CONNECT WITH US  

ಕೆಮರಾಮ್ಯಾನ್‌ ಆಗಿದ್ದ ಹುಡುಗ ಈಗ ಹೀರೋ!

ನಿಜಕ್ಕೂ ಇದೊಂದು ವಿಶೇಷ ಹಾಗೂ ಆಸಕ್ತಿಯ ವಿಚಾರ. ವೃತ್ತಿಯಲ್ಲಿ ಕೆಮರಾಮ್ಯಾನ್‌ ಆಗಿದ್ದ ಒಬ್ಬ ಹುಡುಗ ಇಂದು ತುಳು ಚಲನಚಿತ್ರ ನಟನಾಗಿ ಬೆಳೆದು ನಿಂತಿದ್ದಾರೆ.ಕೆಮರಾದ ಹಿಂದೆ ನಿಂತು, ಮುಂದೆ ನಡೆಯುವ ಘಟನೆಯನ್ನು ಚಿತ್ರೀಕರಿಸುತ್ತಿದ್ದ ಅವರು ಈಗ ಕೆಮರಾದ ಮುಂಭಾಗದಲ್ಲಿ ನಿಂತು ಸಖತ್‌ ಫೇಮಸ್‌ ಆಗಿದ್ದಾರೆ. ಅಂದಹಾಗೆ ಇದಿಷ್ಟು ಮೋಹನ್‌ ಶೇಣಿ ಎಂಬ ನವ ತರುಣನ ವೃತ್ತಾಂತ.

ಭೋಜ ಹಾಗೂ ಭವಾನಿ ದಂಪತಿಯ ಪುತ್ರ ಮೋಹನ್‌ ಮಂಗಳೂರಿನ 'ದಾಸ್‌- ಪ್ರಕಾಶ್‌' ಎಂಬ ಸ್ಥಳೀಯ ಸುದ್ದಿವಾಹಿನಿಯಲ್ಲಿ ಕೆಮರಾಮ್ಯಾನ್‌ ಆಗಿ ಸುಮಾರು 10- 12 ವರ್ಷದ ಹಿಂದೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಿನೆಮಾ ಸಹಿತ ಎಲ್ಲ ರೀತಿಯ ಪತ್ರಿಕಾಗೋಷ್ಠಿಗಳಿಗೆ ಕೆಮರಾಮ್ಯಾನ್‌ ಆಗಿ ಬರುತ್ತಿದ್ದ ಮೋಹನ್‌ ಈಗ ಪತ್ರಿಕಾಗೋಷ್ಠಿಯಲ್ಲಿ ಕುಳಿತು ತನ್ನ ಅಭಿನಯದ ಸಿನೆಮಾದ ಬಗ್ಗೆ ಮಾಧ್ಯಮದವರ ಮುಂದೆ ಮಾತನಾಡುತ್ತಿದ್ದಾರೆ. ಮೊನ್ನೆ ಮೊನ್ನೆ ತೆರೆಗೆ ಬಂದು ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡ 'ಪಡ್ಡಾಯಿ' ಸಿನೆಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಮೋಹನ್‌ ಈಗ 'ಪತ್ತೀಸ್‌ ಗ್ಯಾಂಗ್‌' ತುಳು ಸಿನೆಮಾದಲ್ಲಿಯೂ ಲೀಡ್‌ ರೋಲ್‌ನಲ್ಲಿದ್ದಾರೆ.

ಇನ್ನೂ ಒಂದೆರಡು ಸಿನೆಮಾ ಕೈಯಲ್ಲಿ ಇಟ್ಟಿರುವ ಮೋಹನ್‌ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಭರವಸೆಯ ಬೆಳಕು ಹರಿಸಿದ್ದಾರೆ. ಬೀದಿ ನಾಟಕ ಮಾಡುತ್ತಿದ್ದ ಮೋಹನ್‌ ಅವರಿಗೆ ಮೊದಲಿಗೆ 'ನಿನಾಸಂ' ರಂಗಶಾಲೆಯ ಪರಿಚಯವಾಯಿತು. ಅಲ್ಲಿ ಕಲಿಯಬೇಕು ಎಂಬ ಹಂಬಲ ಬೆಳೆಯಿತು. ಅಲ್ಲಿಂದ ರಂಗಭೂಮಿಯ ಒಡನಾಟ ಬೆಳೆಸಿಕೊಂಡು ಟ್ರೈನರ್‌ ಆಗಿ, ಫಿಲ್ಮ್ ಮೇಕರ್‌ ಆಗಿ ಮುಂದುವರಿದರು. ನೀನಾಸಂನಲ್ಲಿ ಇರುವಾಗಲೇ ಅಭಯಸಿಂಹರ ಪರಿಚಯವಾಗಿ 'ಪಡ್ಡಾಯಿ'ಯಲ್ಲಿ ಅವಕಾಶ ದೊರೆಯಿತು. ನೀನಾಸಂನಲ್ಲಿ ಕಲಿತ ಎಲ್ಲ ರಂಗ ಶಿಕ್ಷಣವೂ ಈ ಸಿನೆಮಾದಲ್ಲಿ ಫಲ ನೀಡಿತು. ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. ಈಗ 'ಪತ್ತೀಸ್‌ ಗ್ಯಾಂಗ್‌'ನಲ್ಲೂ ಮೋಹನ್‌ ಸೌಂಡ್‌ ಮಾಡಲು ಹೊರಟಿದ್ದಾರೆ. ಅಂತೂ ಕೆಮರಾಮ್ಯಾನ್‌ ಆಗಿದ್ದ ಹುಡುಗ ಈಗ ಸಿನೆಮಾದಲ್ಲಿ ಇಷ್ಟರ ಮಟ್ಟಿಗೆ ಸಾಧನೆ ತೋರಿರುವುದು ನಿಜಕ್ಕೂ ವಿಶೇಷ.

ಇಂದು ಹೆಚ್ಚು ಓದಿದ್ದು

Trending videos

Back to Top