CONNECT WITH US  

ಮುಂಜಾವದ ವಾಯುವಿಹಾರ

ಬೆಳಿಗ್ಗೆ ಬೇಗ ಏಳುವುದು ನನ್ನಂತಹ ಸೋಮಾರಿಗೆ ತುಂಬಾ ಕಷ್ಟದ ಕೆಲಸ. ಇನ್ನು ಮಳೆಗಾಲದಲ್ಲಿ ಏಳುವುದು ಸತ್ಯಕ್ಕೆ ನಿಲುಕದ ಮಾತು. ಒಂದು ದಿನ ನಮ್ಮ ಮನೆಗೆ ಬಂದ ಅಕ್ಕನ ಜೊತೆಗೆ ಬೆಳಿಗ್ಗೆ ಬೇಗನೆ ಏಳುವ ಸಾಹಸ ಮಾಡಿದೆ. ಅತಿಥಿಯಂತೆ ಬಂದ ಆಕೆ ನನಗೆ ಫ‌ಜೀತಿ ಮಾಡಿದಳು. ಮುಂಚಿನ ದಿನ ರಾತ್ರಿ ನನ್ನ ಬಳಿ ಬಂದು, ""ನಾವು ಬೆಳಿಗ್ಗೆ ಬೇಗ ಎದ್ದು ವಾಯುವಿಹಾರಕ್ಕೆ ಹೋಗುವ'' ಎಂದಳು. ಅದಕ್ಕೆ ನಾನು ಬೆಳಿಗ್ಗೆ ಬೇಡ ಸಂಜೆ ಹೋಗುವಾ ಎಂದು ಹೇಳಿದೆ. ಅಮ್ಮನ ಬಳಿ ಹೋಗಿ ಚಾಡಿ ಹೇಳಿದಳು. ಅಮ್ಮನ ಆಜ್ಞೆಯನ್ನು ಮೀರುವುದುಂಟೆ? ಮೀರಲಾಗದು. ಬೆಳಗ್ಗಿನ ಜಾವ ಐದು ಗಂಟೆಗೆ ಅಲರಾಮ್‌ ಆಯಿತು. ಅಕ್ಕನ ಕೂಗು, ""ಏಳೇ ಟೈಮ್‌ ಆಯಿತು''. ಹೊರಗೆ ಹನಿಹನಿ ಮಳೆ. ನನಗೆ ಚಳಿಯಾಗುತ್ತಿತ್ತು. ಒಮ್ಮೆ ಎದ್ದವಳೇ ಮತ್ತೆ ಅಕ್ಕ ಹೊರಗೆ ಹೋದ ಕೂಡಲೆ ಕಂಬಳಿ ಹೊದ್ದು ಮಲಗಿದೆ. ಪುನಃ ಅಮ್ಮ ಬಂದು ಎಬ್ಬಿಸಿದರು. ಒಲ್ಲದ ಮನಸ್ಸಿನಲ್ಲಿ ಅವಳ ಜೊತೆ ನಡೆದೆ. ತಂಪಾದ ತಂಗಾಳಿ ಬಂದು ನಮ್ಮನ್ನು ಸ್ವಾಗತಿಸಿತು. ಪ್ರಕೃತಿ ನಮ್ಮನ್ನು ಸೆಳೆಯುತ್ತಿತ್ತು. ರಸ್ತೆಯಲ್ಲಿ ಕೆಲವೇ ಮಂದಿ ನಡೆದುಹೋಗುತ್ತಿದ್ದರು. ನಾವು ಮೆಲ್ಲಮೆಲ್ಲನೆ ಒಂದೊಂದು ಹೆಜ್ಜೆ ಇಡುತ್ತ ಮುಂದೆ ಸಾಗಿದೆವು. ಹನಿ ಹನಿ ನೀರು ನನ್ನ ಮೈಮೇಲೆ ಬಿತ್ತು. ಒಂದು ರೀತಿಯ ರೋಮಾಂಚನ ಉಂಟಾಯಿತು. ಮತ್ತೆ ಆಕಾಶದ ಕಡೆ ಕಣ್ಣು ಹಾಯಿಸಿದರೆ ಮೋಡಗಳದ್ದೇ ರಾಜ್ಯಭಾರ. ಅವುಗಳ ಮಧ್ಯೆ ಸೂರ್ಯ ಕೆಂಬಣ್ಣದ ವಸ್ತ್ರಧರಿಸಿಕೊಂಡು ಮೆಲ್ಲ ಮೆಲ್ಲನೆ ಬರುತ್ತಿದ್ದಾನೆ. ಆ ಬೆಳಗ್ಗಿನ ದೃಶ್ಯ ನನ್ನ ಕಣ್ಣಿಗೆ ತಂಪು ನೀಡಿತು. ರವಿಯ ಸೊಬಗನ್ನು ವರ್ಣಿಸಲು ಪದ ಪುಂಜಗಳೇ ಸಾಲದು. ಆಗ ತಾನೇ ಅರಳಿದ ಮಲ್ಲಿಗೆಯ ಸುವಾಸನೆ ಮತ್ತು ಅದರ ಸೌಂದರ್ಯ ಅವರ್ಣನೀಯ. ನಿಶ್ಶಬ್ದ ವಾತಾವರಣದಲ್ಲಿ ಅಲ್ಲಲ್ಲಿ ಕೇಳುವ ಹಕ್ಕಿಗಳ ಕಲರವ ಕಿವಿಗೆ ಆನಂದ ಮತ್ತು ಶಾಂತಿಯನ್ನು ನೀಡುತ್ತಿತ್ತು.

ಇಂಥ ಒಂದು ಉತ್ತಮ ಅನುಭವವನ್ನು ನಾನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆಲ್ಲ ಎಂದು ಅನಿಸಿತು. ಅಕ್ಕನಿಗಂತೂ ನಾನು ಥ್ಯಾಂಕ್ಸ್‌ ಹೇಳಲೇಬೇಕು. ಈಗ ನಾನು ದಿನಾಲು ಮುಂಜಾನೆ ಎದ್ದು ವಾಯುವಿಹಾರಕ್ಕೆ ಹೋಗುತ್ತಿದ್ದೇನೆ.

ಶಿಲ್ಪಾ, ತೃತೀಯ ಬಿಎ, ಶ್ರೀವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ

ಇಂದು ಹೆಚ್ಚು ಓದಿದ್ದು

Trending videos

Back to Top