CONNECT WITH US  

ರೌಡಿ ಬಳೆಗಾರ್‌ ಬಂಧನ ಮುಂದುವರಿಕೆ

ಉಡುಪಿ: ಕೇರಳ ಪೊಲೀಸರನ್ನು ಯಾಮಾರಿಸಿ ಎಸ್ಕೇಪ್‌ ಆಗಿ ಗೋವಾದಲ್ಲಿ ತಲೆಮರೆಸಿಕೊಂಡು ಅಲ್ಲಿ ಕಳವು ನಡೆಸಿ ಗೋವಾದ ಕಳಂಗಾಟ್‌ ಪೊಲೀಸರಿಂದ ಬಂಧಿತನಾಗಿದ್ದ ರೌಡಿ ನಾಗರಾಜ್‌ ಬಳೆಗಾರ್‌ನನ್ನು ಗೋವಾದ ಮಾಪೂಸ ಜೈಲಿನಿಂದ ಹಿರಿಯಡಕ ಪೊಲೀಸರು ಕರೆತಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಯ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದಾರೆ.

ಹಿರಿಯಡಕ ಸಬ್‌ಜೈಲಿನಲ್ಲಿ 2011ರ ಜ. 14ರಂದು ರೌಡಿ ವಿನೋದ್‌ ಶೆಟ್ಟಿಗಾರನನ್ನು ಚೂರಿ ಇರಿದು ಕೊಂದ ಪ್ರಕರಣದ ಆರು ಆರೋಪಿಗಳಲ್ಲಿ ನಾಗರಾಜ ಕೂಡ ಒಬ್ಬ. ಹಾಗಾಗಿ ನಾಗರಾಜನ್ನು ಮಾತ್ರ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ. ಮತ್ತೆ ಮೂವರು ಶಿವಮೊಗ್ಗ, ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರನ್ನು ಕೂಡ ಪೊಲೀಸರು ಡಿ. 31ರಂದು ಕೋರ್ಟಿಗೆ ಹಾಜರುಪಡಿಸಿದರು. ಈ ಪ್ರಕರಣದಲ್ಲಿ ನಾಗರಾಜನ ಪತ್ನಿ ವಿಜಯಲಕ್ಷ್ಮಿ ಆರೋಪಿಯಲ್ಲದ ಕಾರಣ ಆಕೆಯನ್ನು ಕರೆತರಲಾಗಿಲ್ಲ.

ಮಾರ್ಚ್‌ಗೆ ಮತ್ತೆ ಹಾಜರು

ಶೆಟ್ಟಿಗಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾ. 10, 11, 12ರಂದು ನಾಗರಾಜನನ್ನು ಮತ್ತೆ ಕೋರ್ಟಿಗೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದರು. ಅದರಂತೆ ಹಿರಿಯಡಕ ಪೊಲೀಸರು ಆರೋಪಿಯನ್ನು ಗೋವಾ ಜೈಲಿಗೆ ಕರೆದೊಯ್ದರು. ಶಿರ್ವ, ಕೋಟ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಾಡಿವಾರಂಟ್‌ ಪಡೆದು ಜನವರಿ, ಫೆಬ್ರವರಿಯಲ್ಲಿಯೂ ಕರೆತಂದು ಉಡುಪಿ ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆ ಇದೆ.

Trending videos

Back to Top