CONNECT WITH US  

ಗುಬ್ಬಚ್ಚಿ ಗಿಂತ ಚಿಕ್ಕ ಹಕ್ಕಿ : ಕಾಡು ಗುಬ್ಬಿ

     Black Headed Munia Lonchura R Sparrow -ಗುಬ್ಬಚ್ಚಿ ಗಿಂತ ಚಿಕ್ಕ ಹಕ್ಕಿ. ಸುಮಾರು 10 ಸೆಂ.ಮೀ ಚಿಕ್ಕದು. ತಲೆ ಬಾಲ ಕಪ್ಪು ಬಣ್ಣ. ಹೊಟ್ಟೆ ಬೆಳ್ಳಗಿದೆ. ಎದೆಯಮೇಲೆ ಕಪ್ಪು ಬಣ್ಣದ ಪಟ್ಟಿ ಇದೆ. ಬಾಲದ ಅಡಿಯಲ್ಲಿ ಅಂದರೆ ರಂಪ ಭಾಗದಲ್ಲೂ ಕಪ್ಪಿದೆ. ಕಾಲು ಗುಬ್ಬಚ್ಚಿಯನ್ನು ಹೋಲುತ್ತದೆ.  ಆದರೆ ಬೂದು ಗಪ್ಪು ಬಣ್ಣ ಇದೆ. ಶಂಕುವಿನಂತಿರುವ ಬಲವಾದ ಬೂದು ಬಣ್ಣದ ಕೊಕ್ಕು ಕಾಳು ಕಡ್ಡಿ ತಿನ್ನಲು ತುಂಬಾ ಸಹಾಯಕವಾಗಿದೆ. ಬಣ್ಣ ವ್ಯತ್ಯಾಸದಿಂದ ಎರಡು ಉಪಜಾತಿ ಮಾಡಲಾಗಿದೆ. ಗಜನೀ ಭಾಗದಂತಹ ಜೌಗು ಪ್ರದೇಶ ಹುಲ್ಲುಗಾವಲು, ಬಯಲು ಪ್ರದೇಶಗಳಲ್ಲು ಕಾಣಬಹುದು. ಪೆನ್ಸಿಲ್ವೇನಿಯಾ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ಥಾನ, ಮೈನಾವರಗಳಲ್ಲೂ ಕಾಣುವುದು. ಚಿಕ್ಕ ಹರಿಯುವ ನೀರಿನ ತೋಡು ಅಥವಾ ಬೆಲಗು  ಇರುವ ಜಾಗ ಇವುಗಳಿಗೆ ತುಂಬಾ ಪ್ರಿಯ. ಇಂತಹ ಜಾಗಗಳಲಿ ಸ್ವಲ್ಪ ನೆರಳಿದ್ದರೆ ಇನ್ನೂ ಚೆನ್ನ.  ಶ್ವೇತನೇತ್ರಿ, ಕೆಂಪು ಕೆನ್ನೆ ಪಿಕಳಾರ, ಕಪ್ಪು ತಲೆ ಪಿಕಳಾ, ಬಿಳಿ ಹುಬ್ಬಿನ ಪಿಕಳಾರಗಳ ಜೊತೆ ಚಿಕ್ಕ ನೀರಿನ ತೋಡಿನಲ್ಲಿ ಸದಾ ಚಿವ್‌, ಚಿವ್‌ ಎನ್ನುತ್ತಾ ಸ್ನಾನ ಮಾಡುತ್ತಿರುತ್ತದೆ. ಇಂಥ ಸ್ನಾನ ಮಾಡುವ ದೃಶ್ಯ ತುಂಬಾ ಮನೋಹರವಾದುದು. ಮೂರೂರಿನ ನಮ್ಮ ಮನೆಯ ಹತ್ತಿರ ಈ ದೃಶ್ಯವನ್ನು ವೀಡಿಯೋ ಫೋಟೋ ಸಹ ಮಾಡಿದ್ದೇನೆ. ನಾಲ್ಕು ಆರರ ಆಥವಾ 25-30ರ ಗುಂಪಿನಲ್ಲಿರುತ್ತದೆ. ಬೆಟ್ಟಗಳ ನಡುವೆ ಇರುವ ಭತ್ತದ ಗದ್ದೆಗಳಿದ್ದರೆ ಅಲ್ಲಿ ಕಾಣುತ್ತವೆ. ಮಲೆನಾಡು, ಬಯಲು ಸೀಮೆಯ ಹೊಲಗಳಲ್ಲೂ ಇರುತ್ತವೆ.  ಇದರ ದನಿ ತಂತಿ ಮೀಟಿದ ದನಿಯನ್ನು ಹೋಲುತ್ತದೆ. ಜೂನ್‌ನಿಂದ ಅಕ್ಟೋಬರ್‌ ಮರಿಮಾಡುವ ಸಮಯ. ನೀರು ಹರಿಯುವ ಹತ್ತಿರ ಪೊದೆಗಳಿದ್ದರೆಅದರ ಬುಡದಲ್ಲಿ ಬಾಲ್‌ ನಷ್ಟು ದೊಡ್ಡದಾಗಿ ಹುಲ್ಲು ತರಗೆಲೆ ಸೇರಿಸಿ, ದುಂಡಗಿನ ಗೂಡು ಮಾಡಿ ಪಕ್ಕದಿಂದ ಪ್ರವೇಶ ದಾರಿ ಇಡುತ್ತದೆ. ಗೂಡು ಕಟ್ಟಲು ಹುಲ್ಲಿನ ಎಳೆ ಪ್ರಧಾನವಾಗಿ ಉಪಯೋಗಿಸುತ್ತದೆ. ಈ ಹಕ್ಕಿ ಸಾಮೂಹಿಕವಾಗಿ ರಾತ್ರಿ ಮಲಗುತ್ತವೆ. ಹಲವಾರು ಹಕ್ಕಿ ಒಂದೇ ಗೂಡಲ್ಲಿ ಮೊಟ್ಟೆ ಇಟ್ಟು ಕಾವುಕೊಟ್ಟು ಮರಿಮಾಡುತ್ತವೆ. ಜೂನ್‌ನಿಂದ ಆಗಸ್ಟ್‌ ಇದು ಗೂಡು ಕಟ್ಟುವ ಸಮಯ. 1ರಿಂದ 2 ಅಥವಾ 3-4 ಮೊಟ್ಟೆ ಇಡುತ್ತವೆ. ನೀಲಿ ಮೊಟ್ಟೆಯಮೇಲೆ ಕಪ್ಪು ಮಿಶ್ರಿತ ಕಂದು ಚುಕ್ಕೆ ಹಾಗೂ ಮಚ್ಚೆ ಇರುವುದು. ಗಂಡು ಹೆಣ್ಣು ಸಾಮಾನ್ಯವಾಗಿ ಒಂದೇರೀತಿ ಕಾಣುತ್ತದೆ. ಮರಿಗಳ ಪೋಷಣೆಯಲ್ಲಿ ಗಂಡು ಹೆಣ್ಣು ಎರಡೂ ಪಾಲ್ಗೊಳ್ಳುವುದು. 

ಇನ್ನೂ ಇದರ ಗೂಡು ಉತ್ತರ ಕನ್ನಡದ ಬಡಾಳ, ಸಪ್ಪಿನ ಹೊಸಳ್ಳಿ, ಕುಮಟಾದ ಮಾಸೂರು, ಮೂರೂರಿನ ಸುತ್ತ ಮುತ್ತ ಇರುವ ಕರಡದ ಬೇಣಗಳಲ್ಲಿ ಕಲ್ಲು ಪಾರೆಗಳಿರುವ ಹುಲ್ಲುಗಾವಲಿನ ಪ್ರದೇಶದಲ್ಲಿ ಇವೆ.  ಅಘನಾಶಿನಿ ನದೀ ತೀರದ ಭತ್ತದ ಗದ್ದೆಗಳಲ್ಲಿ ಇವು ಧಾನ್ಯಗಳನ್ನೂ ಇಲ್ಲವೆ ಚಿಕ್ಕ ಕ್ರಿಮಿ ಕೀಟಗಳನ್ನು ತಿನ್ನುತ್ತಾ ಕೂಗುತ್ತಿರುವ‌ ದೃಶ್ಯ ಸಾಮಾನ್ಯವಾಗಿ ಕಾಣುತ್ತದೆ.  ಭತ್ತದ ಬಯಲಿನ ಕಳೆ ಬೆಳೆದ ಮಧ್ಯ ನೀರಿದ್ದರೆ ಅಲ್ಲೂ ಸ್ನಾನ ಮಾಡುತ್ತಿರುತ್ತವೆ.  ಕಡಿಮೆ ನೀರಿರುವ ಚಿಕ್ಕ ಹೊಂಡಗಳಲ್ಲಿ ಸ್ನಾನ ಮಾಡುವುದು. ಮೇಲೆ ಹಾರಿ ಕುಳಿತು ರೆಕ್ಕೆ ಒಣಗಿಸಿ ಕೊಳ್ಳುವುದು. ಆಹಾರಕ್ಕಾಗಿ ಹೋಗಿ ಪುನಃ ಬಂದು ಸ್ನಾನ ಮಾಡುವುದು ಇದ ರೂಢಿ.  

Trending videos

Back to Top