CONNECT WITH US  

ಕೊಡಚಾದ್ರಿ ಇಳೆಯ ಸ್ವರ್ಗ

Tour ಸರ್ಕಲ್

ಕರ್ನಾಟಕವು ಪ್ರವಾಸಿ ತಾಣಗಳ ತವರೂರು. ಇಲ್ಲಿ ಚಾರಣಕ್ಕೆ ಪ್ರಶಸ್ತವಾದ ಅದೆಷ್ಟೋ ತಾಣಗಳಿದ್ದರೂ ಭೂಲೋಕದ ಸ್ವರ್ಗವೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ಪ್ರಕೃತಿ ಸೌಂದರ್ಯದ ಎಲ್ಲ ರಸದೌತಣಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವುದು ಈ ಮಲೆನಾಡಿನ ಕೊಡಚಾದ್ರಿ ಪರ್ವತ ಮಾತ್ರ.

ಕೊಡಚಾದ್ರಿ ಗಿರಿಶೃಂಗವನ್ನು ತಲುಪುವುದು ಅಷ್ಟು ಸುಲಭದ ಮಾತಲ್ಲ. ಇದು ಹೇಳಿಕೇಳಿ ಪಶ್ವಿ‌ಮಘಟ್ಟಗಳ ಶ್ರೇಣಿಯಾದ್ದರಿಂದ ಕೊಡಚಾದ್ರಿ ಹಾದಿ ಸವಾಲಿನಿಂದ ಕೂಡಿರುತ್ತದೆ. 12 ಕಿ.ಮೀ. ದೂರದ ಮಣ್ಣಿನ ರಸ್ತೆಯನ್ನು, ದಟ್ಟಾರಣ್ಯದ ನಡುವೆ ನಡೆದುಕೊಂಡು ಅಥವಾ ಸಿಂಗಲ್‌ ರೈಡಿಂಗ್‌ ಬೈಕ್‌ ಮೂಲಕ ಸಾಗಬೇಕು. ಕಾರುಗಳ ಮೂಲಕ ಇಲ್ಲಿನ ರಸ್ತೆಯಲ್ಲಿ ಸಾಗುವುದು ಅಸಾಧ್ಯ. ಅಪಾಯಕಾರಿ ಮತ್ತು ಏರು ತಗ್ಗುಗಳಿಂದ ಕೂಡಿದ ಕಚ್ಚಾ ರಸ್ತೆಯೇ ಇದಕ್ಕೆ ಪ್ರಮುಖ ಕಾರಣ. ಸವಾಲಿನ ರಸ್ತೆಯ ಮೂಲಕ ಪ್ರವಾಸಿಗರನ್ನು ಬೆಟ್ಟದ ತುದಿಗೆ ಇಲ್ಲಿನ ಬಾಡಿಗೆ ಜೀಪ್‌ಗ್ ಳ ಚಾಲಕರು ತಲುಪಿಸುತ್ತಾರೆ.

ಮಳೆಗಾಲದಲ್ಲಂತೂ ರಸ್ತೆಯಲ್ಲೇ  ನೀರು ಹರಿದು ರಸ್ತೆಗಳೆಲ್ಲವೂ ಹಳ್ಳಕೊಳ್ಳಗಳಾಗಿ ಗೋಚರಿಸುತ್ತವೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಜೆ.ಸಿ.ಬಿ. ಮೂಲಕ ಮಣ್ಣನ್ನು ಕಡಿದು ಮತ್ತೆ ರಸ್ತೆಯನ್ನು ನಿರ್ಮಿಸಿ ಜೀಪ್‌ ಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

ಜೀಪ್‌ ಗಳು ಕೊಲ್ಲೂರು, ನಿಟ್ಟೂರು ಮತ್ತು ಹೊಸನಗರದಿಂದ ಕೊಡಚಾದ್ರಿಯ ದೇವಸ್ಥಾನದವರೆಗೂ ಸಾಗುತ್ತವೆ. ಚಾರಣಿಗರು ರಾತ್ರಿಯ ಹೊತ್ತು ಕ್ಯಾಂಪ್‌ ಫೈರ್‌ ಹಾಕಿಕೊಂಡು ಅಥವಾ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರಗಳಲ್ಲಿ ಮುಂಗಡ ಗೊತ್ತುಪಡಿಸಿಕೊಂಡೂ ಉಳಿದುಕೊಳ್ಳಬಹುದು. ಜೀಪ್‌ ಗಳು ರಾತ್ರಿ ಹೊತ್ತು ಗಿರಿಯಲ್ಲಿ ಉಳಿದುಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ಮಾರನೇ ದಿನ ನಿರ್ದಿಷ್ಟ ಅವಧಿಗೆ ಪ್ರಯಾಣಿಕರನ್ನು ವಾಪಸ್‌ ಕರೆದೊಯ್ಯಲು ಬರುತ್ತವೆ. ರಾತ್ರಿ ಉಳಿದುಕೊಳ್ಳುವವರು ಮುಂಚಿತವಾಗಿ ತಿಳಿಸಿದರೆ ಸಸ್ಯಾಹಾರಿ ಊಟದ ವ್ಯವಸ್ಥೆಯನ್ನು ಇಲ್ಲೇ ಮಾಡಿಕೊಡುತ್ತಾರೆ. ಇಲ್ಲಿ ಹೆಚ್ಚಿನೆಲ್ಲ ಮೊಬೈಲ್‌ ನೆಟ್‌ ವರ್ಕ್‌ ಗಳು ಅಲ್ಪಸ್ವಲ್ಪ ಸಿಗುವುದರಿಂದ ಸಂಪರ್ಕಕ್ಕೇನೂ ಅಷ್ಟೊಂದು ತೊಂದರೆಯಾಗಲಾರದು.

ಮಳೆಗಾಲದಲ್ಲಿ ಕೊಡಚಾದ್ರಿಯು ಅಪ್ಸರೆಯಂತೆ ಕಾಣುತ್ತದೆ. ಎಲ್ಲೆಲ್ಲೂ ಮಂಜು ಮುಸುಕಿದ ವಾತಾವರಣ, ತಂಪು, ಹಸುರಾದ ಪರಿಸರ, ಧುಮ್ಮಿಕ್ಕಿ ಹರಿಯುವ ತೊರೆ ಹಾಗೂ ಝರಿಗಳಿಂದ ತುಂಬಿ ಭೂಲೋಕದ ಸ್ವರ್ಗದಂತೆ ಕಾಣಿಸುತ್ತದೆ. ಈ ಗಿರಿಯು 'ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನ' ವ್ಯಾಪ್ತಿಯಲ್ಲಿದ್ದು, ಅನೇಕ ಜೀವ ವೈವಿಧ್ಯತೆಯ, ಅಳಿನಂಚಿನಲ್ಲಿರುವ ಜೀವ ಹಾಗೂ ಸಸ್ಯ ಸಂಪತ್ತುಗಳ ಆಶ್ರಯ ತಾಣವಾಗಿದೆ. ಈ ಪ್ರದೇಶವು ಹುಲಿ, ಚಿರತೆ, ಆನೆ, ಕತ್ತೆ ಕಿರುಬ, ವಿವಿಧ ಜಾತಿಯ ಹಾವುಗಳು ಹಾಗೂ ವೈವಿಧ್ಯಮಯ ಪಕ್ಷಿಗಳ ತವರೂರಾಗಿದೆ. ಕೊಡಚಾದ್ರಿ ಗಿರಿಯು ಕಬ್ಬಿಣ ಹಾಗೂ ಮ್ಯಾಂಗನೀಸ್‌ ಅದಿರನ್ನು ತನ್ನ ಒಡಲಲ್ಲಿ ಯಥೇತ್ಛವಾಗಿ ಬಚ್ಚಿಟ್ಟುಕೊಂಡಿದೆ. ಈ ಪ್ರದೇಶದಲ್ಲಿ ಐತಿಹಾಸಿಕ ಮಹತ್ವದ ಕಾರಣದಿಂದಾಗಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಧರ್ಮ ಸಂಸ್ಥಾಪಕರಾದ ಆದಿ ಶಂಕರಾಚಾರ್ಯರು ಇದೇ ಬೆಟ್ಟದಲ್ಲಿ ಧ್ಯಾನಸ್ಥರಾಗಿದ್ದರೆಂದು ಹೇಳಲಾಗಿದ್ದು, ಅದಕ್ಕೆ ಸಾಕ್ಷಿಯೆಂಬಂತೆ ಧ್ಯಾನಕ್ಕೆ ಕುಳಿತ ಸ್ಥಳದಲ್ಲಿ ಶಿಲೆಯಿಂದಲೇ ನಿರ್ಮಿಸಲಾದ 'ಸರ್ವಜ್ಞ ಪೀಠ'ವನ್ನಿಲ್ಲಿ (ಕಲ್ಲಿನ ಮಂಟಪ) ಕಾಣಬಹುದಾಗಿದೆ. ಇದನ್ನು ಶಾರದಾ ಪೀಠವೆಂದೂ ಕರೆಯುತ್ತಾರೆ. ಇಲ್ಲಿ ನಿತ್ಯ ಅರ್ಚಕರು ಒಂದೂವರೆ ಕಿ.ಮೀ. ಗುಡ್ಡದಲ್ಲಿ ನಡೆದುಕೊಂಡೇ ಬಂದು ಅರ್ಚನೆ ಮಾಡಿ, ಅಭಿಷೇಕ ಮಾಡುತ್ತಾರೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದು ಆನಂದದ ಸಂಗತಿ. ಸರ್ವಜ್ಞ ಪೀಠದ ಸಮೀಪದಲ್ಲೇ  ನೈಸರ್ಗಿಕವಾಗಿ ರೂಪುಗೊಂಡ ಗುಹಾ ದೇವಾಲಯವಾದ 'ಗಣೇಶ ಗುಹಾ' ಎಂಬ ಸ್ಥಳವನ್ನೂ ವೀಕ್ಷಿಸಬಹುದು.

ಶಿಲಾರಚನೆಯ ಸೊಬಗು
ಕೊಡಚಾದ್ರಿಯಲ್ಲಿ ಪುರಾತನ ಕಾಲದಲ್ಲಿ ನಿರ್ಮಿಸಲಾದ ಸುಮಾರು 12 ಅಡಿಗಿಂತಲೂ ಹೆಚ್ಚಿನ ವ್ಯಾಸವುಳ್ಳ ಶಿಲೆಯ ವಿವಿಧ ರಚನೆಗಳನ್ನು ಅಲ್ಲಲ್ಲಿ ಕಾಣಬಹುದು. ಇಲ್ಲಿ ಮೂಕಾಂಬಿಕಾ ದೇವಿಯ ಮಂದಿರವೊಂದಿದೆ. ಇದೇ, ದೇವಿಯು ಮೂಕಾಸುರನನ್ನು ಸಂಹರಿಸಿದ ಸ್ಥಳವೆಂದು ಹೇಳಲಾಗುತ್ತದೆ. ಈ ಗುಡಿಯ ಪಕ್ಕದಲ್ಲೇ  ಸುಮಾರು 40 ಅಡಿ ಎತ್ತರದ ಕಬ್ಬಿಣದ ಐತಿಹಾಸಿಕ ತ್ರಿಶೂಲವೊಂದಿದೆ. ಇದು ಮೂಕಾಸುರನನ್ನು ಸಂಹರಿಸಲು ಬಳಸಿದ ತ್ರಿಶೂಲವೆಂದು ಹೇಳಲಾಗುತ್ತದೆ. ಸಾವಿರಾರು ವರ್ಷಗಳ ಹಿಂದೆಯೇ ಸ್ಥಾಪಿತವಾದ ಈ ತ್ರಿಶೂಲವು ಮಳೆ, ಚಳಿ,ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಸ್ವಲ್ಪವೂ ತುಕ್ಕು ಹಿಡಿಯದೇ ವಿಜ್ಞಾನಕ್ಕೆ ಸವಾಲಾಗಿದೆ.

ಈ ಬೆಟ್ಟದ ಇನ್ನೊಂದು ವಿಶೇಷತೆ ಎಂದರೆ ಅದರ ಮೇಲ್ಭಾಗದಿಂದ ಸುಮಾರು 5 ಕಿ.ಮೀ. ನಡೆದುಕೊಂಡು ಹೋದರೆ ವರ್ಷವಿಡೀ ದುಮ್ಮಿಕ್ಕುವ 'ಹಿಡ್ಲುಮನೆ' ಜಲಪಾತ ನೋಡಬಹುದು. ಅದೇ ರೀತಿ ಕೊಲ್ಲೂರಿನಿಂದ ಮೂಕಾಂಬಿಕಾ ಅಭಯಾರಣ್ಯದ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಬಲಭಾಗಕ್ಕೆ ಹೋದರೆ, ಸೌಪರ್ಣಿಕಾ ನದಿಯಲ್ಲಿ ನಿರ್ಮಿತವಾದ 200- 250 ಅಡಿ ಆಳಕ್ಕೆ ಕೊರೆದ ಕಲ್ಲು ಬಂಡೆಗಳ ನಡುವೆ ಧುಮುಕುವ 'ಅರಶಿನ ಗುಂಡಿ ಜಲಪಾತ'ವನ್ನೂ ಕಾಣಬಹುದು. ಆಗಸ್ಟ್‌ನಿಂದ ಡಿಸೆಂಬರ್‌ ವರೆಗೆ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸೂಕ್ತ ಕಾಲ. 

ಹೆಸರು ಹೇಗೆ ಬಂತು?
ಪಶ್ಚಿಮಘಟ್ಟಗಳ ಸಾಲಿನಲ್ಲಿರುವ 'ಕೊಡಚಾದ್ರಿ'ಯು ಸಮುದ್ರ ಮಟ್ಟದಿಂದ ಸುಮಾರು 1,343 ಮೀ ಎತ್ತರದಲ್ಲಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮಾನ್ಯತೆ ಪಡೆದಿದೆ. ಕೊಡಚಾದ್ರಿಯೆಂಬ ಹೆಸರು 'ಕೊಡಚ' ಹಾಗೂ 'ಆದ್ರಿ' ಎಂಬೆರಡು ಪದಗಳಿಂದ ಬಂದಿದ್ದು, ಕೊಡಚ ಎಂದರೆ 'ಕುಟಜ' (ಗಿರಿಮಲ್ಲಿಗೆ) ಹಾಗೂ ಸಂಸ್ಕೃತದಲ್ಲಿ ಆದ್ರಿ ಎಂದರೆ 'ಶಿಖರ' ಎಂದರ್ಥ. ಇಲ್ಲಿ ಯಥೇತ್ಛವಾಗಿ ಕಂಡುಬರುವ 'ಗಿರಿ ಮಲ್ಲಿಗೆ' ಹೂವುಗಳ ಕಾರಣದಿಂದಾಗಿ ಈ ಗಿರಿಗೆ ಕೊಡಚಾದ್ರಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ರೂಟ್‌ ಮ್ಯಾಪ್‌
· ತೀರ್ಥಹಳ್ಳಿ ಹೊಸನಗರ ಮೂಲಕ ಕೊಲ್ಲೂರಿಗೆ ಸಾಗುವ ದಾರಿ ಮಧ್ಯೆ ನಿಟ್ಟೂರು ಎಂಬಲ್ಲಿ ಬಲತಿರುವು ತೆಗೆದು ಕೊಂಡರೆ ಕಚ್ಚಾ ಮಣ್ಣಿನ ರಸ್ತೆ ಸಿಗುತ್ತದೆ.

· ನಿಟ್ಟೂರಿನಿಂದ ಕೊಡಚಾದ್ರಿಗೆ 12 ಕಿ.ಮೀ. ಕಡಿದಾದ ಮಣ್ಣಿನ ಕೊರಕಲು ರಸ್ತೆಯ ಮೂಲಕವೇ ಸಾಗಬೇಕಾಗಿದೆ.

· ನಿಟ್ಟೂರಿನಿಂದ ಸುಮಾರು ಒಂದೂವರೆ ಕಿ.ಮೀ. ಸಾಗುತ್ತಿದ್ದಂತೆ ಅರಣ್ಯ ಇಲಾಖೆಯ ಗೇಟ್‌ ಸಿಗುತ್ತದೆ. ಇಲ್ಲಿ ಪ್ರತೀ ವಾಹನಕ್ಕೆ ರೂ.100 ಪ್ರವೇಶ ಶುಲ್ಕ ಪಾವತಿಸಿ ರಶೀದಿ ಪಡೆದುಕೊಂಡು ಪ್ರಯಾಣಿಸಬೇಕು.

 · ಬೆಳಗ್ಗೆ 6ರಿಂದ ಸಂಜೆ 6.30ರ ತನಕ ಗೇಟ್‌ ತೆರೆದಿರುತ್ತದೆ.

· ಮುಂಚಿತವಾಗಿ ಬುಕ್ಕಿಂಗ್‌ ಮಾಡಿದರೆ ಊಟ, ವಸತಿಗೆ ಸಮಸ್ಯೆಯಿಲ್ಲ.

 ಸಂತೋಷ್‌ ರಾವ್‌ ಪೆರ್ಮುಡ

ಇಂದು ಹೆಚ್ಚು ಓದಿದ್ದು

Trending videos

Back to Top