CONNECT WITH US  

ಪ್ಲಾಸ್ಟಿಕ್‌ ನಿಷೇಧಕ್ಕೆ ವ್ಯಾಪಾರಸ್ಥರು ಕೈಜೋಡಿಸಿ

ಚಿಕ್ಕಬಳ್ಳಾಪುರ: ಪರಿಸರ ಮಾಲಿನ್ಯ ತಡೆ ಹಾಗೂ ಸ್ವತ್ಛತೆ ಕಾಪಾಡುವ ಉದ್ದೇಶದಿಂದ ಜಿಲ್ಲಾ ಕೇಂದ್ರದಲ್ಲಿ ಜಾರಿಗೆ ತಂದಿರುವ ಪ್ಲಾಸ್ಟಿಕ್‌ ನಿಷೇಧ ಅಭಿಯಾನಕ್ಕೆ ಬೀದಿ ಬದಿ ವ್ಯಾಪಾರಸ್ಥರ ಸಹಕಾರ ಅಗತ್ಯ ಎಂದು ನಗರಸಭೆ ಅಧ್ಯಕ್ಷ ಮುನಿಕೃಷ್ಣ ತಿಳಿಸಿದರು.

ನಗರದಲ್ಲಿ ಗುರುವಾರ ಜಿಲ್ಲಾಡಳಿತ, ನಗರಸಭೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನಡೆದ ನಗರ ಬೀದಿಬದಿ ವ್ಯಾಪಾರಸ್ಥರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿದ ಅವರು ಮಾತನಾಡಿ, ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ.

ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಪ್ಲಾಸ್ಟಿಕ್‌ ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಆದ್ದರಿಂದ ಬೀದಿ ಬದಿ ವ್ಯಾಪಾರಸ್ಥರು ಸ್ವತ್ಛತೆ ಕಾಪಾಡುವ ಉದ್ದೇಶದಿಂದ ನಿಷೇಧಿತ ಪ್ಲಾಸ್ಟಿಕ್‌ ಬಳಕೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದರು.

ಸೌಜನ್ಯದೊಂದಿಗೆ ವರ್ತಿಸಿ: ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು ಗ್ರಾಹಕರೊಡನೆ ಸೌಜನ್ಯದಿಂದ ವರ್ತಿಸಬೇಕು. ಸ್ವತ್ಛತೆ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್‌ ನಿಷೇಧ ಮಾಡಿದ್ದು, ಪರಿಸರ ಸ್ನೇಹಿ ಚೀಲ ಬಳಸುವಂತೆ ಗ್ರಾಹಕರಿಗೆ ಪ್ರೇರೆಪಿಸಬೇಕು.

ವ್ಯಾಪಾರಸ್ಥರೇ ಸಾಕಷ್ಟು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಆಗುತ್ತಿದೆ. ವ್ಯಾಪಾರಸ್ಥರು ಗ್ರಾಹಕರಿಗೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳಿದ್ದರೆ ಶಾಸಕರೊಂದಿಗೆ ಚರ್ಚೆ ನಡೆಸಿ ಬಗಹೆರಿಸಲಾಗುವುದು.

ಎಲೆ, ಅಡಿಕೆ, ಗುಟ್ಕಾ ಜಗಿಯುವವರು, ಎಲ್ಲೆಂದರಲ್ಲಿ ಉಗುಳುವವರಿಗೆ ವ್ಯಾಪಾರಿಗಳು ಗ್ರಾಹಕರಿಗೆ ತಿಳಿವಳಿಕೆ ನೀಡಬೇಕು. ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕಿವಿಮಾತು ಹೇಳಿದರು.

ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಿ: ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ವೆಂಕಟಚಲಪತಿ ಮಾತನಾಡಿ, ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನಗರಸಭೆ ಅವಕಾಶ ಮಾಡಿಕೊಡುವ ನಿಗದಿತ ಸ್ಥಳಗಳಲ್ಲಿ ವ್ಯಾಪಾರ ಮಾಡಿದರೆ, ಗುರುತಿನ ಚೀಟಿಯನ್ನು ನೀಡಿ ಬ್ಯಾಂಕ್‌ ಹಾಗೂ ನಗರಸಭೆಯಿಂದ ಸಾಲಸೌಲಭ್ಯ ಒದಗಿಸಲಾಗುವುದು.

ಯಾವುದೇ ಕಾರಣಕ್ಕೂ ವ್ಯಾಪಾರಿಗಳ ಮೇಲೆ ಗ್ರಾಹಕರು ದೌರ್ಜನ್ಯ ಮಾಡುವಂತಿಲ್ಲ. ಡೇನಲ್ಮ್ ಯೋಜನೆಯಡಿ ವ್ಯಾಪಾರಸ್ಥರು ಹಾಗೂ ವಸತಿ ರಹಿತರಿಗೆ ಮೂಲ ಸೌಲಭ್ಯ ಒದಗಿಸಲಾಗುವುದು. ವ್ಯಾಪಾರಿಗಳು ತಮ್ಮ ಮಕ್ಕಳ ಭವಿಷ್ಯ ರೂಪಿಸಿ, ಉತ್ತಮ ಶಿಕ್ಷಣವಂತರನ್ನಾಗಿಸಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ನಗರಸಭೆ ಸದಸ್ಯೆ ನಿರ್ಮಲಾಪ್ರಭು, ಮಾನವ ಹಕ್ಕುಗಳ ಸಮಿತಿ ಸದಸ್ಯ ಗಂಗಧಾರ್‌, ಬೀದಿಬದಿಯ ಹಣ್ಣಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಸ್ಲಾಂ ಹಾಜರಿದ್ದರು.


Trending videos

Back to Top