CONNECT WITH US  

ಏರ್‌ಏಶ್ಯಾ ವಿಮಾನ ಸಮುದ್ರಪಾಲು : 3 ಶವ, ಕೆಲ ಅವಶೇಷ ಪತ್ತೆ

ಜಕಾರ್ತಾ/ಸಿಂಗಾಪುರ : ರವಿವಾರ ಬೆಳಗ್ಗೆ 162 ಪ್ರಯಾಣಿಕರ ಜತೆಗೆ ನಿಗೂಢವಾಗಿ ಕಣ್ಮರೆಯಾಗಿದ್ದ ಇಂಡೋನೇಶ್ಯಾದ ಏರ್‌ ಏಶ್ಯಾ ವಿಮಾನದ ಅವಶೇಷಗಳು ಮತ್ತು 3 ಮೃತದೇಹಗಳು 3 ದಿನಗಳ ನಿರಂತರ ಶೋಧ ಕಾರ್ಯಾಚರಣೆಯ ಫ‌ಲವಾಗಿ ಮಂಗಳವಾರ ಮಧ್ಯಾಹ್ನ ಜಾವಾ ಸಮುದ್ರದಲ್ಲಿ ಪತ್ತೆಯಾಗಿವೆ. ಇದರೊಂದಿಗೆ ಈ ವರ್ಷದ 3ನೇ ವಿಮಾನ ನಾಪತ್ತೆ ಪ್ರಕರಣವೂ ದುರಂತ ಅಂತ್ಯ ಕಂಡಂತಾಗಿದೆ.

ಪತ್ತೆ ಕಾರ್ಯದಲ್ಲಿ ನಿರತವಾಗಿದ್ದ ಇಂಡೋನೇಶ್ಯಾದ ಸಮರ ನೌಕೆಗೆ, ವಿಮಾನದ 10 ಅವಶೇಷಗಳು ಮತ್ತು 3 ಮೃತದೇಹಗಳು ಸಿಕ್ಕಿವೆ. ಇಂಡೋನೇಶ್ಯಾದ ಭಾಗವಾಗಿರುವ ಬೋರ್ನಿಯೊ ಸಮೀಪ ವಿಮಾನ ಸಂಪರ್ಕ ಕಳೆದುಕೊಂಡ ಸಮೀಪದಲ್ಲೇ ತೇಲುತ್ತಿದ್ದ ಅವಶೇಷಗಳು ಮತ್ತು ಮೃತ ದೇಹಗಳು ಪತ್ತೆಯಾಗಿರುವುದರಿಂದ ಆಪತ್ತಿಗೆ ಸಿಲುಕಿದ ಕೆಲವೇ ಕ್ಷಣಗಳಲ್ಲಿ ವಿಮಾನ ಸಮುದ್ರಕ್ಕೆ ಪತನಗೊಂಡಿರುವುದು ದೃಢಪಟ್ಟಿದೆ. ವಿಮಾನದಲ್ಲಿದ್ದ ಬಾಕಿ ಪ್ರಯಾಣಿಕರೂ ಮೃತ ಪಟ್ಟಿರುವರೆಂದು ಶಂಕಿಸಲಾಗಿದೆ.

ಇಂಡೋನೇಶ್ಯಾದಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುತ್ತಿದ್ದ ಏರ್‌ ಏಶ್ಯಾದ ಕ್ಯುಝಡ್‌8501 ವಿಮಾನ ರವಿವಾರ ಇಂಡೋನೇಶ್ಯಾದ ಸುರಬಯಾದಿಂದ ಟೇಕಾಫ್ ಆದ 42 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತ್ತು. ವಿಮಾನ ಹುಡುಕುತ್ತಿದ್ದ ಇಂಡೋನೇಶ್ಯಾದ ಹೆಲಿಕಾಪ್ಟರ್‌ಗೆ ಸೋಮವಾರವೇ ಜಾವಾ ಸಮುದ್ರದಲ್ಲಿ ತೈಲ ಕಲೆ ಗೋಚರಿಸಿತ್ತು. ಇದೇ ಸ್ಥಳದಲ್ಲಿ ಶೋಧ ಮುಂದುವರಿಸಿದಾಗ ತೇಲುತ್ತಿದ್ದ ವಿಮಾನದ ಬಾಗಿಲು, ಮತ್ತಿತರ ಅವಶೇಷಗಳು ಮತ್ತು ಕೆಲವು ಮೃತದೇಹಗಳು ಮಂಗಳವಾರ ಸಿಕ್ಕಿವೆ.

ಬೆಸ್ತರಿಗೆ ಕೇಳಿಸಿದ ಶಬ್ದ: "ರವಿವಾರ ಬೆಳಗ್ಗೆ ಭೀಕರ ಶಬ್ದ ಕೇಳಿಸಿತು ಹಾಗೂ ಸ್ಫೋಟವನ್ನು ನೋಡಿದ್ದೇವೆ' ಎಂದು ಪಂಗ್‌ಕಲನ್‌ನ ಇಬ್ಬರು ಬೆಸ್ತರು ಹೇಳಿದ್ದರು. ಅವರು ಹೇಳಿದ ಸ್ಥಳದ ಸಮೀಪವೇ ಅವಶೇಷ ಸಿಕ್ಕಿದೆ. ಬೆಸ್ತರು ನೀಡಿದ ವಿವರ ಮತ್ತು ಅವಶೇಷ ಪತ್ತೆಯಾದ ಸ್ಥಳ ಹೋಲಿಕೆಯಾಗುತ್ತಿದೆ ಎಂದು ರಾಷ್ಟ್ರೀಯ ಶೋಧ ರಕ್ಷಣಾ ಸಂಸ್ಥೆಯ ವಕ್ತಾರ ಎಂ. ಯೂಸುಫ್ ಲತೀಫ್ ಹೇಳಿದ್ದಾರೆ.

ಎಂಎಚ್‌ 370 ಎಲ್ಲಿ?: ಏರ್‌ಏಶ್ಯಾ ವಿಮಾನ ನಾಪತ್ತೆಯಾದ ಮೂರು ದಿನದಲ್ಲಿ ಅದರ ಅವಶೇಷ ಪತ್ತೆಯಾಗಿದೆ. ಆದರೆ ಹತ್ತು ತಿಂಗಳ ಹಿಂದೆ ಮಾ. 3ರಂದು ಇದೇ ರೀತಿ ನಿಗೂಢವಾಗಿ ನಾಪತ್ತೆಯಾಗಿದ್ದ ಕೌಲಾಲಂಪುರದಿಂದ ಬೀಜಿಂಗ್‌ಗೆ ಪ್ರಯಾಣಿಸುತ್ತಿದ್ದ ಮಲೇಶ್ಯಾದ ಎಂಎಚ್‌ 370 ವಿಮಾನದ ಸುಳಿವು ಇನ್ನೂ ಸಿಕ್ಕಿಲ್ಲ.

ಸಾಗರ ಗರ್ಭದಲ್ಲೇ ಉಳಿಯುತ್ತಾ ವಿಮಾನ?
ಪತನಗೊಂಡ ವಿಮಾನ ಸಮುದ್ರ ತಳ ಸೇರಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಮವಾರವೇ ಈ ಜಾಗದಲ್ಲಿ ಸಮುದ್ರ ಗರ್ಭದೊಳಗೆ ವಿಮಾನದ ನೆರಳಿನಂತಹ ದೃಶ್ಯ ಗೋಚರಿಸಿತ್ತು. ಇದೇ ವಿಮಾನದ್ದು ಎನ್ನುವುದು ಬಹುತೇಕ ಖಚಿತಗೊಂಡಿದೆ. ಆದರೆ ಇಷ್ಟು ಆಳದಲ್ಲಿರುವ ವಿಮಾನವನ್ನು ಮೇಲೆತ್ತುವ ತಂತ್ರಜ್ಞಾನ ಇಲ್ಲದಿರುವುದರಿಂದ ಶಾಶ್ವತವಾಗಿ ಜಲಸಮಾಧಿಯಾಗುವ ಸಾಧ್ಯತೆ ಹೆಚ್ಚು ಎಂದು ಇಂಡೋನೇಶ್ಯಾದ ರಾಷ್ಟ್ರೀಯ ಶೋಧ ಹಾಗೂ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಬಾಂಬಂಗ್‌ ಸೊಯೆಲಿಸ್ಟಿಯೊ ತಿಳಿಸಿದ್ದಾರೆ.

ಪತ್ತೆಯಾದದ್ದು ಹೇಗೆ?
- ರವಿವಾರ ಬೆಳಗ್ಗೆಯಿಂದ ಶೋಧ ಶುರು

- ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ, ರಾತ್ರಿ ಶೋಧ ಸ್ಥಗಿತ

- ಕಾಪ್ಟರ್‌, ಹಡಗು ಸಂಚಾರಕ್ಕೆ ಸಮಸ್ಯೆ; ಯುದ್ಧವಿಮಾನ ಬಳಸಿ ಶೋಧ

- ಮಂಗಳವಾರ ಜಾವಾ ಸಮುದ್ರದಲ್ಲಿ ತೇಲುವ ವಸ್ತುಗಳು ಗೋಚರ

- ಅದು ಕಾಣೆಯಾದ ಏರ್‌ಏಶ್ಯಾದ ಅವಶೇಷ ಎಂದು ದೃಢ

Trending videos

Back to Top