CONNECT WITH US  

ಅಲೆಮಾರಿಗಳಿಗೆ ಸಿಕ್ಕಿಲ್ಲ ಸೂರು!

ಹರಪನಹಳ್ಳಿ: ಧಾರಕಾರ ಮಳೆ ಅಥವಾ ಮೈ ಕೊರೆಯುವ ಚಳಿ ಸೇರಿದಂತೆ ಯಾವುದೇ ಕಾಲವಿರಲಿ ಜೋಪಡಿಯೇ ಇವರ ಪಾಲಿನ ಮಹಲ್‌. ಗುಡಿಸಲು ಬಳಿ ಹರಿಯುವ ಚರಂಡಿ ಹಾಗೂ ಮಳೆ ನೀರಿನ ನಡುವೆ ದಯನೀಯ ಸ್ಥಿತಿಯಲ್ಲಿ ಅಲೆಮಾರಿ ಜನಾಂಗದ ಕುಟುಂಬಗಳು ಕಾಲ ಕಳೆಯುತ್ತಿವೆ.

ಹೌದು, ತಾಲೂಕಿನ ಹಲುವಾಗಲು ಗ್ರಾಮದ ಹೊರವಲಯದ ಆಶ್ರಯ ಕಾಲೋನಿಯಲ್ಲಿ ಆಸರೆ ಇಲ್ಲದೇ ಸುಮಾರು 30 ಕುಟುಂಗಳು ಜೀವನ ಸಾಗಿಸುತ್ತಿವೆ. ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ಜೋಪಡಿಗಳಲ್ಲಿ ವಾಸ ಮಾಡುತ್ತಿದ್ದರೂ ಇದುವರೆಗೂ ಇವರಿಗೆ ಶಾಶ್ವತ ಸೂರು ಮರೀಚಿಕೆಯಾಗಿದೆ.
 
ಇವರೆಲ್ಲ ಮೊದಲಿಗೆ ಗ್ರಾಮದ ನಿಟ್ಟೂರು ರಸ್ತೆಯ ಖಾಲಿ ನಿವೇಶನಗಳಲ್ಲಿ ಬಿಡಾರ ಹಾಕಿಕೊಂಡಿದ್ದು, ನಂತರ ಸರ್ಕಾರಿ
ಶಾಲೆ ಬಳಿ, ಇದೀಗ ಆಶ್ರಯ ಕಾಲೋನಿಯಲ್ಲಿ ಅಲೆಮಾರಿ ಕಟುಂಬಗಳು ನೆಲೆಯೂರಿವೆ.

ಆಲೆಮಾರಿಗಳು ದುರ್ಗಿ ದೇವಿಯ ಹೊತ್ತು ಊರೂರು ಅಲೆದು ಭಿಕ್ಷಾಟನೆ ಮಾಡುತ್ತ, ಪಿನ್‌ಗಳನ್ನು ಮಾರಾಟ ಮಾಡುತ್ತ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಶಾಶ್ವತ ಸೂರು ಇಲ್ಲದೇ ಇರುವುದರಿಂದ ಅವರಿಗೆ ಮಳೆಗಾಲ ಎಂದರೆ ಭೀತಿ ಆವರಿಸುತ್ತದೆ. ನಿರಂತರ ಮಳೆಗೆ ಹಲವರ ಜೋಪಡಿಗಳು ನೆಲಸಮವಾಗಿವೆ. ಕೆಲವು ಜೋಪಡಿಗಳಿಗೆ ನೀರು ನುಗ್ಗಿದ್ದು, ದವಸ-ಧಾನ್ಯ ನೀರುಪಾಲಾಗಿದೆ. ಸೌದೆ ನೀರಿನಲ್ಲಿ ತೊಯ್ದು ಒಲೆ ಉರಿಸಲು ಮಹಿಳೆಯರು ಪಡಿಪಾಟಲು ಪಡುವ ದೃಶ್ಯ ಪ್ರತಿನಿತ್ಯ ಕಂಡು ಬರುತ್ತದೆ.

ಇಲ್ಲಿನ ಸುಮಾರು 20 ಮಕ್ಕಳು ಶಾಲೆಗೆ ಹೋಗುತ್ತಿದ್ದು ಇನ್ನೂ ಕೆಲವು ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದಾರೆ.
ಮತದಾನ ಚೀಟಿ, ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡು ಹೊಂದಿದ್ದರೂ ಸರ್ಕಾರಿ ಸೌಲಭ್ಯಗಳು ಮಾತ್ರ ಒಂದೂ ಸಿಕ್ಕಿಲ್ಲ. ಬೀದಿ ಬದಿ ವಾಸ ಮಾಡುತ್ತಿರುವುದರಿಂದ ರಾತ್ರಿ ವೇಳೆ ಹುಳ ಹುಪ್ಪಡಿಗಳ ಕಾಟ ಕಾಡುತ್ತಿದೆ. ಈ ಬಗ್ಗೆ ಪಿಡಿಒ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಅಲೆಮಾರಿ ನಿವಾಸಿಗಳಾದ ಗಂಗಪ್ಪ, ಹನುಮಂತ, ರಮೇಶ, ನಾಗಮ್ಮ, ಹೊನ್ನಮ್ಮ, ಅಜ್ಜಮ್ಮ, ನಾಗಮ್ಮ, ತಿಪ್ಪವ್ವ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಗಮನ ಹರಿಸಬೇಕು ಮಳೆ ಬಂದಾಗ ಎಲ್ಲರೂ ಮಕ್ಕಳನ್ನು ತೊಡೆಯ ಮೇಲೆ ಹಾಕಿಕೊಂಡು ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಿದ್ದೇವೆ. ಮಕ್ಕಳ ಪರಿಸ್ಥಿತಿ ನೋಡಿದರೆ ಜೀವ ಹಿಂಡಿದಂತಾಗುತ್ತದೆ. ಕಳೆದ 5 ವರ್ಷದ ಹಿಂದೆ ಹುಚ್ಚು ನಾಯಿ ಕಡಿದು 12 ವರ್ಷದ ಬಾಲಕಿ ಹಾಗೂ 2 ವರ್ಷದ ಹಿಂದೆ ಹಾವು ಕಡಿದು ಮಗ ಮೃತಪಟ್ಟಿದ್ದಾನೆ. ಸರ್ಕಾರ ನಿವೇಶನ ಕೊಟ್ಟರೆ ತಗಡಿನ ಮನೆಯನ್ನಾದರೂ ನಿರ್ಮಿಸಿಕೊಂಡು ಬದುಕು ರಕ್ಷಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಜಿಲ್ಲಾ ಧಿಕಾರಿ ಗಮನ ಹರಿಸಬೇಕು. 
 ದುರುಗೇಶ್‌, ಅಲೆಮಾರಿಗಳ ಮುಖಂಡ

ಆನ್‌ಲೈನ್‌ನಲ್ಲಿ ಅಪಲೋಡ್‌ ಅಲೆಮಾರಿ ಕುಟುಂಬಗಳು ನಿವೇಶನ ಸಹಿತ ವಸತಿ ಕಲ್ಪಿಸುವಂತೆ ಗ್ರಾಮ ಪಂಚಾಯ್ತಿಗೆ ಒಂದೂವರೆ ತಿಂಗಳ ಹಿಂದೆ ಅರ್ಜಿ ಸಲ್ಲಿಸಿವೆ. ಅರ್ಜಿಗಳನ್ನು ಆನ್‌ಲೈನ್‌ ಅಪ್‌ ಲೋಡ್‌ ಮಾಡಲಾಗಿದೆ. ಸರ್ಕಾರದಿಂದ ಅನುಮತಿ ಬಂದ ನಂತರ ಮನೆ ನಿರ್ಮಿಸಲಾಗುವುದು.
 ಎನ್‌.ಶಿವಣ್ಣ, ಪಿಡಿಒ ಹಲುವಾಗಲು

ಅಲೆಮಾರಿ ಕೋಶದಿಂದ ವಸತಿ ವ್ಯವಸ್ಥೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದಿಂದ ಅಲೆಮಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮನೆ ನಿರ್ಮಾಣಕ್ಕೆ ಮಾಚಿಹಳ್ಳಿ ಬಳಿ ಜಮೀನು ನೀಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿ ಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಹಶೀಲ್ದಾರ್‌ ತಿಳಿಸಿದ್ದಾರೆ.
 ವಿ. ಸಣ್ಣಅಜ್ಜಯ್ಯ, ನಾಮನಿರ್ದೇಶಿತ ಸದಸ್ಯ

ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ


Trending videos

Back to Top