CONNECT WITH US  

ಕುರುಕ್ಷೇತ್ರ ಯುದ್ಧ

ಮಕ್ಕಳೇ ದಾಯಾದಿ ಕಲಹದಿಂದ ಕುರುಕ್ಷೇತ್ರ ಯುದ್ಧ ನಡೆದು ಲಕ್ಷಾಂತರ ಜನರು ಪ್ರಾಣಾರ್ಪಣೆ ಮಾಡಿದರು. ಜನರೇ ಅಲ್ಲದೆ ಆನೆ, ಕುದುರೆ ಮುಂತಾದ ಮೂಕ ಜೀವಿಗಳೂ ಪ್ರಾಣ ಕಳೆದುಕೊಂಡವು. ಅಂತಿಮವಾಗಿ ಸತ್ಯಕ್ಕೇ ಜಯ, ಧರ್ಮಕ್ಕೇ ಜಯ ಎಂದು ಪಾಂಡವರಿಗೆ ಗೆಲುವು ಲಭಿಸಿದರೂ ಆ ಗೆಲುನಲ್ಲಿ ಭಾಗವಹಿಸಲು ಭೂಮಂಡಲದಲ್ಲಿ ಜನರೇ ಇರಲಿಲ್ಲ. ಪಾಂಡವರು ತಮಗೆ ಸಿಕ್ಕ ಗೆಲುಗಾಗಿ ತಮ್ಮ ಬಂಧುಬಾಂಧವರನ್ನೆಲ್ಲಾ ಕಳೆದುಕೊಳ್ಳಬೇಕಾಯಿತು.  ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೂ, ಅಣ್ಣತಮ್ಮಂದಿರನ್ನೂ ಕಳೆದುಕೊಳ್ಳಬೇಕಾಯಿತು. ಇಂತಹ ಗೆಲುವು ಯಾಕಾಗಿ? ತಮ್ಮವರೆಲ್ಲರನ್ನೂ ಬಲಿತೆಗೆದುಕೊಂಡ ಆ ಗೆಲುವಿಗೆ ಏನೆಂದು ಸಂಭ್ರಮಿಸುವುದು? 

ಈ ಕುರುಕ್ಷೇತ್ರ ಯುದ್ಧ ನಡೆಯದಿರಲು ಕೃಷ್ಣನೂ ಸೇರಿದಂತೆ ಕುರುವಂಶದ ಹಿರಿಯರೆಲ್ಲರೂ ತಮ್ಮ ಕೈಲಾದಂತೆ ಶ್ರಯಿಸಿದರು. ಆದರೆ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ದುರ್ಯೋಧನ ಯಾರ ಮಾತೂ ಕೇಳಲಿಲ್ಲ. ಕೌರವರಿಂದ ಎಷ್ಟೇ ಅನ್ಯಾಯವಾದರೂ ಅವರಿಗೆ ತಕ್ಕಶಾಸ್ತಿ ಮಾಡಬೇಕೆಂಬ ಎಷ್ಟೇ ತುಡಿತದ್ದರೂ ಪಾಂಡವರು ಒಂದು ಹಂತದಲ್ಲಿ ರಾಜಿಗೆ-ಸಂಧಾನಕ್ಕೆ ಸಿದ್ಧರಿದ್ದರು. ಐದು ಊರುಗಳನ್ನು ಕೊಟ್ಟರೂ ತಾವು ಯುದ್ಧಮಾಡುವುದಿಲ್ಲವೆಂದು ಹೇಳಿದ್ದರು. ಆದರೆ ಈ ಮಾತನ್ನು ಕೇಳಿದ ದ್ರೌಪದಿ ಕೆರಳಿಬಿಟ್ಟಳು. ತುಂಬಿದ ಸಭೆಯಲ್ಲಿ ತನ್ನ ಹೆಣ್ತನಕ್ಕೆ ಅಪಮಾನವಾಗಿದ್ದನ್ನು ಅವಳು ಅಷ್ಟು ಸುಲಭವಾಗಿ ಮರೆತಿರಲಿಲ್ಲ. ಮರೆಯಲು ಸಾಧ್ಯವೂ ಇರಲಿಲ್ಲ. ಅವಳು ಒಂದು ವೇಳೆ ಆ ಅಪಮಾನವನ್ನು ಮರೆತು ಕ್ಷಮೆ ನೀಡಿದ್ದರೆ ಯುದ್ಧವಾಗುತ್ತಿರಲಿಲ್ಲವೇನೋ? 

ಇನ್ನು ಅಣ್ಣತಮ್ಮಂದಿರ ಮಧ್ಯೆ ದೂತವಾಡಿಸುವುದನ್ನು ಭೀಷ್ಮ ದ್ರೋಣ ವಿದುರ ಮೊದಲಾದ ಹಿರಿಯರು ವಿರೋಧಿಸಿದ್ದರು. ಆದರೆ ಮಹಾರಾಜನಾದ ದೃತರಾಷ್ಟ್ರನು ಪಟ್ಟು ಹಿಡಿದು ವಿರೋಧಿಸಿದ್ದಿದ್ದರೆ ದೂತವಾಡುವುದನ್ನು ತಡೆಯಬಹುದಾಗಿತ್ತು. ಅಥವಾ ನೀತಿವಂತನಾದ ಕರ್ಣನು ಈ ಅನ್ಯಾಯವನ್ನು ಗೆಳೆಯ ದುರ್ಯೋಧನನನಿಗೆ  ಮನವರಿಕೆ ಮಾಡಿಕೊಟ್ಟಿದ್ದರೆ ಮುಂದಾಗುವ ಯುದ್ಧವನ್ನು ತಡೆಹಿಡಿಯಬಹುದಿತ್ತು. 

ಕರ್ಣನಿಗೆ ತನ್ನ ಜನ್ಮ ರಹಸ್ಯ ಗೊತ್ತಾದಾಗಲಾದರೂ ಅವನು ಮನಸ್ಸು ಮಾಡಿದ್ದರೆ ಯುದ್ಧವನ್ನು ನಿಲ್ಲಿಸಿ ತಾನೇ ಹಸ್ತಿನಾವತಿ ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗಬಹುದಿತ್ತು. ಯಾರೂ ಅವನ ನಿರ್ಧಾರಕ್ಕೆ ಅಡ್ಡಿ ಬರುತ್ತಿರಲಿಲ್ಲ. ಹೀಗೂ ಯುದ್ಧವನ್ನು ತಪ್ಪಿಸಲು ಒಂದು ಮಾರ್ಗವಿತ್ತು. 

ಇನ್ನು ಶ್ರೀಕೃಷ್ಣ ರಾಯಭಾರಿಯಾಗಿ ಹಸ್ತಿನಾವತಿಗೆ ಬಂದಾಗ ಅವನ ಹಿತವಚನಗಳನ್ನು, ಧರ್ಮಸೂಕ್ಷ್ಮಗಳನ್ನು ಕೇಳಿಯಾದರೂ, ದುರ್ಯೋಧನ ಮತ್ತವನ ಸಂಗಡಿಗರು ಯುದ್ಧದ ಬಗ್ಗೆ ಮತ್ತೂಮ್ಮೆ ಯೋಚಿಸಬಹುದಿತ್ತು. ಹಾಗೂ ಆಗದೇ ಪಾಂಡವರ ಪಕ್ಷಪಾತಿಯೆಂದು ಸಂಧಾನಕ್ಕೆ ಬಂದ ಕೃಷ್ಣನನ್ನೇ ಸೆರೆಹಿಡಿಯಲು ಪ್ರಯತ್ನಿಸಿ ದುಷ್ಟತನವನ್ನೇ ಮೆರೆದರು. 

ಕುರುಕ್ಷೇತ್ರ ಯುದ್ಧ ನಡೆದು ಅಪಾರ ಜನನಷ್ಟ, ಪ್ರಾಣಹಾನಿ, ಆಸ್ತಿನಷ್ಟವಾಗಲು ಕಾರಣ ಧೃತರಾಷ್ಟ್ರನ ಕುರುಡು ಪುತ್ರ ವ್ಯಾಮೋಹ. ಅವನು ಮನಸ್ಸಿನಿಂದಲೂ ಕುರುಡನಾಗಿದ್ದನು. ದುರ್ಯೋಧನನ ದುಷ್ಟತನ ಹಠಮಾರಿತನ, ಎಲ್ಲವೂ ತನಗೇ ಬೇಕೆಂಬ ಲಾಲಸೆ. ಕರ್ಣನ ಅತಿಯಾದ ಸ್ವಾಮಿಭಕ್ತಿಯೂ ದುರ್ಯೋಧನನಿಗೆ ಬುದ್ಧಿ ಹೇಳದಷ್ಟು ನಾಲಿಗೆಯನ್ನು ಕಟ್ಟಿಹಾಕಿತ್ತು. ಈ ಎಲ್ಲಾ ಕಾರಣಗಳು ಯುದ್ಧಕ್ಕೆ ಅಜ್ಯ ಹುಯ್ದವೇ ವಿನಾ ಶಾಂತಗೊಳಿಸಲಿಲ್ಲ. ಇದರ ಜೊತೆಗೆ ದ್ರೌಪದಿಯ ಸಿಟ್ಟೂ ಯುದ್ಧದ ಪರವಾಗಿಯೇ ಕೆಲಸ ಮಾಡಿತ್ತು. ಇದರಲ್ಲಿ ದ್ರೌಪದಿಯ ಸಿಟ್ಟು ಸಕಾರಣವಾದದ್ದು. ಯಾವ ಹೆಣ್ಣೂ ತನ್ನ ಹೆಣ್ತನಕ್ಕೆ ಅಪಮಾನವಾಗುವುದನ್ನು ಸಹಿಸುವುದಿಲ್ಲ. ಮಿಕ್ಕ ಎಲ್ಲಾ ಕಾರಣಗಳೂ ಸ್ವಾರ್ಥ, ಅತಿಯಾಸೆ, ಅಧಿಕಾರ ಲಾಲಸೆಯನ್ನೇ ಬಿಂಬಿಸುತ್ತದೆ. ಎಲ್ಲರೂ ತಮ್ಮ ತಮ್ಮ ಸ್ವಾರ್ಥದ ಬಗ್ಗೆ ಯೋಚಿಸಿದರೇ ವಿನಾ ಯುದ್ಧಮಾರಿಯಿಂದ ಸಾಮಾನ್ಯ ಪ್ರಜೆಯ ಜೀವನ ಎಷ್ಟು ಕಷ್ಟಕ್ಕೀಡಾಗುವುದೆಂದು ಯಾರೂ ಯೋಚಿಸಲಿಲ್ಲ.

Trending videos

Back to Top