CONNECT WITH US  

'ಸ್ಕ್ಯಾಮ್‌ ಇಂಡಿಯಾ' ಬದಲು 'ಸ್ಕಿಲ್‌ ಇಂಡಿಯಾ': ಮೋದಿ

ಟೋರಂಟೊ : ಕೆನಡ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ತಮ್ಮ 10 ತಿಂಗಳ ಸಾಧನೆ ವಿವರಿಸಲು ಮತ್ತು ಹಿಂದಿನ ಯುಪಿಎ ಸರಕಾರವನ್ನು ಪರೋಕ್ಷವಾಗಿ ಟೀಕಿಸಲು ಮೀಸಲಿರಿಸಿದ್ದಾರೆ. 'ಹಿಂದಿನವರು (ಯುಪಿಎ) ಕೂಡಿಟ್ಟ ಕೊಳೆಯನ್ನು ತೊಳೆಯಲು ನಾನು ಬಂದಿದ್ದೇನೆ' ಎಂದು ವಾಗ್ಬಾಣ ಬಿಟ್ಟಿರುವ ಮೋದಿ, ಭಾರತಕ್ಕಿದ್ದ 'ಸ್ಕ್ಯಾಮ್‌ ಇಂಡಿಯಾ' ಹಣೆಪಟ್ಟಿಯನ್ನು ಕಳಚಿ 'ಸ್ಕಿಲ್‌ ಇಂಡಿಯಾ' ಎಂದು ಮಾಡುವೆ ಎಂಬ ಪಣ ತೊಟ್ಟಿದ್ದಾರೆ.

'ಭಾರತದ ಎಲ್ಲ ಸಮಸ್ಯೆಗಳಿಗೂ ಅಭಿವೃದ್ಧಿಯೊಂದೇ ಔಷಧ' ಎಂದು ಪ್ರತಿಪಾದಿಸಿರುವ ಮೋದಿ, ಕೆನಡದಲ್ಲಿರುವ ಅನಿವಾಸಿ ಭಾರತೀಯರು, ತಮ್ಮ ಕೌಶಲ್ಯ ಮತ್ತು ಅನುಭವವನ್ನು ಧಾರೆ ಎರೆಯುವ ಮೂಲಕ ಭಾರತದ ಅಭಿವೃದ್ಧಿಗೆ ಕಾಣಿಕೆ ನೀಡಬೇಕು ಎಂದು ಕರೆ ನೀಡಿದ್ದಾರೆ.  ಅಮೆರಿಕದ ಮ್ಯಾಡಿಸನ್‌ ಸ್ಕ್ವೇರ್‌ ರೀತಿ ಬುಧವಾರ 10 ಸಾವಿರ ಅನಿವಾಸಿ ಭಾರತೀಯರು ನೆರೆದಿದ್ದ ಸಮಾರಂಭದಲ್ಲಿ ಭಾರಿ ಕರತಾಡನದ ಮಧ್ಯೆ ಟೊರಂಟೋದಲ್ಲೂ ತಮ್ಮ ವಾಕ್‌ಚಾತುರ್ಯದ ಮೂಲಕ ಗಮನ ಸೆಳೆದರು.

ಕೆನಡಾ ಪ್ರಧಾನಿ ಸ್ಟೀಫ‌ನ್‌ ಹಾರ್ಪರ್‌ ಮತ್ತು ಅವರ ಪತ್ನಿಯ ಸಮ್ಮುಖದಲ್ಲೇ ಮಾತನಾಡಿದ ಮೋದಿ, "ಭಾರತದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಮನೋಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಜನರಲ್ಲಿ ನಂಬಿಕೆ ಮನೆಮಾಡಿದೆ. ಈ ಹಿಂದಿನ ಸರಕಾರಗಳು ಸೃಷ್ಟಿಸಿದ್ದ ಗೊಂದಲವನ್ನು ಸರಿಗೊಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಈ ಹಿಂದೆ ಆಡಳಿತ ನಡೆಸುತ್ತಿದ್ದವರು, ಏನೆಲ್ಲಾ ಅನರ್ಥ ಮಾಡಬೇಕೋ ಅದನ್ನೆಲ್ಲಾ ಮಾಡಿ ಹೋದರು. ಇದೀಗ ನಾವು ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ' ಎಂದರು.

ಸ್ಮಾರಕ, ಮಂದಿರ ಭೇಟಿ : ಗುರುವಾರ ರಾತ್ರಿ ಮೋದಿ, ಕೆನಡಾದ ಏರ್‌ ಇಂಡಿಯಾ ವಿಮಾನ ದುರಂತ ಸ್ಮಾರಕ, ಲಕ್ಷ್ಮೀನಾರಾಯಣ ಮಂದಿರ, ಗುರುದ್ವಾರಗಳನ್ನು ಸಂದರ್ಶಿಸಿದರು.

Trending videos

Back to Top