CONNECT WITH US  

ಹಕ್ಕಿಪಿಕ್ಕಿ ದಲಿತರಿಗೆ ಭೂಮಿ ಹಕ್ಕುಪತ್ರ ನೀಡಿ

ಗೌರಿಬಿದನೂರು: ತಾಲೂಕಿನ ಹೊಸೂರು ಹೋಬಳಿ ಕೋಟಾಲದಿನ್ನೆ ಗ್ರಾಮದ ಹೊರವಲಯದಲ್ಲಿನ ಸರ್ಕಾರಿ ಭೂಮಿಯನ್ನು ಉಳುಮೆ ಮಾಡಿಕೊಂಡಿರುವ ಹಕ್ಕಿಪಿಕ್ಕಿ ಕಾಲೋನಿಯ ದಲಿತರಿಗೆ ಉಚಿತವಾಗಿ ಭೂಮಿಯ ಹಕ್ಕು ಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿ ಹಕ್ಕಿ-ಪಿಕ್ಕಿ ಕಾಲೋನಿ ದಲಿತರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಟ್ಟಣದ ರಾಜಬೀದಿಗಳಲ್ಲಿ ಮೌನ ಮೆರವಣಿಗೆ ನಡೆಸಿದರು.

ನಂತರ ತಾಲೂಕು ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ದಲಿತ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಆವರಣಕ್ಕೆ ಆಗಮಿಸಿದ ಹಕ್ಕಿಪಿಕ್ಕಿ ಕಾಲೋನಿಯ ದಲಿತರು ತಾವು ಉಳುಮೆ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ತಮಗೇ ಮಂಜೂರು ಮಾಡುವುದು ಸೇರಿದಂತೆ ಒಟ್ಟು 8 ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.

ಸರ್ಕಾರಗಳಿಂದ ದೇಶದ ಲೂಟಿ: ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡ ರಾಜಾಕಾಂತ್‌, ದೇಶಕ್ಕೆ ಸ್ವಾತಂತ್ರ ಬಂದು 68 ವರ್ಷಗಳು ಕಳೆದರೂ ಫ‌ಲಿತಾಂಶ ಮಾತ್ರ ಶೂನ್ಯವಾಗಿದೆ. ಆಡಳಿತ ನಡೆಸುವ ರಾಜಕೀಯ ಪಕ್ಷಗಳ ಮತ್ತು ಅಧಿಕಾರಿಗಳ ದ್ವಂದ್ವ ನಿಲುಗಳಿಂದಾಗಿ ಶೈಕ್ಷಣಿಕ, ಆರ್ಥಿಕ, ಸಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳು ಇಂದಿಗೂ ಉಳ್ಳವರ ಕಪಿಮುಷ್ಟಿಯಲ್ಲಿವೆ. ಸರ್ಕಾರಗಳು ಸ್ವಾತಂತ್ರÂದ ನಂತರ ದೇಶವನ್ನು ಬ್ರಿಟಿಷರಿಗಿಂತ ಹೆಚ್ಚಿನ ರೀತಿಯಲ್ಲಿ ಲೂಟಿ ಮಾಡಿ ದುರ್ಬಲಗೊಳಿಸಿವೆ. ಇದು ದುಃಖಕರ ಸಂಗತಿ ಎಂದರು.

ಭೂಮಿ ವಶಪಡಿಸಿಕೊಳ್ಳಬೇಡಿ: ಗಾಂಧೀಜಿ ಅವರ ಗ್ರಾಮರಾಜ್ಯದ ಕನಸನ್ನು ನುಚ್ಚು ನೂರು ಮಾಡಲಾಗಿದೆ. ಶೋಷಿತರ ಮತ್ತು ದಲಿತರ ಶ್ರೇಯೋಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಗಾಂಧೀಜಿ ಹಲವಾರು ಬಾರಿ ತಿಳಿಸುತ್ತಿದ್ದರು. ಆದರೆ, ಗಾಂಧೀಜಿ ಹೆಸರನ್ನು ಹೇಳುವ ಸರ್ಕಾರ ದಲಿತರ ಮತ್ತು ಶೋಷಿತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ. ಇದಕ್ಕೆ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿ ದಲಿತರ ಸ್ಥಿತಿಯೇ ಸ್ಪಷ್ಟ ಸಾಕ್ಷಿಯಾಗಿದೆ. ಆದ್ದರಿಂದ, ಸರ್ಕಾರ ಕೂಡಲೇ ಹಕ್ಕಿಪಿಕ್ಕಿ ಜನಾಂಗದವರ ಭೂಮಿಯನ್ನು ವಶಪಡಿಸಿಕೊಳ್ಳುವ ನಿಲುವನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ದಲಿತರ ಬದುಕಿಗಾಗಿ ಹೋರಾಟ: ಮುಖಂಡ ಸಿ.ಜಿ.ಗಂಗಪ್ಪ ಮಾತನಾಡಿ, ದೇಶದಲ್ಲಿ ಶೋಷಿತ ಸಮುದಾಯ, ಆರ್ಥಿಕವಾಗಿ ಹಿಂದುಳಿದವರಿಗೆ ಇನ್ನೂ ಸ್ವಾತಂತ್ರವೇ ದೊರೆತಿಲ್ಲ. ಸುಖಮಯ ಜೀವನ ಎನ್ನುವುದು ಕೇವಲ ಕನಸಿನ ಮಾತಾಗಿ ಉಳಿದುಕೊಂಡಿದೆ. ದಲಿತರು, ಶೋಷಿತರು ಹಾಗೂ ಆರ್ಥಿಕ ದುರ್ಬಲರು ಸರ್ಕಾರದ ದುರಾಡಳಿತ ಮತ್ತು ಅಧಿಕಾರ ಶಾಹಿಗಳ ಕೈಯಲ್ಲಿ ಸಿಲುಕಿ ಬದುಕಿಗಾಗಿ ಹೋರಾಡುವಂತಾಗಿದೆ ಎಂದು ಟೀಕಿಸಿದರು.

ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ನಿಲಯಗಳು: ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ನರಸಿಂಹಮೂರ್ತಿ ಮಾತನಾಡಿ, ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ನಿಲಯಗಳಾಗಿ ಮಾರ್ಪಾಟಾಗಿವೆ. ಅಲ್ಲದೇ, ರಿಯಲ್‌ ಎಸ್ಟೇಟ್‌ ದಂಧೆಕೋರರು, ಭೂ ದಳ್ಳಾಳಿಗಳ ಕೇಂದ್ರಗಳಾಗಿದೆ. ಪ್ರಭಾವಿ ರಾಜಕಾರಣಿಗಳ ಮತ್ತು ಹಣವಂತರ ಕೆಲಸಗಳು ಮಾತ್ರ ಶೀಘ್ರಗತಿಯಲ್ಲಿ ಆಗುತ್ತವೆ. ಆರ್ಥಿಕವಾಗಿ ಹಿಂದುಳಿದವರು ಮತ್ತು ದಲಿತರು, ಶೋಷಿತರ ಅರ್ಜಿಗಳು ಕಸದ ಬುಟ್ಟಿಗೆ ಸೇರುತ್ತವೆ ಎಂದು ದೂರಿದರು.

ಈಗಲಾದರೂವ ಬೇಡಿಕೆ ಈಡೇರಿಸಿ: ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಉಳುಮೆ ಮಾಡಿಕೊಂಡವರಿಗೆ ಭೂಮಿಯ ಹಕ್ಕು ಪತ್ರವನ್ನು ವಿತರಿಸಿದ್ದರೆ ಇಂದು ಧರಣಿ ಸತ್ಯಾಗ್ರಹವನ್ನು ಆಯೋಜಿಸುತ್ತಿರಲಿಲ್ಲ. ತಮ್ಮ 8 ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಹಕ್ಕಿಪಿಕ್ಕಿ ಜನಾಂಗದ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ಎಂ.ನಾರಾಯಣಸ್ವಾಮಿ, ಕೃಷ್ಣಪ್ಪ, ಎಂ.ನಾರಾಯಣಸ್ವಾಮಿ, ಲಕ್ಷಿನಾರಾಯಣ, ಪಿ.ನರಸಿಂಹಮೂರ್ತಿ, ಸೋಮಯ್ಯ, ಲಕ್ಷಿ¾àನರಸಯ್ಯ, ಜಿ.ನಾರಾಯಾಣಸ್ವಾಮಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

Trending videos

Back to Top