CONNECT WITH US  

ಆತ್ಮ-ಪರಮಾತ್ಮನ ಅರಿತವ ನಿಜಶರಣ

ಭಾಲ್ಕಿ: ನಮ್ಮ ಜನ್ಮ, ಮರಣ ದುಃಖಗಳ ನಿವಾರಣೆಗಾಗಿ ಸೋಹಂ, ಶಿವೋಹಂ ಎನ್ನುವ ಪರಿಜ್ಞಾನ ಹೊಂದಿರುವ
ಮಹಾತ್ಮರ ಚರಣ ಆಶ್ರಯ ಹೊಂದಬೇಕು ಎಂದು ಬೀದರ ಗುರುದೇವಾಶ್ರಮದ ಶ್ರೀ ಗಣೇಶಾನಂದ ಮಹಾರಾಜರು
ಹೇಳಿದರು.

ಬ್ಯಾಲಹಳ್ಳಿ(ಕೆ) ಗ್ರಾಮದ ಶ್ರೀ ಶಿವಾನಂದ ಕೈಲಾಸ ಆಶ್ರಮದಲ್ಲಿ ರವಿವಾರ ನಡೆದ ಶ್ರಾವಣ ಮಾಸದ ಸತ್ಸಂಗ ಪ್ರವಚನ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಸದ್ಗುರುಗಳ ಕೃಪೆ ಆಗಲು ಅದಕ್ಕೆ ತಕ್ಕ ಪುಣ್ಯ ಗಳಿಸಬೇಕು. 

ಸಂಸಾರದ ದುಃಖದಿಂದ ಮುಕ್ತಿ ಹೊಂದಲು ಸದಾ ಸದ್ಗುರುಗಳ ಚಿಂತನೆ ಮಾಡುತ್ತಿರಬೇಕು. ಆತ್ಮ, ಪರಮಾತ್ಮನನ್ನು ಅರಿತುಕೊಂಡಾತನೇ ನಿಜಶರಣ. ಅದಕ್ಕಾಗಿ ಅಂದಿನ ಶರಣರು ತಮ್ಮ ವಚನಗಳಲ್ಲಿ ಅರಿದೊಡೆ ಶರಣ, ಮರೆತೊಡೆ ಮಾನವ ಎಂದು ತಿಳಿಸಿದ್ದಾರೆ. ಜೀವ ಪರಮಾತ್ಮನ ಪರಿಪೂರ್ಣ ಜ್ಞಾನ ಇರುವಾತನೆ ಶರಣ.

ಪರಮಾತ್ಮನನ್ನು ಅರಿಯುವುದೇ ಜೀವನದ ಅತಿ ದೊಡ್ಡ ಸಾಧನವಾಗಿದೆ. ಎಲ್ಲ ಜ್ಞಾನಗಳಿಗಿಂತಲೂ ಆತ್ಮ, ಪರಮಾತ್ಮನನ್ನು ತಿಳಿದುಕೊಳ್ಳುವುದೆ ನಿಜವಾದ ಜ್ಞಾನವಾಗಿದೆ. ಕಾರಣ ಸಂಸಾರದಲ್ಲಿದ್ದುಕೊಂಡು ಸದ್ಗತಿ
ಕಾಣಬೇಕಾದರೆ ಇಂತಹ ಸತ್ಸಂಗಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು. 

ಸಾನ್ನಿಧ್ಯ ವಹಿಸಿದ್ದ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಮಾತನಾಡಿ, ಜ್ಞಾನದಿಂದ ಮೋಕ್ಷ ಸಂಪಾದಿಸುವುದಕ್ಕೆ
ವಿವೇಕ ಒಂದೇ ಸಾಕು. ವಿವೇಕ ಸಾಧಿಸಲು ವೈರಾಗ್ಯ ಬೇಕು. ನಿಜವಾದ ವೈರಾಗಿಗಳಿಗೆ ಸ್ವರ್ಗಭೋಗ ಸಿಗುವುದು. ಅದನ್ನು ದಾಟಿ ಮುಕ್ತಿ ಪಡೆಯಲು ಸಾಧನೆ ಮಾಡಬೇಕು ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ಅನೀಲಕುಮಾರ ಪಸರ್ಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಾವಣ ಸತ್ಸಂಗ ಸಮಾರೋಪ
ಸಮಾರಂಭಕ್ಕೆ ಸಂಸದ ಭಗವಂತ ಖೂಬಾ ಆಗಮಿಸಬೇಕಿತ್ತು. ಕಾರಣಾಂತರಗಳಿಂದ ಅವರಿಗೆ ಈ ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ. ಶ್ರೀ ಶಿವಾನಂದ ಕೈಲಾಸ ಆಶ್ರಮದ ಪ್ರತಿಯೊಂದು ಕಾರ್ಯಕ್ರಮಗಳಿಗೆ ರಾಜ್ಯ
ಮತ್ತು ಪರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇವರ ತಂಗುವಿಕೆಗಾಗಿ ಯಾತ್ರಾ ನಿವಾಸ ಮತ್ತು ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಬೇಡಿಕೆ ಇದೆ. ಸಂಸದರ ನಿಧಿಯಿಂದ ಈ ಬೇಡಿಕೆಗಳನ್ನು ಪೂರ್ಣಗೊಳಿಸಲು
ಸಹಕರಿಸಲಾಗುವುದು ಎಂದು ಹೇಳಿದರು.

ಕುರುಬಖೇಳಗಿಯ ಶರಣಪ್ಪ ಬೆಟ್ಟದ ಪ್ರಾಸ್ತಾವಿಕವಾಗಿ ಮಾತನಾಡಿದು. ಗ್ರಾಮದ ಪ್ರಮುಖರಾದ ಸಂಜಿವಕುಮಾರ ಪಾಟೀಲ, ಭೀಮರಾವ್‌ ಹೊಸದೊಡ್ಡಿ, ಸಂಗಪ್ಪಾ ಹೊಸದೊಡ್ಡಿ, ಬಸವರಾಜ ಪಾಟೀಲ ಕಮಲಾಪೂರ, ಬಾಬುರಾವ್‌ ಪಾಟೀಲ ಬ್ಯಾಲಹಳ್ಳಿ(ಕೆ), ಪಿಕೆಪಿಎಸ್‌ ಸದಸ್ಯ ಶಿವಕುಮಾರ ಪಾಟೀಲ, ವೈಜಿನಾಥಪ್ಪ ದಾಬಶೆಟ್ಟಿ, ಡಾ| ಸುಭಾಷ ಅಂಬೆಸಿಂಗಿ, ವೈಜಿನಾಥಪ್ಪ ಕನಕಟ್ಟೆ, ಅಣ್ಣಪ್ಪಾ ಹೊಸಮನಿ ಇದ್ದರು. ಓಂಶೆಟ್ಟಿ ಮರಕಲ ಬ್ಯಾಲಹಳ್ಳಿ(ಕೆ) ಸ್ವಾಗತಿಸಿದರು. ರಮೇಶ ಶ್ರೀಮಂಡಲ ನಿರೂಪಿಸಿದರು. ವಿಜಯಕುಮಾರ ಗೌಡಗಾವೆ ವಂದಿಸಿದರು. 


Trending videos

Back to Top