CONNECT WITH US  

ಜ್ಞಾನಕ್ಕಾಗಿ ಮಾತ್ರ ಮೊಬೈಲ್‌ ಬಳಸಿ: ಪ್ರೊ| ನವಿಲೇಹಾಳ್‌

ದಾವಣಗೆರೆ: ಜ್ಞಾನದ ಜಗತ್ತನ್ನು ಪರಿಚಯಿಸಿಕೊಳ್ಳಲು ಮಾತ್ರ ವಿದ್ಯಾರ್ಥಿಗಳು ಮೊಬೈಲ್‌ ದಾಸರಾಗಬೇಕು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ದಾದಾಪೀರ್‌ ನವಿಲೇಹಾಳ್‌ ಹೇಳಿದ್ದಾರೆ.

ನಗರದ ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿ ಸಂಘದ ಸಮಾರಂಭ ಉದ್ಘಾಟಿಸಿ, ಮಾತನಾಡಿದ ಅವರು, ಈ ಹಿಂದೆಲ್ಲಾ ಜ್ಞಾನ ಪಡೆಯುವುದಕ್ಕಾಗಿಯೇ ಪುಸ್ತಕಗಳನ್ನು ಹುಡುಕಿಕೊಂಡು ಹೋಗುವಂತ ಸ್ಥಿತಿ ಇತ್ತು. ಈಗ ಅಂತಹ ಕಷ್ಟ ಪಡಬೇಕಿಲ್ಲ. ಜಗತ್ತಿನ ಮಾಹಿತಿ ಎಲ್ಲವನ್ನು ಕ್ಷಣಾರ್ಧದಲ್ಲಿಯೇ ಸ್ಮಾರ್ಟ್‌ ಫೋನ್‌ ಬಳಸಿ ಅಂಗೈಯಲ್ಲಿಯೇ ಮಾಹಿತಿ ಕಲೆ ಹಾಕುವಂತಹ ಅವಕಾಶಗಳಿವೆ. ಹಾಗಾಗಿ ಯುವ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮೊಬೈಲ್‌ ಬಳಸಬೇಕು ಎಂದರು.

ಮಡಕೇರಿ, ಕೊಡಗು ಭಾಗಗಳಲ್ಲಿ ಭೂಕುಸಿತ, ಪ್ರವಾಹದ ನೆರೆಹಾವಳಿ ಉಂಟಾದಾಗ ಮೊಬೈಲ್‌ ನಲ್ಲಿನ ಜಿಪಿಎಸ್‌, ಗೂಗಲ್‌ ಮ್ಯಾಪ್‌ ಬಳಸಿ ಮೂಲೆ ಮೂಲೆಯಲ್ಲಿದ್ದ ಜನರನ್ನು ತಲುಪಲು ಸಾಧ್ಯವಾಯಿತು. ಅಲ್ಲಿನ ಎಲ್ಲಾ ಸಮಸ್ಯೆಗಳ ನೈಜ ಚಿತ್ರಣ ಚಿತ್ರೀಕರಿಸಲು ಸಹಕಾರಿಯಾಯಿತು. ಹಾಗಾಗಿ ತಂತ್ರಜ್ಞಾನವನ್ನು ಅಗತ್ಯಕ್ಕನುಸಾರ ಬಳಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪಠ್ಯ ಕೇವಲ ಮಾಹಿತಿ ನೀಡಬಲ್ಲ ಸಾಧನವಷ್ಟೇ, ಆದರೆ ಪಠ್ಯೇತರ ಚಟುವಟಿಕೆ ಪ್ರಕೃತಿ ಹಾಗೂ ನಿತ್ಯ ಜನರ ಬದುಕಿನಲ್ಲಿ ನಡೆಯುವ ಎಲ್ಲಾ ರೀತಿಯ ಸಂಗತಿಗಳನ್ನು ಪರಿಚಯಿಸಿ ಜೀವನದ ಪಾಠ ಕಲಿಸುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌, ಎನ್‌ಸಿಸಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು
ಸಲಹೆ ನೀಡಿದರು.

ಭೂಮಿಗೆ 1,500 ಕೋಟಿ ಜನ ಹೆಚ್ಚಾದರೂ ಕೂಡ ಅವರ ಎಲ್ಲಾ ಆದ್ಯತೆಗಳನ್ನು ನೀಗಿಸಬಲ್ಲ ಶಕ್ತಿ ಇದೆ. ಅಂತಹ ಭೂಮಿ ಮೇಲಿನ ನಿಸರ್ಗದ ಸಂಪತ್ತನ್ನೆಲ್ಲಾ ಮಾನವ ತನ್ನ ದುರಾಸೆಗಾಗಿ ಇಂದು ಬಾಚಿಕೊಳ್ಳುತ್ತಿದ್ದಾನೆ. ಇದು ನಿಜಕ್ಕೂ
ದುರಂತ ಎಂದರಲ್ಲದೇ, ಇಂದಿನ ಯುವ ಪೀಳಿಗೆ ನಿಸರ್ಗದ ಎಲ್ಲಾ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು. 

ಬಿಎಸ್‌ಸಿ ಕಾಲೇಜು ಅಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, 1990ರಲ್ಲಿ ಎವಿಕೆ ಕಾಲೇಜು ಪ್ರಾರಂಭ ಆದಾಗ ಪೋಷಕರು ಮಹಿಳಾ ಕಾಲೇಜಿಗೆ ಮಾತ್ರ ಹೆಣ್ಣು ಮಕ್ಕಳನ್ನು ಕಳಿಸುವ ಸ್ಥಿತಿ ಇತ್ತು. ಅವಕಾಶ ಸಿಗದಿದ್ದಾಗ ಮನೆಯಲ್ಲಿಯೇ ಉಳಿಯುತ್ತಿದ್ದರು. ಇದನ್ನು ಮನಗಂಡು ಎಲ್ಲಾ ವಿದ್ಯಾರ್ಥಿನಿಯರಿಗೂ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ 1991ರಲ್ಲಿ ಈ ಕಾಲೇಜು ಪ್ರಾರಂಭಿಸಲಾಯಿತು ಎಂದು ಕಾಲೇಜ್‌ ಸ್ಥಾಪನೆ ಬಗ್ಗೆ ಹೇಳಿದರು. 

ಇದೇ ವೇಳೆ ವಿವಿಧ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಡಾ| ಕೆ. ಷಣ್ಮುಖ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜು ಟ್ರಸ್ಟ್‌ ಅಧ್ಯಕ್ಷ ಅಥಣಿ ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಜಯಣ್ಣ, ಕನ್ನಿಕಟ್ಟಿ ಜಯಣ್ಣ, ರಾಜಶೇಖರ್‌ ಪಾಲ್ಗೊಂಡಿದ್ದರು.

ದಲಿತ ವಿದ್ಯಾರ್ಥಿಗಳಿಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ವಿಚಾರಧಾರೆಗಳ ಬಗ್ಗೆ ಓದಿಕೊಳ್ಳುತ್ತಾರೆ. ಆದರೆ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಸರಿಯಾಗಿ ಓದಿಕೊಳ್ಳದೇ ಅವರ ಬಗ್ಗೆ ವಿರೋಧ ಮಾಡುತ್ತಿರುವುದು ನಮ್ಮೆಲ್ಲರ
ಕಣ್ಮುಂದಿರುವ ದುರಂತ. 
 ದಾದಾಪೀರ್‌ ನವಿಲೇಹಾಳ್‌, ಸ.ಪ್ರ.ದ.ಮಹಿಳಾ ಕಾಲೇಜು ಪ್ರಾಂಶುಪಾಲ.

Trending videos

Back to Top