CONNECT WITH US  

ಮಳೆಯ ನಡುವೆ ಜಾಲಿ ರೈಡ್‌

ಸೇಹವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ವರ್ಷಕ್ಕೊಮ್ಮೆ ಕಾಲೇಜು ಸ್ನೇಹಿತರೊಡಗೂಡಿ ಬೈಕ್‌ ರೈಡ್‌ ಹೋಗುವುದು ಖುಷಿಕೊಟ್ಟರೆ, 16 ಮಂದಿಯ ತಂಡವನ್ನು ಜತೆಗೂಡಿಸುವುದೇ ದೊಡ್ಡ ಸವಾಲು ಆಗುವುದಿದೆ. ಈ ನಡುವೆಯೂ ಎಲ್ಲರೂ ಒಂದಾಗಿ ಒಂದು ದಿನ ಕಳೆಯುವುದು ಬದುಕಿನುದ್ದಕ್ಕೂ ಸವಿ ನೆನಪನ್ನು ಕಟ್ಟಿಕೊಡುತ್ತದೆ.

ಜಡಿ ಮಳೆಯು ರಭಸವಾಗಿ ಸುರಿಯುತ್ತಿದ್ದ ಜೂನ್‌- ಜುಲೈ ತಿಂಗಳ ಮಧ್ಯದ ಕಾಲವದು. ಕಾಲೇಜು ಗೆಳೆತನವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಸುರಿಯುವ ಧಾರಾಕಾರ ಮಳೆಯ ನಡುವೆ ನಮ್ಮ ಬೈಕ್‌ ಪಯಣ. ಬೇರೆಬೇರೆ ಕ್ಷೇತ್ರ ದಲ್ಲಿ ಉದ್ಯೋಗದಲ್ಲಿರುವ ನಾವು ಎಲ್ಲರೂ ಒಂದೇ ಸಮಯದಲ್ಲಿ ಜತೆಗೂಡಿಸುವ ಸಾಹಸಕ್ಕೆ ಕೈ ಹಾಕಿ ಅದು ಯಶಸ್ವಿಯಾದಾಗ ಯಾತ್ರೆ ಅರ್ಧ ಸಂಪನ್ನಗೊಂಡಂತಾಯಿತು. ಸುಮಾರು 8 ಬೈಕ್‌, 16 ಜನರ ತಂಡ ಈ ಬಾರಿಯ ಮಾನ್ಸೂನ್‌ ರೈಡ್‌ಗೆ ಮುನ್ನುಡಿ ಬರೆಯಿತು.

ಕಾರ್ಮೋಡಗಳ ಗುಂಪಾಟಿಕೆಯ ಇಕ್ಕೆಲದ ಸಂಧಿನೊಳಗಿನಿಂದ ಭುವಿಯ ಸೋಕಲು ಸೂರ್ಯ ಪ್ರಭೆಯು ತವಕಾಡುತ್ತಿದ್ದ ಮುಂಜಾನೆ 6.30ರ ಹೊತ್ತು.ಪಯಣ ಸುಸೂತ್ರ ಸಾಗಲು ವಾಹನಕ್ಕೆ ಇಂಧನವನ್ನು ತುಂಬಿ ರೈಡ್‌ಗೆ ನಾಂದಿ ಹಾಡಿದೆವು. ನಿರಂತರತೆ ಪಡೆದ ಪ್ರಯಾಣ ಸುಮಾರು 10 ಗಂಟೆಗೆ ಚಾರ್ಮಾಡಿ ಘಾಟಿಯ ಕಕ್ಕಿಂಜೆ ಪ್ರದೇಶದ ಎತ್ತರದ ಭಾಗದಲ್ಲಿ ಆಯಾಸ ನೀಗಿಸಲು ಬೈಕ್‌ನಿಂದ ಇಳಿದೆವು.

ಮುಗಿಲು ಕೈಗಟಗುವ ಸನ್ನಿವೇಶ, ಪ್ರಕೃತಿಯ ನೀಳವಾದ ಸೌಂದರ್ಯ ನಮ್ಮನ್ನು ಮೂಕ ಪ್ರೇಕ್ಷಕನಂತೆ ಮಾಡಿತ್ತು. ಅಲ್ಲಿಂದ ಹೊರಡುವಷ್ಟರಲ್ಲಿ ಜೋರಾಗಿ ಗಾಳಿ, ಮಳೆಯ ಎಂಟ್ರಿಯೂ ಆಯಿತು. ಈ ರೈಡ್‌ಗೆ ತಾಳ ಹಾಕಿದಂತೆ ಪೂರಕ ವಾತವರಣ ಮನ್ಸೂನ್‌ ಪ್ರವಾಸ ಅರ್ಥ ಪೂರ್ಣವಾಗುವಂತಿತ್ತು.

ನಮ್ಮೊಡನೆಯೇ ಇದ್ದ ಗೆಳೆಯನಲ್ಲಿ ನೀರು ನಿಯಂತ್ರಿತ ಕೆಮರಾ ಇದ್ದುದರಿಂದ ಮಳೆರಾಯನಿಗೆ ಸಡ್ಡು ಹೊಡೆಯುವಂತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. ವಾಹನ ದಟ್ಟಣೆ ಇಲ್ಲದ ರಸ್ತೆಯಲ್ಲಿ ಹೊಂಡಗುಂಡಿಗೇನು ಬರವಿಲ್ಲವೆಂಬಂತೆ ಅಲ್ಲಲ್ಲಿ ಹೊಂಡಗವ ಕಾಣಿಸಿಕೊಂಡಿತ್ತು.

ಮಧ್ಯಾಹ್ನದ ವೇಳೆಗೆ ನಿಗದಿತ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಕೊಟ್ಟಿಗೆ ಹಾರ ಎಂಬ ಊರಿನ ಬೆಟ್ಟದ ಬಾಗಿಲು- ದೇವರ ಮನೆ ಎಂಬ ಸ್ಥಳಕ್ಕೆ ತಲುಪಿದೆವು. ಅದೊಂದು ರೆಸಾರ್ಟ್‌ ರೂಪದ ವಸತಿಯಾಗಿದ್ದು ಮೊದಲೇ ಊಟೋಪಚಾರದ ವ್ಯವಸ್ಥೆಯನ್ನ ನಿಗದಿಪಡಿಸದ್ದರಿಂದ ಆಯಾಸ ಇಳಿಸಿ, ಹೊಟ್ಟೆ ತುಂಬಿಸಿಕೊಂಡೆವು.

ಅಷ್ಟೊತ್ತಿಗಾಗಲೇ ನಮ್ಮನ್ನ ಸುತ್ತಾಡಿಸಲು ಜೀಪ್‌ ತಯಾರಾಗಿ ನಿಂತಿತ್ತು. ತತ್‌ಕ್ಷಣ ಹತ್ತಿ ಕುಳಿತು ಬೆಟ್ಟದತ್ತ ತೆರಳಿದೆವು. ಬೆಟ್ಟದ ತುತ್ತ ತುದಿಗೆ ಬಂದಾಗ ಕಂಡದ್ದು ಕೇವಲ ಮಂಜು. ಎತ್ತ ನೋಡಿದರಲ್ಲೂ ಮಂಜು ಕವಿದ ಪ್ರಶಾಂತ ವಾತಾವರಣದಲ್ಲಿ ಏಕತಾನತೆ.ಅತ್ತಿತ್ತ ಕಣ್ಣು ಮಿಟುಕಿಸಿದರೆ ಒಬ್ಬರಿಗೊಬ್ಬರು ಕಾಣಿಸದಷ್ಟು ದಟ್ಟ ಮಂಜು ಆವ ರಿ ಸಿತ್ತು. ಅಲ್ಲೂ ಫೋಟೋ ಕ್ಲಿಕ್ಕಿಸುವ ತವಕ. ಆ ಬೆಟ್ಟದ ಪ್ರಶಾಂತತೆಯನ್ನ ಕಣ್ತುಂಬಿಕೊಂಡು ಪಕ್ಕದಲ್ಲಿ ತನ್ನ ಸೆರಗನ್ನೆ ಚಾಚಿ ಹರಿಯುತ್ತಿದ್ದ ಜಲಧಾರೆ ಎಲ್ಲರನ್ನೂ ತನ್ನೆಡೆಗೆ ಬರಮಾಡಿಕೊಂಡಿತು. ಹಾಲ್ನೊರೆಯನ್ನು ಚೆಲ್ಲುತ್ತಾ ಚುಮು ಚುಮು ಚಳಿಗೆ ಮಂಜು ಗಡ್ಡೆಯಂತಿದ್ದ ನೀರಿಗೆ ಕೈ ಹಾಕಿ ನಿಧಾನಕ್ಕೆ ನೀರಲ್ಲಿ ಇಳಿದು ಜಲ ಕ್ರೀಡೆಯನ್ನು ಆಡಿ ಸಂಭ್ರಮಿಸಿದೆವು. ಈ ವೇಳೆಗೆ ಮಾನ್ಸೂನ್‌ ಪ್ರಯಾಣದ ಒಂದು ಹಂತ ಮುಗಿಯುತ್ತಿದ್ದಂತೆ ರಾತ್ರಿಯ ಮನೋರಂಜನೆಗೆ ಮನಸ್ಸು ಹಪಹಪಿಸುತ್ತಿತ್ತು.

ರಾತ್ರಿ ಹೊತ್ತು ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದರಿಂದ ಬೆಂಕಿ ಬೆಳಕಲ್ಲಿ ಚಳಿ ಕಾಯಿಸುವ ಯೋಜನೆ ನಮ್ಮದಾಯಿತು. ಮೃಷ್ಟಾನ ಆಹಾರವನ್ನೆಲ್ಲ ತಯಾರುಗೊಳಿಸಿ ರಾತ್ರಿಯಂತೂ ಮೋಜಿನ ಅಲೆಯಲ್ಲಿ ಮಿಂದೆದ್ದೆ ವು.ಅವೆಲ್ಲಾ ಮುಗಿಸಿ ಮರುದಿನ ಬೆಳಕಾಗುತ್ತಿದ್ದಂತೆಯೇ ಪೂರ್ವದ ದಿಕ್ಕಿನಲ್ಲಿ ಬೆಟ್ಟಗಳು ಸ್ವಾಗತ ಕೋರುವ ಮನೋಹರ ದೃಶ್ಯಗಳನ್ನು ಕಾಣುವ ಭಾಗ್ಯ ಒದಗಿಬಂತು.

ಸಂಪೂರ್ಣ ಬೆಟ್ಟಕ್ಕೆ ಪೂರ್ವ ದಿಕ್ಕು ಹೆಬ್ಟಾಗಿಲಿನಂತೆ ಕಾಣಿಸುತ್ತಿತ್ತು. ಬಳಿಕ ಲಘು ಉಪಹಾರ ಸೇವಿಸಿ ಹೊಲದೆಡೆ ಮುಖ ಮಾಡಿದೆವು. ತೋಟದೊಳಗೆ ಸುತ್ತಾಡಿ, ಹೊಲದಲ್ಲಿ ಕೆಸರೆರಚಾಟಕ್ಕೆ ಮುಂದಾಗುತ್ತಿದ್ದಂತೆ ಬಾಲ್ಯದ ನೆನಪುಗಳ ಮೆಲುಕು ಹಾಕತೊಡಗಿದೆವು. ಅಲ್ಲಿಯೇ ಹೊತ್ತು ಕಳೆದು ಬಳಿಕ ವಸತಿ ಗೃಹಕ್ಕೆ ಬಂದು ನೂರಾರು ನೆನಪುಗಳನ್ನು ಕಟ್ಟಿ ಕೊಂಡು ಕಳಸ ರಸ್ತೆಯಾಗಿ ಮನೆಯತ್ತ ಹಿಂದಿರುಗಿ ಹೊರಟೆವು.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಶಿವಮೊಗ್ಗಕ್ಕೆ ಸುಮಾರು 192 ಕಿ.ಮೀ. ದೂರ.
· ಸುತ್ತಮುತ್ತ ವೀಕ್ಷಿಸಬಹುದಾದ ಹಲವು ಬೆಟ್ಟಗುಡ್ಡ, ದೇಗುಲ, ಫಾಲ್ಸ್‌ ಗಳಿವೆ. ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡು ಹೋದರೆ ಉತ್ತಮ.
 · ವಸತಿ, ಊಟದ ವ್ಯವಸ್ಥೆಗೆ ಮುಂಚಿತವಾಗಿ ಬುಕ್ಕಿಂಗ್‌ ಮಾಡಿದರೆ ಉತ್ತಮ.

ಗಣೇಶ್‌ ಕುಮಾರ್‌, ಮಂಗಳೂರು

ಇಂದು ಹೆಚ್ಚು ಓದಿದ್ದು

Trending videos

Back to Top