CONNECT WITH US  

ಚಾ.ನಗರ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಿಸಿ

ಚಾಮರಾಜನಗರ: ಸಕಾಲದಲ್ಲಿ ಮಳೆಯಾಗದೇ ತಾಲೂಕು ರೈತರು ಸಂಕಷ್ಟದಲ್ಲಿದ್ದಾರೆ. ಬಿತ್ತನೆ ಮಾಡಿ ಕಟಾವಿಗೆ ಬಂದಿರುವ ಫ‌ಸಲು ಒಣಗಿ ನಿಂತಿದೆ. ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಿ ಎಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಕೆ.ಎಂ.ಗುರುಮಲ್ಲಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಸದಸ್ಯರು ಪûಾತೀತವಾಗಿ ತಮ್ಮ ಕ್ಷೇತ್ರದಲ್ಲಿರುವ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಅಭಾವದ ಬಗ್ಗೆ ಚರ್ಚೆ ಮಾಡಿದರು. ಬಳಿಕ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆ ಮಾಡಿ ವಿಶೇಷ ಪ್ಯಾಕೇಜ್‌ ನೀಡುವಂತೆ ಒತ್ತಾಯಿಸಲಾಯಿತು.

ಕಾಳು ಕಟ್ಟುವ ಮುನ್ನವೇ ಒಣಗಿದ ಬೆಳೆ:
ತಾಪಂ ಸದಸ್ಯ ಆರ್‌.ಮಹದೇವ ಮಾತನಾಡಿ, ಮಳೆ ಸಕಾಲಕ್ಕೆ ಬೀಳದೆ, ರೈತರು ಬಿತ್ತನೆ ಮಾಡಿದ್ದ ಫ‌ಸಲು ಕಾಳುಕಟ್ಟುವ ಮುನ್ನವೇ ಒಣಗಿ ನಿಂತಿದೆ. ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ 48 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವವಿದೆ ಎಂದು ಇಲಾಖೆ ವರದಿ ನೀಡಿದೆ. ರೈತರು ಕೂಲಿ ಸಿಗದೆ ಸಂಕಷ್ಟದಲ್ಲಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ವರದಿ ನೀಡದೇ ತಾಲೂಕು ಎಲ್ಲಾ ಹಂತದಲ್ಲಿಯೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಅನುದಾನ ವರ್ಗಾಹಿಸಬೇಡಿ:
ಸದಸ್ಯ ಚಿಕ್ಕಮಹದೇವು ಮಾತನಾಡಿ, ಸರ್ಕಾರ ತಾಪಂಗೆ ಕುಡಿಯುವ ನೀರಿಗೆ ನೀಡುವ ಅನುದಾನವನ್ನು ಗ್ರಾಮಗಳಲ್ಲಿನ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ನೀಡುವ ಬದಲು, ನೇರವಾಗಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ವರ್ಗಾವಣೆ ಮಾಡಿಕೊಳ್ಳುವುದು ಸರಿಯಲ್ಲ. ಈ ಹಣವನ್ನು ಕೋಟಿಗಟ್ಟಲೆ ಟೆಂಡರ್‌ ಪಡೆದುಕೊಂಡಿರುವ ಒಬ್ಬ ಗುತ್ತಿಗೆದಾರ ಪ್ರಭಾವ ಬೆಳೆಸಿ ಡ್ರಾ ಮಾಡಿಕೊಂಡರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಕಲ್ಪಿಸುವುದೇ ಹೇಗೆ? ಎಂದು ಪ್ರಶ್ನಿಸಿದರು.

ಈ ಯೋಜನೆ ಚಾಲನೆಯಾಗಲು ಇನ್ನೂ ಒಂದು ವರ್ಷಬೇಕು. ಅಲ್ಲಿಯವರೆಗೆ ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರನ್ನು ಯಾವ ಅನುದಾನದಲ್ಲಿ ನೀಡುವುದು ಎಂಬ ಬಗ್ಗೆ ಕಾವೇರಿದ ಚರ್ಚೆ ಸಭೆಯಲ್ಲಿ ನಡೆಯಿತು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ಅಧ್ಯಕ್ಷರು ಸೂಚನೆ ನೀಡಿದರು.

ರೈತರಿಗೆ ನೋಟಿಸ್‌ ನೀಡಬೇಡಿ: ತಾಲೂಕಿನಲ್ಲಿ ಮಳೆ ಬಾರದೆ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದರೂ ಕೆಲವು ಬ್ಯಾಂಕುಗಳು ಸಾಲದ ವಸೂಲಿಗಾಗಿ ರೈತರಿಗೆ ನೋಟಿಸ್‌ ನೀಡುತ್ತಿವೆ, ಇದು ನಿಲ್ಲಬೇಕು. ಜಿಲ್ಲಾಡಳಿತ ರೈತರಿಗೆ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾವಿಗೀಡಾದ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು ಮುಂದೆ ರೈತರು ಆತ್ಮಹತ್ಯೆ ಮಾಡಿಕೊಳ್ಳದ ಆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ತಾಪಂ ಆರ್‌.ಮಹದೇವು ಒತ್ತಾಯಿಸಿದರು.

ಚಿಕ್ಕಮಹದೇವು ಮಾತನಾಡಿ, ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ಶೀರ್ಘ‌ವಾಗಿ ಮಾಡಬೇಕು. ಹೊರ ರಾಜ್ಯಗಳಿಗೆ ಹೋಗುತ್ತಿರುವ ಮೇವು ಸಾಗಣೆಯನ್ನು ಕಟ್ಟು ನಿಟ್ಟಾಗಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಸದಸ್ಯ ಕೆ.ನಾಗರಾಜು ಮಾತನಾಡಿ, ನಂಜೇದೇವನಪುರ ಬಳಿಯ ಆನೆ ಮಡುವಿನ ಕೆರೆ ಕಾವೇರಿ ಕುಡಿಯುವ ನೀರು ತುಂಬಿಸುವ ಯೋಜನೆಯಲ್ಲಿ ಸೇರಿದ್ದರೂ ಇದುವರೆಗೂ ನೀರು ತುಂಬಿಸಲು ಸಾಧ್ಯವಾಗಿಲ್ಲ. ಇದರಿಂದ ಉಡಿಗಾಲ, ವೀರನಪುರ, ಶಿವಪುರ, ಯಡಪುರ ಇನ್ನು ಅನೇಕ ಗ್ರಾಮಗಳಿಗೆ ತೊಂದರೆಯಾಗಿದೆ. ಶೀಘ್ರದಲ್ಲೇ ಕೆರೆಗೆ ನೀರು ತುಂಬಿಸುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು.

ತಹಶೀಲ್ದಾರ್‌ ವಿರುದ್ಧ ಕ್ರಮಕ್ಕೆ ನಿರ್ಣಯ: ಚಾ.ನಗರ ತಹಶೀಲ್ದಾರ್‌ ಎಸ್‌.ಎಂ.ಮಹದೇವ್‌ ತಾಪಂ ಸಭೆಗಳಿಗೆ ಗೈರು ಹಾಜರಾಗಿ ಉಡಾಫೆ ತೋರುತ್ತಿದ್ದಾರೆ. ಅವರ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು ವರ್ಗಾವಣೆ ಮಾಡುವಂತೆ ನಿರ್ಣಯ ಮಾಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಲಲಿತಾನಾಗಯ್ಯ, ಇಒ ರೇವಣ್ಣ ಇದ್ದರು. ಸದಸ್ಯರಾದ ಬಸವಣ್ಣ, ಗೌಡಿಕೆ ಮಾದಪ್ಪ, ಎಸ್‌.ರಾಜು, ಮಹಾಲಿಂಗು, ಎಸ್‌.ನಾಗರಾಜು, ಬಸವಣ್ಣ, ಬಾಗಳಿ ಮಂಜುಳಾಚಂದ್ರು, ರಾಣಿನಟರಾಜ್‌, ಶಿವಮ್ಮ, ಪದ್ಮಾ ಸೇರಿದಂತೆ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನೂತನ 9 ಪಂಚಾಯಿತಿಗಳ ಅಧ್ಯಕ್ಷರು ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.
 

Trending videos

Back to Top