CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗೊತ್ತಿಲ್ಲವೆಂಬ ಮೇಧಾವಿತನ

ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದೇ ಸಕಲ ವಿಭ್ರಮೆಗಳಿಂದ ಬಿಡುಗಡೆ. ಗೊತ್ತಿಲ್ಲದೆ ಇರುವುದರಲ್ಲಿ ವಿಶೇಷವೇನೂ ಇಲ್ಲ ಎಂಬ ಮನೋಭಾವದಿಂದ ಇರುವುದೇ ಉಚಿತ ಮಾರ್ಗ.

ಸುತ್ತುಮುತ್ತಣ ಆಗುಹೋಗುಗಳ ಸ್ಪಷ್ಟ ತಿಳುವಳಿಕೆಯು ನಮ್ಮನ್ನು ಮಾನವರನ್ನಾಗಿ ರೂಪಿಸುತ್ತದೆ ಎಂದು ಹೇಳುತ್ತಾರೆ. ಅಂದರೆ, ಬಹಳಷ್ಟು ಗೊತ್ತಿದಷ್ಟೂ ಒಳ್ಳೆಯದು, ಗೊತ್ತಿಲ್ಲದಿದ್ದರೆ ಚಡಪಡಿಸುತ್ತಾ ಇರಬೇಕು ಎಂಬ ಅನ್ನಿಸಿಕೆ.ಆದರೆ ನಿಜಕ್ಕೂ ನಮ್ಮನ್ನು ಮಾನವರನ್ನಾಗಿ ಮಾಡುವುದು ಗೊತ್ತಿಲ್ಲವೆಂಬ ನಮ್ಮ ಅಜ್ಞಾನದ ಬಗ್ಗೆ ತಿಳಿವಳಿಕೆಯೇ ಹೊರತು ಬರೇ ತಿಳಿವಳಿಕೆಯಲ್ಲ. ಇತರ ಜೀವಿಗಳಿಂದ ನಮ್ಮನ್ನು ಭಿನ್ನಗೊಳಿಸುವುದು ತಿಳಿವಳಿಕೆಯಲ್ಲ, ಅಜ್ಞಾನ. ಮಾನವರಿಗೆ ತಮಗೇನು ಗೊತ್ತಿದೆ ಎಂದು ತಿಳಿದಿದೆ, ನಮಗೇನು ಗೊತ್ತಿಲ್ಲವೆಂದೂ ಸ್ವಲ್ಪಮಟ್ಟಿಗೆ ತಿಳಿದಿದೆ. ಪ್ರಾಣಿಗಳಿಗೆ ತಮಗೇನು ಗೊತ್ತಿಲ್ಲವೆಂಬುದರ ಬಗ್ಗೆ ಗೊತ್ತೇ ಇಲ್ಲ, ತಮ್ಮ ಅಜ್ಞಾನದ ಬಗ್ಗೆ ಜ್ಞಾನವಿಲ್ಲ, ಗೊತ್ತಿಲ್ಲದ್ದರ ಬಗ್ಗೆ ಅವು ತಲೆಕೆಡಿಸಿಕೊಳ್ಳುವುದೂ ಇಲ್ಲ, ಗೊತ್ತಿಲ್ಲದ್ದು ಗೊತ್ತಾಗಬೇಕೆಂದು ಪೊದುವಾಳರಲ್ಲಿ ಅಷ್ಟಮಂಗಲ ಪ್ರಶ್ನೆಯಿಡುವುದಿಲ್ಲ. ಸುಖ-ಸಂತಸಗಳ ಬಗ್ಗೆ ನಮಗೆಷ್ಟು ಗೊತ್ತಿದೆ?

ಸುಖದ ಗೊತ್ತಿಲ್ಲಗಳು 
ಬೃಹದರಣ್ಯಕ ಉಪನಿಷದ್‌ನಲ್ಲಿ ಕಂಡುಬರುವ ನಿರೂಪಣೆಯೊಂದರ ಪ್ರಕಾರ ಯಾಜ್ಞವಲ್ಕ್ಯನು ಗೃಹಸ್ಥಾಶ್ರಮವನ್ನು ತ್ಯಜಿಸಿ ವಾನಪ್ರಸ್ಥಾಶ್ರಮಕ್ಕೆ ತಯಾರಿ ನಡೆಸುತ್ತಿರುವಾಗ ತನ್ನ ಇಬ್ಬರು ಪತ್ನಿಯರಿಗೆ-ಮೈತ್ರೇಯಿ ಹಾಗೂ ಕಾತ್ಯಾಯಿನಿಗೆ ತನ್ನ ಸಂಪತ್ತನ್ನು ಸರಿಸಮಾನವಾಗಿ ವಿಭಜಿಸುತ್ತಾನೆ. ಈ ಸಂದರ್ಭದಲ್ಲಿ ಮೈತ್ರೇಯಿ, ಯಾಜ್ಞವಲ್ಕ್ಯನಿಗೆ ಒಂದು ಪ್ರಶ್ನೆಯನ್ನು ಒಡ್ಡುತ್ತಾಳೆ- "ಈ ಭೌತಿಕ ಸಂಪತ್ತು ಶಾಶ್ವತವಾದ ಸುಖ ನೀಡುತ್ತದೆಯೇ?' ಮಾನವನು ಸದಾ ಕೇಳುತ್ತಿರುವ ಪ್ರಶ್ನೆ ಇದು. "ಸಂತಸವೇನೋ ದೊರಕುತ್ತದೆ. ಆದರೆ ಕ್ಷಣಿಕವಾದುದು, ತಾತ್ಕಾಲಿಕ ಮಾತ್ರ' ಎನ್ನುತ್ತಾನೆ ಯಾಜ್ಞವಲ್ಕ್ಯ. ಗೊತ್ತಿಲ್ಲಗಳೊಂದಿಗೆ ಸ್ವಸ್ಥವಾಗಿ ಇರಲು ಸಾಧ್ಯವಿಲ್ಲದ ಮೈತ್ರೇಯಿಯ ಮರುಪ್ರಶ್ನೆ- "ಹಾಗಾದರೆ ನಿರಂತರ ಸಂತಸವನ್ನುದೊರಕಿಸಲು ಹೇಗೆ ಸಾಧ್ಯ?' "ಭೌತಿಕ ಸಂಪತ್ತು ಸಂತಸ ಕೊಡುತ್ತದೆಯೇನೋ ನಿಜ, ತಾತ್ಕಾಲಿಕವೆಂದು ಗೊತ್ತಿದ್ದರೂ ಸಂತಸ ಇದ್ದೇ ಇದೆ. ಆಶೆಗಳೆಂದರೆ ಸಂಪೂರ್ಣವಾಗಿ ವಸ್ತು ವ್ಯಕ್ತಿಗಳೊಡನೆ ಕರಗಿಹೋಗಿ ಬೆರೆಯಲು, ಎರಡಾಗಿರದೆ ಒಂದಾಗಲು ಅದಮ್ಯವಾದ ಹವಣಿಕೆ. ಆದರೆ ಅದು ಅಸಾಧ್ಯ. ಆದುದರಿಂದಲೇ ವಸ್ತು-ವ್ಯಕ್ತಿಗಳಿಂದ ಸಿಗುವ ಸಂತಸವು ಅಶಾಶ್ವತ. ಶಾಶ್ವತ ಸಂತಸವು ಸಿಗುವುದು ನಾವು ಆತ್ಮದೊಂದಿಗೆ ಒಂದಾಗಲು ಆಶೆ ಪಟ್ಟಾಗ. ಅದು ಶಾಶ್ವತ ಸಂತಸ. ಅದಿಲ್ಲದಿದ್ದರೆ ಸದಾ ಅತೃಪ್ತಿ. ಪ್ರೇಮಕ್ಕಾಗಿ ಹಾತೊರೆಯುವುದೆಂದರೆ ತನ್ನ ಸ್ವಂತ ಆತ್ಮಕ್ಕಾಗಿ ಹಾತೊರೆಯುವುದು' - ಮಂಡೆಯನ್ನು ಚುರುಗುಟ್ಟಿಸುವ ಇಷ್ಟನ್ನು ಹೇಳಿ ಯಾಜ್ಞವಲ್ಕ್ಯನು ಬದುಕಿನ ಗೊತ್ತಿಲ್ಲಗಳೊಂದಿಗೆ ರಾಜಿಯಾಗಿರಲು ಬೃಹದ್‌ಅರಣ್ಯಕ್ಕೆ ಹೋಗುತ್ತಾನೆ. ಒಟ್ಟಿನಲ್ಲಿ ಮಾನವನಿಗೆ ಸುಖದ ನಿಜಮುಖವನ್ನು ನೋಡಲಾಗುವುದಿಲ್ಲ. ಅದರ ಗುಣಿಸು ಭಾಗಿಸು ಗಣಿತವನ್ನೂ ಹಾಸುಹೊಕ್ಕುಗಳನ್ನೂ ಬಿಡಿಸಲು ಹೋದರೆ, ಸುಖದ ವಿಸ್ಮಯ, ನಿಗೂಢತೆ ಕ್ಷಣಮಾತ್ರದಲ್ಲಿ ಆವಿಯಾಗಿ ಸಪ್ಪೆಯಾಗುತ್ತದೆ. ಯಶಸ್ಸಿನ ಬೆಂಬತ್ತಿ ಹೋದರೆ ಅದು ಪೊದೆಮರೆಯಲ್ಲಿ ಅಡಗಿರುತ್ತದೆ. ಆದುದರಿಂದಲೇ ಯಶಸ್ವಿ ಗಂಡ ಎಂದರೆ ತನ್ನ ಹೆಂಡತಿ ಖರ್ಚು ಮಾಡುವಷ್ಟು ಗಳಿಸುವವನು. ಯಶಸ್ವಿ ಹೆಂಡತಿ ಎಂದರೆ ಅಂತಹ ಗಂಡನನ್ನು ಮದುವೆಯಾಗುವವಳು.

ಪ್ರೇಮದ ಗೊತ್ತಿಲ್ಲಗಳು
ಇದೇ ಧಾಟಿಯ ಇನ್ನೊಂದು ಗ್ರೀಕ್‌ ಪುರಾಣದ ಕಥೆ- ಓರ್ವ ರಾಜಕುಮಾರಿ. ಅವಳ ಹೆಸರು ಸೈಖೆ. ಅವಳದ್ದು ಸ್ವತ್ಛಂದ ಸ್ವತಂತ್ರ ಮನೋವೃತ್ತಿ. ತನ್ನ ಮಗಳು ಹೀಗೆ ಬಿಂದಾಸ್‌ ಇದ್ದರೆ  ಮದುವೆಯಾಗದೆಯೇ ಉಳಿಯುವಳು ಎಂದು ಅವಳ ಅಪ್ಪ ಬೆದರಿ ಬೆಂದು ಹೋಗಿ ಅಪೊಲ್ಲೊ ದೇವನೊಡನೆ ಪ್ರಾರ್ಥಿಸಿದ. ಅಪೊಲ್ಲೊ ಸಂಪ್ರೀತನಾಗಿ ಹೀಗೆಂದ- "ಅವಳು ಒಬ್ಬಂಟಿಯಾಗಿ ಶೋಕದ ಉಡುಗೆಯನ್ನು ಧರಿಸಿ ಪರ್ವತದ ತುದಿಗೆ ಹೋಗಬೇಕು, ಅಲ್ಲಿ ಒಂದು ಹಾವು ಅವಳನ್ನು ಮದುವೆಯಾಗುವುದು'. ಅವಳು ಪರ್ವತದ ತುದಿಗೆ ಹೋದಳು, ಹೆಪ್ಪುಗಟ್ಟಿಸುವ ಚುಮುಚುಮು ಚಳಿಯಲ್ಲಿ ತಾನು ಸಾಯಬಹುದೆಂಬ ದಿಗಿಲಿನಿಂದ ಅಲ್ಲಿಯೇ ನಿದ್ರೆ ಹೋದಳು. ಮರುದಿನ ಎದ್ದಾಗ, ತಾನು ಒಂದು ಅರಮನೆಯಲ್ಲಿದ್ದೇನೆ, ರಾಣಿಯಾಗಿದ್ದೇನೆ ಎಂದು ಹೊಳೆಯಿತು. ಪ್ರತಿರಾತ್ರಿ ರಾಜಕುಮಾರ ಬರುತ್ತಿದ್ದ, ಆದರೆ ಒಂದು ಶರತ್ತಿನೊಂದಿಗೆ- ಅವಳು ಅವನ ಮುಖವನ್ನು ಎಂದೂ ನೋಡುವಂತಿಲ್ಲ. ಹೀಗೆ ಅವರು ಸುಖಜೀವನದಲ್ಲಿ ಓಲಾಡುತ್ತಿರುವಾಗ ಅವಳ ಊಹೆಯಂತೂ ತಾನೊಂದು ಭಯಾನಕ ಹಾವಿನೊಡನೆ ಸರಸ ಮಾಡುತ್ತಿದ್ದೇನೆ ಎಂಬುದಾಗಿತ್ತು. ಮೈತುಂಬಾ ಹುರುಪು, ಕನಸು ಕನವರಿಕೆಗಳಿದ್ದರೂ ಕುತೂಹಲದ ಒತ್ತಡವನ್ನು ಅದುಮಿಡಲಾಗದೆ ಒಂದು ರಾತ್ರಿ ಅವಳು ಅವನ ಮುಖದ ಹೊದಿಕೆಯನ್ನು ಸರಿಸಿ ನೋಡಿದಳು, ತುಂಬಾ ಸು#ರದ್ರೂಪಿ ರಾಜಕುಮಾರ. ದೀಪದ ಬೆಳಕಿಗೆ ರಾಜಕುಮಾರನಿಗೆ ಎಚ್ಚರವಾಯಿತು. ಅವಳು ಶರತ್ತನ್ನು ಮುರಿದ ಕಾರಣವಾಗಿ ಅವನು ಮಾಯವಾದ. ಇದೇ ರೀತಿ ಮಾನವನಿಗೆ ಪ್ರೇಮದ ನಿಜ ಮುಖವನ್ನು ನೋಡಲಾಗುವುದಿಲ್ಲ. ಪ್ರೇಮವೆಂದರೆ ನಂಬಿಕೆಯ ಪ್ರಶ್ನೆ, ಅದು ಸದಾ ನಿಗೂಢತೆಯಲ್ಲಿ ಗೊತ್ತಿಲ್ಲವಾಗಿ ಭಾವನಾತ್ಮಕವಾಗಿ ಇರಬೇಕು. ಅದರ ಗುಣಿಸು ಭಾಗಿಸು ಗಣಿತವನ್ನೂ ಹಾಸುಹೊಕ್ಕುಗಳನ್ನೂ ಬಿಡಿಸಲು ಹೋದರೆ, ಅದರ ವಿಸ್ಮಯ ಆವಿಯಾಗಿ ಸಪ್ಪೆಯಾಗುತ್ತದೆ. ಒಲವು ನಮ್ಮ ಕೈ ಹಿಡಿದು ಕೊಂಡೊಯ್ಯಬೇಕು- ಪರ್ವತದ ತುದಿಗೆ, ಸಮುದ್ರದ ಆಳಕ್ಕೆ. ಭಯಪಡದಿದ್ದರೆ ನಾವು ಅದರೊಂದಿಗೆಅರಮನೆಯಲ್ಲಿರಬಹುದು, ಅದರ ಗೊತ್ತಿಲ್ಲಗಳನ್ನು ಬಿಡಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಬರೇ ಖಾಲಿತನ. ಪ್ರೇಮವು ಯಾವುದಕ್ಕೂ ವಿಧೇಯವಲ್ಲ, ಗೊತ್ತಿಲ್ಲದ ಅದರ ಕಗ್ಗಂಟನ್ನು ಬಿಡಿಸುವುದರಲ್ಲಿ ಮಗ್ನರಾದವರನ್ನು ತ್ಯಜಿಸಿ ಹೋಗುತ್ತದೆ.

ಗೊತ್ತುಗುರಿಗಳು ಹಾಗೂ ಗೊತ್ತಿಲ್ಲಗಳು 
ಬದುಕಿಗೆ ಕೆಲವೊಂದು ಗೊತ್ತುಗುರಿಗಳೆಂಬ ವಿಭ್ರಮೆಗಳು ಹೆಣೆದುಕೊಂಡೇ ಬರುತ್ತವೆ. ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದೇ ಸಕಲ ವಿಭ್ರಮೆಗಳಿಂದ ಬಿಡುಗಡೆ. ಗೊತ್ತಿಲ್ಲದಿರುವುದರಲ್ಲಿ ವಿಶೇಷವೇನೂ ಇಲ್ಲ ಎಂಬ ಮನೋಭಾವದಿಂದ ಇರುವುದೇ ಉಚಿತ ಮಾರ್ಗ. ಮಾನವನ ಸುಖ ಸಂತಸಗಳಿಗೆ ದೊಡ್ಡ ಅಡ್ಡಿಯೆಂದರೆ ಯಾವುದೇ ಸಂತಸಕ್ಕೆ ಕಾರಣವಾದ ಅಂಶಗಳ ಕಾಯೀಸು ಕಾಲಕ್ರಮೇಣವಾಗಿ ಬದುಕಿನ ಹಿನ್ನೆಲೆಗೆ ತಳ್ಳಲ್ಪಡುತ್ತವೆ- ಹೊಸ ಮೊಬೈಲ್‌ನ ಪುಳಕ ಅಥವಾ ವಿವಾಹದ ರೋಮಾಂಚನ. ಅನಂತರ ಅದು ಹಳಸಿದ್ದು ಆಗಿಬಿಡುತ್ತದೆ. ಮಗುವನ್ನು ಮೇಲೆತ್ತಿದಾಗ ಅದು ನಾಳೆ ಸಾಯಬಹುದು ಎಂಬ ಪ್ರಜ್ಞೆ ನುಸುಳುತ್ತದೆ. ಆ ಪ್ರಜ್ಞೆಯೇ ಆ ಮಗುವನ್ನು ಹೆಚ್ಚಾಗಿ ಪ್ರೀತಿಸಲು ಕಾರಣವಾಗುತ್ತದೆ. ಕೆಟ್ಟದ್ದು ಒಂದು ವೇಳೆ ಘಟಿಸಿದರೂ ಅದು ನಾವು ಊಹಿಸಿದಷ್ಟು ದುರಂತವಾಗಿರುವುದಿಲ್ಲ. ನಿರುದ್ಯೋಗಿಯಾದ ಮಾತ್ರಕ್ಕೆ ಹಸಿವಿನಿಂದ ತೊಳಲಾಡಿ ಸಾಯಬೇಕಿಲ್ಲ. ಹುಡುಗಿ ಕೈಕೊಟ್ಟ ಮಾತ್ರಕ್ಕೆ ಹಗ್ಗವನ್ನು ಹುಡುಕಿ ಹೋಗಬೇಕಿಲ್ಲ. ಗೊತ್ತಿಲ್ಲದ ಇನ್ನೂ ಕೆಟ್ಟದು ಸಂಭವಿಸಲು ಸಾಧ್ಯವೆಂಬ ಪೂರ್ವಧ್ಯಾನವು ನಮಗೆ ತರ್ಕಬದ್ಧವಾಗಿ ಚಿಂತಿಸಲು ಅನುವು ಮಾಡಿಕೊಡುತ್ತದೆ. ಬಹುತೇಕ ಭಯಗಳು ಅರೆಬರೆ ತರ್ಕಗಳಿಂದ ಹುಟ್ಟುವ ಅತಾರ್ಕಿಕ ಭ್ರಮೆಗಳು, ಚೆನ್ನಾಗಿ ವಿವೇಚಿಸದೆ ಕೈಗೊಳ್ಳುವ ತೀರ್ಮಾನಗಳು. ಉದಾಹರಣೆಗೆ, ಸಾವಿರಾರು ವರ್ಷಗಳಿಂದ  ಮನುಷ್ಯ ತಾನು ಸಾಕ್ಷಾತ್‌ ನೋಡುವಂತಹ ವ್ಯಕ್ತಿಗಳೊಡನೆ ಮಾತಿನಲ್ಲಿ ತೊಡಗಿದ್ದ. ಆದರೆ ಕಳೆದ ಕೆಲವು ವರ್ಷಗಳಿಂದ ಫೋನಿನಿಂದಾಗಿ ನೋಡುವಿಕೆ ಹಾಗೂ ಮಾತಾಡುವಿಕೆ ದೂರ ದೂರ ಸರಿಯಿತು. ಅದೇನು ಮಹಾ ಎನ್ನಿಸುವ ಈ ಹೊಸ ವಿದ್ಯಮಾನಕ್ಕೆ ನಮ್ಮ ಶರೀರ ಇನ್ನೂ ಒಗ್ಗಿಲ್ಲ. ಇಂದು ಮೊಬೈಲಿನಲ್ಲಿ ಸಂಭಾಷಿಸುವುದೆಂದರೆ ಯಾವುದೋ ಗೊತ್ತಿಲ್ಲದ ಇಂದ್ರಜಾಲಿಕ ಜಗತ್ತನ್ನು ಆವಾಹನೆ ಮಾಡಿಕೊಂಡಂತೆ. ಆದುದರಿಂದಲೇ ಮೊಬೈಲಿನ ಸಂಭಾಷಣೆಯಲ್ಲಿ ಪರಸ್ಪರ ವಾಗ್ವಾದ ಹೆಚ್ಚು. ಹುಡುಗಿ ತನ್ನನ್ನು ನೋಡಿದಾಕ್ಷಣ ತನ್ನ ತುಟಿಗಳನ್ನು ಎಂಟಿಂಚು ಅರಳಿಸಿ ನಗಲಿಲ್ಲವೆಂದುಕೊಂಡು ಅವಳು ತನ್ನ ಕೈಬಿಟ್ಟು ಇನ್ಯಾರನ್ನೋ ಪ್ರೀತಿಸುತ್ತಾಳೆ ಎಂಬ ಊಹೆಯೆಂಬ ಗೊತ್ತಿಲ್ಲದ ಜಾಗವನ್ನು ತುಂಬಿಸಿ ಬರೆಯುವುದು. ಕೈಬಿಡುವುದು ಸಾಮಾನ್ಯ ಸಂಗತಿ, ಯಾಕೆಂದರೆ ಹೆಂಗಸಿನ ಮನಸ್ಸು ಸದಾ ನಿರ್ಮಲ, ಶುದ್ಧ, ಇದಕ್ಕೆ ಕಾರಣ ಅವಳು ತನ್ನ ಮನಸ್ಸನ್ನು ಬದಲಾಯಿಸುತ್ತಾ ಇರುತ್ತಾಳೆ. ಪ್ರೇಮಿಸುವ ಹುಡುಗಿಯನ್ನು ಯಾವನೋ ಕದ್ದರೆ, "ಯಾಕೆಂತಾ ಗೊತ್ತಿಲ್ಲ, ಒಂದು ಲೆಕ್ಕದಲ್ಲಿ ಅದು ಲಾಯಕ್ಕಾಯಿತು, ಅವಳು ಅವನೊಟ್ಟಿಗೇನೆ ಇರಲಿ, ಅದೇ ಅವನಿಗೆ ಸರಿಯಾದ ಬುದ್ಧಿ ಕಲಿಸುವ ವಿಧಾನ' ಎಂದು ಒಪ್ಪಿಕೊಳ್ಳುವುದೇ ಸೂಕ್ತ ಮಾರ್ಗ.

ಸ್ತ್ರೀಸಮಾನತೆ, ಸಬಲೀಕರಣದ ಈ ಹಂತದಲ್ಲಿ, ಗಂಡಸರಿಗಿಂತ ಚೆನ್ನಾಗಿ ಕೆಲಸ ಪೂರೈಸುತ್ತೇವೆ ಎಂದು ಸಾಬೀತು ಪಡಿಸಲು ಹೆಂಗಸರು ಆಫೀಸರ್‌ ಆದರು, ಸೈನ್ಯಕ್ಕೆ ಸೇರಿದರು, ಪೈಲಟ್‌, ಪೊಲೀಸ್‌ ಆದರು, ರಾಜಕೀಯ ಪುಢಾರಿಣಿಗಳಾದರು. ಇದೆಲ್ಲ ಬೇಕಿತ್ತೇ? ಹಿಂದಿನ ಕಾಲದಲ್ಲಿ ಹೆಂಗಸರು ಬರೇ ತಮ್ಮ ಎರಡು ಕಣ್ಣುಗಳನ್ನು ಅರಳಿಸಿ ಲೋಕವನ್ನು, ಕುಟುಂಬವನ್ನು ಆಳುತ್ತಿರಲಿಲ್ಲವೇ? ಚಿಟಿಕೆ ಮೀಟಿದಾಗ ಮರಿಪುಢಾರಿಗಳು ತಮ್ಮ ಮುಂದೆ ಉದ್ದಂಡವಾಗಿ ಬಿದ್ದು ಹೆಜ್ಜೆಗೊಂದು ನಮಸ್ಕಾರ ಮಾಡುವಷ್ಟು ಅಧಿಕಾರ ಚಲಾಯಿಸುತ್ತಿದ್ದರೆಂದು ಗೊತ್ತಿಲ್ಲವೇ?

ಫಾ| ಪ್ರಶಾಂತ್‌ ಮಾಡ್ತ

Back to Top