CONNECT WITH US  

ಜೈ ಭಜರಂಗಿ! : ಬಂಡೆಗಳ ಮೇಲೆ ವಾನರವೀರ ಚರಿತೆ

ಹಂಪೆಯ ಬಂಡೆಗಳು ಕೂಡ ಈ ರಾಮಾಯಣ ಪ್ರಸಂಗಗಳಿಂದ ಮುಕ್ತವಾಗಿಲ್ಲ. ಸೇತುವೆ ಕಟ್ಟಲು ಹನುಮಂತನ ವಾನರ ಸೇನೆ ಕೂಡಿ ಹಾಕಿದ ಕಲ್ಲು ಬಂಡೆಗಳಿಂದ ಈ ಬೆಟ್ಟಗಳು ನಿರ್ಮಾಣವಾದವು ಅನ್ನೋದಕ್ಕೆ ಸಾಕ್ಷಿಗಳಿವೆ.  

ಸುತ್ತಮುತ್ತಲೂ ಭತ್ತದ ಗದ್ದೆಗಳು, ಎದುರಿಗೆ ಹರಿಯುವ ತುಂಗಭದ್ರೆ, ಹಾವಿನ ನಡಿಗೆಯ ರಸ್ತೆಗಳು, ಮೊಣಕಾಲೆತ್ತರದ 580 ಮೆಟ್ಟಿಲುಗಳು, ಶುದ್ಧ ಗಾಳಿ, ಕಪಿಸೈನ್ಯ.. ಇದಿಷ್ಟು ಸಾಕು ಇದು ಕಿಷ್ಕಿಂಧೆ ಎನ್ನಲು!

             ಹೌದು, ಇದು ಹನುಮನು ಉದಯಿಸಿದ ನಾಡು. ಪ್ರಪಂಚದಾದ್ಯಂತ  ವಜ್ರಕಾಯನನ್ನ ಪೂಜಿಸುವವರಿದ್ದಾರೆ. ಆಂಜನೇಯ ಸೂರ್ಯನನ್ನು ನುಂಗಲು ಹೋಗಿದ್ದು, ಸಂಜೀವಿನಿ ಬೆಟ್ಟ ಹೊತ್ತು ತಂದದ್ದು, ಲಂಕೆಯನ್ನು ಸುಟ್ಟು ಹಾಕಿದ್ದು ಎಲ್ಲವನ್ನೂ ರಾಮಾಯಣದಲ್ಲಿ ನೋಡಿದ್ದೇವೆ. ಬಹಳಷ್ಟು ಜನರಿಗೆ ಹನುಮಂತನ ಹುಟ್ಟೂರು ಯಾವುದು ಎಂಬುದು ಗೊತ್ತು. ಆದರೆ ಎಲ್ಲಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಬನ್ನಿ ಹನುಮನುದಿಸಿ ನಾಡು ಹೇಗಿದೆ ನೋಡೋಣ.

             ರಾಮಾಯಣದ ಕಿಷ್ಕಿಂಧೆಕಾಂಡ ಸಂಪೂರ್ಣವಾಗಿ ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ನಡೆದುದು. ಅಪಹೃತ ಸೀತಾದೇವಿಯ ಆಭರಣಗಳು ದೊರೆತದ್ದು ಇಲ್ಲಿಯೇ. ಕರ್ನಾಟಕದ ಏಕೈಕ ವೀರ ಹನುಮಂತ, ಶ್ರೀರಾಮನು ಮಾಡಿದ ಉಪಕಾರದಿಂದ ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ಹುಡುಕಲು ಲಂಕೆಗೆ ಸೇತುವೆಯನ್ನು ಕಟ್ಟಿದನು. ಆ ಮೂಲಕ ಲಂಕೆ ಪ್ರವೇಶಿಸಿ ರಾವಣನೊಡನೆ ಸೆಣಸಿ ಶ್ರೀ ರಾಮನಿಗೆ ವಿಜಯವನ್ನು ಗಳಿಸಿಕೊಟ್ಟನು. ಸೀತಾದೇವಿ ಮತ್ತು ರಾಮ ಬಹಳ ಕಾಲದ ಅಗಲಿಕೆಯ ನಂತರ ಮತ್ತೆ ಒಂದುಗೂಡುವಂತೆ ಮಾಡಿದನು. ರಾಮಾಯಣದ ಈ ನಿಕಟ ನಂಟಿನಿಂದ ಕರ್ನಾಟಕದ ಹಲವಾರು ಸ್ಥಳಗಳಲ್ಲಿ ರಾಮಾಯಣದ ಬಗೆಗಿನ ಸ್ಮಾರಕಗಳು ತಲೆ ಎತ್ತಿವೆ. 

          ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಮತ್ತು ಅದರ ಸುತ್ತಮುತ್ತಲಿನ ಕೇಂದ್ರಗಳನ್ನು ಈ ಘಟನೆಗಳೊಂದಿಗೆ ಸ್ಥಳೀಯ ಐತಿಹ್ಯಗಳು ಜೋಡಿಸುತ್ತವೆ. ಆನೆಗೊಂದಿ ಪಶ್ಚಿಮಕ್ಕೆ ಸುಮಾರು 1.5 ಕಿ.ಮೀ ದೂರದಲ್ಲಿ ಶಬರಿಕಾಶ್ರಮ, ವಾಲಿಭಂಡಾರ ಮತ್ತು ಆಂಜನಾದ್ರಿಯನ್ನು ಗುರುತಿಸಲಾಗಿದೆ. ಪಂಪಾ ಸರೋವರದತ್ತ ತಿರುಗುವ ಮುಖ್ಯ ರಸ್ತೆಯ ಬಳಿ ಇರುವ ಅಂಜನಾದ್ರಿಯನ್ನು ಹನುಮನ ಜನ್ಮ ಸ್ಥಳವೆಂದು ಆರಾಧಿಸಲಾಗುತ್ತದೆ. ಆನೆಗೊಂದಿಯ, ಸುತ್ತಮುತ್ತಲಿನ ಬಂಡೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಇವುಗಳಲ್ಲೊಂದು ಉದ್ದ ಬಾಲದ ಮಾನವಕೃತಿ ಇದೆ. ಈ ಬಗೆಯ ಚಿತ್ರಗಳನ್ನು ಹಿರೆಬೆಣಕಲ್‌ ಹಾಗೂ ಮಾಳಾಪುರದಲ್ಲಿಯೂ ಕಾಣಬಹುದಾಗಿದೆ. ಇವು ರಾಮಾಯಣ ಕಾಲದ ವಾನರರನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆ ಇದೆ. ತನ್ನ ಸೋದರ ವಾಲಿಯೊಂದಿಗೆ ಕಾದಾಡುವಾಗ ಸುಗೀÅವನನ್ನು ಗುರುತಿಸಿ ವಾಲಿಗೆ ಬಾಣ ಹೊಡೆಯಲು ಸಹಾಯಕವಾಗಲೆಂದು ರಾಮ ಅವನಿಗೆ ಮಾಲೆಯನ್ನು ಕೊಟ್ಟಿದ್ದು ಇಂದಿನ ಚಿಂತಾಮಣಿಯಲ್ಲಿ ಎಂದು ಹೇಳಲಾಗುತ್ತದೆ.

        ಆನೆಗೊಂದಿಯ ಪೂರ್ವಕ್ಕೆ ತುಂಗಭದ್ರಾ ನದಿಯ ದಡದ ಮೇಲೆ ಕಟ್ಟಿದ ಕೋಟೆಗೆ ಚಿಂಚಲ ಕೊಟೆ ಎಂದು ಹೆಸರು. ಸೀತೆ ಶೋಧನೆಯ ನಿಮಿತ್ತ ಅಲೆದಾಡುತ್ತಿದ್ದ ರಾಮ, ಲಕ್ಷ್ಮಣರನ್ನು ಸುಗೀÅವ ಇಲ್ಲಿ ಮೊದಲು ಕಂಡಾಗ, ಕ್ಷಣಕಾಲ ಅವರನ್ನು ತನ್ನ ಸೋದರ ವಾಲಿಯ ಗೂಡಚಾರರೆಂದು ಭ್ರಮಿಸಿದನಂತೆ. ಹೀಗೆ ಅಚಾತುರ್ಯದಿಂದ ಸಂದೇಹಪಟ್ಟುದಕ್ಕಾಗಿ ಪಶ್ಚಾತ್ತಾಪ ಪಟ್ಟನು ಎನ್ನಲಾಗಿದೆ. ವೆಂಕಟಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ತಾಳೆವನದಲ್ಲಿ ಭಿಕ್ಷುಕನ ವೇಷದಲ್ಲಿ ರಾಮ ಲಕ್ಷ್ಮಣರನ್ನು ಹನುಮಂತ ಭೇಟಿಯಾದನೆಂಬ ಕಥೆ ಪ್ರಚಲಿತದಲ್ಲಿ ಇದೆ. ವಾಲಿ ಮತ್ತು ಸುಗೀÅವರ ಕೊನೆಯ ಕಾದಾಟ ಮತ್ತು ರಾಮನು ವಾಲಿಯನ್ನು ವಧಿಸಿದ್ದು ಇಲ್ಲಿಯೇ. 
ಆನೆಗೊಂದಿಯ ಪ್ರಮುಖ ಪೇಟೆಯೊಂದನ್ನು ವಾಲಿ ಅಂಗಡಿ ಶಾಸನಗಳಲ್ಲಿ ಗುರುತಿಸಿರುವುದು ಅಷ್ಟೆ ಸ್ವಾರಸ್ಯಕರ ಹಾಗೂ ಎಲ್ಲಾ ನಂಬಿಕೆಗಳಿಗೆ ಇಂಬು ಕೊಟ್ಟಂತಾಗಿದೆ. 

         ಹಂಪೆಯ ಬಂಡೆಗಳು ಕೂಡ ಈ ರಾಮಾಯಣ ಪ್ರಸಂಗಗಳಿಂದ ಮುಕ್ತವಾಗಿಲ್ಲ. ಸೇತುವೆ ಕಟ್ಟಲು ಹನುಮಂತನ ವಾನರ ಸೇನೆ ಕೂಡಿ ಹಾಕಿದ ಕಲ್ಲು ಬಂಡೆಗಳಿಂದ ಈ ಬೆಟ್ಟಗಳು ನಿರ್ಮಾಣವಾದವು ಅನ್ನೋದಕ್ಕೆ ಸಾಕ್ಷಿಗಳಿವೆ.  ಈ ಕಲ್ಲುಗುಡ್ಡಗಳು ಸೇತುವೆ ಕಟ್ಟಿ ಉಳಿದವುಗಳೆಂದು ಹೇಳಲಾಗುತ್ತಿದೆ. ಆದರೆ ಈ ಸೇತುವೆ ತುಂಗಭಂದ್ರಾ ನದಿಯ ಮೇಲೆ ನಿರ್ಮಾಣವಾಯಿತೊ ಅಥವಾ ಲಂಕೆಯನ್ನು ಸಂಪರ್ಕಿಸಲು ನಿರ್ಮಾಣವಾಯಿತೊ ಎಂಬುದು ಸ್ಪಷ್ಟವಾಗುತ್ತಿಲ್ಲ. ಒಟ್ಟಾರೆ ಸೇತುವೆ ನಿರ್ಮಾಣ ಆಗಿದ್ದು ನಿಜ. 

     ಇನ್ನೊಂದು ಕುತೂಹಲದ ಸಂಗತಿಯೆಂದರೆ ಹಂಪೆಯ ಕೋದಂಡರಾಮ ದೇವಸ್ಥಾನದಿಂದ ವಿಜಯ ವಿಠuಲ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ತುಂಗಭದ್ರ ನದಿ ದಂಡೆಯಲ್ಲಿ ಒಂದು ದೊಡ್ಡ ಗವಿ ಇದೆ. ಇದೇ ಸುಗ್ರೀವ ಗವಿ. ಗವಿಯೊಳಗೆ ರಾಮ, ಲಕ್ಷ್ಮಣ, ಸೀತೆಯರ ಶಿಲಾ ಕೆತ್ತನೆಗಳಿದ್ದು ಒಳಗೆ ಬಹಳ ತಂಪಾಗಿದೆ. ಈ ಗವಿಯಲ್ಲಿ ಸುಗೀÅವ ವಾಸಮಾಡುತ್ತಿದ್ದನೆಂದು ಪ್ರತೀತಿ ಇದೆ.

        ಗವಿಯ ಎದುರು ವಿಶಾಲ ಬಂಡೆಯ ಮೇಲೆ ಬಿಳಿಯ ಗೆರೆಗಳಿದ್ದು, ಅದನ್ನು ಸೀತೆಯ ಸೆರಗು ಎಂದು ಕರೆಯುತ್ತಾರೆ. ಸೀತೆಯನ್ನು ಎಳೆದೊಯ್ಯುವಾಗ ಆಕೆಯ ಸೆರಗು ಬಂಡೆಯ ಮೇಲೆ ಬಿದ್ದು ಈ ಗುರುತು ಉಂಟಾಯಿತು ಎನ್ನುತ್ತಾರೆ. ಅನಂತರ 

ಸುಗ್ರೀವ ಮತ್ತಿತರ ವಾನರ ಸೇನೆ ಈ ಗುರುತನ್ನು ಆಧಾರವಾಗಿಟ್ಟುಕೊಂಡು ಹೋಗಿ ಲಂಕೆಯಲ್ಲಿ ಸೀತೆಯನ್ನು ಪತ್ತೆ ಮಾಡಿದರು ಎಂದು ನಂಬಲಾಗಿದೆ. ದುಂದುಭಿ ಎಂಬ ರಾಕ್ಷಸನ ತಲೆಯನ್ನು ಕಡಿದು ಮತಂಗ ಪರ್ವತದ ಮೇಲೆ ಎಸೆದುದಕ್ಕೆ ಮತಂಗ ಮುನಿ ಕೋಪಗೊಂಡು, ಆ ಪರ್ವತವನ್ನು ವಾಲಿ ಪ್ರವೇಶಿಸಕೊಡದೆಂಬ ನಿರ್ಬಂಧ ಹಾಕಿದ. ಈ ಕಾರಣದಿಂದ ವಾಲಿಯ ಆಕ್ರಮಣದಿಂದ ಬಚಾವಾಗಲು ಸುಗ್ರೀವ ಮತ್ತು ಹನುಮಂತ ಇಲ್ಲಿ ಆಶ್ರಯ ಪಡೆದಿದ್ದರು. ಸೀತೆ ಬಳಸಿದ ಆಭರಣಗಳನ್ನು ಶೇಖರಿಸಿದ ವಾನರರು ಅದನ್ನೆಲ್ಲಾ ಇಲ್ಲಿಯ ಸುಗ್ರೀವ ಗುಹೆಯೊಳಗೆ ಕಾಯ್ದಿಟ್ಟಿದ್ದರಂತೆ. 

 ಒಟ್ಟಾರೆ ಆನೆಗುಂದಿ ಸುತ್ತಮುತ್ತ ತಿರುಗಾಡಿದರೆ ರಾಮಾಯಣದ ನೆನಪುಗಳ ಪುಟ ತಿರುವಿಹಾಕಿದಂತಾಗುತ್ತದೆ. 

ಚಿತ್ರಗಳು : ಶ್ರೀಕಾಂತ ಅಕ್ಕಿ.

-ಬಸವರಾಜ ಕರುಗಲ್‌

Trending videos

Back to Top