CONNECT WITH US  

ರಾವಣ-ಕುಂಭಕರ್ಣ-ವಿಭೀಷಣ-ಶೂರ್ಪನಖೀ

ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬರಾದ ಪುಲಸ್ತ ಮಹರ್ಷಿಗಳಿಗೆ ವಿಶ್ರಾವಸು ಎಂಬ ಮಗನಿದ್ದನು. ಇವನು ಮಹಾ ತಪಸ್ವಿ. ಇವನಿಗೆ ಕೈಕಸಿ ಎಂಬ ಪತ್ನಿಯಿದ್ದಳು. ಇವಳ ಮಕ್ಕಳೇ ರಾವಣ, ಕುಂಭಕರ್ಣ, ಶೂರ್ಪನಖೀ, ಹಾಗೂ ವಿಭೀಷಣ. ಕೈಕಸಿಯ ಒಂದು ತಪ್ಪಿನಿಂದಾಗಿ ರಾವಣ, ಕುಂಭಕರ್ಣ
ಹಾಗೂ ಶೂರ್ಪನಖೀಯರು ಕ್ರೂರಿಗಳಾಗಿ ಜನಿಸಿದ್ದರು. ಜನರಿಗೆ, ತಪಸ್ವಿಗಳಿಗೆ
ತೊಂದರೆ ಕೊಡುವುದರಲ್ಲಿ ಇವರು ಆನಂದ ಪಡುತ್ತಿದ್ದರು. ಕೊನೆಯ ಮಗನಾದ ವಿಭೀಷಣನು ಶಾಂತ ಸ್ವಭಾವದವನೂ, ಸಾತ್ವಿಕನೂ ಆಗಿದ್ದನು. ಧರ್ಮದಲ್ಲಿ ಮನಸ್ಸುಳ್ಳವನಾಗಿದ್ದನು. ವಿಶ್ರಾವಸುವಿನ ಮತ್ತೂಬ್ಬ ಮಗನಾದ ಕುಬೇರನು ಅಪಾರ ಸಂಪತ್ತಿನ ಒಡೆಯನಾಗಿದ್ದನು. ಉತ್ತರ ದಿಕ್ಕಿನ ದಿಕಾ³ಲಕನೆನಿಸಿದ್ದನು. ಅವನ ಹತ್ತಿರ ಒಂದು ಪುಷ್ಪಕ ವಿಮಾನವೂ ಇದ್ದಿತು. ಒಮ್ಮೆ ಅವನು ತಂದೆಯನ್ನು ನೋಡಲು ಬಂದಾಗ ಅವನ ವೈಭವವನ್ನು ಗಮನಿಸಿದ ಕೈಕಸಿ ತನ್ನ ಮಕ್ಕಳಿಗೆ
ಹೇಳಿದಳು. 'ನೋಡಿ ಕುಬೇರ ನಿಮ್ಮ ಅಣ್ಣ, ಆದರೆ ಅವನೆಷ್ಟು ಶ್ರೀಮಂತ, ದೊಡ್ಡ ಅಧಿಕಾರದಲ್ಲಿದ್ದಾನೆ ನೀವೂ ಅವನ ಹಾಗೆಯೇ ಆಗಬೇಕು. ನಿಮ್ಮ ಪಿತಾಮಹನಾದ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ನೀವೂ ಅವನ ಹಾಗೆಯೇ ಶ್ರೀಮಂತರಾಗಿ' ಎಂದಳು.

ಅವಳ ಮಾತಿನಂತೆ ರಾವಣ ಕುಂಭಕರ್ಣ ಹಾಗೂ ವಿಭೀಷಣರು  ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು. ವರ್ಷಾನುಗಟ್ಟಳೆ ಕಠಿಣ ತಪಸ್ಸು ಮಾಡಿದರು. ಇವರ ತಪಸ್ಸಿಗೆ ಮೆಚ್ಚಿ ಬ್ರಹ್ಮನು ಪ್ರತ್ಯಕ್ಷನಾದನು. ಏನು ವರ ಬೇಕೆಂದು ಕೇಳಿದನು. ರಾವಣ ತನಗೆ ಮರಣ ಬರಬಾರದೆಂದು
ಕೇಳಿಕೊಂಡನು. ಆದರೆ ಬ್ರಹ್ಮ ಒಪ್ಪಲಿಲ್ಲ. ಭೂಲೋಕದಲ್ಲಿ ಹುಟ್ಟಿದ ಮೇಲೆ ಮರಣ ತಪ್ಪಿದ್ದಲ್ಲ. ಮರಣ ಬೇಡವೆಂದರೆ ಅದು ಪ್ರಕೃತಿಗೆ ವಿರುದ್ಧ. ಅದು ಬಿಟ್ಟು ಬೇರೇನಾದರೂ ಕೇಳಿಕೋ ಎಂದನು. ರಾವಣ ಹಾಗಾದರೆ ತನಗೆ ದೇವತೆಗಳು, ಯಕ್ಷರು, ಗಂಧರ್ವರು, ರಾಕ್ಷಸರು, ಕಿನ್ನರರು, ಹುಲಿ ಸಿಂಹ ಇತ್ಯಾದಿ ಕಾಡುಪ್ರಾಣಿಗಳು ಹೀಗೆ ಯಾರಿಂದಲೂ ಮರಣ ಬರಬಾರದು ಎಂದನು. ಬ್ರಹ್ಮನು ನಸುನಗುತ್ತಾ ತಥಾಸ್ತು ಎಂದನು.

ಕುಂಭಕರ್ಣನಿಗೆ ತಪಸ್ಸು ಮಾಡಿ ನಿದ್ದೆಯಿಲ್ಲದೇ ಸೋತು ಸೊಪ್ಪಾಗಿದ್ದನು. ತನಗೆ ಆರು
ತಿಂಗಳು ನಿದ್ರೆ ಆರು ತಿಂಗಳು ಎಚ್ಚರದಲ್ಲಿರಬೇಕೆಂದು ವರ ಕೇಳಿಕೊಂಡನು. ಬ್ರಹ್ಮನು
ಒಪ್ಪಿಕೊಂಡನು. ವಿಭೀಷಣನು ತನಗೆ ಎಂಥ ಪರಿಸ್ಥಿತಿಯಲ್ಲಿದ್ದರೂ ಧರ್ಮದಲ್ಲಿಯೇ
ಮನಸ್ಸಿರಬೇಕೆಂದು ಕೇಳಿಕೊಂಡನು. ಈಗ ಬ್ರಹ್ಮನಿಗೆ ಸಂತೋಷವಾಯಿತು.
ವಿಭೀಷಣನಿಗೆ ನೀನು ಚಿರಂಜೀವಿಯಾಗೆಂದು ಆಶೀರ್ವದಿಸಿದನು.

ವರಗಳನ್ನು ಪಡೆದ ರಾವಣ ಕುಂಭಕರ್ಣರ ಆಟಾಟೋಪ ಮುಗಿಲಿಗೇರಿತು.
ಅವರು ಯಾವಾಗಲೂ ಜನರನ್ನು ಪೀಡಿಸುವುದರಲ್ಲಿ ಸಂತೋಷ ಪಡುತ್ತಿದ್ದರು. ಋಷಿಮುನಿಗಳ ತಪಸ್ಸನ್ನು ಕೆಡಿಸುವುದು, ಯಜ್ಞಯಾಗಾದಿಗಳಿಗೆ ವಿಘ್ನವನ್ನು ತಂದೊಡ್ಡುವುದು, ಪರಸ್ತ್ರೀಯರನ್ನು ಕದ್ದೊಯ್ಯುವುದು ಇತ್ಯಾದಿ ಜನಪೀಡಕ ಕೆಲಸಗಳನ್ನು ಮಾಡುತ್ತಿದ್ದರು. ಇವರ ಕಾಟ ತಡೆಯಲಾಗದೆ ಋಷಿಗಳು ರಕ್ಷಣೆಗೆ ದೇವತೆಗಳ ಮೊರೆ ಹೋದರು. ವರಗಳ ಬಲದಿಂದ ಬೀಗುತ್ತಿದ್ದ ಈ ಸಹೋದರರನ್ನು
ದೇವತೆಗಳೂ ಏನೂ ಮಾಡಲಾಗಲಿಲ್ಲ. ಎಲ್ಲರೂ ಕೂಡಿ ಶ್ರೀಹರಿಯ ಮೊರೆ ಮೋದರು. ರಾವಣನ ಹುಟ್ಟಡಗಿಸಲು ಶ್ರೀಹರಿಯು ಭೂಲೋಕದಲ್ಲಿ ಅವತರಿಸಲು ನಿರ್ಧರಿಸಿದನು. ಇದು ರಾಮಾವತಾರಕ್ಕೆ ನಾಂದಿಯಾಯಿತು. 

Trending videos

Back to Top