CONNECT WITH US  

ಜಾತಕ ಫ‌ಲ : ಅಗಸ್ಟ್‌29

   ಮೇಲಿನ ಮನೆ ರಂಗನಾಥ, ಹಾಸನ

  ನನ್ನ ಪತ್ನಿ ಮತ್ತು ಮಕ್ಕಳ ಜಾತಕ ಕಳುಹಿಸಿದ್ದೇನೆ. ನನ್ನ ಹುಟ್ಟಿನ ವಿವರಗಳನ್ನು ಇಟ್ಟಿದ್ದೇನೆ. ಹೊಸ ಮನೆಯನ್ನು ಕಟ್ಟಿದ್ದೇವೆ . ಎಲ್ಲಾ ರೀತಿಯ ವಾಸ್ತು ಪೂಜೆಗಳನ್ನು, ಇತರ ಶಾಂತಿಗಳನ್ನು ಪೂರೈಸಿ ಮನೆ ಪ್ರವೇಶವನ್ನು ಮಾಡಿದ್ದೇವೆ. ರಾತ್ರಿ ಹೊತ್ತು ಒಂದು ಕೈ ಕಿಟಕಿಯ ಮೂಲಕ ಮನೆಯ ಒಳಗೆ ಬಂದು ಒಮ್ಮೆ ನಮ್ಮೆಲ್ಲರ ನಿದ್ದೆ ಕೆಡಿಸಿದ ಅನುಭವ ನನಗೂ ಆಯ್ತು. ಪತ್ನಿ, ಮಕ್ಕಳಿಗೂ ಆಯ್ತು. ಆಗಾಗ ಈ ಅನುಭವ ನಮಗೆಲ್ಲಾ ಆಗುತ್ತಿದೆ. ಒಬ್ಬೊಬ್ಬರಿಗೇ ಅನುಭವಕ್ಕೂ ಬೇರೆ, ಬೇರೆ ದಿನ ಬರುವುದೂ ಇದೆ. ಇದೇನು ಭೂತ ಚೇಷ್ಟೆಯೇ? ವಿಜ್ಞಾನದ ಯುಗದಲ್ಲಿ ಇದೆಂಥದು ಎಂಬುದು ಆಶ್ಚರ್ಯ ತಂದಿದೆ. ಹೆದರಿಕೆ ಇದೆ. ತೊಂದರೆ ಆದೀತೇ? ಮನೆಯಲ್ಲಿಯೇ ರೋಷ ಇದೆಯೆ? ಪರಿಹಾರ ಏನು ಎಂಬುದನ್ನು ತಿಳಿಸಿ. 

  ನಿಮ್ಮಲ್ಲರ ಜಾತಕಗಳನ್ನು ಪರಿಶೀಲಿಸಿ ನೋಡಿದಾಗ ಭೂತ, ಪ್ರೇತಗಳ ವಿಚಾರವಾದ ಭಯ ಬೇಕಾಗಿಲ್ಲ. ಮನೆಯಲ್ಲಿ ಎಲ್ಲರೂ ಪ್ರತಿ ದಿನ ಶ್ರೀ ಲಲಿತಾ ತ್ರಿಶತ ನಮಾವಳಿ ಸ್ತೋತ್ರ ಪಠಿಸಿ. ದೇವಿಯ ಮೂರ್ತಿ ಎದುರ ಮನೆಯ ದೇವರ ಮಂಟಪದಲ್ಲಿ ಪ್ರತಿ ದಿನ ಲವಂಗದ ಎರಡು ಎಸಳಿಡಿ. ಚಿಕ್ಕ ಕರ್ಪೂರದ ತುಂಡು ಲಂಗದ ಜೊತೆಗಿರಲಿ. ಲವಂಗ ಮತ್ತು ಕರ್ಪೂರವನ್ನು 21 ದಿನ ಇಡಿ. ನಂತರ ತೆಂಗಿನ ಮರದ ಬುಡದಲ್ಲಿ ಅದನ್ನು ಹುಗಿದು ಬಿಡಿ. ಪ್ರತಿ ದಿನ ಲಲಿತಾ ತ್ರಿಶತ ನಾಮಾವಳಿ ಮುಂದುವರಿಸಿ. ಬಾಧೆಗೆ ತಡೆ ಸಾಧ್ಯ.

 ಕೃಷ್ಣಕುಮಾರಿ ರಂಗರಾಜ, ತಿಪಟೂರು

 ನಮಗೆ ಏಳ್ಗೆ ಎಂಬುದೇ ಇಲ್ಲ ಗುರೂಜಿ. ದಿನ ನಿತ್ಯ ಮನೆಯಲ್ಲಿ ಜಗಳ, ಕದನ ಕೋಲಾಹಲ. ನಮ್ಮ (ಗಂಡ ಹೆಂಡತಿ) ಜಾತಕಗಳಿಲ್ಲ. ಮಕ್ಕಳ ಜಾತಕಗಳನ್ನು ಕಳುಹಿಸಿದ್ದೇನೆ. ಶಾಂತಿ ನೆಲೆಸೀತೆ? ಒಳ್ಳೆಯದಕ್ಕೆ ಎಡೆ ಇದೆಯೇ? ಪಿತೃದೋಷ ಎನ್ನುತ್ತಿದ್ದಾರೆ, ಹೌದೇ?

    ಪಿತೃದೋಷ ಮಕ್ಕಳ ಜಾತಕದಲ್ಲಿ ಇಲ್ಲ. ಪ್ರತಿ ದಿನ ಮಕ್ಕಳು ಶ್ರೀ ಗಣಪತಿ ಅಥರ್ವಶೀರ್ಷ ಮಂತ್ರ ಭಾಗ ಪಠಿಸಲಿ. ನೀವು ಗಂಡ ಹೆಂಡತಿ ಶ್ರೀ ರಾಮ ರûಾಸ್ತೋತ್ರ ಓದಿ. ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಪ್ರತಿ ದಿನ ದೇವಿ ಸಪ್ತ ಶತಿ ಸಿಡಿಯನ್ನು ಪೂರ್ತಿ ಎಲ್ಲರಿಗೂ ಕೇಳುವಂತೆ ಮಂತ್ರ ಮೊಳಗಲಿ. ಅಪರೂಪದ್ದಾದ ಉತ್ತಮ ಶಾಂತಿ, ಸಹನೆಗೆ ದಾರಿ ಕೂಡಿಬರುತ್ತದೆ. ಇದನ್ನು ಬಿಡದೆ ನೆರವೇರಿಸಿ. 

 ವಿಠಲ ಜನ್ನು, ಯಲ್ಲಾಪುರ

  ನನ್ನ ಒಬ್ಬನೇ ಮಗ ಹೊರ ದೇಶದಲ್ಲಿದ್ದಾನೆ. ಉತ್ತಮ ಕೆಲಸ, ಸಂಬಳ ಎಲ್ಲಾ ಇದೆ. ಸುಖವಾಗಿದ್ದಾನೆ. ಪತ್ನಿಯ (ನಮ್ಮ ಸೊಸೆ) ಜೊತೆ ಜಗಳವಾದಾಗ ನಾನು ಕೆಲಸ ಬಿಟ್ಟು ವಾಪಸು ಬಂದು ಬಿಡುತ್ತೇನೆ ಎಂದು ರೋಸಿದ ಧ್ವನಿಯಲ್ಲಿ ಹೇಳುತ್ತಾನೆ ಆಗಾಗ. ಆಕೆಯೂ ಅತ್ತು ನನಗೆ ಸಾಕಾಗಿದೆ. ಎಷ್ಟೇ ಅಚ್ಚುಕಟ್ಟುತನದಲ್ಲಿದ್ದರೂ ರೇಗುತ್ತಾರೆ ಎಂಬ ಆರೋಪ ಹೊರಿಸುತ್ತಾಳೆ. ಪರಿಹಾರ ಏನು?

  ಮಗ, ಸೊಸೆ ಇಬ್ಬರೂ ಒಳ್ಳೆಯವರೇ. ಆದರೆ ವಿಧಿ ಇಬ್ಬರಿಗೂ ಮುಖ್ಯವಾದ ಶಾಂತಿ ಸಮಾಧಾನಗಳನ್ನು ಕೊಂಚ ಕೆಡಿಸಿದೆ. ರವಿ ಬುಧ ಸಂಯೋಜನೆ ಮಗನನ್ನು ಉತ್ತಮ ಬುದ್ಧಿ ಸಕ್ತಿಯ ನೆರವಿನಿಂದ ಅಗಾಧ ಎತ್ತರದಲ್ಲಿಟ್ಟರೂ, ಕೆಲಸದ ಸ್ಥಳದಲ್ಲಿ ಒತ್ತಡ ತಂದಿಡುತ್ತಿದೆ. ಸೊಸೆಯ ಸಂದರ್ಭದಲ್ಲಿ ಜನಮ್ಮ ಭಾವದಲ್ಲಿನ ಸೂರ್ಯ  ಸರ್ರನೆ ತುಸು ಅಸಹನೆಯನ್ನು ತರುತ್ತಿದ್ದಾನೆ. ಕೊಂಚವಾದರೂ ಸ್ವನಿಯಂತ್ರಣ ಇಬ್ಬರಲ್ಲೂ ಇದ್ದರೆ ಕ್ಷೇಮ. ಮಗನು ಪ್ರತಿ ದಿನ ಶಿವನ ಸಹಸ್ರ ನಾಮಾವಳಿ ಓದಲಿ. ಸೊಸೆಯು ಪ್ರತಿ ದಿನ ಶ್ರೀ ದೇವಿ ದುರ್ಗಾ ಅಷ್ಟೋತ್ತರ, ಶ್ಯಾಮಲಾಷ್ಟಕ ಓದಲಿ. ನಿಯಂತ್ರಣ ಸಾಧ್ಯ. 


Trending videos

Back to Top