CONNECT WITH US  

ಊರಿಗೊಂದೇ ಗಣಪತಿ ಇಟ್ಟು ಪರಿಸರ ಕಾಪಾಡಲು ಯತ್ನಿಸಿ

ಬಾಗೇಪಲ್ಲಿ: ಗಣಪತಿ ಹಬ್ಬ ಬಂತೆಂದರೆ ಕಿರಿಯರಿಂದ ಹಿಡಿದು ಹಿರಿಯರವರಿಗೂ ಸಡಗರ, ಸಂಭ್ರಮ ಮನೆ ಮಾಡುತ್ತದೆ. ಮಕ್ಕಳಿಗೆ ಗಣಪತಿ ಎಂದರೆ ಅಚ್ಚುಮೆಚ್ಚು. ಕೆಲವು ಕಡೆ ಆ ಗಣಪತಿಗಳನ್ನು ಮಕ್ಕಳು ಬಿಟ್ಟು ಮನೆಗೆ ಬರದಂತೆ ಹಠ ಮಾಡುವುದೂ ಉಂಟು.

ಆದರೆ, ಇಂದು ಸಮಾಜ ಗಣಪತಿಗಳನ್ನು ಇಡುವ ಮೂಲ ಉದ್ದೇಶವನ್ನೇ ಮರೆಯಲಾಗುತ್ತಿದೆ. ಬೀದಿ, ಗಲ್ಲಿ ಗಲ್ಲಿಗಳಲ್ಲಿ ಗಣಪತಿಗಳನ್ನು ಇಡುವ ಬದಲು ಊರಿಗೊಂದೇ ಗಣಪತಿ ಇಟ್ಟು ಸಾಮೂಹಕವಾಗಿ ಪೂಜಿಸುವ ಮೂಲಕ ಪರಿಸರವನ್ನು ಕಾಪಾಡಬೇಕಾಗಿದೆ.

ಮರೆಯಾಗುತ್ತಿರುವ ಉದ್ದೇಶ: ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ವಿವಿಧ ಜಾತಿ, ಭಾಷೆ ಮತ್ತು ಧರ್ಮಗಳ ಜನರಲ್ಲಿ ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ಬಾಲ ಗಂಗಾಧರ್‌ ತಿಲಕರು ಗಣಪತಿಗಳನ್ನು ಇಟ್ಟು ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡುವ ಮೂಲಕ ಜನರಲ್ಲಿ ಐಕ್ಯತೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಸ್ವಾತಂತ್ರ ಬಂದ ನಂತರ ಈ ಹಬ್ಬಕ್ಕೆ ಗಣೇಶನನ್ನು ಇಟ್ಟು ಪೂಜಿಸುವ ಸಂಪ್ರದಾಯ ಹಾಗೆಯೇ ಮುಂದುವರೆದುಕೊಂಡು ಬಂದಿದೆ.

ಸಾರ್ವಜನಿಕರಿಗೆ ತೊಂದರೆ: ಆದರೆ, ಇಂದು ಸಾಮೂಹಿಕ ಗಣೇಶ ಹಬ್ಬದ ಆಶಯವನ್ನು ಮರೆತು ಯಾವುದೋ ಉದ್ದೇಶ ಈಡೇರಿಕೆಗಾಗಿ ಬೇರೆ ಬೇರೆ ರೀತಿಯಲ್ಲಿ ಗಣಪತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬಲವಂತವಾಗಿ ವಂತಿಗೆ ವಸೂಲಿ ಮಾಡಿ, ಗಲ್ಲಿಗಲ್ಲಿಗಳಲ್ಲಿ ರಸ್ತೆಗೆ ಅಡ್ಡಲಾಗಿ ಗಣಪತಿಗಳನ್ನು ಇಡುವುದು, ಅಕ್ರಮವಾಗಿ ವಿದ್ಯುತ್‌ ತೆಗೆದುಕೊಳ್ಳುವುದು, ಕರ್ಣಕಠೊರವಾಗಿ ಮೈಕ್‌ ಹಾಕುವುದು, ವಿಪರೀತ ಶಬ್ಧವಿಟ್ಟು ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.

ಪರಿಣಾಮಗಳು: ಬೀದಿಗಳಲ್ಲಿ ಗಣಪತಿಗಳನ್ನು ಇಡುವುದರಿಂದ ಬಣ್ಣ ಬಣ್ಣದ ದೀಪಗಳ ವ್ಯವಸ್ಥೆಗಾಗಿ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆಯುವುದರಿಂದ ಅನಾಹುತಗಳು ಸಂಭವಿಸಬಹುದು. ದಿನವೂ ಪೂಜೆ ಪುನಸ್ಕಾರ, ಪ್ರಸಾದ ವಿನಿಯೋಗಗಳಿಂದ ಕಸದ ರಾಶಿ ಉತ್ಪಾದನೆಯಾಗುತ್ತದೆ. ಅಲ್ಲದೇ, ಪೊಲೀಸ್‌ ಇಲಾಖೆಯ ಮೇಲೆ ಕೆಲಸದ ಒತ್ತಡವೂ ಹೆಚ್ಚಾಗುತ್ತದೆ.

ವಯೋವೃದ್ಧರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಗಣಪತಿಗಳ ಹೆಸರಿನಲ್ಲಿ ವಸೂಲಿಯಾಗುವ ಹಣ ದುಂದುವೆಚ್ಚ ಅಥವಾ ಪೋಲ್‌ ಆಗಬಹುದು. ಹೃದಯ ರೋಗಿಗಳು, ರಕ್ತಡೊತ್ತಡವಿರುವವರ ಮೇಲಾಗುವ ಪರಿಣಾಮವನ್ನು ಲೆಕ್ಕಿಸದೆ ಇಂದು ಗಣೇಶ ಹಬ್ಬವನ್ನು ಮನಸ್ಸಿಗೆ ತಿಳಿಸದಂತೆ ಸಾಮೂಹಿಕವಾಗಿ ಆಚರಿಸಲಾಗುತ್ತಿದೆ.

ಪರಿಸರಕ್ಕೆ ಹಾನಿ: ಮುಖ್ಯವಾಗಿ ದೊಡ್ಡ ದೊಡ್ಡ ಗಣಪತಿಗಳನ್ನು ಇಟ್ಟು ಬಾವಿ, ಕೆರೆ ಕುಂಟೆ, ಕಾಲುವೆ, ನದಿ ಪಾತ್ರಗಳಲ್ಲಿ ವಿಸರ್ಜಿಸುವುದರಿಂದ ಅದಕ್ಕೆ ಉಪಯೋಗಿಸಲಾದ ಬಣ್ಣಗಳಿಂದ ಸೀಸದ ಆಕ್ಸೆ„ಡ್‌ ಬಿಡುಗಡೆಯಾಗಿ ನೀರನ್ನು ಉಪಯೋಗಿಸುವ ಜೀವ ಸಂಕುಲ ಮತ್ತು ಸಸ್ಯಸಂಕುಲಗಳ ಮೇಲೆ ತೀವ್ರ ಸ್ವರೂಪದ ಪರಿಣಾಮಗಳು ಉಂಟಾಗುತ್ತವೆ.

ಆದ್ದರಿಂದ, ಗ್ರಾಮ, ನಗರ ಹಾಗೂ ಪಟ್ಟಣ ಪ್ರದೇಶಗಳ ನಾಗರಿಕರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಸೇರಿಕೊಂಡು ಪೂರ್ವಭಾವಿ ಸಭೆ ನಡೆಸಿ ಊರಿನ ಯಾವುದಾದರೂ ಒಂದು ಭಾಗದಲ್ಲಿ ಒಂದೇ ಕಡೆ ಗಣಪತಿ ಇಡುವ ಸಂಪ್ರದಾಯವನ್ನು ರೂಢಿಸಿಕೊಳ್ಳುವುದು ಪರಿಸರದ ಹಿತದೃಷ್ಟಿಯಿಂದ ತೀರಾ ಹಿತಕಾರಿ ಎನ್ನಬಹುದು. ಇದರಿಂದ, ಹಣ, ಸಮಯ, ಪರಿಸರ ಮುಂತಾದ ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಂಡಂತಾಗುತ್ತದೆ. ಅಲ್ಲದೇ, ಎಲ್ಲರೂ ಒಟ್ಟಿಗೆ ಸೇರಿ ಗಣೇಶನ ಆರಾಧನೆ ಮಾಡಿದ ಸಂತೃಪ್ತಿಯೂ ಲಭಿಸುತ್ತದೆ. ಏನಂತೀರಾ.....
 

Trending videos

Back to Top