CONNECT WITH US  

"ವಜ್ರ' ದ ತೀರ್ಥ ರಾಮಲಿಂಗೇಶ್ವರ !

ತುಮಕೂರು ಜಿಲ್ಲೆ  ಚಿಕ್ಕನಾಯಕನಹಳ್ಳಿಯ ತೀರ್ಥಪುರಕ್ಕೆ ಸಮೀಪದಲ್ಲಿ ತೀರ್ಥ ರಾಮಲಿಂಗೇಶ್ವರ ದೇವಾಲಯವಿದೆ. ಇದು ರಾಮಾಯಣ ಕಾಲದ್ದೆಂದೂ, ಸಾಕ್ಷಾತ್‌ ಶ್ರೀ ರಾಮಚಂದ್ರನೇ ಈ ಲಿಂಗಕ್ಕೆ ಪೂಜೆ ಸಲ್ಲಿಸಿದನೆಂದೂ ನಂಬಲಾಗಿದೆ. 

ಬೆಟ್ಟಗುಡ್ಡಗಳಿಂದ ಕೂಡಿರುವ ನಿಸರ್ಗದ ರಮಣೀಯ ತಾಣವಾದ ಮದಲಿಂಗನ ಕಣಿವೆ ಮೂಲಕ ಹಾದು ಹೋದರೆ ಸಿಗುವ 'ವಜ್ರ' ಎಂಬ ಸ್ಥಳವು ಪುರಾಣ ಪ್ರಸಿದ್ದ ಪುಣ್ಯ ಕ್ಷೇತ್ರವಾಗಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದ ಹತ್ತಿರವಿರುವ ಈ ಕ್ಷೇತ್ರವು ಆಧ್ಯಾತ್ಮಿಕ ಕೇಂದ್ರವಾಗುವುದರ ಜೊತೆಗೆ ಸುಂದರ ಪ್ರಕೃತಿ ಸೊಬಗಿನಿಂದಲೂ ಕಂಗೊಳಿಸುತ್ತಿದೆ.

ತಾಲ್ಲೂಕು ಕೇಂದ್ರದಿಂದ ಪೂರ್ವಕ್ಕೆ ಸುಮಾರು ಹದಿನೈದು ಕಿ. ಮೀ. ದೂರದಲ್ಲಿರುವ ತೀರ್ಥಪುರ, ಕನ್ನಡದ ಪ್ರಸಿದ್ದ ಕವಿ ತೀ. ನಂ. ಶ್ರೀ ಕಂಠಯ್ಯರ ಜನ್ಮ ಸ್ಥಳ ಕೂಡ. ಇಲ್ಲಿಂದ ಕೇವಲ ಮೂರು ಕಿ. ಮೀ. ದೂರ ಕ್ರಮಿಸಿದರೆ ವಜ್ರ ಸಿಗುತ್ತದೆ. ಸಮುದ್ರಮಟ್ಟದಿಂದ 2596 ಅಡಿ ಎತ್ತರದಲ್ಲಿರುವ ಈ ಪ್ರದೇಶವು ಸುತ್ತ ಮುತ್ತ ಸುಮಾರು 8518 ಎಕರೆ ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಇಲ್ಲಿ ನೆಲೆಗೊಂಡಿರುವ ತೀರ್ಥರಾಮಲಿಂಗೇಶ್ವರನು ಅಪಾರ ಭಕ್ತರ ಆರಾಧ್ಯ ದೈವವಾಗಿ¨ªಾನೆ. ಪ್ರತಿ ವರ್ಷ ಯುಗಾದಿಯ ನಂತರ ಇಲ್ಲಿ ಸ್ವಾಮಿಯ ಜಾತ್ರೆಯು  ಬಹಳ ಅದ್ದೂರಿಯಾಗಿ ನಡೆಯುತ್ತದೆ. ಆಗ ರಥೋತ್ಸವವೂ ಜರುಗುತ್ತದೆ.

ಇತಿಹಾಸ
ವಜ್ರದಲ್ಲಿ ನೆಲೆಗೊಂಡಿರುವ ತೀರ್ಥರಾಮಲಿಂಗೇಶ್ವರ ದೇವಾಲಯವು ಪುರಾಣ ಪ್ರಸಿದ್ದಿ ಹೊಂದಿದೆ. ಇದನ್ನು ಹಿಂದಿನ ಕಾಲದಲ್ಲಿ ವನವಾಸದುರ್ಗ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

 ಈ ದೇವಾಲಯಕ್ಕೂ ರಾಮಾಯಣ, ಮಹಾಭಾರತಕ್ಕೂ ಸಂಬಂಧವಿದೆ. ರಾಮಾಯಣದ ಕಾಲದಲ್ಲಿ ಶ್ರೀ ರಾಮನು ಇಲ್ಲಿನ ತೀರ್ಥದಲ್ಲಿ ಮಿಂದು ಲಿಂಗೇಶ್ವರನನ್ನು ಪೂಜಿಸಿದನಂತೆ. ಈ ಕಾರಣದಿಂದಲೇ  ಈ ದೇವನಿಗೆ ತೀರ್ಥರಾಮಲಿಂಗೇಶ್ವರ ಎಂಬ ಹೆಸರು ಬಂದಿರುವುದಾಗಿ ಇತಿಹಾಸ ಹೇಳುತ್ತದೆ.  ದ್ವಾಪರಯುಗದಲ್ಲಿ ಧರ್ಮರಾಯನು ಇಲ್ಲಿಗೆ ಬಂದಿದ್ದನೆಂಬ  ದಂತಕತೆ ಕೂಡ ಚಾಲ್ತಿಯಲ್ಲಿದೆ. 

ಹಾಗಲವಾಡಿ ಪಾಳೇಗಾರರ ಮನೆದೈವವೆಂದು ಹೇಳಲಾಗುವ ತೀರ್ಥರಾಮಲಿಂಗೇಶ್ವರನ ದೇವಾಲಯವನ್ನು ಪಾಳೇಗಾರರ ದೊರೆ ಎರಿಮದಾನಾಯಕನು ಕ್ರಿ. ಶ. 1478 ರಲ್ಲಿ ಕಟ್ಟಿಸಿದನೆಂಬ ಇತಿಹಾಸವಿದೆ. ಇವನ ಕಾಲದಲ್ಲಿ ನಿರ್ಮಾಣಗೊಂಡ ಕಲ್ಲಿನ ಅರಮನೆ, ಕೋಟೆ ಮತ್ತು ಶಾಸನದ ಕಲ್ಲುಗಳನ್ನು ಈಗಲೂ ನೋಡಬಹುದು. 

ಪವಿತ್ರ ಜಲ 
ಬೆಟ್ಟಗಳ ಸಾಲಿನಲ್ಲಿರುವ ಈ ವಜ್ರದ ಪ್ರಶಾಂತ ಸ್ಥಳ ನೋಡುಗರ ಕಣ್ಮನ ಸೆಳೆಯುತ್ತದೆ. ದೇವಾಲಯದ ಮುಂಭಾಗದಲ್ಲಿ ಹರಿಯುವ ಜಲವು ತುಂಬಾ ಶುದ್ದವಾಗಿದೆ. ಇದು ಭಕ್ತರ ಪಾಲಿನ ಪುಣ್ಯತೀರ್ಥವಾಗಿ ಪರಿಣಮಿಸಿದೆ.

ಇಲ್ಲಿ ಉಗಮವಾಗುವ ನೀರು ಸ್ವಲ್ಪ ದೂರ ಸಾಗಿ ಮರೆಯಾಗುತ್ತದೆ. ಈ ತೀರ್ಥದ ಸೇವನೆಯಿಂದ ರೋಗ ರುಜಿನಗಳು ನಿವಾರಣೆಯಾಗುತ್ತವೆ ನಂಬಿಕೆ ಇದೆ. ಸುತ್ತಮುತ್ತಲಿನ ಗ್ರಾಮದೇವರುಗಳ ಮೂರ್ತಿಗಳನ್ನು ಗಂಗಾಪೂಜೆಗೆ ಇಲ್ಲಿಗೆ ತಂದು ಶುದ್ದೀಕರಿಸುವ ವಾಡಿಕೆ ಇದೆ. 

ದೇವಾಲಯದ ಗರ್ಭಗುಡಿಯಲ್ಲಿ ತೀರ್ಥರಾಮಲಿಂಗೇಶ್ವರನ  ಲಿಂಗದ ದರ್ಶನ ಮಾಡಬಹುದು. ಎದುರಿಗೆ ನಂದಿ, ಎಡಭಾಗದಲ್ಲಿ ಪಂಚಲಿಂಗೇಶ್ವರನ ಉದ್ಭವ ಲಿಂಗವನ್ನು ಕಾಣಬಹುದು. ಇನ್ನು ದೇವಾಲಯದಲ್ಲಿ ಗಣಪತಿ, ವೀರಭದ್ರ, ಪಾರ್ವತಿಯರ ವಿಗ್ರಹಗಳಿವೆ.

ಹೋಗೋದು ಹೇಗೆ ?
ಈ ಪುಣ್ಯ ಕ್ಷೇತ್ರಕ್ಕೆ ಹೋಗುವವರು ಸ್ವಂತ ವಾಹನ ಬಳಸುವುದು ಒಳ್ಳೆಯದು. ತುಮಕೂರು- ತಿಪಟೂರು ಹೆದ್ದಾರಿಯಲ್ಲಿ ಸಿಗುವ ಕೊಂಡ್ಲಿ ಕ್ರಾಸ್‌ನಿಂದ ಇಲ್ಲಿಗೆ ಹೋಗಬಹುದು. ಇಲ್ಲಿಂದ ಒಂದೆರೆಡು ಬಸ್‌ಗಳ ಸಂಚಾರವಿದೆ. ದೇವಾಲಯದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ.

 ದಂಡಿನಶಿವರ ಮಂಜುನಾಥ್‌

Trending videos

Back to Top