CONNECT WITH US  

ಮಲೆನಾಡು ಜನಹಿತರಕ್ಷಣ ವೇದಿಕೆಯಿಂದ ಧರಣಿ

ಬವಣೆ ಕುರಿತು ಗಮನ ಸೆಳೆಯಲು ಪ್ರಯತ್ನ: ಕಿಶೋರ್‌ ಶಿರಾಡಿ

ನಗರ: ಮಲೆನಾಡು ಭಾಗದ ಜನರು ಅನುಭವಿಸುತ್ತಿರುವ ವಿವಿಧ ಬವಣೆಯ ಕುರಿತು ಅಧಿಕಾರಿಗಳ ಮತ್ತು ಸರಕಾರದ ಗಮನ ಸೆಳೆಯುವ ದೃಷ್ಟಿಯಿಂದ ಪ್ರತಿ ತಿಂಗಳ ಮೊದಲ ಸೋಮವಾರ ಪುತ್ತೂರು ಸಹಾಯಕ ಕಮಿಷನರ್‌ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಜನಹಿತ ರಕ್ಷಣೆಯ ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ ತಿಳಿಸಿದ್ದಾರೆ.

ನಿರಂತರ ಹೋರಾಟ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಜನಸಾಮಾನ್ಯರು, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರಕಾರ ಮತ್ತು ಅಧಿಕಾರಿಗಳು ಸ್ಪಂದಿಸುವಂತೆ ಮಾಡುವುದು ಸತ್ಯಾಗ್ರಹದ ಉದ್ದೇಶ. 25ಕ್ಕೂ ಹೆಚ್ಚು ಬೇಡಿಕೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧವೂ ಸಂಘಟನೆ ನಿರಂತರ ಹೋರಾಟ ನಡೆಸಲಿದೆ. ಬೇಡಿಕೆ ಈಡೇರುವವರೆಗೆ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯ ತನಕ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದರು.

ಬೇಡಿಕೆಗಳು
ಒತ್ತುವರಿ ನೆಪದಲ್ಲಿ ರೈತರ ಕೃಷಿ ಭೂಮಿ ತೆರವಿಗೆ ಸರಕಾರ ನೋಟಿಸ್‌ ಕೊಟ್ಟು ಮಾನಸಿಕ ಹಿಂಸೆ ಮಾಡುವುದನ್ನು ನಿಲ್ಲಿಸಬೇಕು, ಪರಿಸರ ಸಂರಕ್ಷಣೆ ನೆಪದಲ್ಲಿ ರೈತರ ಭೂಮಿಯನ್ನು ಅರಣ್ಯಕ್ಕೆ ಸೇರ್ಪಡೆ ಮಾಡುವ ಯೋಜನೆಗಳನ್ನು ರದ್ದು ಮಾಡಬೇಕು, ಹತ್ತಾರು ವರ್ಷಗಳಿಂದ ವಾಸ್ತವ ಹೂಡಿದ ಅಡಿಸ್ಥಳಕ್ಕೆ ನಿವೇಶನ ಹಕ್ಕುಪತ್ರ ಕೊಡಬೇಕು ಹಾಗೂ ನಿವೇಶನ ಇಲ್ಲದ ಕುಟುಂಬಕ್ಕೆ ಸರಕಾರಿ ಜಾಗ ನೀಡಬೇಕು, ಪ್ಲಾಟಿಂಗ್‌ ಆಗದ ಜಾಗವನ್ನು ಕಂದಾಯ ಇಲಾಖೆಯೇ ಶೀಘ್ರದಲ್ಲಿ ಮಾಡಿ ಕೊಡಬೇಕು, ಸಾಲ ಮನ್ನಾದ ಪೂರ್ತಿ ಸವಲತ್ತು ಪ್ರತಿಯೊಬ್ಬ ರೈತರಿಗೂ ಸಿಗಬೇಕು, ಉದ್ಯೋಗ ಖಾತ್ರಿ, ತೋಟಗಾರಿಕೆ, ಕೃಷಿ ಇಲಾಖೆ, ಸಂಬಂಧಪಟ್ಟ ರೈತನಿಗೆ ಸಿಗುವ ಸವಲತ್ತು ಆತ ಕೆಲಸ ಮಾಡಿದ ತತ್‌ಕ್ಷಣ ಸಿಗಬೇಕು, ಪ್ರಕೃತಿ ವಿಕೋಪದಿಂದ ಅಥವಾ ಕಾಡುಪ್ರಾಣಿಗಳ ದಾಳಿಗೆ ತುತ್ತಾಗಿ ನಾಶವಾಗಿರುವ ಕೃಷಿಗೆ ಸೂಕ್ತ ಪರಿಹಾರ ನಿಗಧಿಪಡಿಸಬೇಕು ಮತ್ತು ಕೃಷಿ ಸಾಲದವರ ಕಂತು ಕಟ್ಟಲು ಅವಧಿ ವಿಸ್ತರಿಸಬೇಕು, 94 ಸಿ ಹಕ್ಕುಪತ್ರ ನೀಡುವಲ್ಲಿ ವಿಳಂಬ ಸರಿ ಪಡಿಸಬೇಕೆಂದು ಆಗ್ರಹಿಸಲಾಗುವುದು ಎಂದರು. ಮಲೆನಾಡು ಜನಹಿತರಕ್ಷಣ ವೇದಿಕೆ ಜಿಲ್ಲಾ ಸದಸ್ಯರಾದ ದಾಮೋದರ ಗುಂಡ್ಯ, ಜಯಪ್ರಕಾಶ್‌ ಕೂಜುಗೋಡು, ಮೋನಪ್ಪ ಮಾನಾಡು ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

ಒಂದೇ ಸೂರಿನಡಿ ಮಾಹಿತಿ
ರೈತರಿಗೆ ಸಿಗುವ ಸವಲತ್ತುಗಳ ಕುರಿತು ಗ್ರಾ.ಪಂ.ನಲ್ಲಿ ಮಾಹಿತಿ ಸಿಗಬೇಕು. ಹಳದಿರೋಗ ಬಂದಿರುವ ಅಡಿಕೆ ಕೃಷಿ ಸಾಲ ಮನ್ನಾ ಮಾಡಬೇಕು, ಗ್ರಾಮೀಣ ಪ್ರದೇಶದ ಸರಕಾರಿ ಹುದ್ದೆಗಳು ಅರ್ಹ ಅಭ್ಯರ್ಥಿಗಳಿಗೆ ಸಿಗಬೇಕು, ಗ್ರಾಮಸಭೆಗೆ ಎಲ್ಲ ಇಲಾಖೆಗಳ ಉನ್ನತ ಅಧಿಕಾರಿಗಳು ಬರಬೇಕು, 2 ತಿಂಗಳುಗಳಿಗೊಮ್ಮೆ ಜಿಲ್ಲಾಧಿಕಾರಿಯವರು ಜನಸಂಪರ್ಕ ಸಭೆಯನ್ನು ಪ್ರತಿ ತಾಲೂಕಿನಲ್ಲಿ ಮಾಡಬೇಕು, ರೈತರಿಗೆ ಕಾನ, ಬಾನ, ಕುಮ್ಕಿ ಹಕ್ಕನ್ನು ನೀಡಬೇಕು, ರೈತರ ಮಕ್ಕಳಿಗೆ ಪದವಿ ಮಾಡಿದವರಿಗೆ ಕೃಷಿ ಮಾಡಲು ಶೂನ್ಯ ಬಡ್ಡಿಯಲ್ಲಿ ಸಾಲ ನೀಡಬೇಕು ಇತ್ಯಾದಿ ಬೇಡಿಕೆ ಮುಂದಿಡಲಾಗುವುದು ಎಂದು ಕಿಶೋರ್‌ ಶಿರಾಡಿ ವಿವರಿಸಿದರು.

Trending videos

Back to Top