CONNECT WITH US  

ತ್ಯಾಗ, ಬಲಿದಾನದ ಮೊಹರಂ ಆಚರಣೆ

ದೊಡ್ಡಬಳ್ಳಾಪುರ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಆಚರಣೆಯನ್ನು ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಹಿಂದೂ ಹಾಗೂ ಮುಸ್ಲಿಮವರು ಒಟ್ಟಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದರು.

ನಗರದ ನಗರ್ತಪೇಟೆಯಲ್ಲಿನ ಬಾಬಯ್ಯ ದೇವಾಲಯದಲ್ಲಿ ಪಂಜಾ(ಹಸ್ತದ ಆಕಾರದ ಪರಿಕರ)ಗಳನ್ನಿಟ್ಟು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ವಿಶೇಷ ಅಲಂಕಾರ ಹಾಗೂ ಪ್ರಾರ್ಥನೆಗಳೂ ನಡೆದವು. ಹಿಂದು ಮತ್ತು ಮುಸಲ್ಮಾನ ಬಾಂಧವರು ಸಕ್ಕರೆ ಕಡಲೇಪಪ್ಪು$ನೇವೇದ್ಯ ಅರ್ಪಿಸಿ ಬಾಬಯ್ಯನಿಗೆ ಪ್ರಾರ್ಥನೆ ಸಲ್ಲಿಸಿದರು. ಶನಿವಾರ ಬೆಳಗಿನ ಜಾವದಲ್ಲಿ ಕೆಂಡಹಾಯುವ ಆಚರಣೆ ನಡೆಯಿತು.

ಗ್ರಾಮಾಂತರ ಪ್ರದೇಶದ ದೊಡ್ಡಬೆಳವಂಗಲ, ಕಾಡನೂರು ಮುಂತಾದ ಗ್ರಾಮಗಳಲ್ಲಿ ಮೊಹರಂ ಆಚರಣೆ ನಡೆಯಿತು. ಹಿಂದೂ ಮುಸ್ಲಿಮರ ಭಾವೈಕ್ಯತೆ ಬಿಂಬಿಸುವ ಮೊಹರಂ ಆಚರಣೆಯಲ್ಲಿ ಹಿಂದೂಗಳೂ ಭಾಗವಹಿಸಿ 10 ದಿನ ಹಬ್ಬವನ್ನು ಆಚರಿಸಿದರು. ಗ್ರಾಮೀಣ ಭಾಗದ ಜನರು ಮೊಹರಂ ಆಚರಣೆಯನ್ನು ಬಾಬಯ್ಯನಹಬ್ಬವೆಂದು ಕರೆಯುತ್ತಾರೆ. ಗ್ರಾಮೀಣರು ಮೊಹರಂ ಆಚರಣೆಯನ್ನು ತಮ್ಮ ಆರಾಧ್ಯ ದೈವಕ್ಕೆ ಮಾಡುವ ಆಚರಣೆಯಂತೆ ಪರಿಗಣಿಸಿದ್ದಾರೆ. ಬಾಬಯ್ಯನಿಗೆ ಹರಕೆ ಮಾಡಿಕೊಳ್ಳುವ, ಅದನ್ನು ಶ್ರದ್ಧಾಭಕ್ತಿಯಿಂದ ಪೂರ್ಣಗೊಳಿಸುವ ಕಡೆಗೆ ಗ್ರಾಮೀಣರು ಹೆಚ್ಚು ಆಸಕ್ತಿ ವಹಿಸುತ್ತಾರೆ.

ಹಬ್ಬದ ವಿಶೇಷ: ಮುಸ್ಲಿಂ ಧಾರ್ಮಿಕ ಆಚರಣೆಯಂತೆ ಚಂದ್ರನ ದರ್ಶನದೊಂದಿಗೆ ಮೊಹರಂ ಹಬ್ಬ ಪ್ರಾರಂಭವಾಗುತ್ತದೆ. ಬಾಬಯ್ಯನ ಗುಡಿಯ ಮುಂದೆ ಚಂದ್ರ ದರ್ಶನ ಪಡೆದ ನಂತರ ಗುದ್ದಲಿ ಪೂಜೆ ಮಾಡಲಾಗುತ್ತದೆ. ಬಾಬಯ್ಯನ ಹಬ್ಬದಲ್ಲಿ ತಮ್ಮಟೆ ಮುಂತಾದ ಗ್ರಾಮೀಣ ವಾದ್ಯಗಳೇ ಪ್ರಧಾನ. ಬಾಬಯ್ಯನ ಹಬ್ಬಕ್ಕೆ ರಂಗು ಬರುವುದು ಕಡೆಯ ಎರಡು ದಿನಗಳಲ್ಲಿ. ಕೊನೆಯವನ್ನು ಜಲ್ದಿ ಎಂದು ಕರೆದರೆ, ಅದರ ಹಿಂದಿನ ದಿನವನ್ನು ಕೊಂಡ ಎಂದು ಕರೆಯುತ್ತಾರೆ.

ಬಾಬಯ್ಯನ ಗುಡಿ ಮುಂದೆ ತೆಗೆಯಲಾಗಿರುವ ದೊಡ್ಡ ಗುಂಡಿಯಲ್ಲಿ ಸೌದೆ, ಮರದ ತುಂಡುಗಳನ್ನು ಭಕ್ತರು ತಂದು ಹಾಕುತ್ತಾರೆ. ಕಷ್ಟದ ಪರಿಹಾರಕ್ಕೆ ಹರಕೆ ಹೊತ್ತವರು ಈ ಕೊಂಡದಲ್ಲಿ ಸೌದೆ ತಂದು ಹಾಕಿ ಹರಕೆ ಪೂರೈಸುವುದು ಸಂಪ್ರದಾಯ. ಸಂಜೆ ಪ್ರತಿ ಮನೆಯಿಂದಲೂ ಮಹಿಳೆಯರು ಪಾನಕ ತಂದು ಪೂಜೆ ಸಲ್ಲಿಸುತ್ತಾರೆ.

ಬಾಬಯ್ಯನ ಗುಡಿಯಲ್ಲಿ ಮಂಟಪವೊಂದನ್ನು ನಿರ್ಮಿಸಿ ಅದಕ್ಕೆ ಬಣ್ಣ ಬಣ್ಣ ಕಾಗದಗಳಿಂದ ಅಲಂಕಾರವನ್ನು ಆರಾಧಕರು ಮಾಡುತ್ತಾರೆ. ಜನರು ಭಕ್ತಭಾವಗಳಿಂದ ಬಂದ ನಿಮಿಸುವುದು, ಸಕ್ಕರೆ ಓದಿಸುವುದು ಇವು ನಿತ್ಯವು ನಡೆಯುತ್ತದೆ. ಮೊಹರಂ ಕೊನೆಯ ದಿನ ಅಲಂಕೃತವಾದ ಬಾಬಯ್ಯನ ಮಂಟಪವನ್ನು ತಂದು ಊರಿನ ಮಧ್ಯಭಾಗದಲ್ಲಿ ಇರಿಸುತ್ತಾರೆ. ಅಲ್ಲಿ ತಮಟೆ ವಾದ್ಯಗಳೊಂದಿಗೆ ಹಲವಾರು ವೇಷಭೂಷಣಗಳನ್ನು ಹಾಕಿಕೊಂಡವರು ತಮ್ಮ ಕಲೆಯನ್ನು ಪ್ರದರ್ಶನ ಮಾಡುವುದು ವಿಶೇಷ ಗಮನ ಸೆಳೆಯುತ್ತದೆ.

ಹಸೇನ್‌ ಹುಸೇನ್‌ ಆಚರಣೆ: ಪಾಪದ ಜೀವನಕ್ಕಿಂತ ಗೌರವದ ಸಾವು ಲೇಸು ಎಂದು ಸತ್ಯ, ಅಹಿಂಸೆ, ಧರ್ಮಕ್ಕಾಗಿ ತನ್ನ ಮತ್ತು ತನ್ನ ಕುಟುಂಬದವರ ಪ್ರಾಣ ಬಲಿದಾನದ ಐತಿಹ್ಯ ಸಾರುವ ಈ ಇಮಾಮ್‌ ಹುಸೇನ್‌ ತ್ಯಾಗ ಬಲಿದಾನಗಳನ್ನು ಅಂದು ಸ್ಮರಣೆಗಾಗಿ, ಆತನ ಚರಿತ್ರೆಯಲ್ಲಿ ಬರುವ ಯುದ್ಧದ ಸನ್ನಿವೇಶದಲ್ಲಿ ಆದ ಅಚಾತುರ್ಯಕ್ಕೆ ಪಶ್ಚಾತ್ತಾಪ ಸಲ್ಲಿಸುವ ಸಲುವಾಗಿ ನಡೆಯುವ ಹಸೇನ್‌ ಹುಸೇನ್‌ ಆಚರಣೆ ನಡೆಯಿತು.
 

Trending videos

Back to Top