CONNECT WITH US  

ಕಣ್ ತೆರೆದು ನೋಡಿ!

ಎಲ್ಲೆಂದರಲ್ಲಿ ನಿದ್ದೆ ಹೋಗುತ್ತೆ ಪಾಪ ಪಾಂಡಾ: ನಮ್ಮಲ್ಲಿ ಬಹಳಷ್ಟು ಜನರು ತಾವು ನಿದ್ದೆಯ ಬಗ್ಗೆ ಆಸ್ಥೆ ವಹಿಸುತ್ತಾರೆ. ವೈದ್ಯರೂ ಇದನ್ನು ಅನುಮೋದಿಸುತ್ತಾರೆ. ನಿದ್ದೆ ಚೆನ್ನಾಗಿ ಆಗಿಬಿಟ್ಟರೆ ಆರೋಗ್ಯ ಚೆನ್ನಾಗಿರುತ್ತೆ ಎನ್ನುವುದು ಅವರ ಅಭಿಪ್ರಾಯ. ನಿಜ, ದೇಹಕ್ಕೆ ನಿದ್ದೆ ತುಂಬಾ ಮುಖ್ಯ. ಹೀಗಾಗಿ ಅದರ ಕುರಿತು ಗಮನ ವಹಿಸುವುದು ಒಳ್ಳೆಯದೇ.

ಆದರೆ ಕೆಲವೇ ಮಂದಿ ಮಾತ್ರ ತಾವು ನಿದ್ದೆ ಹೋಗುವ ಜಾಗದ ಕುರಿತು ತುಂಬಾ ಕಾಳಜಿ ವಹಿಸುತ್ತಾರೆ. ಮನೆಯಿಂದ ದೂರ ಇದ್ದಾಗಲೂ ಒಳ್ಳೆಯ ಲಾಡ್ಜ್ಅನ್ನು ಕಾದಿರಿಸುತ್ತಾರೆ. ಈ ಸ್ವಭಾವಕ್ಕೆ ವ್ಯತಿರಿಕ್ತವಾದ ಮಂದಿಯೂ ನಮ್ಮಲ್ಲಿದ್ದಾರೆ. ಇವರಿಗೆ ನಿದ್ದೆ ಮಾಡಲು ಇಂಥದ್ದೇ ಜಾಗ ಬೇಕೆಂಬ ನಿಯಮವೇನಿಲ್ಲ. ತಾವೆಲ್ಲಿರುತ್ತಾರೋ ಅಲ್ಲೇ ನಿದ್ದೆಗೆ ಶರಣಾಗಿಬಿಡುತ್ತಾರೆ.

ಬಸ್‌ನಲ್ಲಿ, ರೈಲಿನಲ್ಲಿ, ಕಾರ್ಯಕ್ರಮಗಳಲ್ಲಿ, ಆಫೀಸಿನಲ್ಲಿ ಇನ್ನು ಕೆಲವರು ವೇದಿಕೆ ಮೇಲೆ ಹೀಗೆ ಎಲ್ಲೆಂದರಲ್ಲಿ ನಿದ್ದೆ ಮಾಡಿಬಿಡುತ್ತಾರೆ. ಅಂಥದ್ದೇ ಸ್ವಭಾವದ ಒಂದು ಪ್ರಾಣಿ ಇದ್ದರೆ ಅದು "ಪಾಂಡಾ'. ಮರದ ಮೇಲೆ ವಾಸಿಸುವ ಪಾಂಡಾಗೆ ನಿದ್ದೆ ಮಾಡಲು ಮರವೇ ಆಗಬೇಕೆಂದಿಲ್ಲ. ಯಾವುದೇ ಜಾಗದಲ್ಲಿ, ಯಾವುದೇ ಭಂಗಿಯಲ್ಲಿ ಅದು ನಿದ್ದೆ ಮಾಡಬಲ್ಲುದು.

ಹೊಟ್ಟೆ ಮುಂದಕ್ಕೆ ಬಂದಿರುವ, ದಿನದ ಯಾವ ಹೊತ್ತಿನಲ್ಲಿ ನೋಡಿದರೂ ಲೋಕದ ಪರಿವೇ ಇಲ್ಲದಂತೆ ತೋರುವ ಪಾಂಡಾ ನಮಗೆ ಯಾರನ್ನಾದರೂ ನೆನಪಿಸಿದರೆ ಅದರಲ್ಲಿ ತಪ್ಪೇನಿಲ್ಲ. ಪಾಂಡಾ ನೋಡಲು ತುಂಬಾ ಮುದ್ದು ಮುದ್ದು ಎನ್ನುವುದರಲ್ಲಿ ಬೇರೆ ಮಾತಿಲ್ಲ. ವಿದೇಶಗಳಲ್ಲಿ ಪಾಂಡಾ ನೋಡಲು ಮಕ್ಕಳು ಮುಗಿಬೀಳುತ್ತಾರೆ. ಕ್ಯೂಟ್‌ನೆಸ್‌ನ ಪ್ರತೀಕದಂತಿರುವ ಪಾಂಡಾನ ಎಲ್ಲೆಂದರಲ್ಲಿ ನಿದ್ದೆ ಹೋಗುವ ಹವ್ಯಾಸ ಅದನ್ನು ಇನ್ನಷ್ಟು ಕ್ಯೂಟ್‌ ಆಗಿಸುತ್ತೆ ಅಲ್ವಾ?

ಟೈರಾನೋಸಾರ್‌ನ ಹತ್ತಿರ ಸಂಬಂಧಿ ಇನ್ನೂ ಭೂಮಿ ಮೇಲಿದೆ: ಭೂಮಿ ಮೇಲೆ ಲಕ್ಷಾಂತರ ವರ್ಷಗಳ ಕಾಲ ಜೀವಿಸಿದ್ದ ಡೈನೋಸಾರ್‌ಗಳಲ್ಲೇ ಅತ್ಯಂತ ಚುರುಕು ಮತ್ತು ಭಯಂಕರವೆಂದು ಹೆಸರಾದುದು ಟೈರಾನೋಸಾರ್‌. ಜುರಾಸಿಕ್‌ ಪಾರ್ಕ್‌ ಸರಣಿಯ ಸಿನಿಮಾಗಳನ್ನು ನೀವು ನೋಡಿದ್ದರೆ ನಿಮಗೆ ಟೈರಾನೋಸಾರ್‌ ಗೊತ್ತಿರುತ್ತೆ. ಅಲ್ಲಿ ಅವುಗಳನ್ನು "ಟಿ - ರೆಕ್ಸ್‌' ಎಂದು ಕರೆಯಲಾಗಿತ್ತು.

ಮಕ್ಕಳಿಗೆಲ್ಲಾ ಪ್ರಿಯವಾದುದು ಈ ಟಿ - ರೆಕ್ಸ್‌. ಪ್ರಾರಂಭದ ಅವತರಣಿಕೆಗಳಲ್ಲಿ "ಟಿ - ರೆಕ್ಸ್‌'ನನ್ನು ದುಷ್ಟನಂತೆ ತೋರಿಸಿದರೂ ಅನೇಕ ಕಡೆ ಅದು ಆಪತ್ಭಾಂಧವನಂತೆ ಎಂಟ್ರಿ ಕೊಡುತ್ತದೆ. ಸಿನಿಮಾಗಳಲ್ಲಿ ಹೊರೋ ಎಂಟ್ರಿ ಕೊಟ್ಟಾಗ ಶಿಳ್ಳೆ, ಘೋಷಗಳು ಕೇಳಿಬರುವಂತೆ, ತೆರೆ ಮೇಲೆ "ಟಿ - ರೆಕ್ಸ್‌' ಬಂದಾಗಲೂ ಜನರು ಕಿರುಚಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ.

ಈಗ "ಟಿ - ರೆಕ್ಸ್‌' ಬದುಕಿಲ್ಲ. ಆದರೆ ಭೂಮಿ ಮೇಲೆ ಸದ್ಯ ಬದುಕಿರುವ ಜೀವಿಗಳಲ್ಲಿ ಅದರ ಹತ್ತಿರ ಸಂಬಂಧಿಯೆಂದು ಕರೆಯಬಹುದಾದ ಜೀವಿಯೊಂದು ಉಳಿದುಕೊಂಡಿದೆ. ಅದು ಯಾವುದೇಂದು ತಿಳಿದರೆ ನೀವು ಬೆಚ್ಚಿ ಬೀಳುವುದು ಖಂಡಿತ. ಆ ಜೀವಿ ಬೃಹದಾಕಾರದ ಆನೆಯೋ, ಘೇಂಡಾಮೃಗವೋ ಅಲ್ಲ, ಕೋಳಿ! "ಟಿ - ರೆಕ್ಸ್‌'ಗೆ ಹತ್ತಿರ ಸಂಬಂಧಿ, ಕೋಳಿ. ಮುಂದೆಂದಾದರೂ ಕೋಳಿಗೆ ತನ್ನ ಹುಟ್ಟಿನ ರಹಸ್ಯ ನೆನಪಾಗಿ "ಕೋ ಕೋ' ಎನ್ನುವುದಕ್ಕೆ ಬದಲಾಗಿ ಡೈನೋಸಾರ್‌ನಂತೆ ಚೀತ್ಕರಿಸಿದರೆ ನಾವು ಜವಾಬ್ದಾರರಲ್ಲ!

* ಹರ್ಷ

Trending videos

Back to Top