CONNECT WITH US  

ಶಿರಾಡಿ ಘಾಟಿ ರಸ್ತೆ : ದಡ್ಡತನ ಯಾಕೆ?

ರಾ.ಹೆ. 75 ರಲ್ಲಿನ ಶಿರಾಡಿ ಘಾಟ್‌ ರಸ್ತೆ ಪ್ರತಿ ವರ್ಷ ಮಳೆಗಾಲ ಕಳೆದ ಕೂಡಲೇ ಹೊಂಡಗಳಿಂದ ಆವೃತವಾಗಿ ಸುದ್ದಿಯಾಗುತ್ತದೆ. ಪತ್ರಿಕೆಗಳಲ್ಲಿ ಆರೋಪ ಪ್ರತ್ಯಾರೋಪ ಹೇಳಿಕೆ ಪ್ರಕಟವಾಗುತ್ತದೆ. ಕೊನೆಗೆ ಶಿರಾಡಿ ರಸ್ತೆಗೆ ಡಾಮರೀಕರಣ ಮಾಡಲು ಅನುದಾನ ಮಂಜೂರಾಗುತ್ತದೆ. ಮತ್ತೆ ಮುಂದಿನ ಮಳೆಗಾಲ ಕಳೆಯುವ ತನಕ ಘಾಟಿ ರಸ್ತೆಯ ಕುರಿತು ಯಾರೂ ಮಾತನಾಡುವುದಿಲ್ಲ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶದ ಕಡೆಗೆ ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ. ಹಾಲಿ ವ್ಯವಸ್ಥೆಯಲ್ಲಿಯೇ ಸಮಸ್ಯೆಯನ್ನು ನಿವಾರಿಸಲು ಸಾಧ್ಯತೆಗಳಿವೆ. ಈ ಸಾಧ್ಯತೆಗಳ ಕುರಿತು ಚಿಂತನೆ ನಡೆಸಿಲ್ಲ. ಈ ಸಾಧ್ಯತೆಗಳು ಹೇಗೆ ಎಂಬ ಕುರಿತು ತಜ್ಞರಿಂದ ಅಭಿಪ್ರಾಯಪಡೆದು ಉದಯವಾಣಿ ಓದುಗರಿಗೆ ನೀಡುತ್ತಿದೆ.

ಪುತ್ತೂರು : ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಿಂದ ಹಾಸನ ಜಿಲ್ಲೆಯ ಸಕಲೇಶಪುರ ಟೋಲ್‌ಗೇಟ್‌ ತನಕ ಇರುವ 33 ಕಿ.ಮೀ. ಉದ್ದದ ಶಿರಾಡಿ ಘಾಟಿ ರಸ್ತೆ ಪರಿಹಾರಗೊಳ್ಳದ ಸಮಸ್ಯೆಯಲ್ಲ. ಶಾಶ್ವತ ಪರಿಹಾರಕ್ಕೆ ಸಾಧ್ಯತೆಗಳು ಇದ್ದರೂ ಕೂಡ ಈ ಕುರಿತು ಆಲೋಚಿಸದೆ ಪ್ರತಿ ವರ್ಷ ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡುವ ಮೂಲಕ ಸರಕಾರದ ಖಜಾನೆಯನ್ನು ವ್ಯರ್ಥಗೊಳಿಸಲಾಗುತ್ತಿದೆ. ಶಿರಾಡಿ ಘಾಟಿ ರಸ್ತೆಯ ಪರಿಹಾರದ ಸಮಸ್ಯೆ ಅಂಗೈಯಲ್ಲಿರುವ ಹಕ್ಕಿಯಂತೆ ಇದ್ದರೂ ಆಕಾಶದಲ್ಲಿ ಹಾರುವ ಹಕ್ಕಿಯನ್ನು ಹಿಡಿಯುವ ವಿಫಲ ಯತ್ನವನ್ನು ಮಾಡಲಾಗುತ್ತಿದೆ!

ಶಿರಾಡಿ ಘಾಟಿ ರಸ್ತೆ ರಾ.ಹೆ. ಆರಂಭದಿಂದಲೂ ಪ್ರತಿವರ್ಷ ಸುದ್ದಿಯಾಗುತ್ತಿತ್ತು. ಈಗ ಅದಿರು ಸಾಗಾಟ ಲಾರಿಗಳ ಕಾರಣ ರಸ್ತೆಯ ಡಾಮರು ಕಿತ್ತು ಹೋಗುತ್ತಿದೆ ಎಂಬ ಆರೋಪವನ್ನು ಮಾಡಲಾಗುತ್ತಿದೆ. ದಶಕಗಳ ಹಿಂದೆ ಶಿರಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ನಿರಂತರವಾಗಿ ಗುಡ್ಡ ಕುಸಿತ ಸಂಭವಿಸುತ್ತಿತ್ತು. ಈಗ ಎಷ್ಟೇ ಮಳೆ ಬಂದರೂ ಗುಡ್ಡ ಕುಸಿತ ಉಂಟಾಗುವುದಿಲ್ಲ. ರಸ್ತೆ ಹಾಳಾಗುವ ಸಮಸ್ಯೆಯನ್ನು ಮುಂದಿಟ್ಟು ಸರಕಾರದ ಹಣ ಖರ್ಚು ಮಾಡಲು ಅವಕಾಶ ಇರುವಾಗ ಗುಡ್ಡ ಕುಸಿಯುವ ಅಗತ್ಯ ಈಗ ಕಾಣುತ್ತಿಲ್ಲ!

ಶಿರಾಡಿ ಘಾಟಿ ರಸ್ತೆ ಪ್ರತಿವರ್ಷ ಮಳೆಗಾಲ ಕಳೆದ ಕೂಡಲೇ ಹೊಂಡಗಳಿಂದ ಆವೃತವಾಗುವ ಮೂಲಕ ಮರು ಡಾಮರೀಕರಣಕ್ಕೆ ಕಾರಣವಾಗುತ್ತಿದೆಯಾದರೆ ಇದು ಸ್ವಯಂಕೃತ ಅಪರಾಧ ಹೊರತು ಪ್ರಕೃತಿಯಿಂದ ಉಂಟಾಗುವ ತೊಂದರೆ ಅಲ್ಲ. ಡಾಮರು ಹಾಕಲು ಸರಕಾರ ಪ್ರತಿವರ್ಷ ಹಣ ನೀಡುವಾಗ ಶಾಶ್ವತ ಪರಿಹಾರ ಕಣ್ಣೆದುರೇ ಇದ್ದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಇದು ಪ್ರತಿವರ್ಷ ಸರಕಾರಕ್ಕೆ ಖರ್ಚು ನೀಡಿದರೂ ಕೆಲವರಿಗೆ ಆದಾಯದ ಮಾರ್ಗವಾಗಿದೆ! ಈ ವಿಚಾರವನ್ನು ಇಲ್ಲಿ ಅನಿವಾರ್ಯವಾಗಿ ಉಲ್ಲೇಖೀಸಬೇಕಾಗಿದೆ.

ಶಾಶ್ವತ ಪರಿಹಾರ ಸಾಧ್ಯ

80 ಕೋಟಿ ರೂ.ಗಳನ್ನು ವ್ಯವಸ್ಥಿತ ರೀತಿಯಲ್ಲಿ ಖರ್ಚು ಮಾಡಿದರೆ ಶಿರಾಡಿ ಘಾಟಿ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರವಿದೆ. ಈ ಕುರಿತು ಆಲೋಚನೆ ಮಾಡಿದರೆ ಮಾತ್ರ ಇದು ಸಾಧ್ಯವಿದೆ. ಗುಂಡ್ಯದಿಂದ ಸಕಲೇಶಪುರ ಸಮೀಪದ ಟೋಲ್‌ಗೇಟು ತನಕದ 33 ಕಿ.ಮೀ. ಶಿರಾಡಿ ಘಾಟಿ ರಸ್ತೆಯಲ್ಲಿ ಇರುವುದು ಒಂದೇ ಡಬ್ಬಲ್‌ ಟರ್ನ್. ಮಿಕ್ಕಂತೆ ಏರು ರಸ್ತೆ ಮತ್ತು ಸಾಮಾನ್ಯ ತಿರುವುಗಳಿಂದ ಕೂಡಿದ ಘಾಟ್‌ ಹೆದ್ದಾರಿ ಇದು. ಹಾಲಿ ಹೆದ್ದಾರಿಯ ಅಗಲ 7 ಮೀಟರ್‌. ಅತಿಯಾದ ಭಾರ ಹೊತ್ತ ವಾಹನಗಳು ರಸ್ತೆಯ ಧಾರಣಾ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುವ ಕಾರಣ ರಸ್ತೆಯಲ್ಲಿ ಹೊಂಡಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲ ಮುಗಿಯುವ ಹೊತ್ತಿಗೆ ರಸ್ತೆ ಸಂಪೂರ್ಣ ಚಿಂದಿಯಾಗಿರುತ್ತದೆ.

ಅರಣ್ಯ ಕಡಿಯಬೇಕಿಲ್ಲ

ಶಿರಾಡಿ ರಸ್ತೆಯಲ್ಲಿ ಯಾವುದೇ ರಕ್ಷಿತಾರಣವನ್ನು ಕಡಿಯುವ ಅಗತ್ಯವಿಲ್ಲ. ಹೆದ್ದಾರಿ ಪ್ರಾಧಿಕಾರದ ವಶದಲ್ಲಿ 7 ಮೀಟರ್‌ ರಸ್ತೆಯ ಜತೆಗೆ ಅದಕ್ಕೆ ಹೊಂದಿಕೊಂಡಂತೆ ಗುಡ್ಡ ಭಾಗದ 25 ಮೀಟರ್‌ ಭೂಮಿ ಇದೆ. ಹಾಲಿ 7 ಮೀಟರ್‌ ರಸ್ತೆಯ ಪಕ್ಕದಲ್ಲಿ 7 ಮೀಟರ್‌ ಅಗಲದ ಇನ್ನೊಂದು ರಸ್ತೆಯನ್ನು ತಿರುವುಗಳ ವೈಜ್ಞಾನಿಕ ವಿನ್ಯಾಸದೊಂದಿಗೆ ನಿರ್ಮಿಸಬೇಕು. ತಲಾ 7 ಮೀಟರ್‌ ಅಗಲದ ಎರಡು ರಸ್ತೆಗಳ ನಡುವೆ ಒಂದು ಮೀಟರ್‌ ಅಗಲದ ರಸ್ತೆ ವಿಭಾಜಕವನ್ನು 33 ಕಿ.ಮೀ. ತನಕ ಅಲ್ಲಲ್ಲಿ ಪಥ ಬದಲಾಯಿಸಲು ಅವಕಾಶ ನೀಡುವ ಮೂಲಕ ನಿರ್ಮಿಸಬೇಕು.

ತಾಂತ್ರಿಕವಾಗಿ ಇದು ಸಾಧ್ಯವಿದೆ. ಈ ಸಾಧ್ಯತೆಯ ಕುರಿತಂತೆ ದಶಕದ ಹಿಂದೆಯೇ ಹೆದ್ದಾರಿ ಪ್ರಾಧಿಕಾರಕ್ಕೆ ತಂತ್ರಜ್ಞರು ವರದಿ ಸಲ್ಲಿಸಿದ್ದರು. ಯಾಕೆಂದರೆ ರಾ.ಹೆ. 75 ಹಿಂದೆ ರಾ.ಹೆ. 48 ಆಗಿತ್ತು. ಈ ಸಂದರ್ಭದಲ್ಲಿ ಕಬ್ಬಿಣದ ಅದಿರು ಹೊತ್ತ ಲಾರಿಗಳ ಬದಲಾಗಿ ಗ್ರಾನೈಟ್‌ ಉದ್ಯಮಕ್ಕೆ ಬಳಸುವ ಬೃಹತ್‌ ಕಲ್ಲುಗಳನ್ನು ಹೊತ್ತ ಲಾರಿಗಳು ಘಾಟಿ ರಸ್ತೆಯಲ್ಲಿ ಮಂಗಳೂರು ಕಡೆಗೆ ಚಲಿಸುತ್ತಿದ್ದವು. ಈ ಕಲ್ಲುಗಳ ತೂಕ 18 ಟನ್‌ಗಳ ತನಕ ಇರುತ್ತಿತ್ತು. ಹೆದ್ದಾರಿಯ ಮೋರಿಗಳು ದುರ್ಬಲಗೊಳ್ಳಲು ಮತ್ತು ಸೇತುವೆಗಳು ಶಿಥಿಲಗೊಳ್ಳಲು ಕಾರಣವಾಗಿದ್ದ ಕಲ್ಲು ಸಾಗಾಟ ಲಾರಿಗಳ ಓಡಾಟ ಅಂದಿನ ಹೆದ್ದಾರಿ ಇಲಾಖಾ ಎಂಜಿನಿಯರ್‌ಗಳನ್ನು ಎಚ್ಚರಿಸಿತ್ತು. ಈ ಸಂದರ್ಭದಲ್ಲಿ ಘಾಟಿ ರಸ್ತೆಯನ್ನು ತಲಾ 7 ಮೀಟರ್‌ ಅಗಲದ ಎರಡು ರಸ್ತೆಗಳನ್ನಾಗಿ ಪರಿವರ್ತಿಸಿ ಮಂಗಳೂರಿನಿಂದ ಸಕಲೇಶಪುರ ಕಡೆಗೆ ಚಲಿಸುವ ವಾಹನಗಳಿಗೆ ಒಂದು ರಸ್ತೆ ಹಾಗೂ ಸಕಲೇಶಪುರದಿಂದ ಮಂಗಳೂರು ಕಡೆಗೆ ಚಲಿಸುವ ವಾಹನಗಳಿಗೆ ಇನ್ನೊಂದು ರಸ್ತೆಯನ್ನು ಬಳಸಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ವರದಿಯನ್ನು ಸಲ್ಲಿಸಲಾಗಿತ್ತು. ಆದರೆ ತದನಂತರ ಬಂದ ಬುದ್ಧಿವಂತ ಎಂಜಿನಿಯರ್‌ಗಳು ಈ ಕುರಿತು ಆಲೋಚಿಸಲಿಲ್ಲ.

ಇದರ ಪರಿಣಾಮವಾಗಿ ಉಪ್ಪಿನಂಗಡಿ - ಮಾಣಿ ನಡುವಣ ಸೇತುವೆ ದುರ್ಬಲಗೊಂಡು ಪರ್ಯಾಯ ಸೇತುವೆ ನಿರ್ಮಿಸಬೇಕಾಯಿತು. ಪರ್ಯಾಯ ಸೇತುವೆಯ ನಿರ್ಮಾಣದ ತನಕ ವಾಹನ ಸಂಚಾರಕ್ಕೆ ಕಲ್ಪಿಸಿದ್ದ ತಾತ್ಕಾಲಿಕ ಸೇತುವೆ ನೀರಲ್ಲಿ ಕೊಚ್ಚಿಹೋಗಿತ್ತು. 30ಕ್ಕೂ ಹೆಚ್ಚು ಮೋರಿಗಳು ಬಿರುಕು ಬಿಟ್ಟಿದ್ದವು. ಆದರೂ ಶಿರಾಡಿ ಘಾಟಿ ರಸ್ತೆಗೆ ಪರಿಹಾರ ಮಾರ್ಗ ಕಂಡುಕೊಳ್ಳದೆ ಸುಮ್ಮನೆ ಕಾಲ ಕಳೆದು ಸೇವಾ ಮುಂಭಡ್ತಿ ಪಡೆಯುವ ಮೂಲಕ ಮಂಗಳೂರಿನಲ್ಲಿಯೇ ಹೆದ್ದಾರಿ ಎಂಜಿನಿಯರ್‌ಗಳು ಬಿಡಾರ ಹೂಡಿದ್ದರು. ಇವರು ಮಾಡಿದ ಪಾಪದ ಫಲವೇ ಪ್ರತಿವರ್ಷ ಶಿರಾಡಿ ರಸ್ತೆ ಚಿಂದಿಯಾಗಲು ಕಾರಣವಾಗಿದೆ.

ಯಾಕೆ ಸಾಧ್ಯವಾಗುತ್ತಿಲ್ಲ?

ಶಿರಾಡಿ ಘಾಟಿ ರಸ್ತೆಯಲ್ಲಿ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಭೂ ಪ್ರದೇಶವನ್ನು ಬಳಸಿಕೊಂಡು ತಲಾ 7 ಮೀಟರ್‌ ಅಗಲದ ಎರಡು ರಸ್ತೆಗಳು ಮತ್ತು ಇವುಗಳ ನಡುವೆ ಒಂದು ಮೀಟರ್‌ ಅಗಲದ ರಸ್ತೆ ವಿಭಾಜಕವನ್ನು ನಿರ್ಮಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ರಾ.ಹೆ. ಪ್ರಾಧಿಕಾರದ ಉನ್ನತ ತಂತ್ರಜ್ಞರು ಉತ್ತರಿಸಬೇಕಾಗಿದೆ. ಯಾಕೆಂದರೆ ಅಸಾಧ್ಯವಾದ ಮತ್ತು ಆಸಾಧುವಾದ ಯೋಜನೆಗಳನ್ನು ಸರಕಾರದ ಮುಂದಿಟ್ಟು ಹಣದ ಪ್ರಶ್ನೆ ಬಂದಾಗ ಸರಕಾರ ಕೈ ಚೆಲ್ಲುವಂತೆ ಮಾಡುವ ಉಪಾಯವನ್ನು ಕೈ ಬಿಡಬೇಕು. ಪ್ರತಿವರ್ಷ ಹರಕೆ ಸಂದಾಯದಂತೆ 33 ಕಿ.ಮೀ. ಉದ್ದದ ಶಿರಾಡಿ ಘಾಟ್‌ ರಸ್ತೆಯನ್ನು ಮಳೆಗಾಲ ಕಳೆದ ಬಳಿಕ ಡಾಮರೀಕರಣಗೊಳಿಸುವ ಮತ್ತು ಮುಂದಿನ ಮಳೆಗಾಲದಲ್ಲಿ ರಸ್ತೆ ಹಾಳಾಗುವಂತೆ ಮಾಡುವ ಕೆಲಸಗಳನ್ನು ಹೆದ್ದಾರಿ ಎಂಜಿನಿಯರ್‌ಗಳು ಕೈ ಬಿಡಬೇಕು.

ರಸ್ತೆ ತಂತ್ರಜ್ಞತೆಯ ಕುರಿತಂತೆ ಪರಿಣಿತ ತಜ್ಞರು ಹೆದ್ದಾರಿ ಇಲಾಖೆಯಲ್ಲಿಯೇ ಇದ್ದಾರೆ. ಕೆಲವರು ಹೆದ್ದಾರಿ ಇಲಾಖೆಯಿಂದ ಮೂಲ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ. ಇಂತವರ ತಾಂತ್ರಿಕ ಕೌಶಲಗಳನ್ನು ಬಳಸಿಕೊಂಡು ಲಭ್ಯ ವ್ಯವಸ್ಥೆಯಲ್ಲಿಯೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಬೆಂಗಳೂರಿನಲ್ಲಿ ಕುಳಿತು ಪ್ರತಿವರ್ಷ ಸರಕಾರಕ್ಕೆ ಕೋಟಿಗಟ್ಟಲೆ ರೂಪಾಯಿ ಹೊರೆಯಾಗುವ ಯೋಜನೆಗಳನ್ನು ತಯಾರಿಸುವುದನ್ನು ಕೈ ಬಿಡಬೇಕು.

ಅಸಾಧ್ಯವಾದುದನ್ನು ಕೈ ಬಿಡಿ

ಶಿರಾಡಿ ಘಾಟ್‌ ರಸ್ತೆಗೆ ಸುರಂಗ ಮಾರ್ಗ ರಚಿಸುವ ಸಾವಿರಾರು ಕೋಟಿ ರೂ.ಗಳ ಯೋಜನೆಯೊಂದನ್ನು ಕಳೆದ 3 ವರ್ಷಗಳಿಂದ ತೇಲಿ ಬಿಡಲಾಗಿದೆ. ಯಾವುದು ಸತ್ಯ. ಮತ್ತು ಯಾವುದು ಸುಳ್ಳು ಎಂಬುದನ್ನು ಅಂದಾಜಿಸಲಾಗದಷ್ಟು ರೀತಿಯಲ್ಲಿ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ವಾಸ್ತವ ಮತ್ತು ಅವಾಸ್ತವಗಳನ್ನು ಮಿಶ್ರಣಗೊಳಿಸಿ ಗೊಂದಲ ಹುಟ್ಟಿಸುವ ಕೆಲಸವನ್ನು ರಾ.ಹೆ. ಪ್ರಾಧಿಕಾರ ಮಾಡುತ್ತಿದೆ.

ಪ್ರಾಥಮಿಕ ಶಾಲೆಯ ಅಧ್ಯಾಪಕರು ಭೂಗೋಳದ ಆಕೃತಿಯನ್ನು ಮೇಜಿನ ಮೇಲೆ ಇರಿಸಿ ಅದರ ಮೇಲೆ ಚಿತ್ರಿಸಿದ ಭೂ ಪಟದ ಒಂದು ತುದಿಗೆ ದಬ್ಬಣ ಚುಚ್ಚಿ ಇನ್ನೊಂದು ತುದಿಯಿಂದ ದಬ್ಬಣವನ್ನು ಹೊರ ತೆಗೆದು ''''''ಮಕ್ಕಳೇ ಭೂಮಿ ದಂಡಗೆ ಇದೆ. ಒಂದು ತುದಿಯಿಂದ ಇನ್ನೊಂದು ತುದಿಯನ್ನು ಸಂಪರ್ಕಿಸುವ ಮೂಲಕ ನೀವು ನೋಡುತ್ತಿದ್ದೀರಿ ಎಂದು ಹೇಳುತ್ತಿದ್ದರು. ಭೂಮಿ ದುಂಡಗೆ ಇದೆ ಖಂಡಾಂತರಗಳ ನಡುವೆ ಸಾಗರ ಇದೆ ಎಂಬುದನ್ನು ತಿಳಿಸಲು ಮಾಡುವ ಕಾಲ್ಪನಿಕ ಪ್ರಯೋಗವಾಗಿತ್ತು.''

ಆದರೆ ಶಿರಾಡಿ ಘಾಟಿ ರಸ್ತೆಗೆ ಸುರಂಗ ಮಾರ್ಗ ಮಾಡುವ ಕಲ್ಪನೆ ಕೂಡ ಇದೇ ರೀತಿ ಇದೆ. ಸರಿಯಾಗಿ ಕಾಣುವ ಸಾಮಾನ್ಯ ರಸ್ತೆಗೆ ಡಾಮರೀಕರಣ ಮಾಡಲು ಸರಕಾರದ ಬಳಿ ಹಣ ಇಲ್ಲ. ಮತ್ತೆ ಸುರಂಗ ಮಾರ್ಗ ಕೊರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಣವನ್ನು ಎಲ್ಲಿಂದ ತರಬೇಕು. ಈ ಯೋಜನೆಯಿಂದ ಲಾಭ ಅಧಿಕಾರಿಗಳಿಗೆ ಮಾತ್ರ. ಯಾಕೆಂದರೆ ರಸ್ತೆಯ ಕುರಿತು ಸಾರ್ವಜನಿಕರು, ಪರ್ತಕರ್ತರು ಪ್ರಶ್ನಿಸಿದರೆ ಸುರಂಗ ಮಾರ್ಗದ ವಿಚಾರವನ್ನು ಹೇಳಬಹುದಲ್ಲವೇ?

ಸುರಂಗ ಮಾರ್ಗ ರಚನೆ ಇಲ್ಲಿ ಅಗತ್ಯವಿಲ್ಲ. ಬೌಗೋಳಿಕವಾಗಿ ಕಡಿಮೆ ಭೂ ಭಾಗವನ್ನು ಹೊಂದಿರುವ ಮುಂದುವರಿದ ರಾಷ್ಟ್ರಗಳಲ್ಲಿ ಸುರಂಗ ರಸ್ತೆ, ಮೇಲು ರಸ್ತೆ, ಇತ್ಯಾದಿ ಕಾಮಗಾರಗಳನ್ನು ನಡೆಸುವ ಮೂಲಕ ರಸ್ತೆ ಸಂಚಾರವನ್ನು ನಿರ್ವಹಿಸುತ್ತಿರುವ ಉದಾಹರಣೆ ನಮ್ಮ ಮುಂದೆ ಇದೆ. ಅವಧಿಗೆ ಮೊದಲೇ ಸೇತುವೆ ಕುಸಿದು ಬೀಳುವ ಘಟನೆಗಳು ನಡೆಯುತ್ತಿರುವ ಈ ದೇಶದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದು ಕೂಡ ಅಪಾಯಕಾರಿ!

Trending videos

Back to Top