CONNECT WITH US  

ಹಣದ ಮುಖ ನೋಡುವ ಸಂಬಂಧಗಳು

ಇಂತಹ ಒಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ- ಅತ್ತೆ ಮನೆಗೆ ಔತಣಕ್ಕೆ ಹೋಗಿದ್ದೀರಿ. ಮಗಳ ಕುಟುಂಬಕ್ಕಾಗಿ ಅತ್ತೆಯು ಭೂರಿಭೋಜನವನ್ನು ತಯಾರು ಮಾಡಿದ್ದಾಳೆ. ಮಕ್ಕಳಿಗೆ ಖುಷಿಯೋ ಖುಷಿ. ಮಗಳು ಹೆಮ್ಮೆಯಿಂದ ಬೀಗುತ್ತಿದ್ದಾಳೆ. ಇಷ್ಟೂ ಚೆನ್ನಾಗಿ ಸತ್ಕರಿಸಿದ ಅತ್ತೆಗೆ ಕೃತಜ್ಞತೆ ಸೂಚಿಸಬೇಕೆಂದು ಅಳಿಯನಾದ ನೀವು ತೇಗುತ್ತಾ ಪರ್ಸನ್ನು ತೆರೆಯುತ್ತಾ, "ಅಮ್ಮ ಊಟ ಬಹಳ ರುಚಿಕರವಾಗಿತ್ತು, ನಾನೆಷ್ಟು ಕೊಡಬೇಕು?' ಎಂದು ಹಸಿರು ನೋಟುಗಳನ್ನು ಎಣಿಸಲು ಪ್ರಾರಂಭಿಸುತ್ತೀರಿ. ಎಲ್ಲರೂ ಹುಬ್ಬೇರಿಸಿ ತೆಪ್ಪಗೆ ಮಿಕಿಮಿಕಿ ನೋಡುತ್ತಿರುತ್ತಾರೆ. "ಮೂರು ಸಾವಿರ ಸಾಕೇ? ಇಲ್ಲ, ನಾಲ್ಕು ಸಾವಿರ ಕೊಡುತ್ತೇನೆ...' ಅತ್ತೆ ಕಿಡಿಕಿಡಿಯಾಗಿ ಜ್ವಾಲಾಮುಖೀಯಾಗುತ್ತಾಳೆ. ಮೈಪರಚಿಕೊಳ್ಳುವಂತಾದ ಹೆಂಡತಿ ಬಳಕ್ಕನೆ ಕಣ್ಣೀರು ಹಾಕುತ್ತಾಳೆ.

ನೀವು ಮಾಡಿದ ತಪ್ಪೇನು? ಮಾನವಜೀವಿ ಕ್ಷಣಕ್ಷಣಕ್ಕೂ ಎರಡು ಲೋಕದಲ್ಲಿ ಜೀವಿಸುತ್ತಿದ್ದಾನೆ- ಒಂದು, ಹಣದ ಮುಖ ನೋಡದ, ಸೌಹಾರ್ದಮಯ ಉಚಿತ ಸೇವೆಯ ಲೋಕ, ಇನ್ನೊಂದು ಮಾರುಕಟ್ಟೆಯ ಲೇವಾದೇವಿಯ ವಿನಿಮಯ ವ್ಯಾವಹಾರಿಕ ಲೋಕ. ಇತರರೊಡನೆ ಪರಸ್ಪರ ಸಂಬಂಧಗಳಲ್ಲೂ ಈ ಎರಡು ಚೌಕಟ್ಟುಗಳನ್ನು ಬಳಸುತ್ತೇವೆ. ಮೇಲಿನ ಉದಾಹರಣೆಯಲ್ಲಿ, ಅಳಿಯನು ಔತಣದ ಸೌಹಾರ್ದ ಸಂಬಂಧದ ಚೌಕಟ್ಟಿನ ಬದಲಿಗೆ ಮಾರುಕಟ್ಟೆಯ ಕ್ರಯ-ವಿಕ್ರಯದ ಚೌಕಟ್ಟಿನಲ್ಲಿ ಯೋಚಿಸಿದ. ಹಣ ಕೊಡುತ್ತೇನೆ ಎಂದಾಗ ಬೆಚ್ಚನೆಯ ಸಂಬಂಧಕ್ಕೆ ತಣ್ಣೀರು ಹೊಯ್ದ ಹಾಗಾಯಿತು. ಬಾಂಧವ್ಯ ನಿಯಮಗಳಲ್ಲಿ ಪರಸ್ಪರ ಸೌಹಾರ್ದದ ವಿನಂತಿಗಳು- "ಸ್ವಲ್ಪ ಕೊಡೆ ಕೊಡ್ತೀರ', "ಸಾಲ ಕೊಡ್ತೀರಾ'. ಸಮುದಾಯದಲ್ಲಿ ಬೆಚ್ಚನೆಯ ಸಂಬಂಧಗಳು. ಅಂದರೆ ಅವನು ಮುಂದೆ ಪ್ರತಿಯಾಗಿ ನಿಮ್ಮಿಂದ ಸಾಲ ತೆಗೆದುಕೊಳ್ಳುತ್ತಾನೆ, ಕೊಡೆ ಎರವಲು ತೆಗೆದುಕೊಳ್ಳುತ್ತಾನೆ ಎಂದಲ್ಲ. ಇಲ್ಲಿ ವಿನಿಮಯವಿಲ್ಲ, ಪರಸ್ಪರ ಸಹಕರಿಸುವುದರಲ್ಲೇ, ಉಪಚರಿಸುವುದರಲ್ಲೇ ಏನೋ ಸಂತಸ.

ಆದರೆ ಕೊಡು-ಕೊಳ್ಳುಗಳ ಮಾರುಕಟ್ಟೆಯ ವಿನಿಮಯ ಲೋಕವು ಭಿನ್ನ. ಅಲ್ಲಿ ಬೇರೆಯೇ ನಿಯಮಗಳು ಪ್ರವರ್ತಿಸುತ್ತವೆ. ಇಲ್ಲಿ ಬೆಚ್ಚನೆಯ ಸಂಬಂಧಗಳು ಇಲ್ಲ, ಚಕಚಕನೆ ಕತ್ತರಿಸುವ ಹರಿತ ವಿನಿಮಯಗಳು- ಸಂಬಳ, ಪ್ರತಿಫ‌ಲ, ಬೆಲೆ, ಬಾಡಿಗೆ, ಬಡ್ಡಿ, ಲಾಭ-ನಷ್ಟದ ಪರಿಗಣನೆ. ಇವು ತಪ್ಪು ಎಂದಲ್ಲ. ಯಾರನ್ನೂ ಅವಲಂಬಿಸಿದೆ ಸ್ವತಂತ್ರನಾಗಿರುವುದು, ಹಂಗಿಗೆ ಬೀಳದಿರುವುದು ಮಾನವನ ನಿರಂತರ ಅಭೀಪ್ಸೆ. ಮಾರುಕಟ್ಟೆಯ ವಿನಿಮಯ ಸಂಬಂಧಗಳಲ್ಲಿ ನೀವು ಕೊಟ್ಟ ಪ್ರಮಾಣಕ್ಕೆ ಸರಿಸಮವಾಗಿ ನಿಮಗೆ ದೊರೆಯಬೇಕು. ಕೆಲವೊಮ್ಮೆ ಉಚಿತ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ, ಆದರೆ ಇನ್ನೊಮ್ಮೆ ಯಾವಾಗಲಾದರೂ ಅದಕ್ಕೆ ಪ್ರತಿಫ‌ಲ ಸಿಗುತ್ತದೆ ಎಂಬ ಗ್ಯಾರಂಟಿಯಿದ್ದರೆ ಮಾತ್ರ.

ಮಾರುಕಟ್ಟೆ ಹಾಗೂ ಸೌಹಾರ್ದದ ಸಂಬಂಧಗಳು ತಮ್ಮತಮ್ಮ ಹಾದಿಯನ್ನು ಹಿಡಿದು ಮುಂದುವರಿದರೆ ಕಿಂಚಿತ್ತೂ ಸಮಸ್ಯೆಯಿಲ್ಲ. ಸೌಹಾರ್ದದ ಹಾಗೂ ಮಾರುಕಟ್ಟೆಯ ನಿಯಮಗಳು ಒಂದನ್ನೊಂದು ಅಡ್ಡ ದಾಟಿ ನೇರಾನೇರಾ ಢಿಕ್ಕಿ ಹೊಡೆದಾಗ ಕಿರಿಕಿರಿಯಾಗುತ್ತದೆ. ಯುವಕ ತನ್ನ ಸ್ನೇಹಿತೆಯನ್ನು ಸಿನೆಮಾಕ್ಕೆ, ಅನಂತರ ಹೋಟೆಲಿಗೆ ಕರೆದೊಯ್ಯುತ್ತಾನೆ. ಪ್ರೇಮಿಗಳ ಸಂಸ್ಕೃತಿಗೆ ತಕ್ಕಂತೆ ಹುಡುಗನೇ ಖರ್ಚು ಮಾಡಬೇಕು. ಒಂದೆರಡು ದಿನಗಳಲ್ಲಿ ಪುನಃ ಥಿಯೇಟರಿಗೆ, ಹೊಟೇಲಿಗೆ ಸವಾರಿ. ಮೂರನೇ ಸಲ, ನಾಲ್ಕನೇ ಸಲ, ಐದನೇ ಸಲ, ಅವನ ಪರ್ಸು ಬರಿದಾಗುತ್ತ ಹೋಗುತ್ತದೆ. ಇಷ್ಟು ಮಾಡಿಯೂ, ಅವಳು ಒಂದು ಲಲ್ಲೆ ಮಾತನ್ನೂ ಉಸುರುವುದಿಲ್ಲ, ಅವನ ಕೆನ್ನೆಯನ್ನು ಹಿಂಡುವುದಿಲ್ಲ. ಮೊದಮೊದಲು ಸೌಹಾರ್ದ ಸಂಬಂಧ, ಹಣದ ಪರಿವೆಯೇ ಇರಲಿಲ್ಲ. ಈಗ ಪ್ರಣಯ (ಸೌಹಾರ್ದ ನಿಯಮ) ಹಾಗೂ ಮಾರುಕಟ್ಟೆ (ಸುಮ್ಮನೆ ಪರ್ಸು ಬರಿದಾಗುತ್ತಾ ಇದೆ). ಕೊನೆಗೂ ಒಂದು ದಿನ, "ನಿನ್ನೊಡನೆ ತಿರುಗಾಡಿದರೆ ನಾನು ದಿವಾಳಿ' ಎಂದು ಗೊಣಗಿ ಸೌಹಾರ್ದ ಸಂಬಂಧದಿಂದ ಮಾರುಕಟ್ಟೆಯ ಸಂಬಂಧಕ್ಕೆ ಜಾರುತ್ತಾನೆ. ಅವಳು ಅವನನ್ನು ಕಂಜೂಸ್‌ ನನ್ಮಗ ಎಂದು ಬೈದು ಸರಸರನೆ ಮಾಯವಾಗುತ್ತಾಳೆ. ಪ್ರಣಯದಲ್ಲಿ ಬಾಂಧವ್ಯದ ಹಾಗೂ ಮಾರುಕಟ್ಟೆಯ ನಿಯಮಗಳನ್ನು ಬೆರೆಸುವಂತಿಲ್ಲ ಎಂದು ಇವನಿಗೆ ತಿಳಿಯಲಿಲ್ಲ. ಅಥವಾ, ಹೊಟೇಲಿಗೆ ಹೋಗಿ, ಕ್ರಯಪಟ್ಟಿ ನೋಡಿ, ಇದು ದುಬಾರಿ ಹೊಟೇಲು, ಬಾ ಸಿಂಪಲ್‌ ಉಡುಪಿ ಹೊಟೇಲಿಗೆ ಹೋಗೋಣ ಎಂದಾಗಲೂ ಹಣದ ಮುಖ ನೋಡುವ ಮಾರುಕಟ್ಟೆಯ ಸಂಬಂಧ ಉಂಟಾಗುತ್ತದೆ.

ಕಾಲೇಜಿನ ವಿದ್ಯಾರ್ಥಿಗಳನ್ನು ಮೂರು ಗುಂಪುಗಳನ್ನಾಗಿ ಮಾಡಿ ಮೊದಲ ಗುಂಪಿಗೆ ವಾಚನಾಲಯದಲ್ಲಿ ಪುಸ್ತಕಗಳ ಧೂಳನ್ನು ಒರಸಿ ಅವುಗಳನ್ನು ಜೋಡಿಸಿಡುವ ಕೆಲಸವನ್ನು ವಹಿಸಲಾಯಿತು. ಒಂದು ಗಂಟೆಯ ಕೆಲಸಕ್ಕೆ ಪ್ರತಿಯೊಬ್ಬರಿಗೂ ಮೊದಲೇ ಒಂದು ನೂರು ರೂಪಾಯಿಯ ನೋಟನ್ನು ವಿತರಿಸಲಾಯಿತು. ಎರಡನೇ ಗುಂಪಿನ ವಿದ್ಯಾರ್ಥಿಗಳಿಗೆ ಅದೇ ಒಂದು ಗಂಟೆಯ ಕೆಲಸಕ್ಕೆ ಇನ್ನೂರು ರೂಪಾಯಿಗಳನ್ನು ಕೊಡಲಾಯಿತು. ಮೂರನೇ ಗುಂಪಿನ ವಿದ್ಯಾರ್ಥಿಗಳಿಗೆ ಏನನ್ನೂ ಕೊಡದೆ ಒಂದು ಗಂಟೆಯ ಮಟ್ಟಿಗೆ ಪುಸ್ತಕಗಳನ್ನು ಜೋಡಿಸಿಡಲು ವಿನಂತಿಸಲಾಯಿತು.

ಈ ಮೂರು ಗುಂಪಿನವರಲ್ಲಿ ಯಾವ ಗುಂಪಿನವರು ಒಂದು ಗಂಟೆಯ ಅವಧಿಯಲ್ಲಿ ಹೆಚ್ಚು ಪುಸ್ತಕಗಳನ್ನು ಜೋಡಿಸಿಟ್ಟರು? ಮೊದಲ ಗುಂಪಿನ ನೂರು ರೂಪಾಯಿಗಳನ್ನು ಸಂಭಾವನೆಯನ್ನಾಗಿ ಪಡೆದ ವಿದ್ಯಾರ್ಥಿಗಳು ಸರಾಸರಿ ನೂರಿಪ್ಪತ್ತು ಪುಸ್ತಕಗಳನ್ನು ಒರಸಿ ಜೋಡಿಸಿಟ್ಟರು. ಇನ್ನೂರು ರೂಪಾಯ ಸಂಭಾವನೆ ಗಿಟ್ಟಿಸಿದ ಎರಡನೇ ಗುಂಪಿನವರು ಸರಾಸರಿ ನೂರೈವತ್ತು ಪುಸ್ತಕಗಳನ್ನು ಒರಸಿ ಜೋಡಿಸಿಟ್ಟರು. ಮೂರನೇ ಗುಂಪಿನ, ಸಂಭಾವನೆ ಇಲ್ಲದೆ ಶ್ರಮದಾನ ಮಾಡಿದವರು ಒಂದು ಘಂಟೆಯ ಒಳಗೆ ನೂರೆಂಬತ್ತು ಪುಸ್ತಕಗಳ ಧೂಳು ಕೊಡವಿ ಜೋಡಿಸಿಟ್ಟರು. ಒಂದನೇ ಹಾಗೂ ಎರಡನೇ ಗುಂಪಿನವರಿಗೆ, ಸಂಭಾವನೆಯಾಗಿ ಸಿಕ್ಕಿದ ಹಣದ ಪ್ರಮಾಣಕ್ಕೆ ತಕ್ಕಂತೆ ಕೆಲಸದಲ್ಲಿ ಉತ್ಸುಕತೆ ಇತ್ತು. ಎರಡನೇ ಗುಂಪಿನವರು ಹೆಚ್ಚು ಪ್ರತಿಫ‌ಲ ಪಡೆದು ಹೆಚ್ಚು ಕೆಲಸ ಮುಗಿಸಿದರು. ಮೂರನೇ ಗುಂಪಿನವರಿಗೆ ಪ್ರತಿಫ‌ಲವಾಗಿ ಹಣ ಕೊಡದಿದ್ದರೂ ಇತರ ಎರಡು ಗುಂಪಿನವರಿಗಿಂತಲೂ ಹೆಚ್ಚನ್ನು ಸಾಧಿಸಿದರು. ಅಂದರೆ ಜನರು ಸೌಹಾರ್ದದ ಸನ್ನಿವೇಶದಲ್ಲಿ ಸದುದ್ದೇಶವನ್ನು ಇಟ್ಟುಕೊಂಡು ಹೆಚ್ಚು ಮನಸ್ಸಿಟ್ಟು ಶ್ರಮದಾನ ಮಾಡುತ್ತಾರೆ. ಹೇಗೂ ಸಂಬಳ ಸಿಗುತ್ತದೆ ಎಂದಾಗ ಮನಸ್ಸಿಟ್ಟು ಕೆಲಸ ಮಾಡುವುದಿಲ್ಲ.

ಇನ್ನೊಂದು ಉದಾಹರಣೆ- ಕೊಳಚೆ ಪ್ರದೇಶವಾಸಿಗಳಿಗೆ ರಿಯಾಯಿತಿಯಲ್ಲಿ, ಅಂದರೆ ತಲಾ ನೂರು ರೂಪಾಯಿ ಫೀಸಿಗೆ ರೋಗ ತಪಾಸಣೆ ನಡೆಸಬಹುದೇ ಎಂದಾಗ ಡಾಕ್ಟರುಗಳು ಒಪ್ಪಲಿಲ್ಲ. ಪಾಪ, ಕೊಳಚೆ ಪ್ರದೇಶದವರು, ಧರ್ಮಾರ್ಥವಾಗಿ ದೇಹ ತಪಾಸಣೆ ನಡೆಸಬಹುದೇ ಎಂದಾಗ ಡಾಕ್ಟರುಗಳು ಹಣದ ಮುಖ ನೋಡದೆ ದೇಹ ತಪಾಸಣೆಗೆ ಒಪ್ಪಿದರು.

ಇದೆಲ್ಲ ಏನು? ಡಾಕ್ಟರುಗಳಿಗೆ ಶ್ರಮದಾನದ ಸೊನ್ನೆ ಆದಾಯವು, ಫೀಸಿನ ನೂರು ರೂಪಾಯಿ ಆದಾಯಕ್ಕಿಂತ ಹೆಚ್ಚು ಆಕರ್ಷಕವಾಗುವುದು ಹೇಗೆ? ನೂರು ರೂಪಾಯಿ ಫೀಸು ಎಂದಾಗ ಡಾಕ್ಟರುಗಳು ಮಾರುಕಟ್ಟೆಯ ಲೇವಾದೇವಿ ಚೌಕಟ್ಟಿನಲ್ಲಿ ಯೋಚಿಸಿದರು ಹಾಗೂ ಇತರ ಫೀಸುಗಳಿಗೆ ಹೋಲಿಸಿದಾಗ ಆ ಫೀಸು ಕಡಿಮೆಯಾಯಿತು ಎಂದು ಭಾವಿಸಿದರು. ಫೀಸೇ ಇಲ್ಲ, ಧರ್ಮಾರ್ಥ ಸೇವೆ ಎಂದಾಗ ಅವರು ಸೌಹಾರ್ದದ ಶ್ರಮದಾನದ ಚೌಕಟ್ಟಿನಲ್ಲಿ ವಿವೇಚಿಸಿ ಪುಕ್ಕಟೆ ಸೇವೆಗೆ ತತ್ಪರರಾದರು. ಬರೇ ನೂರು ರೂಪಾಯಿ ಫೀಸಿಗೆ ಒಪ್ಪಿ, ಇದೊಂದು ಸೇವೆ ಎಂದು ಅವರು ಯೋಚಿಸಬಹುದಿತ್ತಲ್ಲ? ಹಾಗಾಗುವುದಿಲ್ಲ. ಒಮ್ಮೆ ಮಾರುಕಟ್ಟೆ ಚಿಂತನೆಯ ಚೌಕಟ್ಟಿನಲ್ಲಿ ಯೋಚಿದಾಗ, ಸೇವಾ ಮನೋಭಾವ ಸರಕ್ಕನೆ ಜಾರಿಬಿಡುತ್ತದೆ.

ಪುಸ್ತಕಗಳನ್ನು ಜೋಡಿಸಿಟ್ಟ ವಿದ್ಯಾರ್ಥಿಗಳು ಮೂರೂ ಗುಂಪಿನವರಿಗೆ ನಿಷ್ಕರ್ಷಿತ ಸಂಭಾವನೆಯ ಬದಲಾಗಿ ಗಿಫ್ಟ್ ಕೊಟ್ಟಿದ್ದರೆ ಏನಾಗುತ್ತಿತ್ತು? ಮೂರೂ ಗುಂಪಿನವರೂ ಸರಾಸರಿಯಾಗಿ ಸಮಾನ ಪ್ರಮಾಣದ ಕೆಲಸವನ್ನು ಪೂರೈಸುತ್ತಿದ್ದರು. ಯಾಕೆಂದರೆ ಗಿಫ್ಟ್ಗಳು ಮಾರುಕಟ್ಟೆಯ ಲೇವಾದೇವಿಯ ಚೌಕಟ್ಟಿನಲ್ಲಿ ಬರದೆ, ಸೇವೆಯ ಚೌಕಟ್ಟಿನಲ್ಲಿ ಬರುತ್ತವೆ. ಆದರೆ ನಿಮಗೆ ನೂರು ರೂಪಾಯಿಯ ಗಿಫ್ಟ್ ಕೊಡುತ್ತೇವೆ ಎಂದ ಕೂಡಲೇ ಮಾರುಕಟ್ಟೆ ಚೌಕಟ್ಟಿನಲ್ಲಿ ಯೋಚನೆ ಆರಂಭವಾಗುತ್ತದೆ. ಕಂಪೆನಿಯಲ್ಲಿ ಸಾವಿರ ರೂಪಾಯಿ ಸಂಬಳವನ್ನು ಹೆಚ್ಚಿಸುವುದಕ್ಕಿಂತಲೂ ವರ್ಷಕ್ಕೊಮ್ಮೆ ಸಾವಿರ ರೂಪಾಯಿ ಬೆಲೆಬಾಳುವ ಗಿಫ್ಟ್ ಕೊಟ್ಟರೆ ಕಂಪೆನಿಯ ಬಗ್ಗೆ ಸೌಹಾರ್ದ ಸಂಬಂಧ ವರ್ಧಿಸುತ್ತದೆ.

ವರದಕ್ಷಿಣೆಗಾಗಿ ಪೀಡಿಸುವುದು, ಆ ಕಾರಣದಿಂದಾಗಿ ವಧು ಬಾವಿಗೆ ಹಾರುವ ವಿದ್ಯಮಾನವನ್ನು ಇದೇ ಚೌಕಟ್ಟಿನಲ್ಲಿ ವಿವರಿಸಬಹುದು. ಪ್ರಣಯದ ನೂರು ಮಧುರ ಕನಸುಗಳನ್ನು ಕಟ್ಟಿಕೊಂಡು ಬಂದ (ಸೌಹಾರ್ದ ಸಂಬಂಧ) ವಧುವಿಗೆ, ವರನ ಕಡೆಯವರ ವರದಕ್ಷಿಣೆಯ ಲೇವಾದೇವಿ ಚೌಕಟ್ಟು ಎದುರಾದಾಗ, ಪ್ರಣಯದ ಕನಸುಗಳೆಲ್ಲ ಕಮರಿ ಹೋಗುತ್ತವೆ. ಪ್ರಣಯಿಯನ್ನು ಹೋಟೇಲಿಗೆ ಕರೆದುಕೊಂಡು ಹೋಗಿ "ಅಯ್ಯೋ ಮಸಾಲೆ ದೋಸೆಗೆ ಐವತ್ತು ರೂಪಾಯಿ, ಬಾ ಚೀಪ್‌ ಹೋಟೆಲಿಗೆ ಹೋಗೊಣ' ಎಂದು ಹಣದ ಮುಖ ನೋಡಿದರೆ ಪ್ರಣಯದ ಮಸಾಲೆ ದೋಸೆ ಖಾಲಿ ದೋಸೆಯಾಗಿ ಬಿಡುತ್ತದೆ.

ಯಾರೋ ಒಬ್ಬನ ಕೈಯಲ್ಲಿದ್ದ ಕೋವಿಯಿಂದ ಅಕಸ್ಮಾತ್‌ ಗುಂಡು ಸಿಡಿದು ನೆರೆಮನೆಯವನ ಹೆಂಡತಿ ಸತ್ತಳು. ಕೂಡಲೇ ನೆರೆಮನೆಯವನಿಗೆ ತನ್ನ ಕೋವಿ ಕೊಟ್ಟು, "ಅಕಸ್ಮಾತ್‌ ಆಗಿ ನಿನ್ನ ಹೆಂಡತಿಯನ್ನು ಕೊಂದೆ, ಪ್ರತೀಕಾರವಾಗಿ ನನ್ನ ಹೆಂಡತಿಗೆ ಗುಂಡು ಹೊಡೆ' ಎಂದರೆ ಇದು ಕೊಡು-ಕೊಳ್ಳುಗಳ ಲೇವಾದೇವಿ ಸಂಬಂಧ.

ಫಾ| ಪ್ರಶಾಂತ್‌ ಮಾಡ್ತ


Trending videos

Back to Top