CONNECT WITH US  

ಮೋಹನ್‌ ಕಾಮಿಡಿ ಸೀಸನ್‌

ಮಾಮ ಆಯ್ತು; ಈಗ ಮನೆಹಾಳನ ಸರದಿ

"ಬಿಗ್‌ ಬಾಸ್‌'ನಿಂದ ಹೊರಬಂದ ನಂತರ ಮೋಹನ್‌ ಒಂದಿಷ್ಟು ಹೊಸ ಸ್ಕ್ರಿಪ್ಟ್ಗಳನ್ನು ಮಾಡಿಕೊಂಡಿದ್ದು, ಈಗ ಒಂದೊಂದಕ್ಕೇ ಮುಕ್ತಿ ನೀಡುತ್ತಿದ್ದಾರೆ. ಅವರ ಹೊಸ ಚಿತ್ರ "ಹಲೋ ಮಾಮ' ನಾಳೆ ಬಿಡುಗಡೆಯಾದರೆ, ಇನ್ನೊಂದು ಚಿತ್ರ "ಮನೆಗೊಬ್ಬ ಮನೆಹಾಳ' ಮುಂದಿನ ತಿಂಗಳು ಪ್ರಾರಂಭವಾಗಲಿದೆ. ಈಗಾಗಲೇ ಆ ಚಿತ್ರವನ್ನು ನಿರ್ಮಿಸುವುದಕ್ಕೆ ನಿರ್ಮಾಪಕರು ಮುಂದೆ ಬಂದಿದ್ದು, ಕಮಿಟ್‌ಮೆಂಟ್‌ ಆಗಿದೆಯಂತೆ.

ಇನ್ನು ಆ ಚಿತ್ರದಲ್ಲಿ ಮನೆಹಾಳ ಯಾರಾಗಿರುತ್ತಾರೆ ಎಂಬುದೇ ಕುತೂಹಲ. ಮೋಹನ್‌ ಆ ಕಥೆಯನ್ನು ತಮಗಾಗಿ ಬರೆದುಕೊಂಡರಂತೆ. ಅಂತಿಮವಾಗಿ "ಮನೆಗೊಬ್ಬ ಮನೆಹಾಳ' ಅವರಾಗುತ್ತಾರೋ ಅಥವಾ ಬೇರೆ ಯಾರಾದರೂ ಆಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಅಂದ ಹಾಗೆ, ಮೋಹನ್‌ ತಮ್ಮ ಹೊಸ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದು, "ಹಲೋ ಮಾಮ' ನಾಳೆ ರಾಜ್ಯಾದ್ಯಂತ ನರ್ತಕಿ ಮತ್ತು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ಜಯಣ್ಣ ವಿತರಿಸುತ್ತಿರುವುದು ಮೋಹನ್‌ ಖುಷಿಗೆ ಇನ್ನೊಂದು ಕಾರಣ. "ಚಿತ್ರ ನೋಡಿದವರೆಲ್ಲಾ ನಗುತ್ತಿದ್ದಾರೆ. ಇಲ್ಲೊಂದು ಯೂನಿವರ್ಸಲ್‌ ಸಂದೇಶವಿದೆ. ಯಾವುದೇ ಬೋಧನೆ ಇಲ್ಲದೆ ಜನ ನಕ್ಕು ಹೊರಬೇಕು ಎನ್ನುವುದು ನನ್ನ ಉದ್ದೇಶ. ಇತ್ತೀಚೆಗೆ ಸ್ವಲ್ಪ ಗಂಭೀರವಾದ ಚಿತ್ರಗಳನ್ನು ನಿರ್ದೇಶಿಸಿದ್ದೆ. ಹಾಗಾಗಿ ಈ ಬಾರಿ ಜನ ನಕ್ಕು ಹಗುರಾಗಲಿ ಎಂದು ಕಾಮಿಡಿ ಚಿತ್ರ ಮಾಡಿದ್ದೀನಿ' ಎನ್ನುತ್ತಾರೆ ಮೋಹನ್‌.

"ಹಲೋ ಮಾಮ' ಚಿತ್ರದಲ್ಲಿ ಮೋಹನ್‌ ಜೊತೆಗೆ ಸಾಂಪತ್ರ, ಸೌಜನ್ಯ, ಭೂಮಿಕಾ, ಅರವಿಂದ್‌ ರಾವ್‌ ಮುಂತಾದವರು ನಟಿಸಿದ್ದು, ಚಿತ್ರವನ್ನು ಬಿ.ಕೆ. ಚಂದ್ರಶೇಖರ್‌ ಎನ್ನುವವರು ನಿರ್ಮಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಮೋಹನ್‌ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಬರೀ ಸಂಭಾಷಣೆಯಷ್ಟೇ ಅಲ್ಲ, ಹಾಡನ್ನೂ ಸಹ ಅವರು ಬರೆದಿದ್ದು, ಅವರು ಬರೆದಿರುವ "ಎಲೆಯ ಮೇಲಿನ ಮಂಜು ...' ಎಂಬ ಹಾಡನ್ನು ಅವರ ಪತ್ನಿ ವಿದ್ಯಾ ಹಾಡಿದ್ದಾರೆ. ಚಿತ್ರಕ್ಕೆ ಧರಮ್‌ ದೀಪ್‌ ಎನ್ನುವವರು ಸಂಗೀತ ಸಂಯೋಜಿಸಿದ್ದು, ಪ್ರಸಾದ್‌ ಬಾಬು ಅವರ ಛಾಯಾಗ್ರಹಣವಿದೆ.

Trending videos

Back to Top