CONNECT WITH US  

ಬಿಸಿಲಿನ ಬೇಗುದಿಗೆ ತತ್ತರಿಸಿದ ಜನತೆ

ಹುಮನಾಬಾದ: ಕಳೆದ ನಾಲ್ಕು ದಿನಗಳಿಂದ ಹೆಚ್ಚಾದ ತಾಪಮಾನದಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸರಿ ಸುಮಾರು 40 ರಿಂದ 42 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪಮಾನವಿದ್ದು, ಜನ ಜೀವನ ದುಸ್ತರವಾಗಿದೆ.

ಬೆಳಗ್ಗೆ 8:00 ಗಂಟೆಯಿಂದಲೇ ಬಿಸಿಲಿನ ತಾಪ ಆರಂಭವಾಗಿ ಸಂಜೆ 7:00 ಗಂಟೆ ವರೆಗೆ ಬಿಸಿಲಿನ ಜಳದಿಂದ ಸಾರ್ವಜನಿಕರು ನರಳುವಂತಾಗಿದೆ. ಮಧ್ಯಾಹ್ನದ ವೇಳೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರ ಸಂಚಾರ ಕಡಿಮೆಯಾಗುತ್ತಿದೆ. ವಿವಿಧ ಶುಭ ಸಮಾರಂಭಗಳಿಗೆ ತೆರಳಬೇಕಾದ ಜನರು ಮನೆಯಿಂದ ಹೊರಗಡೆ ಬರಲು ಹಿಂದೇಟು
ಹಾಕುತ್ತಿದ್ದಾರೆ.

ಪಟ್ಟಣದ ವಿವಿಧ ಬಡಾವಣೆಯ ಮನೆಗಳಲ್ಲಿರುವ ತೆರೆದ ಬಾವಿಗಳು ಹಾಗೂ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿದೆ. ಬಿಸಿಲಿನ ತಾಪ ಇದೇ ರೀತಿ ಮುಂದುವರಿದರೆ ಭೂಮಿಯ ನೀರಿನ ಮಟ್ಟ ಕುಸಿಯುವ ಎಲ್ಲಾ ಸಾಧ್ಯತೆಗಳಿವೆ. ಭೂಮಿಯಲ್ಲಿನ
ಅಂತರ್ಜಲ ನೀರಿನ ಮಟ್ಟ ಕುಸಿಯುತ್ತಿರುವುದು ಸಾರ್ವಜನಿಕರ ಚಿಂತೆಗೆ ಕಾರಣವಾಗಿದೆ.

ಬಿಸಿಲಿನ ತಾಪಕ್ಕೆ ಜನರು ಹೆದರಿ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಒಂದು ಅಂತಸ್ತಿನ ಮನೆ ಹಾಗೂ ಅಂಗಡಿಯಲ್ಲಿ ಬಿಸಿಲಿನ ತಾಪ ತಾಳಲಾಗುತ್ತಿಲ್ಲ. ತಗಡಿನ
ಶಿಟ್‌ಗಳ ಮನೆಯಲ್ಲಿ ಬೆಂಕಿ ಉಂಡೆ ಇಟ್ಟಂತೆ ಭಾಸವಾಗುತ್ತಿದೆ. ಮನೆ ಹಾಗೂ ಅಂಗಡಿಗಳಲ್ಲಿ ನಿರಂತರ ಫ್ಯಾನ್‌ ಬಳಸಲಾಗುತ್ತಿದೆ. ಆದರೆ ಫ್ಯಾನ್‌ ಕೂಡ ಬಿಸಿ ಗಾಳಿ ಸೂಸುತ್ತಿದೆ. ಇದ್ದರಿಂದ ಬೇಸತ್ತ ಜನತೆ ಏರ್‌ ಕೂಲರ್‌ ಖರೀದಿಗೆ ಮುಂದಾಗುತ್ತಿದ್ದಾರೆ.

ಕುಡಿವ ನೀರಿನ ಸಮಸ್ಯೆ: ತೆಲಂಗಾಣ ಹಾಗೂ ಮಹಾರಾಷ್ಟ್ರದ ಮಧ್ಯೆ ಇರುವ ದೊಡ್ಡ ಬಸ್‌ ನಿಲ್ದಾಣ ಹುಮನಾಬಾದ್‌ದ್ದಾಗಿದೆ. ಪ್ರತಿನಿತ್ಯ ಸಾವಿರಾರು ಜನರು ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ನಡೆಸುವ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಬಸ್‌ ನಿಲ್ದಾಣದಲ್ಲಿ ಅಳವಡಿಸಿದ ಕುಡಿಯುವ ನೀರಿನ ತೊಟ್ಟಿಯಲ್ಲಿ ಕೆಲ ಹೊತ್ತು ನೀರು ಹರಿದು ಬಂದರೆ, ಕೆಲ ಸಮಯದಲ್ಲೇ ಸ್ಥಗಿತಗೊಳ್ಳುತ್ತಿದೆ. ಇದರಿಂದ
ಪ್ರಯಾಣಿಕರು ಬಾಟಲಿ ನೀರಿಗೆ ಮೊರೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ.

ವಿದ್ಯುತ್‌ ಸಮಸ್ಯೆ: ಒಂದುಕಡೆ ಬೇಸಿಗೆಯ ಬಿಸಿಲಿನ ತಾಪ ಒಂದಡೆಯಾದರೆ ಇನ್ನೊಂದಡೆ ವಿದ್ಯುತ್‌ ಸಮಸ್ಯೆ ಎದುರಾಗುತ್ತಿದೆ. ರಾತ್ರಿಯಾದರೂ ಧಗೆಯ ತಾಪ ತಾಳಲಾಗುತ್ತಿಲ್ಲ. ವಿದ್ಯುತ್‌ ಕಣ್ಣಾಮುಚ್ಚಾಲೆ ಆಡುತ್ತಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡರೆ ತಂಪು ಗಾಳಿಗಾಗಿ ಮನೆಯಲ್ಲಿರುವವರು ಬೀದಿಗೆ ಬರುವಂತಾಗಿದೆ.

Trending videos

Back to Top