CONNECT WITH US  

ಬಂದ್‌ಗೆ ವಿವಿಧ ಸಂಘಟನೆಗಳ ಸಾಥ್‌

ಬೀದರ: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕರೆ ಕೊಟ್ಟಿರುವ ಭಾರತ್‌ ಬಂದ್‌ಗೆ ಬೀದರ್‌ ಜಿಲ್ಲೆಯಲ್ಲಿ ಜೆಡಿಎಸ್‌ ಸೇರಿದಂತೆ ಕೆಲ ಸಂಘಟನೆಗಳು ಬೆಂಬಲ ನೀಡುತ್ತಿದ್ದು, ಜಿಲ್ಲೆಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ತಿಳಿಸಿದ್ದಾರೆ.

ರಾಜ್ಯದಲ್ಲಿ ಮೈತಿ ಸರ್ಕಾರ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಜೊತೆಗೆ ಜೆಡಿಎಸ್‌ ಕೂಡ ಬಂದ್‌ಗೆ ಸಾಥ್‌ ನೀಡುತ್ತಿದೆ. ಅಲ್ಲದೇ ಸಿಐಟಿಯು, ರಕ್ಷಣಾ ವೇದಿಕೆ, ಯುವ ಕಾಂಗ್ರೆಸ್‌, ಎನ್‌ಎಸ್‌ ಯುವೈ ಸಂಘಟನೆಗಳು ಬಂದ್‌ಗೆ ಸಾಥ್‌ ನೀಡುತ್ತಿದ್ದು, ಸೋಮವಾರ ಬೆಳಗ್ಗೆ ನಗರದ ನೆಹರೂ ಕ್ರೀಡಾಂಗಣದ ಬಳಿ 11 ಗಂಟೆಗೆ ಜನರು ಸೇರದಲ್ಲಿದ್ದಾರೆ.

ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಳೆ ನಗರ ಸೇರಿದಂತೆ ವಿವಿಧೆಡೆ ಸಂಚರಿಸಿ, ಜನರಲ್ಲಿ ಜಾಗೃತಿ ಮೂಡಿಸ ಮೂಡಿಸಲಿದ್ದಾರೆ. ತೈಲ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬಂದ್‌ ಮಾಡಲಾಗುತ್ತಿದ್ದು, ವ್ಯಾಪಾರಸ್ಥರು ಸಾಥ್‌ ನೀಡಬೇಕೆಂದು ವಿನಂತಿ ಮಾಡುವುದಾಗಿ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪ್ರತಿಭಟನೆ: ಬಂದ್‌ ಹಿನ್ನೆಲೆಯಲ್ಲಿ ನೆಹರೂ ಕ್ರೀಡಾಂಗಣ ಬಳಿ ಸೇರಲಿರುವ ಜನರು ಪಾದ ಯಾತ್ರೆ ಮೂಲಕ ಅಂಬೇಡ್ಕರ್‌ ವೃತ್ತಕ್ಕೆ ತೆರಳಿ ರಸ್ತೆ ತಡೆದು ಪ್ರತಿಭಟನೆ ಮಾಡಲಿದ್ದಾರೆ. ಅಲ್ಲದೆ, ಬಂದ್‌ ಕುರಿತು ಕೆಲವರು ಭಾಷಣ ಮಾಡಿ ಮಾಡಲಿದ್ದಾರೆ. ಇತರೆ ಕೆಲ ಸಂಘಟನೆಗಳು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಿವೆ.

ಬಸ್‌ ಸಂಚಾರ: ಸದ್ಯ ಜಿಲ್ಲೆಯ ಜನರಿಗೆ ಬಸ್‌ ಸಂಚಾರ ಕುರಿತು ಚಿಂತೆ ಇದ್ದು, ಈ ಕುರಿತು ಅಧಿಕಾರಿಗಳು ಯಾವುದೇ
ನಿರ್ಧಾಕ್ಕೆ ಬಂದಿಲ್ಲ. ಸದ್ಯ ಬಸ್‌ ಸಂಚಾರ ನಡೆಸುವ ಆಲೋಚನೆಯಲ್ಲಿರುವ ಅಧಿಕಾರಿಗಳು ಪ್ರತಿಭಟನೆಯ ತೀವ್ರತೆ ನೋಡಿ ಬಸ್‌ ಸಂಚಾರ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಸದ್ಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಬಸ್‌ ಪ್ರಯಾಣಿಕರಿಗೆ ಸ್ಪಷ್ಟ ನಿರ್ಧಾರ ಗೊತ್ತಾಗದೇ ಗೊಂದಲದಲ್ಲಿದ್ದಾರೆ. ಯಾವುದೇ ಸಮಸ್ಯೆ
ಇಲ್ಲದಿದ್ದರೆ ಬಸ್‌ ಸಂಚಾರ ಸುಗಮವಾಗಿ ನಡೆಯುತ್ತದೆ ಎಂದು ಈಶಾನ್ಯ ಸಾರಿಗೆ ಇಲಾಖೆಯ ಅಧಿಕಾರಿ ಮಾಹಿತಿ
ನೀಡಿದ್ದಾರೆ.

ಇತರೆ ಸೇವೆಗಳು: ಪ್ರತಿದಿನದಂತೆ ಜಿಲ್ಲಾದ್ಯಂತ ಸರ್ಕಾರಿ ಕಚೇರಿಗಳು, ವಿವಿಧ ಬ್ಯಾಂಕ್‌ಗಳು, ಖಾಸಗಿ ಹೋಟೆಲ್‌, ಆಟೋಗಳ ಸಂಚಾರ ಸಾಮಾನ್ಯವಾಗಿ ಇರಲಿದೆ. ಅಲ್ಲದೆ, ಪೆಟ್ರೋಲ್‌ ಬಂಕ್‌ಗಳು ಕೂಡ ಎಂದಿನಂತೆ ಕೆಲಸ
ನಿರ್ವಹಿಸಲಿವೆ. ಭಾರತ ಬಂದ್‌ ಸದ್ಯ ಬೀದರ್‌ ಜಿಲ್ಲೆಯಲ್ಲಿ ಹೇಳಿಕೊಳ್ಳುಷ್ಟು ಪರಿಣಾಮಕಾರಿಯಾಗಿ ಆಗುವುದು
ಬಹುತೇಕ ಸಂಶಯ ಎನ್ನಲಾಗುತ್ತಿದೆ.

 ಪೊಲೀಸ್‌ ಬಂದೋಬಸ್ತ್: ಬಂದ್‌ ಹಿನ್ನೆಲೆಯಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಕೂಡ ಎಚ್ಚರಿಕೆ ವಹಿಸಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳ ಬಸ್‌ ನಿಲ್ದಾಣ, ಶಾಲಾ ಪ್ರದೇಶ ಸೇರಿದಂತೆ ಅತಿ ಸೂಕ್ಷ್ಮಾ ಪ್ರದೇಶಗಳಲ್ಲಿ ಹೆಚ್ಚು ಬಂದೊಬಸ್ತ್ ಮಾಡಿದೆ. ಮೂರು ಕೆಎಸ್‌ಆರ್‌ಪಿ ತುಕಡಿ, 16 ಡಿಎಆರ್‌ ತುಕಡಿ ಸೇರಿದಂತೆ ಪೊಲೀಸ್‌ ವಾಹನಗಳು ಗಸ್ತು ನಡೆಸಲಿವೆ. ಯಾವುದೇ ಅಹಿತರ ಘಟನೆಗೆ ಮುಂದಾಗುವ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಸಜ್ಜಾಗಿದ್ದಾರೆ.

ಕೇಂದ್ರ ಸರ್ಕಾರ ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಇಂದು ಜನರು ತತ್ತಿಸುವಂತೆ ಮಾಡಿದೆ. ತೈಲ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಹೈರಾಣಾಗುತ್ತಿದ್ದಾರೆ. ಈ ಹಿನ್ನೆಲ್ಲೆಯಲ್ಲಿ ದೇಶಾದ್ಯಂತ ಬಂದ್‌ ಆಚರಣೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲೂ ಜನರಿಗೆ ತಿಳಿಸಿ ಬಂದ್‌ ಯಶಸ್ವಿ ಮಾಡಲಾಗುವುದು. ಅಲ್ಲದೇ ಕೆಲ ಸಂಘಟನೆಗಳು ಕೂಡ ಸಾಥ್‌ ನೀಡುತ್ತಿವೆ. ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ಜಿಲ್ಲಾದ್ಯಂತ ಶಾಂತಿಪೂರ್ವಕ ಬಂದ್‌ ಆಚರಿಸುವಂತೆ ತಿಳಿಸಲಾಗಿದೆ.

 ಬಸವರಾಜ ದಾಬಶೆಟ್ಟಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಕರೆ ನೀಡಿದ ಬಂದ್‌ಗೆ ಜೆಡಿಎಸ್‌ ಪಕ್ಷ ಕೂಡ ಬೆಂಬಲ ನೀಡಿದೆ. ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿ ಹೆಚ್ಚು ಭಾರ ಹಾಕುತ್ತಿದೆ. ಜನ ಸಾಮಾನ್ಯರು ಇದರಿಂದ ಪ್ರತಿದಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅನಿವಾರ್ಯವಾಗಿ ಹೆಚ್ಚು ದರದಲ್ಲಿ ಪ್ರಟ್ರೋಲ್‌, ಡೀಸೆಲ್‌ ಬಳಸುವಂತಾಗಿದೆ.ಕೇಂದ್ರ ಸರ್ಕಾರದ ಆಡಳಿತ ವಿರುದ್ಧ ಬಂದ್‌ ಮಾಡಲಾಗುತ್ತಿದೆ. ಅಲ್ಲದೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆಯುವ ಪ್ರತಿಭಟನೆಗೆ ಕಾಂಗ್ರೆಸ್‌ ಜೊತೆಗೆ ಜೆಡಿಎಸ್‌ ಸಾಥ್‌ ನೀಡುವಂತೆ ತಿಳಿಸಲಾಗಿದೆ.  
ರಮೇಶ ಪಾಟೀಲ ಸೊಲಪೂರ್‌ ಜೆಡಿಎಸ್‌ ಜಿಲ್ಲಾಧ್ಯಕ್ಷರು

ಜನರ ದಾರಿ ತಪ್ಪಿಸುವ ಪ್ರಯತ್ನ
ಬೀದರ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಮುಳುಗುತ್ತಿರುವ ಕಾಂಗ್ರೆಸ್‌ ದೋಣಿಯನ್ನು ಎತ್ತಲು ಅರ್ಧ ಸತ್ಯ ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಹಾಗೂ ಸಂಸದ ಭಗವಂತ ಖೂಬಾ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಸೋಮವಾರ ಭಾರತ್‌ ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾಟೀ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತೆ„ಲ ಕ್ಷೇತ್ರದಲ್ಲಿ ವಾಸ್ತವ ಚಿತ್ರಣವನ್ನು ಕಾಂಗ್ರೆಸ್‌ ಪಕ್ಷ ಸಂಪೂರ್ಣವಾಗಿ ಮುಚ್ಚಿಡಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ. 1947ರಿಂದ 2014ರ ತನಕ 67 ವರ್ಷದ ಸ್ವತಂತ್ರ ಭಾರತದ ಆಡಳಿತದಲ್ಲಿ
57 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ತೈಲ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜಾಗತಿಕ ಮಟ್ಟದಲ್ಲಿ 14 ತಿಂಗಳಲ್ಲಿ ರೈಲದ ಬೆಲೆ ಶೇ.73ರಷ್ಟು ಏರಿಕೆ ಕಂಡರೂ, ಭಾರತದಲ್ಲಿ ರೈಲದ ಬೆಲೆ ಕೇವಲ ಶೇ.29.58ರಷ್ಟು ಏರಿಕೆಯಾಗಿದೆ. ಇದು ನಮ್ಮ ಸಾಧನೆಯಾಗಿದೆ. ತೈಲ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಮೊತ್ತ ತೆರಿಗೆ ವಿಧಿಸುತ್ತಿರುವುದರಿಂದ ತೈಲ ಬೆಲೆ ಏರಿಕೆಯಲ್ಲಿ ಕೇಂದ್ರಕ್ಕೆ ದೊರೆಯುವ ಹೆಚ್ಚುವರಿ ತೆರಿಗೆ ಶೂನ್ಯ. ಆದರೆ, ರಾಜ್ಯ ಸರ್ಕಾರ ತೆರಿಗೆ ವಿಧಿಸುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈಲದ ಬೆಲೆ ಏರಿದಂತೆ,
ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹ ಕೂಡ ಹೆಚ್ಚಾಗುತ್ತಲೇ ಇದೆ. ಪ್ರತೀ ಲೀಟರ್‌ ಪೆಟ್ರೋಲ್‌ನಿಂದ ಕೇಂದ್ರ ಸರ್ಕಾರಕ್ಕೆ 6.66 ರೂ ದೊರೆಯಲಿದ್ದು, ರಾಜ್ಯ ಸರ್ಕಾರಕ್ಕೆ 25 ರೂ. ದೊರೆಯಲಿದೆ.

ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ತೆರಿಗೆಯನ್ನು ಯಾರು ಇಳಿಸಲು ಸಹಕರಿಸಬೇಕು? ರಾಜ್ಯ ಸರ್ಕಾರವೂ ಸಹಕರಿಸಬೇಕಲ್ಲವೇ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.


Trending videos

Back to Top