CONNECT WITH US  

ಹೆತ್ತವರನ್ನು ದೇವರಂತೆ ಕಾಣಿ: ಡಾ| ಪ್ರಕಾಶ್‌ ರಾವ್‌

ಉಪ್ಪಿನಂಗಡಿ: ವ್ಯಕ್ತಿಯು ತನ್ನ ಹೆತ್ತವರಲ್ಲಿ ದೇವರನ್ನು ಕಂಡರೆ ಇಡೀ ಮನೆಯೇ ದೇವಾಲಯವಾಗುತ್ತದೆ. ಇದರಿಂದ ದೇಶದಲ್ಲಿ ನಡೆಯುವ ಅನಾಚಾರಗಳು ಕಡಿಮೆಯಾಗಿ ಸುಭಿಕ್ಷೆ ನೆಲೆಸುತ್ತದೆ. ಆ ಮೂಲಕ ಇಡೀ ದೇಶ ಸದ್ಗುಣಗಳಿಂದ ಕಂಗೊಳಿಸುತ್ತದೆ ಎಂದು ಖ್ಯಾತ ವಿದ್ವಾಂಸ ಮತ್ತು ಚಿಂತಕ ಡಾ| ಪಾವಗಡ ಪ್ರಕಾಶ್‌ ರಾವ್‌ ಹೇಳಿದರು.

ಅವರು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಮತ್ತು ಶ್ರೀ ದೇವರಿಗೆ ನೂತನ ಬ್ರಹ್ಮರಥ, ಮಹಾಕಾಳಿ ಅಮ್ಮನವರಿಗೆ ಮಾಂಗಲ್ಯ ಸಮರ್ಪಣೆ ಹಾಗೂ ಮಖೆ ಜಾತ್ರೆಯ 5ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದ್ವಾದಶಿ ಶಿವ ಜ್ಯೋತಿರ್ಲಿಂಗ ವಿಷಯದ ಕುರಿತು ಉಪನ್ಯಾಸ ನೀಡಿದರು.

ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ, ಆಧ್ಯಾತ್ಮಿಕ ಶಕ್ತಿ ಮನುಷ್ಯನನ್ನು ಸವಾಲುಗಳನ್ನೆದುರಿಸುವಲ್ಲಿ ಸಹಕರಿಸುತ್ತದೆ. ದೇವರಲ್ಲಿ ಭಕ್ತಿ ಮನುಷ್ಯನ ಜೀವನಕ್ಕೆ ಸಾರ್ಥಕ್ಯವನ್ನು ತಂದು ಕೊಡುತ್ತದೆ. ಹೀಗಾಗಿ ನಾವು ದೇವರನ್ನು ಆರಾಧಿಸುವುದು ಅತಿ ಮುಖ್ಯ ಎಂದರು.

ಪುತ್ತೂರು ತಾ.ಪಂ. ಅಧ್ಯಕ್ಷೆ ಪುಲಸ್ತಾ ರೈ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸರಕಾರದ  ಲೋಕ ಶಿಕ್ಷಣ ಟ್ರಸ್ಟ್‌ ಮತ್ತು ಮಾಜಿ ಅಡ್ವಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ ಮಾತನಾಡಿದರು.

ವೇದಿಕೆಯಲ್ಲಿ ಪುತ್ತೂರು ತಹಶೀಲ್ದಾರ್‌ ಎಂ.ಟಿ. ಕುಳ್ಳೇಗೌಡ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಕರುಣಾಕರ ಸುವರ್ಣ, ಕಾರ್ಯ ನಿರ್ವಹಣಾಧಿಕಾರಿ ಪಿ. ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ದೇವಳದ ಪ್ರಧಾನ ಅರ್ಚಕ ಹರೀಶ್‌ ಉಪಾಧ್ಯಾಯ ಅವರು ಸ್ವಾಗತಿಸಿ, ಬ್ರಹ್ಮಕಲಶ  ಸಮಿತಿಯ ಸದಸ್ಯ ಚಿದಾನಂದ ನಾಯಕ್‌ ಅವರು ವಂದಿಸಿದರು. ಪುಷ್ಪಲತಾ ತಿಲಕ್‌ ಅವರು ಕಾರ್ಯಕ್ರಮ ನಿರೂಪಿಸಿದರು.

Trending videos

Back to Top