CONNECT WITH US  

ನಂಬಿಕೆ ಇಲ್ಲದವರು ಸಮಾಜಕ್ಕೆ ಮಾರಕ

ಶೃಂಗೇರಿ: ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯ ಆಧಾರದ ಮೇಲೆ ಈ ದೇಶ
ನಿಂತಿದೆ. ಒಳ್ಳೆಯ ವಿಚಾರದ ಮೇಲೆ ನಂಬಿಕೆ ಇಲ್ಲದವನು ಸಮಾಜಕ್ಕೆ ಮಾರಕನಾಗುತ್ತಾನೆ
ಎಂದು ಶಾಸಕ ಡಿ.ಎನ್‌.ಜೀವರಾಜ್‌ ಹೇಳಿದರು.

ಭಾನುವಾರ ಚಪ್ಪರದಾಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೊಗವೀರ ಮಹಾಜನ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆದ ಯಾವುದೇ ಹೋರಾಟದಲ್ಲಿ ಸ್ವಾತಂತ್ರ ಹೋರಾಟ, ಕಾರ್ಗಿಲ್‌ ಸಮರಗಳಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದ ಸಮಾಜವೆಂದರೆ ಅದು ಮೊಗವೀರ ಸಮಾಜ. ಕೆಚ್ಚು, ಹೋರಾಟದ ಮನೋಭಾವದಿಂದ ದೇಶಕ್ಕೆ ತಮ್ಮ ಕೊಡುಗೆ ನೀಡಿದೆ ಎಂದರು.

ಪ್ರಸಿದ್ದ ಧಾರ್ಮಿಕ ಕ್ಷೇತ್ರದ ಕೇಂದ್ರ ಬಿಂದು ಶೃಂಗೇರಿಗೆ ಈವರೆಗೂ ಕೆಲವು ಕಾನೂನು
ತೊಡಕುಗಳಿಂದ ಕೆಎಸ್‌ಆರ್‌ಟಿಸಿ ಡಿಪೋ ತೆರೆಯಲು ಸಾಧ್ಯವಾಗಿಲ್ಲ. ಜಾಗದ ಕೊರತೆ
ಇದ್ದು, 2 ಎಕರೆ ಅರಣ್ಯ ಜಾಗ ಪಡೆದರೆ ಬೇರೆ ಕಡೆ 4 ಎಕರೆ ಕಂದಾಯ ಭೂಮಿ
ಕೊಡಬೇಕಾದ ಅನಿವಾರ್ಯತೆ ಇದೆ. ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದರೂ ಇನ್ನೂ ಡಿಪೋ
ತೆರೆಯಲು ಸೋತಿದ್ದೇವೆ. ಹಕ್ಕುಪತ್ರ ಪಡೆದ ಮೇಲೆ ಮಾಡುತ್ತೇವೆ ಎಂದರೆ ಯಾವುದು
ಸಾಧ್ಯವಾಗುವುದಿಲ್ಲ ಎಂದರು. 

ಮೊಗವೀರ ಸಮಾಜದ ಯುವ ಸಂಘಟನೆ ಅಧ್ಯಕ್ಷ ಸದಾನಂದ ಬಳ್ಕೂರ ಮಾತನಾಡಿ, ಶಿಕ್ಷಣದಲ್ಲಿ ಮಹತ್ತರವಾದ ಸಾಧನೆ ಮಾಡಿದಲ್ಲಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ. ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಯಶಸ್ಸು ಕಾಣಲು ಸಾಧ್ಯ.ಸಂಘಟನೆ ಬಲವಾಗಿದ್ದರೆ ಮಾತ್ರ ನಮ್ಮ ಬೇಡಿಕೆ ಈಡೇರಿಸಲು ಸಾಧ್ಯ. ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲರೂ ಒಗ್ಗಟ್ಟಾಗಿ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘ ಸದೃಢಗೊಳಿಸಬೇಕೆಂದರು.
 ಇದೆ ವೇಳೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಮೊಗವೀರ ಸಮಾಜದ ಅಧ್ಯಕ್ಷ ಸುರೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಸಂಘಟನೆಯ ಕಾರ್ಯದರ್ಶಿ ಗಣೇಶ್‌ ಕಾಂಚನ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಾಗೇಶ ಸ್ವಾಗತಿಸಿದರು. ಸರಸ್ವತಿ ನಿರೂಪಿಸಿದರು. ನರಸಿಂಹ ವಂದಿಸಿದರು.  

Trending videos

Back to Top