CONNECT WITH US  

​ಸೂರಿ ಸಂಪಿಗೆಯಲ್ಲಿ ಚಂದ್ರಿಕಾ ನಗು!

ನಟಿ ಚಂದ್ರಿಕಾ ಈಗ ಹ್ಯಾಪಿಯಾಗಿದ್ದಾರೆ. ಅವರ ಖುಷಿಗೆ ಕಾರಣವೇನು ಗೊತ್ತಾ? ನಿರ್ದೇಶಕ ಸೂರಿ ಅವರ "ಕೆಂಡಸಂಪಿಗೆ'. ಹೌದು, ಚಂದ್ರಿಕಾ ಕೆಂಡಸಂಪಿಗೆಯಲ್ಲಿ ನಾಯಕಿ ತಾಯಿಯಾಗಿ ನಟಿಸಿದ್ದಾರೆ.

ಅದೂ ಸ್ಟಾಂಡರ್ಡ್‌ ಅಮ್ಮ! ಹೌದು, ಆ ಚಿತ್ರದಲ್ಲಿ ಚಂದ್ರಿಕಾ ನಾಯಕಿ ಮಾನ್ವಿತಾ ತಾಯಿಯಾಗಿ ನಟಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಬಗ್ಗೆ ಕೇಳಿಬರುತ್ತಿರುವ ಪ್ರತಿಕ್ರಿಯೆಯಿಂದ ಚಂದ್ರಿಕಾ ಫ‌ುಲ್‌ ಖುಷಿಯಾಗಿದ್ದಾರೆ.

ಚಂದ್ರಿಕಾ ಅವರಿಗೆ "ಕೆಂಡಸಂಪಿಗೆ' ಹುಡುಕಿ ಬಂದ ಪಾತ್ರವಂತೆ. ಅದೂ ಒಂದೊಳ್ಳೆಯ ಪಾತ್ರವಾಗಿದ್ದರಿಂದ ಚಂದ್ರಿಕಾ ಅವರು ಒಂದೇ ಬಾರಿಗೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಅಷ್ಟಕ್ಕೂ ಚಂದ್ರಿಕಾ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳಾವೂ ಬರುತ್ತಿಲ್ಲವೇ? ಈ ಪ್ರಶ್ನೆಗೆ ಚಂದ್ರಿಕಾ ಉತ್ತರವೇನು ಗೊತ್ತಾ? "ನಾನು "ಬಿಗ್‌ಬಾಸ್‌' ಮನೆಯಿಂದ ಬಂದಾಗ, ಒಂದು ಹೇಳಿಕೆ ನೀಡಿದ್ದೆ. ನನಗೆ ಸಿನಿಮಾದಲ್ಲಿ ನಟಿಸೋ ಅವಕಾಶ ಬಂದರೆ ಖಂಡಿತವಾಗಿಯೂ ಮಾಡ್ತೀನಿ. ಯಾವ ಪಾತ್ರವಿದ್ದರೂ ಸರಿ ಅನ್ನೋ ಹೇಳಿಕೊಂಡಿದ್ದೆ. ಆದರೆ, ಯಾವ ಚಿತ್ರಗಳು ಹುಡುಕಿ ಬರಲಿಲ್ಲ.

ಅದು ಚಂದ್ರಿಕಾಗೆ ನಟಿಸೋ ತಾಕತ್ತು ಇಲ್ಲಾ ಅಂತಾನೋ, ಅಥವಾ ಅವರಿಗೆ ಪಾತ್ರಗಳು ಸರಿಹೊಂದುತ್ತವೋ ಇಲ್ಲವೋ ಅಂತಾನೋ ಒಟ್ನಲ್ಲಿ ಯಾರೂ ಬರಲಿಲ್ಲ. ಅವಕಾಶವೂ ಸಿಗಲಿಲ್ಲ. ಆದರೆ, ಸೂರಿ ಮಾತ್ರ, ಒಮ್ಮೆ ಫೋನ್‌ ಮಾಡಿ, ನನ್ನ ಸಿನಿಮಾದಲ್ಲೊಂದು ಪಾತ್ರವಿದೆ. ಅದನ್ನು ನೀವೇ ಮಾಡಬೇಕು. ನೀವು ಹೊರತು ಬೇರ್ಯಾರೂ ಆ ಪಾತ್ರಕ್ಕೆ ಸರಿಹೊಂದುವುದಿಲ್ಲ ಅಂತ ಹೇಳಿದ ಕೂಡಲೇ, ನಾನು ಏನನ್ನೂ ಯೋಚಿಸದೆಯೇ ಓಕೆ ಅಂದಿದ್ದೆ.

ಕಾರಣವಿಷ್ಟೇ, ಸೂರಿ ಅದ್ಭುತ ಬರಹಗಾರರು, ನಿರ್ದೇಶಕರು. ಅವರು ನನ್ನ ಮೇಲೆ ನಂಬಿಕೆ ಇಟ್ಟು ಒಂದು ಪಾತ್ರವಿದೆ ಮಾಡಿ ಅಂದಾಗ, ಇಲ್ಲ ಅನ್ನೋಕ್ಕಾಗಲಿಲ್ಲ. ಅವರು ಹೇಳುತ್ತಿದ್ದಂತೆಯೇ, ನೀವು ಕಥೆ ಮತ್ತು ಪಾತ್ರ ಏನನ್ನೂ ಹೇಳಬೇಡಿ ನಾನು ಮಾಡ್ತೀನಿ ಅಂತ ಹೇಳಿ, ತಾಯಿ ಪಾತ್ರ ನಿರ್ವಹಿಸಿದೆ. ನಿಜವಾಗಲೂ ಆ ಪಾತ್ರಕ್ಕೆ ತೂಕವಿದೆ. ಒಳ್ಳೆಯ ಚಿತ್ರದಲ್ಲಿ ನಾನಿದ್ದೇನಲ್ಲಾ ಎಂಬ ಹೆಮ್ಮೆ ನನ್ನದು ಎನ್ನುತ್ತಲೇ ಹಾಗೊಂದು ನಗು ಬೀರುತ್ತಾರೆ ಚಂದ್ರಿಕಾ.

Trending videos

Back to Top