CONNECT WITH US  

ಪ್ರಬಲ ಪಕ್ಷಗಳಿಗೆ ಸಿಪಿಐ(ಎಂ) ಪೈಪೋಟಿ?

ಪುರಸಭೆಯ ಐದು ವಾರ್ಡ್‌ಗಳಲ್ಲಿ ಸ್ಪರ್ಧೆ , ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಿಗೆ ಸವಾಲು

ಗದಗ: ಕೋಟೆ ನಾಡು ಗಜೇಂದ್ರಗಡದಲ್ಲಿ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಮರ ರಂಗೇರಿದೆ. ಈ ಬಾರಿ ಪುರಸಭೆಯ ಐದು ವಾರ್ಡ್‌ಗಳಲ್ಲಿ ಕಣಕ್ಕಿಳಿದಿರುವ ಕಾರ್ಮಿಕರ ಪಕ್ಷ ಸಿಪಿಐ(ಎಂ)ದ ಅಭ್ಯರ್ಥಿಗಳು ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದ್ದಾರೆ. ಅಲ್ಲದೇ, ಜಿಲ್ಲೆಯ ಆರು ಸ್ಥಳೀಯ ಸಂಸ್ಥೆಗಳ ಪೈಕಿ ಗಜೇಂದ್ರಗಡದಲ್ಲಿ ಮಾತ್ರ ಸಿಪಿಐ(ಎಂ) ಸ್ಪರ್ಧೆಗಿಳಿದಿರುವುದು  ಸಹಜವಾಗಿಯೇ ಕುತೂಹಲ ಕೆರೆಳಿಸಿದೆ.

ಗಜೇಂದ್ರಗಡ ಪುರಸಭೆಯ 23 ವಾರ್ಡ್‌ಗಳ ಪೈಕಿ 1, 2, 3, 10 23 ಸೇರಿದಂತೆ ಒಟ್ಟು ಐದು ವಾರ್ಡ್‌ಗಳಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಸಿಪಿಐ(ಎಂ) ಸ್ಪರ್ಧೆಯಿಂದಾಗಿ ಆಯಾ ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಕೆಲವಾರ್ಡ್‌ಗಳಲ್ಲಿ ಪ್ರಭಾವಿಗಳು ಸ್ವತಂತ್ರರಾಗಿ ಕಣಕ್ಕಿಳಿದಿದ್ದರುವುದು ಬಿಟ್ಟರೆ, ಗಜೇಂದ್ರಗಡ ಪುರಸಭೆಯಲ್ಲಿ ಬಹುತೇಕ ಕಾಂಗ್ರೆಸ್‌-ಬಿಜೆಪಿ ನೇರ ಹಣಾಹಣಿ ಏರ್ಪಟ್ಟಿದೆ.

ಕಳೆದ ಚುನಾವಣೆಯಲ್ಲಿ ಸಿಪಿಐ(ಎಂ) ಆಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಲ್ಲಿಕಾರ್ಜು ಹಡಪದ ಅವರು ಮೊದಲ ಬಾರಿಗೆ ಪುರಸಭೆ ಪ್ರವೇಶಿಸುವ ಮೂಲಕ ಇತಿಹಾಸ ದಾಖಲಿಸಿದ್ದರು. ಅದೇ ಗೆಲುವಿನ ಹುಮ್ಮಸ್ಸಿನಲ್ಲಿರುವ ಸಿಪಿಐ(ಎಂ) ಈ ಬಾರಿ ಐದು ವಾರ್ಡ್‌ಗಳಲ್ಲಿ ತನ್ನ ಉಮೇದುದಾರರನ್ನು ಕಣಕ್ಕಿಳಿಸಿದೆ.

ಕಳೆದ ಬಾರಿ ವಾರ್ಡ್‌ ನಂ. 2ರಿಂದ ಆಯ್ಕೆಯಾಗಿದ್ದ ಎಂ.ಎಸ್‌. ಹಡಪದ ಅವರು ಈ ಬಾರಿ ಮೀಸಲಾತಿ ಬದಲಾವಣೆಯಿಂದಾಗಿ 1ನೇ ವಾರ್ಡ್‌(2ಎ ಮೀಸಲು)ಗೆ ವಲಸೆ ಬಂದಿದ್ದಾರೆ. ವಾರ್ಡ್‌ ನಂ. 1ರಲ್ಲಿ ಬಿಜೆಪಿಯಿಂದ ಶ್ರೀನಿವಾಸ ರಂಗಪ್ಪ ಸವದಿ, ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ರಾಜಾಸಾಬ್‌ ಅಮೀನ್‌ಸಾಬ್‌ ಸಾಂಗ್ಲಿಕಾರ, ಜೆಡಿಎಸ್‌ನಿಂದ ಬ್ರಹ್ಮಾನಂದ ಪ್ರಹ್ಲಾದರಾವ್‌ ಡಂಬಳ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅವರಲ್ಲಿ ಎಂ.ಎಸ್‌. ಹಡಪದ ಒಮ್ಮೆ ಪುರಸಭೆ ಪ್ರವೇಶಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ರಾಜಾಸಾಬ್‌ ಸಾಂಗ್ಲಿಕಾರ ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ  ಪರಾಭಾವಗೊಂಡಿದ್ದರು. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಎಚ್‌.ಎಸ್‌. ಸೋಂಪುರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಇನ್ನುಳಿದವರು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪಧಿಸಿದ್ದಾರೆ. ಈಗಾಗಲೇ ವಾರ್ಡ್‌ ಕಾಂಗ್ರೆಸ್‌- ಬಿಜೆಪಿಯೊಂದಿಗೆ ಸಿಪಿಐ(ಎಂ) ಕೂಡಾ ಪ್ರಬಲ ಪೈಪೋಟಿಯಿದೆ.

ವಾರ್ಡ್‌ ನಂ. 3ರಲ್ಲಿ ಮರಾಠ ಸಮುದಾಯದ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಸಿಪಿಐ(ಎಂ) ಪಕ್ಷಗಳೂ ಅದೇ ಸಮುದಾಯದವರಿಗೆ ಮಣೆ ಹಾಕಿದೆ. ಬಿಜೆಪಿಯಿಂದ ರಾಮಣ್ಣ ಸುಬ್ಬಣ್ಣ ಮಾಲಗಿತ್ತಿ, ಕಾಂಗ್ರೆಸ್‌ನಿಂದ ಶಿವರಾಜ ಸಮರಸಿಂಹ ಘೋರ್ಪಡೆ ಗೆಲುವಿಗಾಗಿ ಸೆಣಸಾಡುತ್ತಿದ್ದಾರೆ.

ಕಳೆದ ಬಾರಿ 1ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದರು. ಮೀಸಲಾತಿ ಬದಲಾವಣೆಯಿಂದಾಗಿ ವಾರ್ಡ್‌ ಬದಲಾಯಿಸಿದ್ದಾರೆ. ಪಟ್ಟಣದಲ್ಲಿ ಘೋರ್ಪಡೆ ಕುಟುಂಬಕ್ಕೆ ತನ್ನದೇ ಆದ ವರ್ಚಸ್ಸು ಹಾಗೂ ಪುರಸಭೆ ಸದಸ್ಯರಾಗಿದ್ದ ಶಿವರಾಜ ವೈಯಕ್ತಿ ಪ್ರಭಾವವನ್ನೂ ಹೊಂದಿದ್ದು, ಈ ಬಾರಿ ತಮ್ಮದೇ ಗೆಲುವು ಎನ್ನುತ್ತಿದ್ದಾರೆ.

ಆದರೆ, ಶಿವರಾಜ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಈ ಬಾರಿ ಪ್ರತಿಸ್ಪರ್ಧಿಗಳು ರಣತಂತ್ರವನ್ನೇ ರೂಪಿಸಿವೆ. ಕಳೆದ ಬಾರಿ ಇದೇ ವಾರ್ಡ್‌ನಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪ ರ್ಧಿಸಿದ್ದ ಲೀಲಾ ಮಾರುತಿ ಚಿಟಗಿ ಅವರು 100 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಬಾರಿ ವಾರ್ಡ್‌ ನಂ. 3 ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಲೀಲಾ ಅವರ ಪತಿ ಹಾಗೂ ಸಿಪಿಐ(ಎಂ) ಮುಖಂಡ ಮಾರುತಿ ಚಿಟಗಿ ಅವರು ಅದೃಷ್ಟ ಪರೀಕ್ಷೆಗಳಿದಿದ್ದಾರೆ.

ವಾರ್ಡ್‌ ನಂ. 10ರಲ್ಲೂ ಕಳೆದ ಬಾರಿ ಸೋಲನುಭವಿಸಿದ್ದ ಸಿಪಿಐ(ಎಂ) ಈ ಬಾರಿ ಮರಳಿ ಯತ್ನಕ್ಕೆ ಮುಂದಾಗಿದೆ. ಸಿಪಿಐ(ಎಂ) ಉಮೇದುದಾರರಾಗಿ ಪೀರಪ್ಪ ದುರ್ಗಪ್ಪ ರಾಥೋಡ ಅವರನ್ನು ಸ್ಪರ್ಧೆಗಳಿಸಿದೆ. ಬಿಜೆಪಿಯಿಂದ ರುಪೇಶ್‌ ಹೇಮಲೆಪ್ಪ ರಾಥೋಡ, ಕಾಂಗ್ರೆನಿಂದ ಪರಶುರಾಮ ಯಮನಪ್ಪ ಗುಗಲೋತ್ತರ ಪ್ರಮುಖ ಸ್ಪರ್ಧೆಗಳಾಗಿದ್ದಾರೆ. ಇದೇ ವಾರ್ಡ್‌ ನಲ್ಲಿ ಕಳೆದ ಪುರಸಭೆ ಚುನಾವಣೆಯಲ್ಲಿ ಸಿಪಿಐ(ಎಂ)ನ ಅಭ್ಯರ್ಥಿಯ ಸಂಬಂಧಿಯನ್ನೇ ಈ ಬಾರಿ ಕಣಕ್ಕಿಳಿಸಿದೆ ಎನ್ನಲಾಗಿದೆ.

ಇನ್ನುಳಿದಂತೆ ವಾರ್ಡ್‌ ನಂ.2 ರಲ್ಲಿ ಕಾಂಗ್ರೆಸ್‌ ಮಾರುತಿ ಶಿವಪ್ಪ ಬರಗಿ, ಬಿಜೆಪಿ ಯಮನಪ್ಪ ಭೀಮಪ್ಪ ತಿರಕೋಜಿ ಸಿಪಿಐ(ಐ) ರೇಣುಕಾರಾಜ್‌ ದುರ್ಗಪ್ಪ ಕಲ್ಗುಡಿ ಸ್ಪರ್ಧಿಸಿದ್ದಾರೆ. ಅದರೊಂದಿಗೆ ವಾರ್ಡ್‌ ನಂ. 23ರಲ್ಲಿ ಪ್ರಬಲ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಿಪಿಐ(ಎಂ)ನ ಬಾಲಪ್ಪ ಉಮಲೇಪ್ಪ ರಾಠೊಡ ಸೆಣಸಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಕಾಂಗ್ರೆಸ್‌ ಮರಿಯಪ್ಪ ಕಳಕಪ್ಪ ಕಂಠಿ, ಬಿಜೆಪಿ ವೀರಪ್ಪ ಶಿವಪ್ಪ ಪಟ್ಟಣಶೆಟ್ಟಿ ಅವರು ಗೆಲುವಿನ ವಿಶ್ವಾಸದಲ್ಲಿದ್ದಾರೆ. 

ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಸ್ಪರ್ಧೆಯಿದ್ದರೂ ಗೆಲುವು ಮಾತ್ರ ನಮ್ಮದೇ. ಸಿದ್ದರಾಮಯ್ಯ ಅವರ ನೇತೃತ್ವದ ಹಿಂದಿನ ರಾಜ್ಯ ಸರಕಾರ ಹಾಗೂ ಸ್ಥಳೀಯ ಆಡಳಿತದ ಜನಪರ ಕಾರ್ಯಗಳು ಪಕ್ಷದ ಅಭ್ಯರ್ಥಿಗಳಿಗೆ ಶ್ರೀ ರಕ್ಷೆಯಾಗಲಿದೆ. ಸಿಪಿಐ(ಎಂ) ಸ್ಪರ್ಧೆಯಿಂದ ಯಾವುದೇ ರೀತಿ ಪರಿಣಾಮ ಬೀರದು.
 ಬಸವನಗೌಡ ಪೊಲೀಸ್‌
ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ 

ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗಜೇಂದ್ರಗಡದಲ್ಲಿ ಕಾರ್ಮಿಕ ಸಂಘಟನೆಗಳಿಗೆ ಮನ್ನಣೆಯಿದೆ. ರಾಷ್ಟ್ರೀಯ ಪಕ್ಷಗಳು ಬಂಡವಾಳ ಶಾಹಿಗಳ ಪರವಾಗಿವೆ ಎಂಬುದು ಜನಸಾಮಾನ್ಯರಿಗೆ ಗೊತ್ತಾಗಿದೆ. ಹೀಗಾಗಿ ಕಳೆದ ಬಾರಿ ಒಬ್ಬ ಸಿಪಿಐ ಸಿಪಿಐ(ಎಂ) ಗೆ ಒಂದು ಸ್ಥಾನ ಲಭಿಸಿದ್ದು, ಈ ಬಾರಿ ಐವರನ್ನು ಕಣಕ್ಕಿಳಿಸಿದೆ.
ಮಲ್ಲಿಕಾರ್ಜುನ ಎಸ್‌. ಹಡಪದ,
ಸಿಪಿಐ(ಎಂ) ಅಭ್ಯರ್ಥಿ

ವಿಶೇಷ ವರದಿ


Trending videos

Back to Top