CONNECT WITH US  

ಗಣೇಶ ವಿಶೇಷ : ಕಿಲ್ಲೆ ಮೈದಾನದ ಅನ್ನದಾನ ಗಣಪ

ಪುತ್ತೂರು: ಕಿಲ್ಲೆ ಮೈದಾನದಲ್ಲಿ ದೇವತಾ ಸಮಿತಿಯ ವತಿಯಿಂದ 7 ದಿನ ಪ್ರತೀ ವರ್ಷ ನಡೆಯುವ ಸಾರ್ವಜನಿಕ ಮಹಾಗಣಪತಿ ಉತ್ಸವ ತಾಲೂಕಿನಲ್ಲಿಯೇ ವಿಶೇಷ. ಯಾಕೆಂದರೆ ಈ ಗಣಪನನ್ನು ಅನ್ನದಾನ ಪ್ರಭು ಎಂದು ಗೌರವಿಸುತ್ತಾರೆ. ಏಳು ದಿನಗಳೂ ಇಲ್ಲಿ ಮಧ್ಯಾಹ್ನ ಅನ್ನದಾಸೋಹವಿದೆ. ಸುಮಾರು 35ರಿಂದ 50 ಸಾವಿರ ಮಂದಿಗೆ ಅನ್ನ ಸಂತರ್ಪಣೆಯಾಗುತ್ತದೆ.

ಪ್ರತಿದಿನ ಗಣಪತಿಗೆ 21 ಸೇರು ಅನ್ನ ನೈವೇದ್ಯ ಮಾಡುವ ಮೂಲಕ ಈ ಉತ್ಸವವನ್ನು ಅಂದಿನ ಕೋರ್ಟು ಮೈದಾನದಲ್ಲಿ ಆಯುರ್ವೇದ ವೈದ್ಯ ಹನುಮಂತ ಮಲ್ಯ 58 ವರ್ಷಗಳ ಹಿಂದೆ ಆರಂಭಿಸಿದರು. ಈಗ ಇದು ಕಿಲ್ಲೆ ಮೈದಾನವಾಗಿ ಮರುನಾಮಕರಣಗೊಂಡಿದೆ. ಪುತ್ತೂರಿನಲ್ಲಿ ಆಗ ಗಣೇಶೋತ್ಸವವನ್ನು ಸಾರ್ವ ಜನಿಕ ನೆಲೆಯಲ್ಲಿ ಆಚರಿಸುತ್ತಿರಲಿಲ್ಲ. ಜಿಲ್ಲೆಯ ಮತ್ತು ರಾಜ್ಯದ ವಿವಿಧೆಡೆ ಸಾರ್ವಜನಿಕ ನೆಲೆಯಲ್ಲಿ ಗಣೇಶೋತ್ಸವ ಆಚರಣೆ ಆಗುವುದನ್ನು ಮನಗಂಡ ಹನುಮಂತ ಮಲ್ಯರು ಇಲ್ಲೂ ಆರಂಭಿಸಿದರು. ಈ ಉತ್ಸವ  ಮಿನಿ ಜಾತ್ರೆ. ನಿತ್ಯವೂ ಬೆಳಗ್ಗೆಯಿಂದ ರಾತ್ರಿಯ ತನಕ ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ತುಲಾಭಾರ ಸೇವೆ
ಈ ಗಣಪತಿಗೆ ತುಲಾಭಾರ ಸೇವೆ ಸಮರ್ಪಣೆ ಅತ್ಯಂತ ಅಪರೂಪದ್ದು. ಇಪ್ಪತ್ತು ವರ್ಷಗಳ ಹಿಂದೆ ಭಕ್ತರೊಬ್ಬರು ದೇವರಿಗೆ ಅಕ್ಕಿಯ ತುಲಾಭಾರ ನೀಡುವುದಾಗಿ ನಿವೇದನೆ ಮಾಡಿದಾಗ ಸಮಿತಿ ಸದಸ್ಯರು ಅನುಮತಿ ನೀಡಿದರು. ಅಲ್ಲಿಂದ ಈ ಸೇವೆ ಆರಂಭವಾಯಿತು ಎನ್ನುತ್ತಾರೆ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ.

ಏಳೂ ದಿನದ ಬೆಳಗ್ಗೆ 11.30ಕ್ಕೆ ತುಲಾಭಾರ ಸೇವೆ ಆರಂಭ. ಅಕ್ಕಿ, ಸಕ್ಕರೆ, ಬೆಲ್ಲ, ತೆಂಗಿನ ಕಾಯಿ, ಬಾಳೆಕಾಯಿ ಮೊದಲಾದ ವಸ್ತುಗಳ ತುಲಾಭಾರ ನಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಈ ಸೇವೆಯ ಸಂಖ್ಯೆ ಹೆಚ್ಚುತ್ತಿರುವುದು ವಿಶಿಷ್ಟ.

ಭೂತದ ನೇಮ
ಈ ದೇವರ ವಿಸರ್ಜನ ಮೆರವಣಿಗೆ ಹೊರಡುವ ಮೊದಲು ಅಂದರೆ 7ನೇ ದಿನ (ಈ  ಬಾರಿ ಸೆ. 23) ಚಪ್ಪರದ ಮುಂಭಾಗದಲ್ಲಿ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವದ ನೇಮ ನಡೆಯುತ್ತದೆ. ಉತ್ಸವ ಆರಂಭವಾದ ವರ್ಷದಿಂದಲೇ ಈ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ದೈವಗಳ ನುಡಿಕಟ್ಟು ಆದ ಬಳಿಕ ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಬಳಿಕ ಶೋಭಾಯಾತ್ರೆ ಹೊರಡುತ್ತದೆ. ಕೋರ್ಟು ರಸ್ತೆ, ಮುಖ್ಯ ರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಕಚೇರಿ ರಸ್ತೆ, ಬೊಳ್ವಾರು, ಮಂಜಲ್ಪಡು³, ತನಕ ಸಾಗಿ ಮಂಜಲ್ಪಡ್ಪುವಿನ ಕೆರೆಯಲ್ಲಿ ದೇವರ ವಿಗ್ರಹವನ್ನು ಜಲಸ್ಥಂಭನ ಮಾಡಲಾಗುತ್ತದೆ.

ಹರಕೆ ಸಮರ್ಪಣೆ
ಈ ಗಣಪನಿಗೆ ಅಕ್ಕಿ, ಬೆಳ್ಳಿ ಹಾಗೂ ಚಿನ್ನವನ್ನು ಭಕ್ತರು ಹರಕೆ ರೂಪದಲ್ಲಿ ಸಮರ್ಪಿಸುತ್ತಾರೆ. ಇವನ ಆಭರಣಗಳೆಲ್ಲವೂ ಹರಕೆ ರೂಪದಲ್ಲಿ ಬಂದ ಬೆಳ್ಳಿ ಮತ್ತು ಚಿನ್ನಗಳಿಂದ ಮಾಡಲ್ಪಟ್ಟದ್ದು. ಉತ್ಸವಕ್ಕೆ ಅಗತ್ಯವಿರುವ ಪಾತ್ರೆಗಳನ್ನೂ ಭಕ್ತರು ಹರಕೆಯ ರೂಪದಲ್ಲಿ ಸಮರ್ಪಿಸುತ್ತಾರೆ. ಗರಿಷ್ಠ ಹರಕೆಗಳನ್ನು ಸ್ವೀಕರಿಸುವ ಗಣಪತಿಯೆಂಬುದೇ ಇವನ ಹೆಗ್ಗಳಿಕೆೆ.

ಬೃಹತ್‌ ಹೂ ಮಾಲೆ
ಶೋಭಾಯಾತ್ರೆಯಂದು ನೆಲ್ಲಿಕಟ್ಟೆ ಮಿತ್ರವೃಂದ ಸಮರ್ಪಿಸುವ ಬೃಹತ್‌ ದಂಡೆಮಾಲೆ ಉಲ್ಲೇಖನೀಯ. ನೆಲ್ಲಿಕಟ್ಟೆಯಿಂದ ಮಂಟಪದ ತನಕ ಬ್ಯಾಂಡ್‌ ಓಲಗದಲ್ಲಿ ತೆರೆದ ಜೀಪಿನಲ್ಲಿ ಈ ಮಾಲೆಯನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ.

ಹುಲಿವೇಷಗಳ ಅಬ್ಬರ
ಈ ಉತ್ಸವದ ಶೋಭಾಯಾತ್ರೆಯಂದು ಹುಲಿವೇಷಗಳ ಕುಣಿತ ಪ್ರಧಾನ ಆಕರ್ಷಣೆ. 25ರಿಂದ 35 ರಷ್ಟು ಸಂಖ್ಯೆಯಲ್ಲಿ ಹುಲಿವೇಷಗಳ ಹಿಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತದೆ. ಇವುಗಳ ಅಬ್ಬರದ ಕುಣಿತವನ್ನು ವೀಕ್ಷಿಸಲೆಂದೇ ಮೈದಾನದ ಚಪ್ಪರಕ್ಕೆ ಜನರು ಆಗಮಿಸುತ್ತಾರೆ. ವೆ‌ುರವಣಿಗೆ ಹೊರಡುವ ಮೊದಲು ದೈವಗಳ ನೇಮ, ಸುಡುಮದ್ದು ಪ್ರದರ್ಶನವಾದ ಬಳಿಕ  ಕುಣಿತ  ಆರಂಭವಾಗಿ ಮೆರವಣಿಗೆಯುದ್ದಕ್ಕೂ ಸಾಗುತ್ತದೆ.

ಉರುಳು ಸೇವೆ
ಈ ಗಣಪನಿಗೆ ಉರುಳು ಸೇವೆ ಸಲ್ಲಿಸುವ ಹರಕೆ ಕೂಡ ಇದೆ. ವಿನಾಯಕ ಚತುರ್ಥಿಯ ಮರುದಿನದಿಂದ ಪ್ರಾತಃಕಾಲ 6 ಗಂಟೆಯಿಂದ 8 ಗಂಟೆಯ ತನಕ ಭಕ್ತರು ಮಂಟಪದ ಸುತ್ತಲೂ ಉರುಳು ಸೇವೆ ಸಲ್ಲಿಸುತ್ತಾರೆ. ಅನಾರೋಗ್ಯ, ಶಿಕ್ಷಣ, ಉದ್ಯೋಗ, ಕೌಟುಂಬಿಕ ಸಂಕಷ್ಟಗಳ ನಿವಾರಣೆಗೆ ಕೋರಿ ಭಕ್ತರು ಈ ಸೇವೆ ಸಲ್ಲಿಸುತ್ತಾರೆ. ಉಳಿದಂತೆ ರಂಗಪೂಜೆ, ಗಣಪತಿ ಹವನದ ಸೇವೆ ಕೂಡ ಸಮರ್ಪಣೆಯಾಗುತ್ತದೆ.

- ಬಿ.ಟಿ. ರಂಜನ್‌

Trending videos

Back to Top