CONNECT WITH US  

ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆಗೆ ಆಕ್ರೋಶ

ಸಿರುಗುಪ್ಪ: ಪೆಟ್ರೋಲ್‌, ಡೀಸೆಲ್‌ ಹಾಗೂ ಎಲ್‌ಪಿಜಿ ದರ ಏರಿಕೆ ಖಂಡಿಸಿ ಜಯಕರ್ನಾಟಕ ತಾಲೂಕು ಘಟಕದ
ಪದಾಧಿಕಾರಿಗಳು ನಗರದಲ್ಲಿ ಗುರುವಾರ ಎತ್ತಿನ ಗಾಡಿ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಪ್ರತಿಭಟನಾಕಾರರು ಪದೇ ಪದೇ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ದರ
ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ಗ್ರೇಡ್‌-2 ತಹಶೀಲ್ದಾರ್‌ ಬಿ.ಮಲ್ಲೇಶಪ್ಪ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ರಾಮಕೃಷ್ಣ, ಅಂತಾರಾಷ್ಟ್ರೀಯ ಮಾರುಕಟ್ಟೆ ವ್ಯಾಪ್ತಿಗೆ
ಇಂಧನ ತರುವ ಮೂಲಕ ಬ್ಯಾರಲ್‌ ದರದಲ್ಲಿ ಏರುಪೇರು ಉಂಟಾದಂತೆಲ್ಲಾ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಮಾರುಕಟ್ಟೆಯಲ್ಲಿ ಏರಿಕೆ ಮಾಡುತ್ತಿರುವುದರಿಂದ ಜನಸಾಮಾನ್ಯರ ಬದುಕಿನ ಮೇಲೆ ಸಾಕಷ್ಟು ಪರಿಣಾಮ
ಬೀರುತ್ತಿದ್ದು, ಕೂಡಲೇ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಸಬೇಕೆಂದು ಆಗ್ರಹಿಸಿದರು.
 
ಕೇಂದ್ರ ಸರ್ಕಾರ ಡೀಸೆಲ್‌ ಮತ್ತು ಪೆಟ್ರೋಲ್‌ ಹೆಚ್ಚಳ ಮಾಡುತ್ತಿರುವುದರಿಂದ ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗಲಿದೆ. ರೈತರು ಟ್ರ್ಯಾಕ್ಟರ್‌ ಸೇರಿದಂತೆ ಇನ್ನಿತರ ಕೃಷಿ ಉಪಕರಣಗಳ ಬಳಕೆ ಹಾಗೂ ಸಾರಿಗೆ ಮತ್ತು ವಾಹನ ಸಾಗಣಿಕೆ ದರದಲ್ಲಿಯೂ ಹೆಚ್ಚಳವಾಗುವುದರಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳವಾಗಿ ಸಾಮಾನ್ಯ ಜನರ ಜೀವನ ಮಟ್ಟದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌, ಎಲ್‌ಪಿಜಿ ದರಗಳನ್ನು ಜೆಎಸ್‌ಟಿ ವ್ಯಾಪ್ತಿಗೆ ತರುವ ಮೂಲಕ ದರ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ರೋಹಿತ್‌, ಪ್ರಾ.ಕಾ.ಹನುಮಂತ, ಹುಲುಗಪ್ಪ, ವಿಜಯಕುಮಾರ್‌, ಕರ್ಣಾಕುಮಾರ್‌, ಲೋಕೇಶ್‌, ಅಶೋಕ್‌, ಷಾ, ಹುಸೇನಪ್ಪ, ಯಲ್ಲಯ್ಯ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 


Trending videos

Back to Top