕದ ಆಟವನ್ನು ಅಂದು ರಾಹುಲ್‌ ದ್ರಾವಿಡ್‌ ಅವರೇ ನೋಡಿದ್ದರು. ಬಳಿಕ ಜೂನಿಯರ್‌ ರಾಹುಲ್‌ ಅವರನ್ನು ಕರೆದು ಮಾತನಾಡಿಸಿದ್ದಾರೆ. ನನ್ನದೇ ಹೆಸರಿನ ಹುಡುಗ 13ರ ಹರೆಯದಲ್ಲಿ ಸೆಂಚುರಿ ಬಾರಿಸಿದ್ದು ನನಗೆ ಖುಷಿ ನೀಡಿದೆ ಎಂದು ಅಂದು ದ್ರಾವಿಡ್‌, ರಾಹುಲ್‌ ಅವರನ್ನು ಪ್ರಶಂಸಿಸಿದ್ದರು.

ಬಳಿಕ ಪುಣೆಯಲ್ಲಿ ನಡೆದ ಅಂಡರ್‌-13 ಕ್ರಿಕೆಟ್‌ನಲ್ಲಿ 79 ಎಸೆತಗಳಿಂದ 71 ರನ್‌ ಹೊಡೆದು ಪಂದ್ಯಶ್ರೇಷ್ಠರೆನಿಸಿದ್ದರು. ಅನಂತರದ ಪಂದ್ಯದಲ್ಲಿ 70 ಎಸೆತಗಳಿಂದ 131 ರನ್‌ ಬಾರಿಸಿ ಮೆರೆದಿದ್ದರು. ಇಲ್ಲಿಂದ ಮುಂದೆ ರಾಹುಲ್‌ ಹಿಂತಿರುಗಿ ನೋಡಿದ್ದೇ ಇಲ್ಲ.

2006ರಲ್ಲಿ ಅಂಡರ್‌-15 ಕರ್ನಾಟಕ ತಂಡ, 2008ರಲ್ಲಿ ಅಂಡರ್‌-17 ವರ್ಷ ತಂಡ, 2009ರಲ್ಲಿ ಅಂಡರ್‌-19 ತಂಡದಲ್ಲಿ ಆಡಿದರು. 2009ರಲ್ಲಿ ಬೆಂಗಳೂರು ಬ್ರಿಗೇಡಿಯರ್ (ಕೆಪಿಎಲ್‌) ಮೂಲಕ ಸುದ್ದಿ ಮಾಡಿದ್ದರು. 2010ರಲ್ಲಿ ಐಸಿಸಿ ಇಂಡಿಯಾ ಅಂಡರ್‌-19 ವಿಶ್ವಕಪ್‌ನಲ್ಲಿ ಆಡಿದ್ದು ರಾಹುಲ್‌ ಸಾಧನೆಗೊಂದು ಗರಿ. 2012ರಲ್ಲಿ ಅಂಡರ್‌-23 ಭಾರತ ತಂಡದಲ್ಲಿ, ಮುಂದಿನ ವರ್ಷ ದಕ್ಷಿಣ ವಿಭಾಗ ತಂಡದಲ್ಲಿ ಆಡಿದರು. 2013ರ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ, 2014ರಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡ, 2014ರ ಕೆಪಿಎಲ್‌ ಹುಬ್ಳಿ ಟೈಗರ್ ತಂಡದಲ್ಲಿ ರಾಹುಲ್‌ ಆಡಿದ್ದರು.

27 ಪಂದ್ಯ.. 2,091 ರನ್‌..!

ಪ್ರಸಕ್ತ ಋತುವಿನಲ್ಲಿ ಕರ್ನಾಟಕವನ್ನು ರಣಜಿ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಕೆ.ಎಲ್‌. ರಾಹುಲ್‌ ಈ ವರೆಗೆ 27 ಪ್ರಥಮ ದರ್ಜೆ ಪಂದ್ಯಗಳ 44 ಇನ್ನಿಂಗ್ಸ್‌ನಲ್ಲಿ 2,100 ರನ್‌ ಪೇರಿಸಿದ್ದಾರೆ. ಇದರಲ್ಲಿ 6 ಶತಕ, 8 ಅರ್ಧ ಶತಕ ಸೇರಿದೆ. ಸರಾಸರಿ 51.21. ಅತ್ಯಧಿಕ ಗಳಿಕೆ 185 ರನ್‌.

5 ನೇ ತರಗತಿಯಿಂದಲೇ ಕ್ರಿಕೆಟ್‌ ತರಬೇತಿ

ಎನ್‌ಐಟಿಕೆ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ರಾಹುಲ್‌ ಮಂಗಳೂರಿನ ನೆಹರೂ ಮೈದಾನದಲ್ಲಿ ಕ್ರಿಕೆಟ್‌ ತರಬೇತಿ ಆರಂಭಿಸಿದ್ದರು. ಆಗ ಪಿ. ದೇವದಾಸ್‌ ನಾಯಕ್‌ ಹಾಗೂ ಜಯರಾಜ್‌ ಮುತ್ತು ಅವರಿಂದ ತರಬೇತಿ ಪಡೆದರು. ಕಾಲೇಜು ಹಂತದಲ್ಲೂ ಕ್ರಿಕೆಟ್‌ ತರಬೇತಿ ನಿರಂತರವಾಗಿ ನಡೆಯಿತು. ಈ ಹಂತದಲ್ಲಿ ಕ್ರಿಕೆಟ್‌ ಪಂದ್ಯದಲ್ಲೂ ಆಡಿ ಗಮನಸೆಳೆದಿದ್ದರು ಎಂದು ರಾಹುಲ್‌ ಅವರ ತಾಯಿ ರಾಜೇಶ್ವರಿ ಲೋಕೇಶ್‌ ''ಉದಯವಾಣಿ'ಗೆ ತಿಳಿಸಿದರು.

''ಕಣ್ಣೂರು' ಮೂಲ ಊರು

ರಾಹುಲ್‌ನ ತಾತನ ಮನೆ ತುಮಕೂರು ಜಿಲ್ಲೆಯ ಕುದೂರು ತಾಲೂಕಿನ ಕಣನೂರು. ಇದು ''ಕಣ್ಣೂರು' ಎಂದೂ ಪ್ರಚಲಿತ. ರಾಹುಲ್‌ನ ತಂದೆ, ತಾಯಿ ಇಬ್ಬರೂ ಮೂಲತಃ ಅಲ್ಲಿಯವರು. ಆದರೆ ತಂದೆ ಕಣ್ಣೂರು ಡಾ| ಎನ್‌.ಲೋಕೇಶ್‌ 1987ರಲ್ಲಿ ಸುರತ್ಕಲ್‌ನ ಎನ್‌ಐಟಿಕೆ ಜಿಯಾಲಜಿ ವಿಭಾಗದ ಪ್ರೊಫೆಸರ್‌ ಆಗಿ ನೇಮಕಗೊಂಡರು. ಬಳಿಕ ಮಂಗಳೂರಿನಲ್ಲಿ ವಾಸ್ತವ್ಯ ಆರಂಭಿಸಿದರು. ರಾಜೇಶ್ವರಿ ಲೋಕೇಶ್‌ ಅವರು ಮಂಗಳೂರು ವಿವಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Trending videos

Back to Top