CONNECT WITH US  

ಸಿರಿಯಾದಲ್ಲೀಗ ಬ್ಯಾರಲ್‌ ಬಾಂಬ್‌ಗಳ ಸದ್ದು!

ಅಲೆಪ್ಪೊ: 1990ರ ದಶಕದ ಕ್ರೊವೇಷಿಯಾ ಯುದ್ಧ ಮತ್ತು ಸೂಡಾನ್‌ ಯುದ್ಧದಲ್ಲಿ ಕುಖ್ಯಾತಿ ಪಡೆದಿದ್ದ "ಬ್ಯಾರಲ್‌ ಬಾಂಬ್‌'ಗಳು ಈಗ ಯುದ್ಧಪೀಡಿತ ಸಿರಿಯಾದಲ್ಲಿ ಮತ್ತೆ ಸದ್ದು ಮಾಡುತ್ತ ಅಮಾಯಕ ನಾಗರಿಕರ ಬಲಿ ಪಡೆಯುತ್ತಿವೆ.

ಸಿರಿಯಾದ ಅಲೆಪ್ಪೋ ಪ್ರಾಂತ್ಯದ ಇಡ್ಲಿಬ್‌ ಪ್ರದೇಶದಲ್ಲಿ ದೇಶದ ಅಧ್ಯಕ್ಷರ ಸೇನಾ ಪಡೆಯು, ಸರ್ಕಾರಕ್ಕೆ ಸೇರಿದ ಹೆಲಿಕಾಪ್ಟರ್‌ ಬಳಸಿ ಬ್ಯಾರಲ್‌ ಬಾಂಬ್‌ ದಾಳಿ ನಡೆಸಿದ ಪರಿಣಾಮ 71 ನಾಗರಿಕರು ಮೃತಪಟ್ಟಿದ್ದಾರೆ.

ಐಸಿಸ್‌ ಬಂಡುಕೋರರು ಮತ್ತು ಅಲ್‌ ಖೈದಾಉಗ್ರರು ಇಡ್ಲಿಬ್‌ ಪ್ರದೇಶದ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದರಿಂದ ಸರ್ಕಾರಿ ಪಡೆ ಈ ಪ್ರತಿದಾಳಿ ಮಾಡಿದೆ ಎಂದು ಹೇಳಲಾಗಿದೆ.

"ಅಲೆಪ್ಪೋ ಪ್ರಾಂತ್ಯದ ಅಲ್‌-ಅಬ್‌, ಅಲ್‌-ಶಾರ್‌ ಮೇಲೆ ನಡೆದ ಬ್ಯಾರಲ್‌ ಸ್ಫೋಟದಿಂದ 71 ನಾಗರಿಕರು ಸಾವನ್ನಪ್ಪಿ 12ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ, ಮೃತರಲ್ಲಿ ಬಹುತೇಕರು ರಸ್ತೆಯಲ್ಲಿದ್ದ ಪುರುಷರು. ಏಕೆಂದರೆ ದೇಶದಲ್ಲಿ ಮಹಿಳೆಯರು ಹೊರಗೆ ಓಡಾಡುವುದೇ ಕಮ್ಮಿ. ಸ್ಫೋಟದಲ್ಲಿ ಹಲವಾರು ಕಟ್ಟಡಗಳಿಗೂ ಹಾನಿಯಾಗಿದೆ' ಎಂದು ಸಿರಿಯಾದ ಮಾನವ ಹಕ್ಕುಗಳ ಪರಿವೀಕ್ಷಣಾಲಯ ತಿಳಿಸಿದೆ. ಭಾರಿ ಜನರ ಸಾವಿಗೆ ಕಾರಣವಾಗುವ ಇಂಥ ಬ್ಯಾರಲ್‌ ಬಾಂಬ್‌ ಬಳಕೆಗೆ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ.

ಸಿರಿಯಾದಲ್ಲಿ ಅಧ್ಯಕ್ಷ ಬಶರ್‌ ಅಲ್‌ ಅಸಾದ್‌ ಆಡಳಿತ ವಿರೋಧಿಸಿ ಐಸಿಸ್‌ ಮತ್ತು ಅಲ್‌ ಖೈದಾ ಉಗ್ರರು ಅಲೆಪ್ಪೋ ಸೇರಿದಂತೆ ಹಲ ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅನೇಕ ವರ್ಷಗಳಿಂದ ಇವುಗಳ ಮರುವಶಕ್ಕೆ ಅಸಾದ್‌ ನಿಷ್ಠ ಸೇನೆ ಹೋರಾಡುತ್ತಿದೆ.

ಅಸಾದ್‌ ಆಡಳಿತದ ಮೇಲೆ ನಿಷೇಧಿತ ರಾಸಾಯನಿಕ ದಾಳಿ ನಡೆಸಿದ ಆರೋಪವೂ ಇದ್ದು, ತನ್ನ ಆಡಳಿತ ವಿರೋಧಿಸುವ ನಾಗರಿಕರನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲುವ ಕುಖ್ಯಾತಿ ಪಡೆದಿದೆ.

ಏನಿದು ಬ್ಯಾರಲ್‌ ಬಾಂಬ್‌?
ಅನಿಲ ಸಿಲಿಂಡರ್‌, ತೈಲ ಸಿಲಿಂಡರ್‌, ನೀರಿನ ಟ್ಯಾಂಕ್‌ಗಳಿಗೆ ಕಚ್ಚಾ ಸ್ಫೋಟಕ, ಕಬ್ಬಿಣ ಅಥವಾ ಇತರ ಲೋಹಗಳ ತುಣುಕುಗಳನ್ನು ತುಂಬಿ, ಬಿಗಿಯಾಗಿ ಸೀಲ್‌ ಮಾಡಿರುತ್ತಾರೆ. ಇವುಗಳನ್ನು ಹೆಲಿಕಾಪ್ಟರ್‌ ಬಳಸಿ ಎತ್ತರದಿಂದ ಬಿಸಾಡಲಾಗುತ್ತದೆ. ನೆಲದ ಮೇಲೆ ಬಿದ್ದೊಡನೆ ಈ ಬ್ಯಾರಲ್‌ಗ‌ಳು ಸ್ಫೋಟಗೊಳ್ಳುತ್ತವೆ. ಭಾರಿ ಪ್ರಮಾಣದ ಸ್ಫೋಟಕಗಳು ಇವುಗಳಲ್ಲಿ ಇರುವ ಕಾರಣ ಸಾವುನೋವಿನ ಪ್ರಮಾಣ ಹೆಚ್ಚಾಗುತ್ತದೆ. ಆದರೆ ವಿಶ್ವಸಂಸ್ಥೆ ನಿಯಮಗಳ ಪ್ರಕಾರ ನಾಗರಿಕ ಸ್ಥಳಗಳಲ್ಲಿ ಇವುಗಳ ಬಳಕೆ ನಿಷಿದ್ಧವಿದೆ.

Trending videos

Back to Top