CONNECT WITH US  

ಸಿಡ್ನಿಯಲ್ಲಿ ಸಿಡಿದ ಕೆ.ಎಲ್‌.ರಾಹುಲ್‌!

ಸಿಡ್ನಿ: ತಾಳ್ಮೆ ಹಾಗೂ ಎಚ್ಚರಿಕೆಯ ಆಟದ ಮೂಲಕ ಸೊಗಸಾದ ಶತಕ ಬಾರಿಸಿದ ಕನ್ನಡಿಗ ಕೆ.ಎಲ್‌.ರಾಹುಲ್‌ ಮತ್ತು ಸರಣಿಯಲ್ಲಿ 4ನೇ ಶತಕ ಬಾರಿಸಿ ದಾಖಲೆಗಳ ಸರಮಾಲೆಯನ್ನೇ ಪೋಣಿಸಿದ ನಾಯಕ ವಿರಾಟ್‌ ಕೊಹ್ಲಿ ಅವರ ಅಸಾಮಾನ್ಯ ಸಾಹಸದಿಂದ ಸಿಡ್ನಿ ಟೆಸ್ಟ್‌ನಲ್ಲಿ ಭಾರತ ಸ್ಮಿತ್‌ ಪಡೆಗೆ ತಕ್ಕ ಜವಾಬು ನೀಡಿದೆ. ಸಂಭಾವ್ಯ ಅಪಾಯದಿಂದ ಪಾರಾಗಿದೆ.

ಒಂದಕ್ಕೆ 71 ರನ್‌ ಮಾಡಿದಲ್ಲಿಂದ ಮೂರನೇ ದಿನ ಬ್ಯಾಟಿಂಗ್‌ ಮುಂದುವರಿಸಿದ ಭಾರತ, ಯಾವುದೇ ಅವಸರಕ್ಕೆ ಮುಂದಾಗದೆ ದಿನದ 90 ಓವರ್‌ಗಳ ಆಟವನ್ನು ಟೆಸ್ಟ್‌ ಶೈಲಿಯಲ್ಲೇ ಆಡಿತು. ತನ್ನ ಮೊತ್ತಕ್ಕೆ ಮತ್ತೆ 271 ರನ್‌ ಪೇರಿಸಿತು.

ರಾಹುಲ್‌ 110 ರನ್‌ ಮಾಡಿ ಮೆಲ್ಬರ್ನ್ ಟೆಸ್ಟ್‌ ವೈಫ‌ಲ್ಯವನ್ನು ತೊಡೆದು ಹಾಕಿದರೆ, ಕೊಹ್ಲಿ ಅಜೇಯ 140 ರನ್‌ ಬಾರಿಸಿ ತನ್ನ ಬ್ಯಾಟಿಂಗ್‌ ಪರಾಕ್ರಮದ ಮೂಲಕ ಕಾಂಗರೂ ನಾಡಿನಲ್ಲಿ ಕಂಗೊಳಿಸಿದರು. ಇವರಿಬ್ಬರ 141 ರನ್‌ ಜೊತೆಯಾಟ ದಿನದಾಟದ ಆಕರ್ಷಣೆಯಾಗಿತ್ತು.

ಫಾಲೋಆನ್‌ನಿಂದ ಪಾರಾಗಿಲ್ಲ: ಆದರೆ ಭಾರತವಿನ್ನೂ ಫಾಲೋಆನ್‌ ಸಂಕಟದಿಂದ ಪಾರಾಗಿಲ್ಲ. ಇದಕ್ಕೆ ಇನ್ನೂ 30 ರನ್ನುಗಳ ಅಗತ್ಯವಿದೆ. ಕೊಹ್ಲಿ ಕ್ರೀಸ್‌ನಲ್ಲಿ ಇರುವುದರಿಂದ, ಅವರಿಗೆ ಕೀಪರ್‌ ವೃದ್ಧಿಮಾನ್‌ ಸಹಾ ಉತ್ತಮ ಬೆಂಬಲ ನೀಡುತ್ತಿರುವುದರಿಂದ ಫಾಲೋಆನ್‌ ಗಡಿ ದಾಟುವುದು ಭಾರತಕ್ಕೆ ಸಮಸ್ಯೆ ಎನಿಸದು.
ಹೀಗಾಗಿ 4ನೇ ದಿನವೂ ಬ್ಯಾಟಿಂಗ್‌ ವಿಸ್ತರಿಸಿ ಆಸೀಸ್‌ ಮೊತ್ತವನ್ನು ಸಮೀಪಿಸುವುದು ಟೀಮ್‌ ಇಂಡಿಯಾದ ಗುರಿ ಆಗಬೇಕು. ಕಾಂಗರೂ ಸ್ಕೋರ್‌ನಿಂದ ಭಾರತ ಇನ್ನೂ 230 ರನ್ನುಗಳ ಹಿನ್ನಡೆಯಲ್ಲಿದೆ.

ವಾಟ್ಸನ್‌ ಅವಳಿ ಹೊಡೆತ: ರಾಹುಲ್‌-ಕೊಹ್ಲಿ ಜೋಡಿಯ ಅಮೋಘ ಆಟದ ಹೊರತಾಗಿಯೂ ಕೊನೆಯ ಅವಧಿಯಲ್ಲಿ ಭಾರತ ದಿಢೀರ್‌ ಕುಸಿತವೊಂದನ್ನು ಕಂಡಿತ್ತು. ಅಜಿಂಕ್ಯ ರಹಾನೆ (13) ಮತ್ತು ಮರಳಿ ಟೆಸ್ಟ್‌ ಅವಕಾಶ ಪಡೆದ ಸುರೇಶ್‌ ರೈನಾ ಅವರನ್ನು ಶೇನ್‌ ವಾಟ್ಸನ್‌ ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್ನಿಗೆ ಅಟ್ಟಿದ್ದರು. ರೈನಾ "ಗೋಲ್ಡನ್‌ ಡಕ್‌' ಅವಮಾನಕ್ಕೆ ಸಿಲುಕಿದರು.

ಆದರೆ ಕೊಹ್ಲಿ-ಸಹಾ ಪ್ರಯತ್ನದಿಂದ ಭಾರತವನ್ನು ದೊಡ್ಡ ಸಂಕಟದಿಂದ ಪಾರಾಯಿತು. ಈ ಜೋಡಿ 15.1 ಓವರ್‌ ನಿಭಾಯಿಸಿ ಮುರಿಯದ 6ನೇ ವಿಕೆಟಿಗೆ ಭರ್ತಿ 50 ರನ್‌ ಸೇರಿಸಿದೆ.

ರೋಹಿತ್‌ ಅರ್ಧ ಶತಕ: 40 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ರೋಹಿತ್‌ ಶರ್ಮಾ ಅವರನ್ನು ಭಾರತ ಮೊದಲ ಅವಧಿಯಲ್ಲಿ ಕಳೆದುಕೊಂಡಿತು. ಈ ಬೇಟೆಗಾಗಿ ಕಾಂಗರೂ ಸುಮಾರು 18 ಓವರ್‌ ಕಾದಿತು. ಶರ್ಮ ಲಿಯೋನ್‌ಗೆ ಬೌಲ್ಡ್‌ ಆದಾಗ ಭಾರತವಿನ್ನೂ ನೂರರ ಗಟಿ ಮುಟ್ಟಿರಲಿಲ್ಲ.

ಆದರೆ ಅಷ್ಟರಲ್ಲಾಗಲೇ ರೋಹಿತ್‌ ಅರ್ಧ ಶತಕದ ಗಡಿ ದಾಟಿದ್ದರು. ಆಗ ಅವರ ಗಳಿಕೆ 53 ರನ್‌. 133 ಎಸೆತಗಳ ಈ ಇನಿಂಗ್ಸ್‌ನಲ್ಲಿ 5 ಫೋರ್‌, 2 ಸಿಕ್ಸ್‌ ಸೇರಿತ್ತು.

ರಾಹುಲ್‌-ಕೊಹ್ಲಿ ಕರಾಮತು: ಕೆ.ಎಲ್‌.ರಾಹುಲ್‌-ವಿರಾಟ್‌ ಕೊಹ್ಲಿ ಜೊತೆಗೂಡಿದ ಬಳಿಕ ಭಾರತದ ಬ್ಯಾಟಿಂಗ್‌ ಚಿತ್ರಣವೇ ಬದಲಾಯಿತು. ಇಬ್ಬರಿಗೂ ಒಂದೆರಡು ಜೀವದಾನ ಲಭಿಸಿದರೂ ಇದನ್ನೇ ಆರೋಹಣದ ಮೆಟ್ಟಿಲನ್ನಾಗಿ ಮಾಡಿಕೊಂಡು ಮುನ್ನಡೆದರು.

ಇಬ್ಬರಲ್ಲೂ ಹೊಸ ಉತ್ಸಾಹ ಮೈದಳೆದಂತಿತ್ತು. ಉತ್ತಮ ಹೊಂದಾಣಿಕೆ, ಲಘು ಹಾಸ್ಯ, ಆಗಾಗ ತಮಗೆ ತಾವೇ ನೀಡಿಕೊಂಡ ಸಲಹೆ-ಸೂಚನೆಗಳ ಮೂಲಕ ಇನಿಂಗ್ಸಿಗೊಂದು ರಂಗು ತುಂಬಿದರು. ಟೆಸ್ಟ್‌ ಪಂದ್ಯವನ್ನು ಹೇಗೆ ಆಡಬೇಕೋ ಅದೇ ರೀತಿಯಲ್ಲಿ ಆಡಿ ಭೇಷ್‌ ಎನಿಸಿಕೊಂಡರು.

ಲಂಚ್‌ ವೇಳೆ ಸರಿಯಾಗಿ 50 ರನ್‌ (161 ಎಸೆತ) ಮಾಡಿದ ರಾಹುಲ್‌ ಆಗಲೇ ತಮ್ಮ ಮೇಲಿನ ಒತ್ತಡದ ಮೂಟೆಯನ್ನು ಕೆಳಗಿಳಿಸಿ ಹೆಚ್ಚು ಉಲ್ಲಸಿತರಾಗಿದ್ದರು. ಅವರ ಶತಕ ಚಹಾ ವಿರಾಮಕ್ಕೂ ಸ್ವಲ್ಪ ಮೊದಲು, 253ನೇ ಎಸೆತದಲ್ಲಿ ಪೂರ್ತಿಗೊಂಡಿತು. ಸ್ಟಾರ್ಕ್‌ ಎಸೆತವನ್ನು ಗಲ್ಲಿ ಮಾರ್ಗವಾಗಿ ಬೌಂಡರಿಗೆ ರವಾನಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನ ಮೊದಲ ಮಹಾಸಂಭ್ರಮವನ್ನು ಆಚರಿಸಿದರು. ಕೊಹ್ಲಿ ತಮ್ಮ ಜೊತೆಗಾರನನ್ನು ತಬ್ಬಿ ಅಭಿನಂದಿಸಿದರು.

ಅದೇ ಓವರಿನಲ್ಲಿ ರಾಹುಲ್‌ ಮತ್ತೂಂದು ಬೌಂಡರಿ ಸಿಡಿಸಿ ಚಹಾಕ್ಕೆ ತೆರಳಿದರು. ಆದರೆ ಟೀ ವಿರಾಮಾನಂತರದ ಎರಡನೇ ಓವರಿನಲ್ಲೇ ಸ್ಟಾರ್ಕ್‌ ಸೇಡು ತೀರಿಸಿಕೊಂಡರು. "ಪುಲ್‌' ಹೊಡೆತದ ವೇಳೆ ಚೆಂಡು ಬಹಳ ಎತ್ತರಕ್ಕೆ ಹೋಯಿತು, ಸ್ವತಃ ಮಿಚೆಲ್‌ ಸ್ಟಾರ್ಕ್‌ ಕ್ಯಾಚ್‌ ಪಡೆದರು. 262 ಎಸೆತಗಳ ಈ ಇನಿಂಗ್ಸ್‌ ವೇಳೆ ರಾಹುಲ್‌ 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದರು.

3ನೇ ಟೆಸ್ಟ್‌ನಲ್ಲಿ ನಿರೀಕ್ಷೆಗೆ ತಕ್ಕ ಆಟವಾಡುವಲ್ಲಿ ವಿಫ‌ಲವಾಗಿದ್ದ ರಾಹುಲ್‌ ಈ ಶತಕದ ಮೂಲಕ ನಿರಾಳರಾಗಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದ ಖಾಯಂ ಸದಸ್ಯರಾಗುವ ಸುಳಿವನ್ನು ನೀಡಿದ್ದಾರೆ.

ರಾಹುಲ್‌ ನಿರ್ಗಮನದ ಬಳಿಕ ಕೊಹ್ಲಿ ಬಿರುಸಾದರು. ಹ್ಯಾರಿಸ್‌ ಮುಂದಿನ ಓವರಿನಲ್ಲೇ 3 ಬೌಂಡರಿ ಸಿಡಿಸಿದರು. 162ನೇ ಎಸೆತದಲ್ಲಿ ಶತಕ ಪೂರ್ತಿಗೊಂಡಿತು. ಕೊಹ್ಲಿ ಒಟ್ಟು 214 ಎಸೆತಗಳಲ್ಲಿ 20 ಬೌಂಡರಿ ಬಾರಿಸಿ ಆಸೀಸ್‌ಗೆ ಸವಾಲಾಗಿ ಉಳಿದಿದ್ದಾರೆ.

ರಾಹುಲ್‌ ಕ್ಯಾಚ್‌ ಕೈತಪ್ಪಿದ್ದಕ್ಕೆ ವೈಮಾನಿಕ ಕ್ಯಾಮೆರಾ ಕಾರಣ: ಸ್ಮಿತ್‌ ಆಕ್ರೋಶ

ಕೆ.ಎಲ್‌.ರಾಹುಲ್‌ 46 ರನ್‌ಗಳಲ್ಲಿದ್ದಾಗ ಕ್ಯಾಚ್‌ ಔಟ್‌ ಆಗುವುದರಿಂದ ತಪ್ಪಿಸಿಕೊಂಡಿದ್ದರು. ವಾಟ್ಸನ್‌ ಎಸೆತದಲ್ಲಿ ಕೀಪರ್‌ ಹಿಂದಕ್ಕೆ ರಾಹುಲ್‌ ಬಾರಿಸಿದರು. ಎತ್ತರಕ್ಕೆ ಹಾರಿದ ಚೆಂಡನ್ನು ಹಿಡಿಯಲು ಆಸೀಸ್‌ ನಾಯಕ ಸ್ಮಿತ್‌ ಹಿಂದುಹಿಂದಕ್ಕೆ ಓಡಿದರು. ಕಡೆಗೆ ಹಿಡಿಯಲಾಗದೆ ಕೈಚೆಲ್ಲಿದರು. ಆಗ ಸಿಟ್ಟುಗೊಂಡ ಅವರು ಮೇಲಿದ್ದ ವೈಮಾನಿಕ ಕ್ಯಾಮೆರಾದತ್ತ ಬೆಟ್ಟು ತೋರಿ ಆಕ್ರೋಶ ವ್ಯಕ್ತಪಡಿಸಿದರು. ತಾನು ಕ್ಯಾಚ್‌ ಕೈಚೆಲ್ಲಿದ್ದಕ್ಕೆ ಆ ಕ್ಯಾಮೆರಾದ ವೈರ್‌ಗಳೇ ಕಾರಣ ಎನ್ನುವುದು ಅವರ ಆಕ್ರೋಶಕ್ಕೆ ಕಾರಣ. ಈ ವೈಮಾನಿಕ ಕ್ಯಾಮೆರಾ ಮೈದಾನದ ಮೇಲಿಂದ ಹಾರಾಡುತ್ತ ಪಂದ್ಯವನ್ನು ಸೆರೆಹಿಡಿಯುತ್ತ ಇರುತ್ತದೆ.

ಭಾರತ ಪ್ರಥಮ ಇನಿಂಗ್ಸ್‌:5 ವಿಕೆಟಿಗೆ 342

(1ಕ್ಕೆ 71 ರನ್‌ಗಳಿಂದ ಮುಂದುವರಿದಿದೆ)

ಮುರಳಿ ವಿಜಯ್‌ ಸಿ ಹ್ಯಾಡಿನ್‌ ಬಿ ಸ್ಟಾರ್ಕ್‌ 0

ಕೆ.ಎಲ್‌.ರಾಹುಲ್‌ ಸಿ ಮತ್ತು ಬಿ ಸ್ಟಾರ್ಕ್‌ 110

ರೋಹಿತ್‌ ಶರ್ಮಾ ಬಿ ಲಿಯೋನ್‌ 53

ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ 140

ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ವಾಟ್ಸನ್‌ 13

ಸುರೇಶ್‌ ರೈನಾ ಸಿ ಹ್ಯಾಡಿನ್‌ ಬಿ ವಾಟ್ಸನ್‌ 0

ವೃದ್ಧಿಮಾನ್‌ ಸಹಾ ಬ್ಯಾಟಿಂಗ್‌ 14

ಇತರ 12

ವಿಕೆಟ್‌: 1-0, 2-97, 3-238, 4-292, 5-292

ಬೌಲಿಂಗ್‌:

ಮಿಚೆಲ್‌ ಸ್ಟಾರ್ಕ್‌ 21 4 77 2

ರ್ಯಾನ್‌ ಹ್ಯಾರಿಸ್‌ 23 6 63 0

ಜೋಶ್‌ ಹೇಜಲ್‌ವುಡ್‌ 20 5 45 0

ನಥನ್‌ ಲಿಯೋನ್‌ 32 7 91 1

ಶೇನ್‌ ವಾಟ್ಸನ್‌ 15 4 42 2

ಸ್ಟೀವನ್‌ ಸ್ಮಿತ್‌ 4 0 17 0
 

Trending videos

Back to Top