CONNECT WITH US  

ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಡಿ.ವಿ.ಸುಧೀಂದ್ರ ಅವರ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ನಡೆಯಿತು. ಇದೀಗ ತನ್ನ 38 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂಸ್ಥೆ 11 ಪ್ರಶಸ್ತಿಗಳನ್ನು ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಿ ಗೌರವಿಸಿತು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್‌ ಡಿಸೋಜಾ, ನಟ ಶರಣ್‌, ನಿರ್ದೇಶಕ ಯೋಗರಾಜ್‌ ಭಟ್‌ ಸೇರಿದಂತೆ ಚಿತ್ರರಂಗದ ಅನೇಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಬಾರಿಯ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕ ಬಿ.ಎನ್‌.ಗಂಗಾಧರ್‌ ಹಾಗೂ ಹಿರಿಯ ಚಲನಚಿತ್ರ ಪತ್ರಕರ್ತ ರಾಜನ್‌ ಅವರು ಪಡೆದುಕೊಂಡರು. ಇನ್ನು, ಪಾರ್ವತಮ್ಮ ರಾಜ್‌ಕುಮಾರ್‌ ಅವರು ಕೊಡುವ ಡಾ. ರಾಜ್‌ಕುಮಾರ್‌ ಪ್ರಶಸ್ತಿಯನ್ನು ಹಿನ್ನೆಲೆ ಗಾಯಕಿ ಗೀತಾ ಉಪೇಂದ್ರಕುಮಾರ್‌, ಭಾರತಿ ವಿಷ್ಣುವರ್ಧನ್‌ ಅವರು ನೀಡುವ "ಯಜಮಾನ' ಖ್ಯಾತಿಯ ಆರ್‌.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿಯನ್ನು ನಿರ್ದೇಶಕ ತಿಪಟೂರು ರಘು ಅವರಿಗೆ ನೀಡಲಾಯಿತು. ನಟಿ ಜಯಮಾಲ ಎಚ್‌.ಎಂ.ರಾಮಚಂದ್ರ ಪ್ರಶಸ್ತಿಯನ್ನು ಹಿರಿಯ ಕಲಾವಿದೆ ಶೈಲಶ್ರೀ ಅವರಿಗೆ, ಎಂ.ಎಸ್‌.ರಾಮಯ್ಯ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್‌ ಪ್ರೈ.ಲಿ. ಪ್ರಶಸ್ತಿಯನ್ನು "ಉಳಿದವರು ಕಂಡಂತೆ' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅಜನೀಶ್‌ ಲೋಕನಾಥ್‌ಗೆ, ನಿರ್ದೇಶಕ, ನಿರ್ಮಾಪಕ ಕೆ.ವಿ.ಜಯರಾಮ್‌ ಪ್ರಶಸ್ತಿಯನ್ನು "143' ಚಿತ್ರದ ಕಥಾಲೇಖನಕ್ಕೆ ಚಂದ್ರಕಾಂತ್‌ಗೆ ನೀಡಿ ಗೌರವಿಸಲಾಯಿತು.

ಖ್ಯಾತ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿಯನ್ನು "ಹಗ್ಗದ ಕೊನೆ' ಚಿತ್ರದ ಸಂಭಾಷಣೆಗಾಗಿ ನವೀನ್‌ಕೃಷ್ಣ ಅವರಿಗೆ ನೀಡಲಾಗಿದ್ದು, ಕಿರುತೆರೆ ನಿರ್ದೇಶಕ ಬಿ.ಸುರೇಶ್‌ ಪ್ರಶಸ್ತಿ "ಉಳಿದವರು ಕಂಡಂತೆ' ಚಿತ್ರದ ಚೊಚ್ಚಲ ನಿರ್ದೇಶನಕ್ಕೆ ರಕ್ಷಿತ್‌ಶೆಟ್ಟಿ ಪಡೆದುಕೊಂಡರು. ಹಿರಿಯ ಪತ್ರಕರ್ತ ಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು "ಒಗ್ಗರಣೆ' ಚಿತ್ರದ "ಈ ಜನುಮವೇ..' ಗೀತೆಗಾಗಿ ಜಯಂತ ಕಾಯ್ಕಿಣಿ ಅವರಿಗೆ ನೀಡಿದ್ದು, ಕಿಚ್ಚ ಕ್ರಿಯೇಷನ್ಸ್‌ ಪ್ರಶಸ್ತಿಯನ್ನು ಹಿರಿಯ ಕಲಾವಿದ ಸುದರ್ಶನ್‌ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಸುಧೀಂದ್ರ ವೆಂಕಟೇಶ್‌, ಡಿ.ವಿ.ಸುನೀಲ್‌ ಹಾಗೂ ಡಿ.ಜೆ.ವಾಸು ಇದ್ದರು.

Trending videos

Back to Top