CONNECT WITH US  

ನಮಗೆ ಬೇಕಿದೆ ಐಕ್ಯತೆ-ಸಮಾನತೆ ಶಿಕ್ಷಣ

ದಾವಣಗೆರೆ: ಇಂದಿನ ನಮ್ಮ ಶಿಕ್ಷಣ ಛಿದ್ರಗೊಂಡಿರುವ ಭಾರತವನ್ನು ಮತ್ತಷ್ಟು ಛಿದ್ರಗೊಳಿಸುವಂತಿದೆ. ಆದರೆ, ನಮಗೆ ಬೇಕಿರುವುದು ಐಕ್ಯತಾ ಸಮಾನತೆ ಶಿಕ್ಷಣ
ಎಂದು ಸಾಹಿತಿ, ಚಿಂತಕ ದೇವನೂರು ಮಹಾದೇವ ಅಭಿಪ್ರಾಯಪಟ್ಟಿದ್ದಾರೆ.

ಮಾನವ ಬಂಧುತ್ವ ವೇದಿಕೆ ನಗರದ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಆಯೋಜಿಸಿರುವ 2 ದಿನಗಳ ದಲಿತೋತ್ಸವ-2015 ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಶಿಕ್ಷಣ ಪದ್ಧತಿಯೇ 
ತಾರತಮ್ಯದಿಂದ ಕೂಡಿದೆ. ಪಂಚವರ್ಣ, ಪಂಕ್ತಿಬೇಧದ ಶಿಕ್ಷಣದ ಬದಲು ಸಮಾನ ಶಿಕ್ಷಣ ಬೇಕಿದೆ. ನಮ್ಮಲ್ಲಿ ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ಆದರೆ, ಸಾವಿತ್ರಿಬಾಯಿ ಜಯಂತಿಯಂದು ಸಮಾನ ಶಿಕ್ಷಣ ದಿನ ಆಚರಿಸಬೇಕಿದೆ ಎಂದರು. 

ವಿಚಿತ್ರವೆಂದರೆ ನಮ್ಮ ರೈತ, ದಲಿತ, ಮಹಿಳಾ ಸಂಘಟನೆಗಳು ಬರೀ ಪ್ರತಿಕ್ರಿಯೆ ತೋರುತ್ತಾ ಸುಸ್ತಾಗಿ, ತೆವಳುತ್ತಾ ಸಾಗುತ್ತಿವೆ. ಅವು ಕ್ರಿಯೆ ಹಿಡಿದು ಸಮಾನ,  ಮಾತೃಭಾಷಾ ಶಿಕ್ಷಣಕ್ಕಾಗಿ ಹೆಜ್ಜೆ ಇಟ್ಟಲ್ಲಿ ಆ ಹೆಜ್ಜೆ ಯಾವ ದಿಕ್ಕಿನಡೆ ಸಾಗಬಹುದು ಎಂಬುದನ್ನು ತೋರಿಸಬಹುದು ಎಂದು ಹೇಳಿದರು.

ಭಾರತ ಜಟಿಲವಾದ ದೇಶ. ಜಗತ್ತಿನ ಯಾವ ಕಡೆಯೂ ಸಹ ಇಂಥ ಜಟಿಲತೆ ಕಾಣಸಿಗದು.
1857ರ ಸಿಪಾಯಿದಂಗೆಯನ್ನು ಪ್ರಥಮ ಸ್ವಾತಂತ್ರ ಸಂಗ್ರಾಮವೆಂದು ಚರಿತ್ರೆಯಲ್ಲಿ ಓದುತ್ತೇವೆ. ಆ ಸಂಗ್ರಾಮ ಕೆಳ ಸಮುದಾಯದ ಎಚ್ಚೆತ್ತ ಮನಸ್ಸುಗಳಿಗೆ
ಏನನಿಸುತ್ತದೆ ಎಂಬುದನ್ನ ಅರ್ಥಮಾಡಿಕೊಂಡಲ್ಲಿ ಇಡೀ ಭಾರತವನ್ನೇ ಅರ್ಥಮಾಡಿಕೊಂಡಂತೆ. ಜ್ಯೋತಿ ಬಾಪುಲೆ ಆ ಕಾಲದ ಎಚ್ಚೆತ್ತ ಮನಸ್ಸಿನ ಅನ್ನದ ಅಗಳು.
ಭಾರತದಲ್ಲಿ ವಿವೇಚನೆ, ಸರಳತೆ ಹಾಗೂ ಕೌರ್ಯ ಮೂರು ಒಟ್ಟಿಗೆ ಇವೆ. ನಾವು ಕೌರ್ಯರಹಿತ ಸಮಾಜ ಕಟ್ಟುವ ಬಗ್ಗೆ ಯೋಚಿಸಬೇಕಿದೆ. ಮಹಾ ಎಂಬ ಪದ ಒಂದೆಡೆ ಪಾತಾಳದ ಮತ್ತೂಂದೆಡೆ ಮೇಲಕ್ಕೇರಿದ ಸ್ಥಿತಿ ಹೇಳುತ್ತಿದೆ. ಈ ಸ್ಥಿತಿ ನಮ್ಮ ದೇಶ ಅರ್ಥಮಾಡಿಕೊಳ್ಳಲು ದಿಕ್ಸೂಚಿ ಎಂದು ಹೇಳಿದರು. 

ಇಂದು ಶಾಲೆಗಳಲ್ಲಿನ ಡೋನೆಶನ್‌ ವಿರುದ್ಧ ಯಾರೂ ಚಕಾರ ಎತ್ತುತ್ತಿಲ್ಲ. ಸುಳ್ಳು ಜಾತಿ ಪತ್ರ ಸಲ್ಲಿಸಿ ದಲಿತರಿಗೆ ಆಗತ್ತಿರುವ ಅನ್ಯಾಯದ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಜಾತಿಯ ಟೌನ್‌ಶಿಪ್‌ಗ್ಳು ನಿರ್ಮಾಣವಾಗುತ್ತಿದ್ದರೂ ಯಾರೂ ಬೆಚ್ಚಿ ಬೀಳುತ್ತಿಲ್ಲ. ಇದೆಲ್ಲವೂ ಸಹಜ ಎಂಬಂತೆ ಭಾವಿಸಿದ್ದಾರೆ.  

ಭಾರತದಲ್ಲಿ ವಂಚನೆ ಮಾಡುವುದೇ ಪ್ರತಿಭೆ ಹಾಗೂ ಬುದ್ದಿವಂತಿಕೆ ಎನ್ನುವಂತಾಗಿದೆ. ಖಾಸಗಿ ಕ್ಷೇತ್ರದಲ್ಲಿನ ಮೀಸಲಾತಿಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಮುಖ್ಯವಾಗಿ ಆದ್ಯತಾ ಅಂಕ ಪದ್ಧತಿ ಜಾರಿಗೊಳಿಸಬೇಕಿದೆ ಎಂದು ಒತ್ತಾಯಿಸಿದರು.
1857ರ ಸಿಪಾಯಿದಂಗೆ ಕಾರಣ ಈಗಲೂ ದೇಶದಲ್ಲಿ ಇದೆ. ಪ್ರಸ್ತುತ ಪ್ರಜ್ಞಾಹೀನ ಮಾಂಸದ ಮುದ್ದೆಗಳಂತಿರುವ ಮನುಷ್ಯರು ತಮ್ಮನ್ನು ತಾವು ಕೊಂದುಕೊಳ್ಳುವ ಮನಸ್ಥಿತಿಯಲ್ಲಿದ್ದಾರೆ. ಇಲ್ಲಿ ಮನುಷ್ಯರು ಯಾರು? ದನ-ಹಂದಿಗಳಾರು ಎಂಬುದು ತಮಗೆ ಇನ್ನೂ ಅರ್ಥವಾಗಿಲ್ಲ. ಎಲ್ಲರೂ ತಮ್ಮ ತಮ್ಮ ಧರ್ಮ ಧ್ವಂಸ ಮಾಡಿಕೊಳ್ಳುತ್ತಿದ್ದಾರೆ ಎಂದು 
ವಿಷಾದಿಸಿದರು. 

ಮಾನವ ಬಂಧುತ್ವ ವೇದಿಕೆ ಉದ್ದೇಶ ಹಾಗೂ ಆಶಯ ಕುರಿತು ಮಾತನಾಡಿದ ಬೆಳಗಾವಿಯ ರಾಣಿ ಚೆನ್ನಮ್ಮಾ ವಿವಿ ಕುಲಸಚಿವ ಡಾ|ರಂಗರಾಜ ವನದುರ್ಗ, ಎಲ್ಲ ಇಲ್ಲಗಳ ಕಾರಣಕ್ಕಾಗಿ ನಾವಿಲ್ಲಿ ಸೇರಿದ್ದೇವೆ. ನಮಗೆ ಬದುಕು ಬಸವಣ್ಣ, ಬೆಳಕು ಅಂಬೇಡ್ಕರ್‌. ಎರಡನ್ನೂ ಆಧರಿಸಿ ಹೊಸ ಆಲೋಚನೆ ನಡೆಸಬೇಕಿದೆ. ಭಕ್ತ, ಭಂಡಾರಿ ಹಾಗೂ ಬಂಡಾಯ ಈ ಮೂರು ವ್ಯಕ್ತಿತ್ವದಲ್ಲಿ ಬಸವಣ್ಣನನ್ನು ಕಾಣಬಹುದು. ಭಕ್ತ ಬಸವಣ್ಣನ ಬಗ್ಗೆ ಮಾತನಾಡಲು ಮಠಗಳಿವೆ. ಭಂಡಾರಿ ಬಸವಣ್ಣನ ಬಗ್ಗೆ ಮಾತನಾಡಲು ವೃತ್ತಗಳಿವೆ. ಆದರೆ, ಬಂಡಾಯದ ಬಸವಣ್ಣನ ಕುರಿತು ಮಾತನಾಡಿದರೆ ಬಂದೂಕು ಮಾತನಾಡಲಿದೆ ಎಂದರು.

ಜನರ ಮಧ್ಯೆ ಹುಟ್ಟುವ ಚಳವಳಿ ನಾಯಕರ ಮಧ್ಯೆ ಸೀಳುತ್ತಿವೆ. ಭೂಮಿಯೊಂದಿಗೆ ಅವಿನಾಬಾವ ಸಂಬಂಧ ಹೊಂದಿದ ರೈತರನ್ನು ಲ್ಯಾಂಡ್‌ ಡೆವಲಪರ್ ಎಂಬುದಾಗಿ ಕರೆಯದೇ ಭೂಮಿತುಂಡು ಮಾಡಿ ಮಾರುವ ಮಂದಿಗೆ ಆ ಹೆಸರಿಂದ ಕರೆಯುವಂತಾಗಿದೆ.
ಕೆಳಸಮುದಾಯದ ಆದಾಯದ ಮೂಲಗಳು ಕಣ್ಮರೆಯಾಗಿವೆ. ಆ ಕಸುಬುಗಳೇ ನಮ್ಮ ಸಾಂಸ್ಕೃತಿಕ ಸಂಪತ್ತಿನ ಚಿಹ್ನೆ . ಆ ಸಂಸ್ಕೃತಿ ಚಿಹ್ನೆಗಳನ್ನೊಳಗೊಂಡ ಪವರ್‌ ಪಾಲಿಟಿಕ್ಸ್‌ ಮಾಡಬೇಕಿದೆ ಎಂದರು.

ಚಿತ್ರನಟ ಚೇತನ್‌ ಮಾತನಾಡಿ, ನಮ್ಮಲ್ಲಿ ಸ್ವತ್ಛಭಾರತ್‌ ಅಂದೋಲನ ನಡೆದಿದೆ. ಆದರೆ, 
ಮೊದಲು ಕಣ್ಣಿಗೆ ಕಾಣದ ಕಸದ ನಿರ್ಮೂಲನೆಗೆ ಸಮಾಜ ಮುಂದಾಗಬೇಕಿದೆ. ದಲಿತ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ವರದಿ ಆಗುತ್ತಿಲ್ಲ. ದಲಿತ ಸಮುದಾಯದ ಮುಖ್ಯಮಂತ್ರಿಗಿಂತ ದಲಿತರ ಬಗ್ಗೆ ಕಾಳಜಿ ಹೊಂದಿದ ಮುಖ್ಯಮಂತ್ರಿ
ಬೇಕಿದೆ ಎಂದರು. 

ತುಮಕೂರು ವಿವಿ ಪ್ರಾಧ್ಯಾಪಕ ಡಾ| ಕೆ.ಬಿ.ಸಿದ್ದಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಮಾನತೆ, ಜಾತ್ಯತೀತತೆ ರೂಢಿಸಿಕೊಂಡು ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಬೇಕು. ಅಂತರ್ಜಾತಿ ವಿವಾಹವಾಗುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆ ರೂವಾರಿ, ಸಣ್ಣ ಕೈಗಾರಿಕಾ ಸಚಿವ ಸತೀಶ್‌ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಯಶೋಧ, ದಲಿತ ಸೇನಾ ರಾಜ್ಯಾಧ್ಯಕ್ಷ ಜಗನ್ನಾಥ್‌, ದಾವಣಗೆರೆಯ ಎಚ್‌.ಕೆ.ಬಸವರಾಜ್‌ ವೇದಿಕೆಯಲ್ಲಿದ್ದರು.
 
ಕಾರ್ಯಕ್ರಮದಲ್ಲಿ ಕೋಲಾರದ ಮುನಿಯಪ್ಪಗೆ ಪ್ರೊ.ಬಿ.ಕೃಷ್ಣಪ್ಪ, ಕೊಪ್ಪಳದ ಹುಚ್ಚಮ್ಮ ಚೌದ್ರಿಗೆ ಸಾವಿತ್ರಿಬಾಯಿ, ಕೋಟಿಗಾನ ಹಳ್ಳಿ ರಾಮಯ್ಯಗೆ ಸಪªರ್‌ ಹಶ್ಮಿ, ಮಂಗಳೂರಿಗನ  ಪ್ರೊ.ನರೇಂದ್ರ ನಾಯಕ್‌ ಗೆ ಪೆರಿಯಾರ್‌ ರಾಮಸ್ವಾಮಿ ನಾಯಕರ್‌ ಹಾಗೂ ಕೋಮು ಸೌಹಾರ್ದ ವೇದಿಕೆಗೆ ಮಾನವ ಬಂಧುತ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜತೆಗೆ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಸ್ಸಿ-ಎಸ್ಟಿ ಸಮುದಾಯ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಉಪನ್ಯಾಸಕ ಎ.ಬಿ. ರಾಮಚಂದ್ರಪ್ಪ ಸ್ವಾಗತಿಸಿದರು. ಮಾನವ ಬಂಧುತ್ವ ವೇದಿಕೆಯ ವಿಲ್‌ಫ್ರೆಡ್‌ ಡಿ ಸೋಜಾ
ನಿರೂಪಿಸಿದರು.

ಮೂಢನಂಬಿಕೆ ಬಿಡಿ
ರಾಜ್ಯದ ಜನರ ಗಮನ ಸೆಳೆಯುವ ಹಾಗೂ ಶೋಷಿತರನ್ನು ಒಂದೇ ವೇದಿಕೆಯಡಿ
ಒಗ್ಗೂಡಿಸುವ ಸಲುವಾಗಿ ದಲಿತೋತ್ಸವ ಆಯೋಜಿಸಲಾಗಿದೆ. ನಮಗೆ ಶಿಕ್ಷಣ ಸಿಕ್ಕಿದೆ. 
ಆದರೆ, ಸಂಘಟನೆ ಸಾಧ್ಯವಾಗಿಲ್ಲ. ನಮಗಾಗಿ ಹೋರಾಡಿದ ಮಹಾನ್‌ ನಾಯಕರ 
ಚಿಂತನೆ-ಆದರ್ಶ ಅರಿಯಬೇಕಿದೆ. ಭವಿಷ್ಯದ ಹೊಸ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಸೈನಿಕರನ್ನಾಗಿ ರೂಪಿಸುವ ಉದ್ದೇಶ ನಮ್ಮದು. ಈ ಪ್ರಯತ್ನದ ಫಲ 10-20 ವರ್ಷಗಳ ನಂತರ ಲಭ್ಯವಾಗಲಿದೆ. ಇನ್ನುಮುಂದೆ ಪ್ರತಿವರ್ಷವೂ ದಾವಣಗೆರೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮುಂದೆ ಅಲ್ಪಸಂಖ್ಯಾತರು, ಹಿಂದಳಿದವರು ಹಾಗೂ ಸಾಮಾನ್ಯ ವರ್ಗ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ವಿಸ್ತರಿಸಲಾಗುವುದು. ದೇವನೂರು ಮಹಾದೇವ ಅವರ ಸಲಹೆಯಂತೆ 
ದಲಿತೋತ್ಸವಕ್ಕಾಗಿ ಹೆಸರಲ್ಲಿ ಕಾರ್ಯಕ್ರಮ ನಡೆಯಲಿದೆ. ನಾವು ಜಾತಿಗೆ ಅಂಟಿಕೊಳ್ಳುವುದು ಸರಿಯಲ್ಲ. ಜಾತ್ರೆ, ಮೂಢನಂಬಿಕೆ-ಧಾರ್ಮಿಕ ಆಚರಣೆಗಳಿಗೆ ಅಪಾರ ಹಣ ವೆಚ್ಚ ಮಾಡುವ ಬದಲು ಆ ಹಣವನ್ನ ಮಕ್ಕಳ ಶಿಕ್ಷಣಕ್ಕಾಗಿ ಬಳಸಿದರೆ ನಾವು ಸಹ ಎಲ್ಲರಂತೆ ಬದುಕಬಹುದು. 
ಸತೀಶ್‌ ಜಾರಕಿಹೊಳಿ, ಮಾನವ ಬಂಧುತ್ವ ವೇದಿಕೆ ರೂವಾರಿ


Trending videos

Back to Top