CONNECT WITH US  

ಅಡಿಕೆಗೆ ನಿಷೇಧದ ಭೀತಿ; ತೆಂಗಿಗೆ ಮಂಗನ ಹಾವಳಿ

ಉಡುಪಿ: ಒಂದೆಡೆ ಅಡಿಕೆ ನಿಷೇಧದ ಪ್ರಸ್ತಾವ, ಇನ್ನೊಂದೆಡೆ ಜಿಲ್ಲೆಯಾದ್ಯಂತ ಮಂಗನ ಹಾವಳಿಯಿಂದ ತೆಂಗು ಬೆಳೆಗಾರರು ಭಾರೀ ನಷ್ಟ ಹೊಂದುತ್ತಿರುವುದು-ಇವೆರಡೂ ವಿಚಾರಗಳು ಡಿ.31ರಂದು ನಡೆದ ಉಡುಪಿ ಜಿ.ಪಂ.ಸಾಮಾನ್ಯಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದವು. ನಿಷೇಧದ ವಿರುದ್ದ ಹಾಗೂ ಮಂಗನ ಹಾವಳಿಗೆ ಪರಿಹಾರ ಕೇಳುವ ನಿರ್ಣಯವನ್ನು ಕೈಗೊಂಡು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಲು ಜಿ.ಪಂ. ತೀರ್ಮಾನಿಸಿತು.

ಪ್ರಶ್ನೋತ್ತರ ಅವಧಿಯಲ್ಲಿ ವಿಚಾರ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಅವರು ''''''ಅಡಿಕೆ ನಿಷೇಧ ಪ್ರಸ್ತಾವದಿಂದ ರೈತರು ಕಂಗಾಲಾಗಿದ್ದಾರೆ. ಹಾಗಾಗಿ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಈ ಬಗ್ಗೆ ಜಿ.ಪಂ. ನಿರ್ಣಯ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದರು. ಇದಕ್ಕೆ ಕೆಲವು ಸದಸ್ಯರು ದನಿಗೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗೋಪಾಲ ಪೂಜಾರಿ ಅವರು ''''ಅಡಿಕೆ ನಿಷೇಧ ಮಾಡಲು ಬಿಡುವುದಿಲ್ಲ ಎಂದು ಕೇಂದ್ರದ ಆರೋಗ್ಯ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ'' ಎಂದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ಅನಂತ ಮೊವಾಡಿ ಮತ್ತು ಮಂಜುನಾಥ ಪೂಜಾರಿ ಅವರು '''' ನಿಷೇಧದ ವಿರುದ್ಧ ನಿರ್ಣಯ ಮಾಡುವುದಕ್ಕೆ ವಿರೋಧವಿಲ್ಲ. ಆದರೆ ನಿಷೇಧದ ಬಗ್ಗೆ ಸರಕಾರ ಅಧಿಕೃತವಾಗಿ ಪ್ರಕಟಿಸಿಲ್ಲ. ಇದನ್ನು ರಾಜಕೀಯ ಲಾಭಕ್ಕಾಗಿ ಪ್ರಚಾರ ಮಾಡಲಾಗುತ್ತಿದೆ'' ಎಂದರು. ಇದು ಗದ್ದಲಕ್ಕೆ ಕಾರಣವಾಯಿತು. ''''ಹಾಗಾದರೆ ಅಫಿಧವಿತ್‌ನ್ನು ವಾಪಸ್‌ ಪಡೆಯಲಿ'' ಎಂದು ಶಂಕರ ಪೂಜಾರಿ ಒತ್ತಾಯಿಸಿದರು. ಅಧ್ಯಕ್ಷ ಉಪೇಂದ್ರನಾಯಕ್‌ ''''ಈ ಕುರಿತಾಗಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಡುವ'' ಎಂದು ಹೇಳಿದರು.

ಪರಿಹಾರಕ್ಕೆ ಆಗ್ರಹ

ಉಪಾಧ್ಯಕ್ಷೆ ಮಮತಾ ಶೆಟ್ಟಿ ಮತ್ತು ಶಂಕರ ಪೂಜಾರಿ ಅವರು ''''ಜಿಲ್ಲೆಯಲ್ಲಿ ಮಂಗಗಳ ಹಾವಳಿ ಎಲ್ಲೆಡೆ ಪಸರಿಸುತ್ತಿದೆ. ತೆಂಗು ಬೆಳೆಗಾರರು ಇದರಿಂದ ತೀವ್ರ ನಷ್ಟ ಹೊಂದುತ್ತಿದ್ದಾರೆ. ಸರಕಾರ ಪರಿಹಾರ ನೀಡಬೇಕು'' ಎಂದು ಒತ್ತಾಯಿಸಿದರು. ''''1,000 ತೆಂಗಿನಕಾಯಿ ಪಡೆಯುತ್ತಿದ್ದ ನಾವು ಮಂಗಗಳ ಹಾವಳಿಯಿಂದಾಗಿ ಅಂಗಡಿಯಿಂದ ತೆಂಗಿನಕಾಯಿ ತರುವ ಸ್ಥಿತಿ ಉಂಟಾಗಿದೆ. ತೆಂಗು ಬೆಳೆಗಾರರು ತಮ್ಮ ತೊಂದರೆಯನ್ನು ಯಾರಿಗೂ ಹೇಳದಂತಹ ಸ್ಥಿತಿಯಲ್ಲಿದ್ದಾರೆ'' ಎಂದು ಉಪಾಧ್ಯಕ್ಷೆ ಮಮತಾ ಶೆಟ್ಟಿ ಅಲವತ್ತುಕೊಂಡರು. ಈ ವಿಚಾರ ಕೂಡ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು. ಆಗ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಅಧಿಕಾರಿ ಸತೀಶ್‌ ''''ಮಂಗಗಳನ್ನು ಹೊರತುಪಡಿಸಿ ಇತರ ಕಾಡುಪ್ರಾಣಿಗಳಿಂದ ಹಾನಿಯಾದರೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ'' ಎಂದರು. ''''ಮಂಗಗಳ ಹಾವಳಿ ಮಿತಿ ಮೀರಿದೆ. ಆದರೆ ಕಾನೂನು ತಿದ್ದುಪಡಿಯಾಗದೆ ಪರಿಹಾರ ಕಷ್ಟ. ಇದನ್ನು ಅರಣ್ಯ ಸಚಿವರು ಕೂಡ ವಿಧಾನಸಭೆಯಲ್ಲಿ ಹೇಳಿದ್ದಾರೆ'' ಎಂದು ಶಾಸಕ ಗೋಪಾಲ ಪೂಜಾರಿ ಹೇಳಿದರು. ಆದಾಗ್ಯೂ ಪರಿಹಾರ ನೀಡುವಂತೆ ಒತ್ತಾಯಿಸುವ ನಿರ್ಣಯವನ್ನು ಸರಕಾರಕ್ಕೆ ಕಳುಹಿಸಿಕೊಡಲು ತೀರ್ಮಾನಿಸಲಾಯಿತು.

ಆಂಗನವಾಡಿಗಳಿಗೆ ಆವರಣಗೋಡೆ

ಹೆಮ್ಮಾಡಿಯಲ್ಲಿ ಇತ್ತೀಚೆಗೆ ರಸ್ತೆ ಪಕ್ಕದ ಅಂಗನವಾಡಿಯಿಂದ ಹೊರ ಹೋಗುತ್ತಿದ್ದ ಮಗು ವಾಹನಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆಯನ್ನು ಉಲ್ಲೇಖೀಸಿದ ಗಣಪತಿ ಶ್ರೀಯಾನ್‌ ಅವರು ''''ರಸ್ತೆ ಪಕ್ಕದಲ್ಲಿರುವ ಅಂಗನವಾಡಿಗಳಿಗೆ ಆವರಣಗೋಡೆ ಇಲ್ಲದಿರುವುದರಿಂದ ಮಕ್ಕಳು ವಾಹನ ಅಪಘಾತಕ್ಕೊಳಗಾಗುವ ಸಾಧ್ಯತೆ ಇದೆ. ಹಾಗಾಗಿ ಇಂತಹ ಅಂಗನವಾಡಿಗಳನ್ನು ಗುರುತಿಸಿ ಆವರಣಗೋಡೆ ನಿರ್ಮಿಸಬೇಕು'' ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರಾಜೇಂದ್ರ ಬೇಕಲ್‌ ಅವರು ''''ಜಿಲ್ಲೆಯ 323 ಅಂಗನವಾಡಿಗಳಿಗೆ ಆವರಣಗೋಡೆ ಇಲ್ಲ. ಈ ಪೈಕಿ 177 ಅಂಗನವಾಡಿಗಳು ರಸ್ತೆ ಬದಿಯಲ್ಲೇ ಇವೆ'' ಎಂದರು. ಆಗ ಹಲವಾರು ಮಂದಿ ಸದಸ್ಯರು ಹಾಗೂ ಅಧ್ಯಕ್ಷರು ''''ಇಂತಹ ಅಪಾಯಕಾರಿ ಅಂಗನವಾಡಿಗಳಿಗೆ ಕೂಡಲೇ ಆವರಣಗೋಡೆ ನಿರ್ಮಿಸಬೇಕು'' ಎಂದು ಸೂಚಿಸಿದರು.

ಅಂಗನವಾಡಿ ಸಮಯ ಭಿನ್ನ ಭಿನ್ನ !

ಸರಕಾರದ ಆದೇಶದಂತೆ ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ಅಂಗನವಾಡಿಗಳು ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಉಡುಪಿ ತಾಲೂಕಿನಲ್ಲಿ 1.30ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸರಕಾರದ ಆದೇಶವನ್ನು ಸರಿಯಾಗಿ ಪಾಲಿಸದಿರುವ ಅಂಗನವಾಡಿ ಕಾರ್ಯರ್ತರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಗಣಪತಿ ಶ್ರೀಯಾನ್‌, ಗೋಪಾಲ ಪೂಜಾರಿ, ಅನಂತ ಮೊವಾಡಿ ಮೊದಲಾದವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೇಕಲ್‌ ''''ಇಂತಹ ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು ತಡೆಹಿಡಿಯಲಾಗಿದೆ. ಅಲ್ಲದೆ ನೋಟೀಸು ಜಾರಿ ಮಾಡಲಾಗಿದೆ'' ಎಂದು ತಿಳಿಸಿದರು.

''''ಇದು ನನ್ನ ಕೆಪಾಸಿಟಿ....!''

ಸುವರ್ಣ ಗ್ರಾಮೋದಯ ಯೋಜನೆಯ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡುವ ಕುರಿತಾಗಿ ಆಡಳಿತ ಮತ್ತು ಪ್ರತಿಪಕ್ಷ ಹಾಗೂ ಶಾಸಕ ಗೋಪಾಲ ಪೂಜಾರಿ ನಡುವಿನ ತೀವ್ರ ವಾಗ್ವಾದಕ್ಕೆ ಸಭೆ ಸಾಕ್ಷಿಯಾಯಿತು. ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್‌ ಮತ್ತು ಬಾಬು ಶೆಟ್ಟಿಯವರು ''''ಸು.ಗ್ರಾ.ಯೋ.ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲು ಅವಕಾಶವಿದೆಯೇ? ಒಂದು ವೇಳೆ ಹೀಗೆ ಅವಕಾಶವಿದ್ದರೆ ಬೈಂದೂರು ಕ್ಷೇತ್ರದಂತೆ ಕಾರ್ಕಳ ಹಾಗೂ ಇತರ ಕ್ಷೇತ್ರಗಳಲ್ಲೂ ವಹಿಸಿಕೊಡಲಿ'' ಎಂದರು. ಇದು ಭಾರೀ ಚರ್ಚೆಗೆ ಕಾರಣವಾಯಿತು. ಅನಂತಮೊವಾಡಿ, ಮಂಜುನಾಥ ಪೂಜಾರಿ ಮೊದಲಾದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಕೂಡ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಟ್ಟ ಕಾಮಗಾರಿಗಳ ಚರ್ಚೆ ನಡೆಯಲಿ ಎಂದರು. ಆಗ ಮಾತನಾಡಿದ ಗೋಪಾಲ ಪೂಜಾರಿ ''''ನಾನು ಬೇರೆ ಕಡೆ ಆಗಿರುವುದನ್ನೇ ಉದಾಹರಣೆಯಾಗಿಟ್ಟುಕೊಂಡು ರಾಜ್ಯ ಹಣಕಾಸು ಇಲಾಖೆಯಿಂದ ಒಪ್ಪಿಗೆ ಪಡೆದುಕೊಂಡು ಬಂದದ್ದು. ಇದು ನನ್ನ ಕೆಪಾಸಿಟಿ. ಇದರಲ್ಲಿ ದೋಷವಾದರೆ ಹೇಳಲಿ. 4 ವರ್ಷಗಳಿಂದೀಚೆಗೆ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಟ್ಟ ಕಾಮಗಾರಿಗಳ ತನಿಖೆ ನಡೆಯಲಿ'' ಎಂದರು.

ಗೀತಾಂಜಲಿ ಸುವರ್ಣ, ಮಲ್ಲಿಕಾ ಪೂಜಾರಿ ಮೊದಲಾದವರು ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಮಿತಿ ಅಧ್ಯಕ್ಷ ಅರುಣ್‌ ಶೆಟ್ಟಿ, ಸಿಇಒ ಎಸ್‌.ಎ.ಪ್ರಭಾಕರ ಶರ್ಮ, ಉಪಕಾರ್ಯದರ್ಶಿ ಪ್ರಾಣೇಶ್‌ ರಾವ್‌, ಮುಖ್ಯ ಯೋಜನಾಧಿಕಾರಿ ವಿಜಯ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ಕೊರಗ ಸಮುದಾಯದ ಪ್ರತಿಭಾನ್ವಿತೆ ಸಬಿತಾ ಗುಂಡ್ಮಿ ಅವರು ಮಂಗಳೂರು ವಿ.ವಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರನ್ನು ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್‌ ಅವರು ಸಮ್ಮಾನಿಸಿದರು.

ಬಿಪಿಎಲ್‌ ಸಂತೆಯಲ್ಲಿ ಮಾರಾಟ...!

ಅರ್ಹರಿಗೆ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಇದರ ದುರುಪಯೋಗವಾಗುತ್ತಿದೆ. ತ್ರಾಸಿಯಲ್ಲಿ ಉಚಿತ ವಿದ್ಯುತ್‌ ಸಂಪರ್ಕ ಬಡ ದಲಿತ ವರ್ಗದ ಬದಲು ಸರಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡವರಿಗೆ, ಶ್ರೀಮಂತರಿಗೆ ಸಿಗುತ್ತಿದೆ. ಕುಂದಾಪುರದಲ್ಲಿ 2ರಿಂದ 3 ಸಾವಿರ ರೂ. ಕೊಟ್ಟರೆ ಬಿಪಿಎಲ್‌ ಕಾರ್ಡು ಮನೆಗೆ ಬರುತ್ತದೆ. ಕೆಲವರಿಗೆ ಇದೊಂದು ವ್ಯಾಪಾರವಾಗಿದೆ. ಬಿಪಿಎಲ್‌ ಸಂತೆ ಮಾರ್ಕೆಟ್‌ನಲ್ಲಿ ಮಾರಾಟವಾಗುತ್ತಿದೆ ಎಂದು ಸದಸ್ಯ ಅನಂತ ಮೊವಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಾಡಿಗೆ ಭಿಕ್ಷುಕರು...

''''ಇತ್ತೀಚೆಗೆ ಉಡುಪಿಯಲ್ಲಿ ಭಿಕ್ಷೆ ಬೇಡುತ್ತಿದ್ದ 43 ಮಂದಿ ಮಕ್ಕಳನ್ನು ಮಕ್ಕಳ ಸಂರಕ್ಷಣೆ ಘಟಕದವರು ಹಿಡಿದುಕೊಂಡು ಬಂದು ಅವರನ್ನು ಸಂಸ್ಥೆಯೊಂದರ ಸುಪರ್ದಿಗೆ ಕೊಟ್ಟಿದ್ದರು. ಆದರೆ ಈಗ ಅವರಲ್ಲಿ 3 ಮಂದಿ ಮಾತ್ರ ಇದ್ದು ಉಳಿದವರು ತಪ್ಪಿಸಿಕೊಂಡು ಹೋಗಿದ್ದಾರೆ. ಇಲಾಖೆಯ ಬಳಿ ಪುನರ್ವಸತಿ ವ್ಯವಸ್ಥೆ ಇಲ್ಲವಾದರೆ ಈ ರೀತಿಯ ಕಾರ್ಯಾಚರಣೆ ಮಾಡುವುದಾದರೂ ಯಾಕೆ?'' ಎಂದು ಸದಸ್ಯರು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ''''ಪುನರ್ವಸತಿ ಕೇಂದ್ರವಿದ್ದರೆ ಮಾತ್ರ ಸರಿಯಾದ ಪರಿಹಾರ ಸಾಧ್ಯ. ಇಂತಹ ಮಕ್ಕಳ ಬಗ್ಗೆ ಸಾರ್ವಜನಿಕರಿಂದ ನಿರಂತರ ದೂರು ಬರುತ್ತಿದೆ. ಮಕ್ಕಳನ್ನು ಬಾಡಿಗೆಗೆ ಇಟ್ಟು ಭಿಕ್ಷೆ ಬೇಡಿಸುವವರ ಬಗ್ಗೆಯೂ ಮಾಹಿತಿ ಇದೆ'' ಎಂದು ಅಧಿಕಾರಿಗಳು ತಿಳಿಸಿದರು.

ಮಟ್ಟುಗುಳ್ಳ : ಸಬ್ಸಿಡಿ ಬೇಡಿಕೆ

ಮಟ್ಟು ಗುಳ್ಳ ಬೆಳೆಗಾರರಿಗೆ ಬೇಸಗೆಯ 6 ತಿಂಗಳು ಮಾಸಿಕ 50 ಲೀ.ನಂತೆ ಡೀಸೆಲ್‌ನ್ನು ಸಹಾಯಧನದಲ್ಲಿ ಸರಬರಾಜು ಮಾಡಬೇಕೆಂದು ಕಟಪಾಡಿ ಶಂಕರ ಪೂಜಾರಿ ಮನವಿ ಮಾಡಿದರು. ''''ಈ ರೀತಿ ಮಂಜೂರು ಮಾಡುವ ಅಧಿಕಾರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇಲ್ಲ'' ಎಂದು ಆರೋಗ್ಯ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿ ಉತ್ತರಿಸಿದರು. ಮಟ್ಟುಗುಳ್ಳಕ್ಕೆ ನೀಡುವುದಾದರೆ ಬೇರೆ ಬೆಳೆಗಾರರಿಗೂ ನೀಡಬೇಕು ಎಂದು ಬಾಬು ಶೆಟ್ಟಿ ಒತ್ತಾಯಿಸಿದರು.


Trending videos

Back to Top