CONNECT WITH US  

'ಪತ್ರಿಕೆಗಳಿಂದ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ'

ಪತ್ರಿಕಾ ದಿನ, ಸಮ್ಮಾನ, ಕೃತಿ ಬಿಡುಗಡೆ ಉದ್ಘಾಟಿಸಿ ಮಠಂದೂರು

ಶಾಸಕ ಸಂಜೀವ ಮಠಂದೂರು ಅವರು ದೀಪ ಬೆಳಗಿಸಿದರು

ಪುತ್ತೂರು: ಪ್ರಜಾಪ್ರಭುತ್ವದ ಮೌಲ್ಯ ಉಳಿಸಿ, ಬೆಳೆಸಿಕೊಂಡು ಹೋಗುವಲ್ಲಿ ಪತ್ರಿಕಾ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶನಿವಾರ ನಗರದ ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ, ಸಮ್ಮಾನ ಹಾಗೂ ಕೃತಿ ಬಿಡುಗಡೆ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ತರ ಜವಾಬ್ದಾರಿ ಪತ್ರಕರ್ತರಿಗಿದೆ. ಭಾರತ ಪತ್ರಿಕೋದ್ಯಮ ಸವಾಲುಗಳನ್ನು ಎದುರಿಸಿ ಬೆಳೆದು ಬಂದಿದೆ. ಪತ್ರಕರ್ತರು ಯೋಚನಾಧಾರೆಯನ್ನು ಕೇವಲ ಒಂದೇ ವಿಚಾರಧಾರೆಗೆ ಮೀಸಲಿಡದೇ ಸಮಗ್ರವಾಗಿ ಬೆಳೆಸಿಕೊಳ್ಳಬೇಕು. ಸಮಾಜವನ್ನು ಸದಾ ಎಚ್ಚರವಾಗಿಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಸ್ವಚ್ಛ ಪತ್ರಿಕೋದ್ಯಮ ಬೆಳೆಯಬೇಕು ಎಂದವರು ಆಶಯ ವ್ಯಕ್ತಪಡಿಸಿದರು.

ಇತಿಹಾಸ ತಿಳಿದುಕೊಳ್ಳಿ
ಮೂಡಬಿದಿರೆ ಆಳ್ವಾಸ್‌ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯಾ ಜೀವನ್‌ರಾಂ ವಿಶೇಷ ಉಪನ್ಯಾಸಕ
ರಾಗಿ ಮಾತನಾಡಿ, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪತ್ರಿಕೋದ್ಯಮ ಇತಿಹಾಸವ ಅರಿತುಕೊಳ್ಳಬೇಕು. ಇತಿಹಾಸ ತಿಳಿಯದೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಅತ್ಯಂತ ಹೆಚ್ಚು ಪ್ರಶ್ನೆಗೆ ಒಳಗಾದ ಕ್ಷೇತ್ರ ಪತ್ರಿಕಾ ಕ್ಷೇತ್ರವಾಗಿದೆ ಎಂದರು.

ಪತ್ರಿಕೋದ್ಯಮ ಬೆಳೆಯಲಿ
ಸಾಮಾಜಿಕ ಕಳಕಳಿಯ ಪತ್ರಕರ್ತರು ನಮ್ಮ ಮಧ್ಯೆ ಸಾಕಷ್ಟು ಮಂದಿ ಇದ್ದಾರೆ. ಆದರೆ ವಿಷಯ ಪ್ರಕಟನೆಯ ನಿರ್ಧಾರ ಅವರದ್ದಾಗಿಲ್ಲದೇ ಇರುವುದರಿಂದ ಹಲವು ಬಾರಿ ಅವರು ಮರೆಗೆ ಸರಿಯುತ್ತಾರೆ ಎಂದರು.  ಸಿಟಿಜನ್‌ ಪತ್ರಿಕೋದ್ಯಮ ಪರಿಕಲ್ಪಣೆ ಬೆಳೆದರೆ ಮಾಧ್ಯಮ ಕ್ಷೇತ್ರ ಬೆಳೆಯುತ್ತದೆ. ಸುದ್ದಿಯನ್ನು ಗ್ರಹಿಸುವ ಸಾಮರ್ಥ್ಯ ಇದ್ದವರು ಉತ್ತಮ ಪತ್ರಕರ್ತರಾಗುತ್ತಾರೆ ಎಂದು ಹೇಳಿದರು.

ಕೃತಿ ಬಿಡುಗಡೆ, ಸಮ್ಮಾನ
ಭಾರತ ಸರಕಾರದ ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಪುತ್ತೂರಿನ ಜಯಪ್ರಕಾಶ್‌ ರಾವ್‌ ಅವರು ಬರೆದ ಕಲಾಂ ಜೀವನ ಧರ್ಮಕೃತಿಯ 2ನೇ ಆವೃತ್ತಿಯನ್ನು ಹಿರಿಯ ಪತ್ರಕರ್ತ ಪ್ರೊ| ವಿ.ಬಿ. ಅರ್ತಿಕಜೆ ಬಿಡುಗಡೆಗೊಳಿಸಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ| ಯು.ಪಿ. ಶಿವಾನಂದ, ಜಗನ್ನಾಥ ಶೆಟ್ಟಿ ಬಾಳ ಹಾಗೂ 17ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ. ಕಾರಂತ ಪೆರಾಜೆ ಅವರನ್ನು ಪತ್ರಕರ್ತರ ಸಂಘದ ಕಾನೂನು ಸಲಹೆಗಾರ ಬಿ. ಪುರಂದರ ಭಟ್‌ ಸಮ್ಮಾನಿಸಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಲೇಖಕ ಜಯಪ್ರಕಾಶ್‌ ರಾವ್‌ ಪುತ್ತೂರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಧಾಕರ್‌ ಸುವರ್ಣ ತಿಂಗಳಾಡಿ ಪ್ರಸ್ತಾವನೆಗೈದರು. ಹಿರಿಯ ಪತ್ರಕರ್ತ ಸಂಶುದ್ದೀನ್‌ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಜತೆ ಕಾರ್ಯದರ್ಶಿ ಶ್ರವಣ್‌ ಕುಮಾರ್‌ ನಾಳ ವಂದಿಸಿದರು.

Trending videos

Back to Top