CONNECT WITH US  

ಎಲ್ಲಾ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ

ಚಿತ್ರದುರ್ಗ: ಜಿಲ್ಲೆಯ ಆರು ತಾಲೂಕುಗಳಲ್ಲಿ ಬರದ ಛಾಯೆ ಇದೆ. ಆದರೆ ಸರ್ಕಾರ ಎರಡು ತಾಲೂಕು ಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ ತಾರತಮ್ಯ ಮಾಡಿದೆ. ಇನ್ನುಳಿದ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಿ ಬರ ಪರಿಹಾರ ಕಾಮಗಾರಿ
ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ
ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣದ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಹಿರಿಯೂರು ತಾಲೂಕುಗಳಲ್ಲಿ ತೀವ್ರ ಬರಗಾಲವಿದೆ. ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳೂ ಬರದ ಬೇಗೆಯಿಂದ ಬಳಲುತ್ತಿವೆ.
ಆದರೆ ರಾಜ್ಯ ಸರ್ಕಾರ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲೂಕುಗಳನ್ನು ಮಾತ್ರ
ಬರಪೀಡಿತ ಎಂದು ಘೋಷಿಸಿ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು
ಆರೋಪಿಸಿದರು. 

ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಅಲ್ಪಸ್ವಲ್ಪ ಬಿತ್ತನೆಯಾಗಿದೆ. ರೈತರು ಕೆಲಸ ಹುಡುಕಿಕೊಂಡು ಬೇರೆ ಊರುಗಳಿಗೆ ಗುಳೆ ಹೋಗುತ್ತಿರುವುದನ್ನು ತಡೆಗಟ್ಟಲು ಕೂಡಲೇ ಜಿಲ್ಲೆಯ ಎಲ್ಲ ಆರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು 
ಆಗ್ರಹಿಸಿದರು.

ಕಳೆದ ವರ್ಷ ಅತಿವೃಷ್ಠಿಯಿಂದ ಕಂಗಾಲಾಗಿದ್ದ ರೈತರು, ಈ ಸಾರಿ ಸಕಾಲದಲ್ಲಿ 
ಮಳೆಯಾಗದೇ ಇರುವುದರಿಂದ ಸಂಕಷ್ಟದಲ್ಲಿದ್ದಾರೆ. ಕೆಲವು ಕಡೆ ಬಿತ್ತಿರುವ ಬೀಜಗಳು ಇನ್ನೂ ಮೊಳಕೆಯೊಡೆದಿಲ್ಲ. ಹಲವೆಡೆ ಚಿಗುರಿರುವ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ. ಕೃಷಿಗಾಗಿ ಸಾಲ ಮಾಡಿರುವ ರೈತರಿಗೆ ಆತ್ಮಹತ್ಯೆ 
ಮಾಡಿಕೊಳ್ಳುವುದೊಂದೇ ಉಳಿದಿರುವ ಏಕೈಕ ದಾರಿ. ಆದ್ದರಿಂದ ಸರ್ಕಾರ ರೈತರ
ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.

ರೈತಸಂಘದ ತಾಲೂಕು ಅಧ್ಯಕ್ಷ ಇ.ಎನ್‌. ಲಕ್ಷ್ಮೀಕಾಂತ ಲಿಂಗಾವರಹಟ್ಟಿ ಮಾತನಾಡಿ,
ಬರಗಾಲ ಎದುರಾಗಿರುವುದರಿಂದ ಜನ-ಜಾನುವಾರುಗಳಿಗೆ ಕುಡಿಯಲು
ನೀರಿಲ್ಲದಂತಾಗಿದೆ. ಹತ್ತಿ, ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಈರುಳ್ಳಿ
ಮೊದಲಾದ ಬೆಳೆಗಳು ಒಣಗಿ ಹೋಗಿವೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದು,
ಬಿತ್ತನೆಗಾಗಿ ಹಾಕಿರುವ ಬಂಡವಾಳ ವಾಪಸ್‌ ಬರುವ ಆಸೆ ಕ್ಷೀಣಿಸತೊಡಗಿದೆ.
ಆದ್ದರಿಂದಎಲ್ಲಾ ಬೆಳೆಗಳಿಗೂ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಿ ಗೋಶಾಲೆಗಳನ್ನು ತೆರೆದು ಗೋವುಗಳನ್ನು ರಕ್ಷಿಸಬೇಕು. ಇಲ್ಲದಿದ್ದರೆ ಆ.15ರಂದು ಸ್ವಾತಂತ್ರ ದಿನಾಚರಣೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸೂರಪ್ಪ, ತಾಲೂಕು ಮಹಿಳಾ ಅಧ್ಯಕ್ಷೆ ಲೋಲಾಕ್ಷಮ್ಮ, ಶಿವಮೂರ್ತಿ, ದಿನೇಶ್‌ಬಾಬು, ಕೆ.ಬಿ. ಬೋರಯ್ಯ, ಇ.ಸಿ. ಬೋರಯ್ಯ, ಎಚ್‌.ಎನ್‌.ನಾಗರಾಜ, ಬೋಸಯ್ಯ, ನಾಗೇಂದ್ರಪ್ಪ, ಶಿವಣ್ಣ, ಸೈಯ್ಯದ್‌ ಮಹ್ತಾಜ್‌ ಮತ್ತಿತರರು ಭಾಗವಹಿಸಿದ್ದರು.  

Trending videos

Back to Top