CONNECT WITH US  

ಮರೀಚಿಕೆಯಾದ ಸೂರು, ಕುಡಿಯಲೂ ಇಲ್ಲ ನೀರು

ನಗರಸಭೆ ವ್ಯಾಪ್ತಿಯ ಎರಡು ಮನೆಗಳ ದಯನೀಯ ಸ್ಥಿತಿ

ಬಾಲಕ್ಕ ನಾಯ್ಕ ಅವರು ವಾಸವಾಗಿರುವ ಮನೆ.

ಪುತ್ತೂರು: ನಗರಸಭೆ ಪರಿಧಿಯೊಳಗೆ 2 ಕುಟುಂಬಗಳು ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವುದು ಇದೀಗವಷ್ಟೇ ಬೆಳಕಿಗೆ ಬಂದಿದೆ. ನೀರು, ಬೆಳಕಿನ ಸೌಲಭ್ಯಗಳು ಇಲ್ಲದೇ ಸಮಾಜದ ಮುಖ್ಯವಾಹಿನಿಯಿಂದ ಮೂಲೆಗೆ ತಳ್ಳಲ್ಪಟ್ಟಿರುವ ಇವರ ಬಗ್ಗೆ ಸ್ಥಳೀಯಾಡಳಿತವೂ ಮುತುವರ್ಜಿ ವಹಿಸಿಲ್ಲ. ಪಡೀಲು ಬಳಿಯ ಬಾಲಕ್ಕ ಹಾಗೂ ಮುದರು ಮನೆಗಳ ದಯನೀಯ ಸ್ಥಿತಿ ಇದು. ಹಲವಾರು ವರ್ಷಗಳ ಹಿಂದೆ ಧಣಿಗಳ ಮನೆಯ ಕೆಲಸಕ್ಕೆಂದು ಬಂದು ಕುಳಿತವರು, ಇಂದು ಕೂಡ ಅದೇ ಸ್ಥಿತಿಯಲ್ಲಿದ್ದಾರೆ.

ನೀರು, ಸೂರು, ಬೆಳಕು ಮೂಲಸೌಕರ್ಯಗಳು. ಪ್ರತಿಯೋರ್ವ ವ್ಯಕ್ತಿಗೂ ಇವಿಷ್ಟನ್ನು ಕನಿಷ್ಠ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಘೋಷಣೆ ಕೂಗಲಾಗುತ್ತಿದೆ. ಆದರೆ ಇನ್ನೂ ಕೂಡ ಮೂಲಸೌಕರ್ಯ ತಲುಪದ ಮನೆಗಳಿವೆ ಎನ್ನುವುದು ಸುಳ್ಳಲ್ಲ. ಆದರೆ ಇವರ ಓಟು ಮಾತ್ರ ನಮ್ಮ ರಾಜಕೀಯ ಪಕ್ಷಗಳಿಗೆ ಬೇಕು.

ಮತದಾರರ ಗುರುತು ಚೀಟಿ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಇದೆ. ಇವಿಷ್ಟನ್ನು ಹಿಡಿದುಕೊಂಡು ಸೂರು ನಿರ್ಮಿಸಿಕೊಡಿ ಎಂದು ನಗರಸಭೆಗೆ ಮನವಿ ನೀಡಿದರೆ, ಜಾಗದ ಸಮಸ್ಯೆ ಎದುರಾಗುತ್ತದೆ. ಪೈ ಕುಟುಂಬಕ್ಕೆ ಸೇರಿದ ಜಾಗದಲ್ಲಿ ಈ ಮನೆಯವರು ಕುಳಿತಿದ್ದಾರೆ. ಆದ್ದರಿಂದ ಜಾಗದಲ್ಲಿ ಭದ್ರವಾದ ಸೂರು, ಕುಡಿಯಲು ನೀರು, ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಲು ಅಡ್ಡಿಯಾಗಿದೆ ಎನ್ನಲಾಗಿದೆ. 

ಅಂದ ಹಾಗೇ ಒಂದು ಮನೆಯವರು ಎಸ್ಸಿ, ಇನ್ನೊಂದು ಮನೆಯವರು ಎಸ್ಟಿ. ಇವರ ಧ್ವನಿ ಇನ್ನೂ ಮುನ್ನೆಲೆಗೆ ಬಾರದೇ ಇರುವುದು ವಿಪರ್ಯಾಸ.

ಸೀಮೆಎಣ್ಣೆ ಸಮಸ್ಯೆ
ವಿದ್ಯುತ್‌ ಇಲ್ಲದ ಮನೆಗಳು ಸೀಮೆಎಣ್ಣೆ ದೀಪವನ್ನೇ ಅವಲಂಬಿಸಿವೆ. ಆದರೆ ಈಗ ಸೀಮೆಎಣ್ಣೆಯೂ ಸಿಗುತ್ತಿಲ್ಲ. ಅನಿವಾರ್ಯವಾಗಿ ಕ್ಯಾಂಡಲ್‌ ಬೆಳಕಿಗೆ ಮೊರೆ ಹೋಗಲಾಗುತ್ತದೆ. ಮುದುರು ಅವರ ಮನೆಯಲ್ಲಿ ಸೋಲಾರ್‌ ಹಾಕಿಕೊಳ್ಳಲಾಗಿದೆ. ಆದರೆ ಬಾಲಕ್ಕ ಅವರ ಮನೆಯಲ್ಲಿ ಮಾತ್ರ ಹಗಲು ಬೆಳಕು, ರಾತ್ರಿ ಕತ್ತಲು.

ಸಾಕುಮಗ ದೂರವಾದ
ಸುಮಾರು 65 ವರ್ಷಗಳಿಂದ ಪಡೀಲು ಪರಿಸರದಲ್ಲಿ ವಾಸವಾಗಿದ್ದಾರೆ ಬಾಲಕ್ಕ ನಾಯ್ಕ. ಸಾಕು ಮಗನ ಜತೆ ವಾಸವಾಗಿದ್ದರು. ಬಳಿಕ ಸಾಕುಮಗನೂ ಬೇರೆಯಾದ. ಈಗ ಒಬ್ಬರೇ ದಿನ ಕಳೆಯುತ್ತಿದ್ದಾರೆ. ಹರಕಲು ಮನೆ, ಹರಿದು ಹೋಗುವ ಮಳೆನೀರು ಕುಡಿಯಲು ಬಳಕೆ, ಬೆಳಕಂತೂ ಇಲ್ಲವೇ ಇಲ್ಲ. ಇಲ್ಲಿಂದ ಶುರು ಆಗುತ್ತದೆ ಈ ಮನೆಯವರ ಗೋಳು. 92 ವರ್ಷದ ಬಾಲಕ್ಕ ಒಬ್ಬಂಟಿಯಾಗಿ ಮನೆಯಲ್ಲಿ ವಾಸವಾಗಿದ್ದಾರೆ. ಇವರಿಗೆ ಜತೆಗಾರರಾಗಿ ಎರಡು ಬೆಕ್ಕುಗಳಿವೆ.

ಮಳೆಗಾಲವನ್ನು ಎದುರಿಸುವಷ್ಟಾದರೂ ಭದ್ರ ಮನೆ ಬೇಕು ಎಂಬ ಬೇಡಿಕೆ ಬಾಲಕ್ಕನದು. ಆದರೆ ಈ ಕೂಗಿಗೆ ಯಾರೂ ಧ್ವನಿಯಾಗಿಲ್ಲ. ಸ್ವಲ್ಪ ದಿನಗಳ ಹಿಂದೆ ಯುವಕರ ತಂಡವೊಂದು ನಾಲ್ಕು ಟಾರ್ಪಲುಗಳನ್ನು ಹಾಕಿ ಅನುಕೂಲ ಮಾಡಿಕೊಟ್ಟಿದೆ. 

ಮುದರು ಮನೆ
ಗಂಡನ ಜತೆ ಧಣಿಗಳ ಮನೆ ಕೆಲಸಕ್ಕೆ ಬಂದು ನೆಲೆ ನಿಂತವರು ಮುದರು. 39 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾರೆ. ಗಂಡ ಕೆಲ ವರ್ಷಗಳ ಹಿಂದೆ ನಿಧನ ಹೊಂದಿದರು. ಇದೀಗ ಮಗಳ ಜತೆಗೆ ವಾಸವಾಗಿದ್ದಾರೆ. ಮಗಳು ಲಕ್ಷ್ಮೀ ಅವರು ಅಡಿಕೆ ಫ್ಯಾಕ್ಟರಿಗೆ ಹೋಗುತ್ತಿದ್ದು, ಇದೇ ಅವರ ಜೀವನಕ್ಕೆ ಆಧಾರ. ಕುಡಿಯಲು ನೀರು ಬೇಕೆಂದು ನಗರಸಭೆಗೆ ಅರ್ಜಿ ನೀಡಿದರು. ಇದು ಮಂಜೂರಾಗಲು ಭೂಮಾಲೀಕರ ಅನುಮತಿಬೇಕೆಂದು ತಿಳಿಸಿದರಂತೆ. ಆದ್ದರಿಂದ ಪ್ರಸ್ತಾಪ ಮೂಲೆಗುಂಪಾಯಿತು. ಮನೆ ನಿರ್ಮಿಸಿಕೊಡಲು ನಗರಸಭೆಗೆ ಅರ್ಜಿ ನೀಡಿದ್ದಾರೆ. ನಗರಸಭೆಯಲ್ಲಿ ಮೂಲೆಗುಂಪಾಗಿರುವ 4 ಸಾವಿರ ಅರ್ಜಿಗಳ ಪೈಕಿ ಇವರದ್ದು ಒಂದು.

 ಪರಿಗಣಿಸಬಹುದು
ಏಕಾಏಕೀ ಏನೂ ಮಾಡುವಂತಿಲ್ಲ. ನಗರಸಭೆಗೆ ಅರ್ಜಿ ನೀಡಿದರೆ, ವಿಶೇಷ ಪ್ರಕರಣ ಎಂದು ಪರಿಗಣಿಸಬಹುದು. ಅಥವಾ ಜಾಗ ಅವರ ಹೆಸರಿನಲ್ಲಿದ್ದರೆ 2.80 ಲಕ್ಷ ರೂ. ಸರಕಾರದಿಂದ ಸಿಗುತ್ತದೆ.
- ರೂಪಾ ಶೆಟ್ಟಿ
  ಪೌರಾಯುಕ್ತೆ, ಪುತ್ತೂರು ನಗರಸಭೆ

ಗಣೇಶ್‌ ಎನ್‌. ಕಲ್ಲರ್ಪೆ 


Trending videos

Back to Top