CONNECT WITH US  

ಉಚಿತ ಶಿಕ್ಷಣ ಹಕ್ಕು ಕಾಯ್ದೆ

ಮಂಗಳೂರು: ಉಚಿತ ಶಿಕ್ಷಣ ಹಕ್ಕು ಕಾಯ್ದೆ 2009ರ ಪ್ರಕಾರ 3.50 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಶಾಲಾ ನೆರೆಹೊರೆಯ ಅನಾನುಕೂಲ ಪರಿಸ್ಥಿತಿಯಲ್ಲಿರುವ ಮತ್ತು ದುರ್ಬಲ ವರ್ಗದ ಪೋಷಕರ ಮಕ್ಕಳಿಂದ 2014-15ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಅಥವಾ 1ನೇ ತರಗತಿಗೆ ನಿಗದಿಪಡಿಸಲಾದ ಶೇ. 25ರ ಸೀಟನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಭಾಷಾ ಮತ್ತು ಮತೀಯ ಅಲ್ಪಸಂಖ್ಯಾಕ ಶಾಲೆಗಳನ್ನು ಹೊರತುಪಡಿಸಿ ಸೀಟು ಮೀಸಲು ಇಡಲಾಗಿದೆ.

ದ.ಕ. ಜಿಲ್ಲೆಯ 170 ಶಾಲೆಗಳಲ್ಲಿ 1,994 ಸೀಟುಗಳನ್ನು ಮೀಸಲಿಡಲಾಗಿದೆ. ಮೀಸಲಿಟ್ಟ ಸೀಟುಗಳ ವಿವರ ಹೀಗಿದೆ:

37 ಶಾಲೆಗಳಿರುವ ಮಂಗಳೂರು ಉತ್ತರ ವಲಯದಲ್ಲಿ ಪೂರ್ವ ಪ್ರಾಥಮಿಕ ಹಾಗೂ 1ನೇ ತರಗತಿ ಸೇರಿ ಒಟ್ಟು 475 ಸೀಟುಗಳನ್ನು ಮೀಸಲಿರಿಸಿದೆ. 14 ಶಾಲೆಗಳಿರುವ ಮೂಡಬಿದಿರೆ ವಲಯದಲ್ಲಿ 141 ಸೀಟುಗಳು, ಮಂಗಳೂರು ದಕ್ಷಿಣ ವಲಯದ 31 ಶಾಲೆಗಳಲ್ಲಿ 374 ಸೀಟುಗಳು, ಬಂಟ್ವಾಳ ವಲಯದ 34 ಶಾಲೆಗಳಲ್ಲಿ 365 ಸೀಟುಗಳು, ಪುತ್ತೂರು ವಲಯದ 27 ಶಾಲೆಗಳಲ್ಲಿ 375, ಬೆಳ್ತಂಗಡಿ ವಲಯದ 18 ಶಾಲೆಗಳಲ್ಲಿ 176 ಹಾಗೂ ಸುಳ್ಯ ವಲಯದ 9 ಶಾಲೆಗಳಲ್ಲಿ 88 ಸೀಟುಗಳನ್ನು ಮೀಸಲಿರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಶಾಲಾ ದಾಖಲಾತಿ ಕೋರಿ ಪೋಷಕರು ಅರ್ಜಿಗಳನ್ನು ಸಲ್ಲಿಸಲು ಜ. 7ರಿಂದ ಫೆ. 8ರ ವರೆಗೆ ಕಾಲಾವಕಾಶ ನೀಡಲಾಗಿದೆ. ಶಾಲಾವಾರು ಮೀಸಲಿಟ್ಟ ಸೀಟುಗಳನ್ನು ಸಂಬಂಧಿಸಿದ ಶಾಲೆ ಮತ್ತು ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜ. 6ರಿಂದ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿಕ್ಷಣ ಇಲಾಖೆಯ ವೆಬ್‌ಸೈಟ್‌www.schooleducation.kar.nic.in ಸಂಪರ್ಕಿಸಿ, ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಬಹುದು ಎಂದು ಶಿಕ್ಷಣ ಇಲಾಖೆಯ ಪ್ರಕಟನೆ ತಿಳಿಸಿದೆ.

Trending videos

Back to Top