CONNECT WITH US  

ಅಕ್ಷಯಪಾತ್ರೆ

ಪಾಂಡವರು ದೂÂತದಲ್ಲಿ ಸೋತು 12 ವರ್ಷಗಳ ಕಾಲ ವನವಾಸಕ್ಕೆ ಹೊರಡಲು ತಯಾರಾದರು. ಎಲ್ಲರೂ ತಮ್ಮ ರೇಶೆ¾ ವಸ್ತ್ರಗಳನ್ನು ಕಳಚಿ ನಾರುಮಡಿಯನ್ನುಟ್ಟರು. 
ಆಭರಣಗಳನ್ನು ತೆಗೆದಿಟ್ಟರು. ತಮ್ಮ ತಾಯಿ ಕುಂತಿದೇವಿಯನ್ನು ವಿದುರನ ವಶಕ್ಕೆ ಒಪ್ಪಿಸಿ 'ನಾವು ಬರುವವರೆಗೂ ಅವಳನ್ನು ನೀನೇ ನೋಡಿಕೊಳ್ಳಬೇಕು ಚಿಕ್ಕಪ್ಪಾ' ಎಂದು ವಿದುರನಲ್ಲಿ ವಿನಂತಿಸಿಕೊಂಡರು. 

ಪಾಂಡವರು ತಮ್ಮ ಬೆಲೆಬಾಳುವ ವಸ್ತ್ರಗಳನ್ನು, ಆಭರಣಗಳನ್ನು ತಮ್ಮ ರಾಜ್ಯಕೋಶಾದಿಗಳನ್ನು ತ್ಯಜಿಸಿದರೂ ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿಲ್ಲ. ಅವುಗಳನ್ನು ತಮ್ಮ ಜೊತೆಗೇ ಕೊಂಡೊಯ್ದರು. ಪಾಂಡವರು ವನವಾಸಕ್ಕೆ ಹೊರಟಾಗ ದುಷ್ಟ ಚತುಷ್ಟಯರನ್ನು ಹೊರತು ಪಡಿಸಿ ಇಡೀ ಹಸ್ತಿನಾಪುರವೇ ಕಣ್ಣೀರಿಟ್ಟಿತು. ಎಷ್ಟೋ ಜನ ಪ್ರಜೆಗಳು ಧರ್ಮಜನಿಲ್ಲದ ಊರಿನಲ್ಲಿ ಇರಲಾರೆವೆಂದು ತಾವೂ ಪಾಂಡವರೊಂದಿಗೆ ವನವಾಸಕ್ಕೆ ಹೊರಡಲು ಸಿದ್ಧರಾದರು. ಇದೇ ರೀತಿ ಅನೇಕ ಋಷಿಗಳು, ವಿಪ್ರ‌ರೂ ಪಾಂಡವರನ್ನು ಅನುಸರಿಸಿದರು. ಧರ್ಮಜನು ಯಾರನ್ನೂ ತನ್ನ ಹಿಂದೆ ಬರಕೂಡದೆಂದು ಹೇಳಲಿಲ್ಲ. 

ಎಲ್ಲರೂ ಹಸ್ತಿನಾವತಿಯ ಗಡಿ ದಾಟಿ ಅಡವಿಯೊಳಗೆ ಅಡಿಯಿಟ್ಟರು. ಸಂಜೆಯಾಗುತ್ತಿತ್ತು. ಧರ್ಮಜನಿಗೆ ಈಗ ಹೊಸ ಯೋಚನೆಯೊಂದು ಶುರುವಾಯಿತು. ತನಗೆ ಹಾಗೂ ತನ್ನ ಪರಿವಾರಕ್ಕೆ ಮತ್ತು ತನ್ನನ್ನು ನಂಬಿ ಹಿಂಬಾಲಿಸಿ ಬರುತ್ತಿರುವ ಈ ಅಭ್ಯಾಗತರಿಗೆ ಕಾಲಕಾಲಕ್ಕೆ ಆಹಾರವನ್ನೂ ಹೇಗೆ ಹೊಂದಿಸುಸುವುದು? ಅವರನ್ನು ಉಪವಾಸ ಕೆಡವಿದರೆ ತನಗೆ ಪಾಪ ಸುತ್ತಿಕೊಳ್ಳುತ್ತದೆ. ಹಾಗೆಂದು ತನ್ನನ್ನು ನಂಬಿ ಬರುತ್ತಿರುವವರನ್ನು ಬರಬೇಡಿರೆಂದು ಹೇಳಿದರೆ ನಂಬಿಕೆ ದ್ರೋಹ ಮಾಡಿದಹಾಗಾಗುತ್ತದೆ. ಹೀಗಾಗಿ ತಾನು ಏನು ಮಾಡಬೇಕೆಂದು ತಿಳಿಯದೆ ಕಳವಳಗೊಂಡ. ತನ್ನ ಕುಲಪುರೋತರಾದ ಧೌಮ್ಯರನ್ನು ಈ ಸಂದಿಗ್ಧದಿಂದ ಪಾರಾಗಲು ಏನು ಮಾಡಬೇಕೆಂದು ಕೇಳಿದ. ಧೌಮ್ಯರು ಕ್ಷಣಹೊತ್ತು ಆಲೋಚಿಸಿ ಹೇಳಿದರು. 'ಧರ್ಮನಂದನ, ನೀನೂ ಹಾಗೂ ನಿನ್ನ ಪಟ್ಟದ ರಾಣಿ ದ್ರೌಪದಿಯೂ ಸೂರ್ಯಭಗವಾವನನ್ನು ಪ್ರಾರ್ಥನೆ ಮಾಡಿಕೊಳ್ಳಿ ಅವನೇ ಇದಕ್ಕೆ ಪರಿಹಾರ ತೋರಿಸುತ್ತಾನೆ.'

ಧರ್ಮರಾಯನೂ ದ್ರೌಪದಿಯೂ ಸೂರ್ಯಭಗವಾನನ ಕಡೆ ತಿರುಗಿಕೊಂಡು ಅನನ್ಯ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಂಡರು. ಇವರ ಪ್ರಾರ್ಥನೆಗೆ ಸಂಪ್ರೀತನಾದ ಸೂರ್ಯನು ಪ್ರತ್ಯಕ್ಷನಾಗಿ ಧರ್ಮಜ, ನಿನಗೆ ಒಂದು ಅಕ್ಷಯ ಪಾತ್ರೆಯನ್ನು ದಯಪಾಲಿಸುತ್ತೇನೆ. ಅದರಲ್ಲಿ ನಿನಗೆ ಬೇಕಾದದ್ದು ನೀನು ಬೇಡಿದ್ದು ತಕ್ಷಣ ಸಿಗುತ್ತದೆ. ನಿನ್ನ ಪರಿವಾರಕ್ಕೆ ದಿನವೂ ಹೊಟ್ಟೆತುಂಬಾ ಭೋಜನವನ್ನು ಮಾಡಿಸಬಹುದು. ದ್ರೌಪದಿಯ ಭೊಜನವಾಗುವರೆಗೂ ಅದು ಕೇಳಿದ್ದನ್ನು ಕೊಡುತ್ತದೆ. ಅವಳ ಭೋಜನವಾದ ನಂತರ ಅದರ ಶಕ್ತಿ ನಶಿಸುತ್ತದೆ. ಮತ್ತೆ ಮಾರನೇ ದಿನದ ವರೆಗೂ ಅದು ಕೆಲಸ ಮಾಡುವುದಿಲ್ಲ. ಎಂದು ಹೇಳಿ ಅಕ್ಷಯ ಪಾತ್ರೆಯನ್ನು  ದಯಪಾಲಿಸಿದನು. 

ಇದರಂತೆ ಧರ್ಮಜನು ಅಕ್ಷಯ ಪಾತ್ರೆಯ ದಯದಿಂದ ತಾವು ವನವಾಸದಲ್ಲಿ ಇದ್ದಷ್ಟು ದಿನವೂ ಅನ್ನಾಹಾರಾದಿಗಳಿಗೆ ಕೊರತೆಯಿಲ್ಲದಂತೆ ತನ್ನ ಪರಿವಾರಕ್ಕೆ ಹಸಿವಿನ ತೊಂದರೆ ಆಗದಂತೆ ನೋಡಿಕೊಂಡನು. 

ವೀಣಾ ರಾವ್‌

Trending videos

Back to Top